ಪತಂಜಲಿ ಎನ್ನುವ ‘ಗೋ ಮುಖ ವ್ಯಾಘ್ರ’
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪತಂಜಲಿ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮ್‌ದೇವ್ ಹಾಗೂ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಸುಪ್ರೀಂಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಿ ಛೀಮಾರಿ ಹಾಕಿದೆ. ತನ್ನ ಮೂಲಕ ಈ ಬಾಬಾ ರಾಮ್‌ದೇವ್ ಈ ದೇಶದ ಆಯುರ್ವೇದ ವೈದ್ಯಕೀಯವನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ. ಅಲೋಪತಿಯನ್ನು ನಿಂದಿಸುತ್ತಾ, ಆಯುರ್ವೇದವನ್ನು ಸ್ವಾರ್ಥಕ್ಕಾಗಿ ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸುತ್ತಾ, ಭಾರತದ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಗೊಳಿಸಲು ಸಂಚು ಆರೋಪವನ್ನು ಬಾಬಾ ರಾಮ್‌ದೇವ್ ಅವರು ಹೊತ್ತಿದ್ದಾರೆ. ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಟೀಕಿಸಿ, ಜನರನ್ನು ತಪ್ಪು ದಾರಿಗೆಳೆದು ತನ್ನ ಔಷಧಿಗಳನ್ನು ಮಾರಾಟ ಮಾಡಿ ಜನರ ಬದುಕಿನ ಮೇಲೆ ಅವರು ಚೆಲ್ಲಾಟವಾಡಿದ್ದಾರೆ. ಬಾಬಾ ರಾಮ್‌ದೇವ್ ತನ್ನ ಔಷಧಿಯಿಂದ ಲೈಂಗಿಕ ದೌರ್ಬಲ್ಯಗಳನ್ನು ಸರಿಪಡಿಸಬಹುದು, ಸಕ್ಕರೆ ಕಾಯಿಲೆಯನ್ನು ವಾಸಿ ಮಾಡಬಹುದು ಎಂದೂ ಜನರನ್ನು ವಂಚಿಸಿದ್ದರು. ಅಷ್ಟೇ ಅಲ್ಲ, ಮಾಂತ್ರಿಕ ಪರಿಹಾರಗಳನ್ನು ಸಮರ್ಥಿಸಿದ್ದರು. ಸುಪ್ರೀಂಕೋರ್ಟ್ ಪದೇ ಪದೇ ಪತಂಜಲಿಗೆ ಸಮನ್ಸ್ ನೀಡಿತ್ತಾದರೂ, ಸಂಸ್ಥೆ ನ್ಯಾಯಾಲಯದ ಸೂಚನೆಗಳನ್ನು ಧಿಕ್ಕರಿಸುತ್ತಲೇ ಬಂತು. ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿದ ಆರೋಪವನ್ನೂ ಪತಂಜಲಿಯ ಮೇಲೆ ಹೊರಿಸಲಾಗಿದೆ. ಪರಿಣಾಮವಾಗಿ ಸನ್ಯಾಸಿ ವೇಷದಲ್ಲಿದ್ದು ಅತ್ತ ಸನ್ಯಾಸಿಯೂ ಅಲ್ಲದ, ಇತ್ತ ವೈದ್ಯನೂ, ಉದ್ಯಮಿಯೂ ಅಲ್ಲದ ರಾಮ್‌ದೇವ್ ಮುಖವಾಡ ಕೊನೆಗೂ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮುಂದೆ ಬಟಾ ಬಯಲಾಗಿದೆ. ನ್ಯಾಯಾಲಯದ ಮುಂದೆ ರಾಮ್‌ದೇವ್ ಕ್ಷಮೆಯಾಚಿಸಿದರೂ, ಸುಪ್ರೀಂಕೋರ್ಟ್ ಆ ಕ್ಷಮಾಯಾಚನೆಯನ್ನು ನಿರಾಕರಿಸಿತು ಮಾತ್ರವಲ್ಲ, ಹೊಸದಾಗಿ ಅಫಿಡವಿಟ್ ಸಲ್ಲಿಸಲು ಸೂಚನೆ ನೀಡಿತು.
ಕೇಸರಿ ಬಟ್ಟೆ ಧರಿಸಿ ಇಲ್ಲಿ ದೇಶ ಭಕ್ತರಾಗುವುದು ಬಹುಸುಲಭ. ಮಾಲೇಗಾಂವ್‌ನಲ್ಲಿ ಸ್ಫೋಟ ನಡೆಸಿದ ಆರೋಪವನ್ನು ಹೊತ್ತ ಶಂಕಿತ ಭಯೋತ್ಪಾದಕಿಯೊಬ್ಬಳು ಕೇಸರಿ ಬಟ್ಟೆಯ ಮೂಲಕ ಸ್ವಯಂಘೋಷಿತ ಸಾಧ್ವಿಯಾಗಿ, ಈ ದೇಶದ ಸಂಸತ್ತನ್ನು ಪ್ರವೇಶಿಸಿದಳು. ಇಂದು ಈ ಸ್ಫೋಟಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಹಾಜರಾಗದೆ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದಾಳೆ. ಪ್ರಜಾಸತ್ತೆಯ ದೇವಸ್ಥಾನ ಎಂದು ಕರೆಯಲ್ಪಡುವ ಸಂಸತ್ತನ್ನು ಮತ್ತು ಕಾವಿ ಬಟ್ಟೆಯನ್ನು ಈಕೆ ಏಕಕಾಲದಲ್ಲಿ ಕಳಂಕಗೊಳಿಸಿದ್ದಾಳೆ. ಈ ದೇದಲ್ಲಿ ಒಬ್ಬ ಎಸಗಿರುವ ಕಾನೂನು ವಿರೋಧಿ ಕೃತ್ಯಗಳೆಲ್ಲವೂ ಕಾವಿ ಬಟ್ಟೆ ಅಥವಾ ಶಾಲು ಧರಿಸುವ ಮೂಲಕ ಮಾನ್ಯತೆಯನ್ನು ಪಡೆಯುತ್ತವೆ. ಬಾಬಾ ರಾಮ್‌ದೇವ್ ಜೊತೆಗೆ ಕಾವಿ ಬಟ್ಟೆ ಬಿಟ್ಟರೆ ಬೇರಾವ ಪ್ರಮಾಣ ಪತ್ರಗಳೂ ಇದ್ದಿರಲಿಲ್ಲ. ಆಯುರ್ವೇದದ ಕುರಿತಂತೆ ಯಾವುದೇ ಅಧಿಕೃತ ಕಾಲೇಜುಗಳಲ್ಲಿ ಇವರು ಅಧ್ಯಯನ ಮಾಡಿದವರಲ್ಲ. ರಾಮ್‌ದೇವ್‌ರ ಇನ್ನೊಬ್ಬ ಸಹಚರ ಬಾಲಕೃಷ್ಣ ಮೂಲತಃ ನೇಪಾಳಿಯಾಗಿದ್ದು, ಈತನ ಮೇಲೆ ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪ ಸೇರಿದಂತೆ ಹಲವು ಪ್ರಕರಣಗಳಿದ್ದವು. ಬಾಬಾ ರಾಮ್‌ದೇವ್ ಮೇಲೆಯೂ ತನ್ನ ಗುರುವನ್ನು ಸಾಯಿಸಿದ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಇಂತಹ ರಾಮ್‌ದೇವ್ ‘ಸ್ವದೇಶಿ ಉತ್ಪನ್ನ’ಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಯ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಆದರೆ ಈತನ ಉತ್ಪನ್ನಗಳು ಎಷ್ಟರಮಟ್ಟಿಗೆ ಸ್ವದೇಶಿ ಎನ್ನುವ ಅನುಮಾನಗಳನ್ನು ಗ್ರಾಹಕರು ವ್ಯಕ್ತಪಡಿಸುತ್ತಿದ್ದಾರೆ ಮಾತ್ರವಲ್ಲ, ಆ ಉತ್ಪನ್ನಗಳ ಕಲಬೆರಕೆಗಳ ಬಗ್ಗೆ ನ್ಯಾಯಾಲಯದ ಮೆಟ್ಟಿಲು ತುಳಿದಿದ್ದಾರೆ. ವಿಪರ್ಯಾಸವೆಂದರೆ, ಈ ದೇಶದ ರಕ್ಷಣಾ ಇಲಾಖೆಯೊಂದಿಗೂ ಈತನ ಸಂಸ್ಥೆ ಒಪ್ಪಂದವನ್ನು ಮಾಡಿಕೊಂಡಿದೆ. ಸೇನೆಯ ಮೇಲೂ ಈತನ ಉತ್ಪನ್ನಗಳನ್ನು ಬಲವಂತವಾಗಿ ಹೇರಲಾಗಿದೆ.
ಆರಂಭದಲ್ಲಿ ಯೋಗವನ್ನು ಮುಂದಿಟ್ಟುಕೊಂಡು ತನ್ನ ಉದ್ಯಮವನ್ನು ರಾಮ್‌ದೇವ್ ಆರಂಭಿಸಿದರು. ಈತ ಮಾಡುತ್ತಿರುವುದು ಯೋಗವೇ ಅಲ್ಲ, ಬರೀ ಸರ್ಕಸ್ ಎಂದು ಹಲವು ಯೋಗಪಟುಗಳು ಆರೋಪ ಮಾಡಿದ್ದರು. ಇಷ್ಟಾದರೂ, ಶ್ರೀಮಂತರ ಶೋಕಿಯನ್ನು ಬಳಸಿಕೊಂಡು ತನ್ನ ಯೋಗವನ್ನು ಲಾಭದಾಯಕ ದಂಧೆಯಾಗಿಸಿದರು. ಇದರ ಜೊತೆ ಜೊತೆಗೇ ಸ್ವದೇಶಿ ಉತ್ಪನ್ನಗಳ ಮಾರಾಟಕ್ಕೂ ತೊಡಗಿದರು. ಇವುಗಳ ನಡುವೆ ಯುಪಿಎ ಸರಕಾರದ ಅವಧಿಯಲ್ಲಿ ರಾಜಕೀಯಕ್ಕೆ ಕಾಲಿಡಲು ಯತ್ನಿಸಿ ಬೆನ್ನು ಸುಟ್ಟುಕೊಂಡರು. ಯುಪಿಎ ಸರಕಾರದ ವಿರುದ್ಧ ಪ್ರತಿಭಟನೆಯ ಹೆಸರಿನಲ್ಲಿ ರಾಮಲೀಲಾ ಮೈದಾನವನ್ನು ರಾವಣ ಲೀಲಾ ಮೈದಾನವಾಗಿಸುವ ಇವರ ಪ್ರಯತ್ನ ಕೊನೆಯ ಗಳಿಗೆಯಲ್ಲಿ ಪೊಲೀಸರ ಪ್ರವೇಶದೊಂದಿಗೆ ವಿಫಲವಾಯಿತು. ಹೆಣ್ಣಿನ ವೇಷ ಧರಿಸಿ ಅಲ್ಲಿಂದ ಲಾರಿ ಹತ್ತಿ ಪರಾರಿಯಾದರು. ಇದಾದ ಬಳಿಕ ‘‘ನಾನು ಸರಕಾರದ ವಿರುದ್ಧ ಸೇನೆಯನ್ನು ಸಂಘಟಿಸುತ್ತೇನೆ. ರಾಮ ಲೀಲಾ ಮೈದಾನವನ್ನು ರಾವಣ ಲೀಲಾ ಮಾಡುತ್ತೇನೆ’’ ಎಂಬಂತಹ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದರು. ಯುಪಿಎ ಸರಕಾರವನ್ನು ಕೆಳಗಿಳಿಸಲು ರಾಮ್‌ದೇವ್ ಬಿಜೆಪಿಯೊಂದಿಗೆ ಕೈ ಜೋಡಿಸಿದರು. ಸನ್ಯಾಸಿ ವೇಷದಲ್ಲಿ ಉದ್ಯಮಿಯಾಗಿ, ರಾಜಕಾರಣಿಯಾಗಿ, ಧರ್ಮ ಪ್ರಚಾರಕನಾಗಿ ದೇಶದ ಉದ್ದಗಲಕ್ಕೆ ತನ್ನ ವ್ಯವಹಾರವನ್ನು ವಿಸ್ತರಿಸಿದ ರಾಮ್‌ದೇವ್ ಕೊರೋನ ಕಾಲದಲ್ಲಿ ಈ ದೇಶದ ಆರೋಗ್ಯ ಕ್ಷೇತ್ರದ ಮೇಲೆ ನಡೆಸಿದ ದಾಳಿ ಯಾವ ಕಾರಣಕ್ಕ್ಕೂ ಕ್ಷಮೆಗೆ ಅರ್ಹವಲ್ಲ.
ಕೊರೋನ ಕಾಲದಲ್ಲಿ ಔಷಧ ಮಾಫಿಯಾಗಳು ಜನಸಾಮಾನ್ಯರ ಕೋಟ್ಯಂತರ ಹಣವನ್ನು ದೋಚಿದವು. ಹಾಗೆ ದೋಚಿದ ಸಂಸ್ಥೆಯಲ್ಲಿ ಪತಂಜಲಿಯೂ ಒಂದು. ಇಡೀ ದೇಶ ಕೊರೋನದಿಂದ ತತ್ತರಿಸಿ ಕೂತಿದ್ದಾಗ, ತಾನು ಕೊರೋನಕ್ಕೆ ಔಷಧಿ ಕಂಡು ಹುಡುಕಿದ್ದೇನೆ ಎಂದು ಹೇಳಿದ್ದು ಮಾತ್ರವಲ್ಲ, ಔಷಧಿಗೆ ಮಾನ್ಯತೆ ಸಿಗುವ ಮೊದಲೇ ಅದನ್ನು ಮಾರುಕಟ್ಟೆಗೆ ಬಿಟ್ಟರು. ಕೊರೋನಕ್ಕೆ ಔಷಧಿಯೇ ಇಲ್ಲ ಎಂದು ಜನ ನಂಬಿರುವಾಗ, ಆಯುರ್ವೇದಲ್ಲಿ ನಂಬಿಕೆಯಿರುವ ಲಕ್ಷಾಂತರ ಜನರು ಸಂಜೀವಿನಿಯೇ ದೊರಕಿತು ಎಂಬಂತೆ ಈ ಔಷಧಿಯನ್ನು ಕೊಂಡುಕೊಂಡರು. ಇದರ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಕ್ರಮ ಕೈಗೊಳ್ಳುವಷ್ಟರಲ್ಲಿ ಈ ಸಂಸ್ಥೆ ಕೋಟ್ಯಂತರ ರೂಪಾಯಿಯನ್ನು ಜನರಿಂದ ದೋಚಿತ್ತು. ತನ್ನ ಔಷಧಿಗೆ ವಿಶ್ವಸಂಸ್ಥೆ ಮಾನ್ಯತೆ ನೀಡಿದೆ ಎಂದೂ ಮಾಧ್ಯಮಗಳಲ್ಲಿ ರಾಮ್‌ದೇವ್ ಕೊಚ್ಚಿಕೊಂಡಿದ್ದರು. ಆದರೆ ಅದೆಲ್ಲವೂ ಸುಳ್ಳು ಎನ್ನುವುದು ಬೆಳಕಿಗೆ ಬಂತು. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಈತ ತನ್ನ ನಕಲಿ ಆಯುರ್ವೇದ ಔಷಧಿಯನ್ನು ಮಾರುಕಟ್ಟೆಗೆ ಬಿಡುವ ಜೊತೆ ಜೊತೆಗೇ ಅಲೋಪತಿ ಔಷಧಿಯ ವಿರುದ್ಧ ಟೀಕೆಗಳನ್ನೂ ಮಾಡತೊಡಗಿದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ‘ಎಲ್ಲವೂ ಪುರಾತನ ತಾಳೆಗರಿಗಳಲ್ಲಿವೆ’ ಎಂದು ನಂಬುವವರ ಸಂಖ್ಯೆ ಹೆಚ್ಚಾಗಿತ್ತು. ಇದರ ಲಾಭವನ್ನು ಕೊರೋನ ಕಾಲದಲ್ಲಿ ಪತಂಜಲಿ ಸಂಸ್ಥೆ ತನ್ನದಾಗಿಸಿಕೊಂಡಿತು.
ಭಾರತ ವೈದ್ಯಕೀಯ ರಂಗಕ್ಕೆ ಸಾವಿರಾರು ವಿಜ್ಞಾನಿಗಳು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಸ್ವಾತಂತ್ರ್ಯ ದೊರಕಿದ ಕೆಲವೇ ವರ್ಷಗಳಲ್ಲಿ ಭಾರತದ ವೈದ್ಯಕೀಯ ಕ್ಷೇತ್ರ ಸಾಧಿಸಿದ ಸಾಧನೆಗಳಿಗೆ ವಿಶ್ವ ಬೆರಗಾಗಿದೆ. ಕುಷ್ಠ ರೋಗ, ಸಿಡುಬು, ಕಾಲರಾ, ಪ್ಲೇಗ್ ಮೊದಲಾದ ರೋಗಗಳ ವಿರುದ್ಧ ಅಲೋಪತಿ ವೈದ್ಯರು ಬಹುದೊಡ್ಡ ಯುದ್ಧವನ್ನೇ ಮಾಡಿ ಗೆದ್ದರು. ಪರಿಣಾಮವಾಗಿ, ಇಂದು ಸಾವಿನ ದರ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಕ್ಷಯ ರೋಗ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಳಿಕೆಯಾಗುವುದಕ್ಕೂ ಆಧುನಿಕ ವೈದ್ಯಕೀಯವೇ ಕಾರಣ. ಇದಕ್ಕಾಗಿ ಸಾವಿರಾರು ವಿಜ್ಞಾನಿಗಳು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಅವರೆಲ್ಲರ ತ್ಯಾಗ ಬಲಿದಾನಗಳಿಗೆ ರಾಮ್‌ದೇವ್ ಅವಮಾನಿಸಿದ್ದಾರೆ. ಮಾತ್ರವಲ್ಲ, ಇಂದು ಭಾರತ ವೈದ್ಯಕೀಯ ರಂಗದಲ್ಲಿ ತನ್ನ ಸಾಧನೆಗಳಿಗಾಗಿ ಹೆಮ್ಮೆ ಪಡುತ್ತಿರುವಾಗ, ಅದಕ್ಕೆ ಧಕ್ಕೆ ತರುವ ದೇಶದ್ರೋಹದ ಕೆಲಸವನ್ನು ರಾಮ್‌ದೇವ್ ಮಾಡಿದ್ದಾರೆ.
ಪತಂಜಲಿ ಇಷ್ಟು ದೊಡ್ಡ ಮೋಸವನ್ನು ಮಾಡುತ್ತಿರುವಾಗ ಸರಕಾರ ಯಾಕೆ ಮೌನವಾಗಿತ್ತು? ಎಂದು ಸುಪ್ರೀಂಕೋರ್ಟ್ ಕೇಳಿದೆ. ಸರಕಾರ ಮೌನವಾಗಿರಲಿಲ್ಲ, ಬದಲಿಗೆ ಪತಂಜಲಿಯ ಅಕ್ರಮಗಳ ಜೊತೆಗೆ ಅದು ಶಾಮೀಲಾಗಿತ್ತು. ಪತಂಜಲಿ ಸಂಸ್ಥೆಗೆ ಕೇಂದ್ರ ಮತ್ತು ಬೇರೆ ಬೇರೆ ರಾಜ್ಯ ಸರಕಾರಗಳು ನೀಡಿರುವ ಸಬ್ಸಿಡಿಗಳು, ಅನುದಾನಗಳೇ ಇದನ್ನು ಹೇಳುತ್ತವೆ. ರಾಮ್‌ದೇವ್ ಸನ್ಯಾಸಿ ವೇಷದಲ್ಲಿರುವ ರಾಜಕಾರಣಿಯೂ ಆಗಿದ್ದಾರೆ. ಸರಕಾರದೊಂದಿಗೆ ಅವರಿಗೆ ಅವಿನಾಭಾವ ಸಂಬಂಧವಿದೆ. ಸರಕಾರದಿಂದ ತನ್ನ ಪತಂಜಲಿ ಸಂಸ್ಥೆಗಾಗಿ ನೂರಾರು ಎಕರೆ ಭೂಮಿಯನ್ನು ಪಡೆದುಕೊಂಡಿದ್ದಾರೆ. ಇವೆಲ್ಲವೂ ಅವರು ಪಡೆದಿದ್ದು ಆಯುರ್ವೇದ ಮತ್ತು ಸ್ವದೇಶಿ ಉತ್ಪನ್ನಗಳ ಹೆಸರಿನಲ್ಲಿ. ಆದರೆ ಹಾಗೆ ಪಡೆದ ಭೂಮಿಯನ್ನು ಅವರು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಸಿದ್ದಾರೆ ಎನ್ನುವ ಆರೋಪಗಳಿವೆ. ಸರಕಾರದಿಂದ ಅವರು ಪಡೆದ ಸವಲತ್ತುಗಳು, ಅವರ ಭೂ ಅಕ್ರಮಗಳ ಬಗ್ಗೆ ಸುಪ್ರೀಂಕೋರ್ಟ್ ಪ್ರತ್ಯೇಕ ಸ್ವತಂತ್ರ ತನಿಖೆಯೊಂದನ್ನು ನಡೆಸಬೇಕು. ಆಗ ಸರಕಾರದ ಜೊತೆಗೆ ಪತಂಜಲಿಯ ಅಕ್ರಮ ಸಂಬಂಧವೇನು ಎನ್ನುವುದು ಬಹಿರಂಗವಾಗಬಹುದು.