ಕೆನಡಾದಲ್ಲಿ ದೇವಳದ ಮೇಲೆ ದಾಳಿ: ಭಾರತ ಮಾಡಬೇಕಾಗಿರುವುದೇನು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೆನಡಾ-ಭಾರತದ ನಡುವಿನ ಹದಗೆಡುತ್ತಿರುವ ರಾಜತಾಂತ್ರಿಕ ಸಂಬಂಧ ನಿಧಾನಕ್ಕೆ ಉಭಯ ದೇಶಗಳ ಜನರ ಮೇಲೂ ಪರಿಣಾಮ ಬೀರುತ್ತಿದೆ. ಉಭಯ ಸರಕಾರಗಳ ನಿರ್ಧಾರಗಳಿಗೆ ಅಮಾಯಕ ಜನರು ಬಲಿಯಾಗಬೇಕಾದಂತಹ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಇದೀಗ ಕೆನಡಾದ ಒಂಟಾರಿಯೊ ಪ್ರಾಂತದ ಹಿಂದೂ ದೇವಸ್ಥಾನವೊಂದರಲ್ಲಿ ದುಷ್ಕರ್ಮಿಗಳ ಗುಂಪೊಂದು ಭಕ್ತರ ಮೇಲೆ ದಾಳಿ ನಡೆಸಿದೆ. ದುಷ್ಕರ್ಮಿಗಳನ್ನು ಖಾಲಿಸ್ತಾನಿ ಪರ ಗುಂಪೆಂದು ಗುರುತಿಸಲಾಗಿದ್ದು, ದಾಳಿಕೋರರ ಸಂಖ್ಯೆ ದೊಡ್ಡದಾಗಿದ್ದುದರಿಂದ ಪೊಲೀಸರೂ ಅಸಹಾಯಕರಾಗಬೇಕಾಯಿತು. ಈ ದಾಳಿಗೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಭಾರತವು ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಸ್ವತಃ ಪ್ರಧಾನಿ ಮೋದಿಯವರು ಕೃತ್ಯದ ವಿರುದ್ಧ ಹೇಳಿಕೆ ನೀಡಿದ್ದು, ಕೆನಡಾ ತನ್ನ ಕಾನೂನನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ. ದಾಳಿಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿರುವ ಮೂವರನ್ನು ಕೆನಡಾ ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ತೀವ್ರ ವಿಚಾರಣೆ ನಡೆಯುತ್ತಿದೆ ಎಂದು ಅಲ್ಲಿನ ಸರಕಾರ ತಿಳಿಸಿದೆ. ಕೆನಡಾ ಸರಕಾರವು ಇದೇ ಮೊದಲ ಬಾರಿಗೆ ಭಾರತವನ್ನು ಸೈಬರ್ ಬೆದರಿಕೆಯೊಡ್ಡುವ ವಿರೋಧಿ ದೇಶಗಳ ಪಟ್ಟಿಗೆ ಸೇರಿಸಿದ ಬೆನ್ನಿಗೇ ಈ ದಾಳಿ ನಡೆದಿರುವುದು ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಹದಗೆಡುವಂತಾಗಿದೆ.
ಭಾರತವು ತಮ್ಮ ದೇಶಗಳ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸುತ್ತಿದೆ ಎನ್ನುವ ಆತಂಕವನ್ನು ನೆರೆಯ ಬೂತಾನ್, ಮಾಲ್ಟಮ್ಸ್, ನೇಪಾಳ, ಶ್ರೀಲಂಕಾ, ಬಾಂಗ್ಲಾದಂತಹ ಪುಟ್ಟ ದೇಶಗಳು ಈ ಹಿಂದೆಯೇ ಆರೋಪಿಸುತ್ತಾ ಬಂದಿವೆ. ಒಂದೆಡೆ ಚೀನಾದಂತಹ ಬಲಾಡ್ಯ ದೇಶದೊಂದಿಗೆ ವೈರತ್ವವನ್ನು ಕಟ್ಟಿಕೊಂಡಿರುವ ಭಾರತ ಕಳೆದ ಹತ್ತು ವರ್ಷಗಳಲ್ಲಿ ತನ್ನ ಸುತ್ತಲೂ ಶತ್ರುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಪ್ರಧಾನಿ ಮೋದಿ ನೇತೃತ್ವದ ಸರಕಾರದ ಗೊಂದಲಕಾರಿ ವಿದೇಶಾಂಗ ನೀತಿಯ ಫಲವಾಗಿ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನ ಹಿಂದಿನ ಸ್ವಂತಿಕೆಯನ್ನು ಉಳಿಸಿಕೊಂಡಿಲ್ಲ. ಅಮೆರಿಕದ ಜೊತೆಗೆ ಕೈಜೋಡಿಸುವ ಆತುರದಲ್ಲಿ ರಶ್ಯದೊಂದಿಗಿನ ಆತ್ಮೀಯ ಸಂಬಂಧಕ್ಕೆ ಎಂದೋ ಧಕ್ಕೆಯಾಗಿದೆ. ಚೀನಾವನ್ನು ಮುಂದಿಟ್ಟುಕೊಂಡು ಅಮೆರಿಕ ಭಾರತದ ಮೇಲೆ ಒತ್ತಡಗಳನ್ನು ಹೇರಿ ತನಗೆ ಪೂರಕವಾಗಿರುವ ಒಪ್ಪಂದಗಳಿಗೆ ಸಹಿ ಹಾಕಿಸಿಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಕೆನಡಾದಲ್ಲಿ ಖಾಲಿಸ್ತಾನ್ ಪರ ಉಗ್ರನೊಬ್ಬನ ಹತ್ಯೆಯಲ್ಲಿ ಪಾಲುದಾರಿಕೆಯಿದೆ ಎನ್ನುವ ಆರೋಪ, ಭಾರತದ ಅಂತರ್ ರಾಷ್ಟ್ರೀಯ ಪ್ರತಿಷ್ಠೆಯ ಮೇಲೆ ಇನ್ನಷ್ಟು ಕಳಂಕವನ್ನು ತಂದೊಡ್ಡಿದೆ. ಇತ್ತೀಚೆಗೆ ಕೆನಡಾ ಮತ್ತು ಅಮೆರಿಕ ಮಾಡಿರುವ ಆರೋಪಗಳು, ಸ್ವಾತಂತ್ರೋತ್ತರ ನೆಹರೂ, ಇಂದಿರಾಗಾಂಧಿಯ ಮೂಲಕ ಭಾರತ ಗಳಿಸಿಕೊಂಡಿರುವ ಅಂತರರಾಷ್ಟ್ರೀಯ ಗೌರವವನ್ನು ಮಣ್ಣುಪಾಲು ಮಾಡುವಷ್ಟು ಶಕ್ತಿಶಾಲಿಯಾಗಿದೆ. ಅಮೆರಿಕದಲ್ಲಿ ನಡೆದ ಹತ್ಯೆಯತ್ನವೊಂದರಲ್ಲಿ ಭಾರತದ ಪಾತ್ರ ಉಲ್ಲೇಖವಾಗಿರುವ ಬೆನ್ನಿಗೇ, ಭಾರತ ಸರಕಾರ, ರಾ ಸಂಸ್ಥೆ, ಭೂಗತ ಪಾತಕಿಗಳ ನಡುವಿನ ನಂಟಿನ ಬಗ್ಗೆ ಕೆನಡಾ ಬಹಿರಂಗ ಹೇಳಿಕೆಯನ್ನು ನೀಡಿದೆ. ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಮೂಲದ ಸಿಖ್ ಸಮುದಾಯಕ್ಕೆ ಆಶ್ರಯ ನೀಡಿರುವ ಕೆನಡಾ ಆ ಕಾರಣಕ್ಕಾಗಿಯೇ ಭಾರತಕ್ಕೆ ಹತ್ತಿರದ ಮಿತ್ರ ದೇಶವಾಗಬೇಕಾಗಿತ್ತು. ಇಂದು ಕೆನಡಾದ ರಾಜಕೀಯವನ್ನು ಭಾರತೀಯ ಮೂಲದ ಸಿಬ್ಬರೇ ನಿಯಂತ್ರಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಸಿಬ್ಬರ ಪರವಾಗಿ ಕೆನಡಾ ಸರಕಾರ ಇದೆ ಎನ್ನುವುದೇ ಇಂದು ಭಾರತ ಸರಕಾರದ ಅತಿ ದೊಡ್ಡ ಸಮಸ್ಯೆಯಾಗಿರುವುದು ವಿಪರ್ಯಾಸವಾಗಿದೆ. ಪಂಜಾಬ್‌ನ ಪ್ರತ್ಯೇಕತಾವಾದಿಗಳ ಶ್ರೀಕತಾವಾದಿಗಳಿಗೆ ಕೆನಡಾದ ಸಿಬ್ಬರು ಬೆಂಬಲ ನೀಡುತ್ತಿದ್ದಾರೆ ಎನ್ನುವ ಭಾರತದ ಆರೋಪ ಇಂದು ನಿನ್ನೆಯದಲ್ಲ. ಆದರೆ ಅದಕ್ಕಾಗಿ, ಭಾರತ ಸರಕಾರ ಕೆನಡಾಕ್ಕೆ ಅಕ್ರಮ ದಾರಿಯಲ್ಲಿ ಪ್ರವೇಶಿಸಿ, ತಾನು ಆರೋಪಿಯೆಂದು ಗುರುತಿಸಿದ ದುಷ್ಕರ್ಮಿಗಳನ್ನು ಕ್ರಿಮಿನಲ್‌ಗಳ ಸಹಾಯದಿಂದ ವಿಚಾರಣೆಯೇ ಇಲ್ಲದೆ ಶಿಕ್ಷಿಸುವುದು ತಪ್ಪಾಗುತ್ತದೆ. ಆ ದೇಶದ ಆಂತರಿಕ ಕಾನೂನಿನೊಳಗೆ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಒಂದು ವೇಳೆ, ಖಾಲಿಸ್ತಾನಿ ಉಗ್ರರು ಕೆನಡಾದಲ್ಲಿ ಆಶ್ರಯ ಪಡೆದಿರುವುದು ನಿಜವೇ ಆಗಿದ್ದರೆ, ಅಲ್ಲಿನ ಸರಕಾರಕ್ಕೆ ಅದನ್ನು ಮನವರಿಕೆ ಮಾಡಿ, ಅದರ ನೆರವಿನಿಂದಲೇ ಆರೋಪಿಗಳ ಗಡಿಪಾರಿಗೆ ಭಾರತ ಕ್ರಮ ತೆಗೆದುಕೊಳ್ಳಬೇಕು. ಅದನ್ನು ನಿಭಾಯಿಸುವ ಮುತ್ಸದ್ದಿತನ ವಿದೇಶಾಂಗ ಸಚಿವರ ಬಳಿಯಿರಬೇಕು. ಅದರ ಬದಲು, ಇಸ್ರೇಲ್‌ನ್ನು ಮಾದರಿಯಾಗಿಟ್ಟುಕೊಂಡು, ಪಾತಕಿಗಳನ್ನು ಬಳಸಿ ಅಲ್ಲಿನ ದೇಶದೊಳಗೆ ಹತ್ಯೆ, ಹತ್ಯೆ ಯತ್ನಗಳಂತಹ ಅಂತಾರಾಷ್ಟ್ರೀಯ ಅಪರಾಧಕ್ಕಿಳಿಯುವುದರಿಂದ ಭಾರತ ಪುಂಡ ರಾಷ್ಟ್ರವಾಗಿ ವಿಶ್ವದ ಮುಂದೆ ಗುರುತಿಸಿಕೊಳ್ಳುವ ಅಪಾಯವಿದೆ. ಕೆನಡಾ ಮಾಡಿರುವ ಎಲ್ಲ ಆರೋಪಗಳನ್ನು ಭಾರತ ಈಗಾಗಲೇ ನಿರಾಕರಿಸಿದೆಯಾದರೂ, ಅಲ್ಲಿ ನಡೆದಿರುವ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾರತದ ಪಾಲಿನ ಕುರಿತಂತೆ ವ್ಯಕ್ತವಾಗಿರುವ ಸಂಶಯಗಳಿಗೆ ಉತ್ತರಿಸುವುದು ಭಾರತದ ಕರ್ತವ್ಯವಾಗಿದೆ. ಇದೇ ಸಂದರ್ಭದಲ್ಲಿ, ಉಗ್ರರೇ ಆಗಿದ್ದರೆ, ರಾಜಕೀಯ ಕಾರಣಕ್ಕಾಗಿ ಅವರಿಗೆ ಆಶ್ರಯಕೊಟ್ಟರೆ ಅದು ಒಂದಲ್ಲ ಒಂದು ದಿನ ಕೆನಡಾ ಸರಕಾರದ ಕೊರಳಿಗೂ ಉರುಳಾಗಬಹುದು. ಭಾರತ ಮಾಡುತ್ತಿರುವ ಆರೋಪದಲ್ಲಿ ನಿಜವಿದೆಯೇ ಎನ್ನುವುದನ್ನು ಪರಿಶೀಲಿಸುವುದರಿಂದ ಕೆನಡಾದ ಪಾಲಿಗೂ ಒಳಿತಿದೆ. ಭಾರತಕ್ಕೆ ಬೇಕಾಗಿರುವ ಉಗ್ರರು ಕೆನಡಾದಲ್ಲಿ ಆಶ್ರಯ ಪಡೆದಿದ್ದರೆ ಅವರನ್ನು ಗುರುತಿಸಿ ಗಡಿಪಾರು ಮಾಡುವುದು ಅತ್ಯಗತ್ಯವಾಗಿದೆ. ಉಭಯ ದೇಶಗಳ ನಡುವಿನ ಈ ತಿಕ್ಕಾಟ ನಿಧಾನಕ್ಕೆ ಶ್ರೀಸಾಮಾನ್ಯರ ಬದುಕಿನ ಮೇಲೂ ಪರಿಣಾಮ ಬೀರಬಹುದಾಗಿದೆ. ಕೆನಡಾದಲ್ಲಿ ಹಿಂದೂ ದೇವಸ್ಥಾನ ಮತ್ತು ಹಿಂದೂ ಭಕ್ತರ ಮೇಲೆ ನಡೆದ ದಾಳಿ, ಭಾರತದಲ್ಲಿ ಸಿಬ್ಬರ ವಿರುದ್ದದ ಅಸಮಾಧಾನವಾಗಿ ಬದಲಾಗಲು ಹೆಚ್ಚು ಸಮಯ ಬೇಕಾಗಿಲ್ಲ. ಇಲ್ಲಿನ ರಾಜಕೀಯ ಶಕ್ತಿಗಳು ಈ ಘಟನೆಯನ್ನು ಸಿಬ್ಬರ ವಿರುದ್ಧ ದ್ವೇಷಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಇದು ಪಂಜಾಬ್‌ನ ಜನರೊಳಗೆ ಆತಂಕಗಳನ್ನು ಬಿತ್ತ ತೊಡಗಿದರೆ ಅದರ ಫಸಲನ್ನು ಮತ್ತೆ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳು ತಮ್ಮದಾಗಿಸಿಕೊಳ್ಳುತ್ತಾರೆ.
ಕೆನಡಾದಲ್ಲಿ ಹಿಂದೂ ದೇವಸ್ಥಾನದ ಮೇಲೆ ನಡೆದ ಹಲ್ಲೆಗೆ ಭಾರೀ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ತನ್ನದೇ ಭಾರತದಲ್ಲಿ ಅದಕ್ಕಿಂತ ಭೀಕರವಾದದ್ದು ನಡೆದಿದೆ ಮತ್ತು ನಡೆಯುತ್ತಿದೆ ಎನ್ನುವುದನ್ನು ಮನಗಾಣಬೇಕು. ಕೆನಡಾದ ಒಂದು ದೇವಸ್ಥಾನದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದರೆ, ಭಾರತದಲ್ಲಿ ಮಸೀದಿಗಳ ಮೇಲೆ ನಿರಂತರವಾಗಿ ಬಹಿರಂಗ ದಾಳಿಗಳು ನಡೆಯುತ್ತಿವೆ. ಕಳೆದ ವಾರ ಉತ್ತರ ಕಾಶಿಯಲ್ಲಿ 200ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳು ಮಸೀದಿಯೊಂದಕ್ಕೆ ದಾಳಿ ಮಾಡಿ, ದಾಂಧಲೆಗೈದಿದ್ದಾರೆ. ಇಂತಹ ದಾಳಿಗಳು ಕೆಲವೆಡೆ ದುಷ್ಕರ್ಮಿಗಳು ನಡೆಸುತ್ತಿದ್ದರೆ ಕೆಲವು ರಾಜ್ಯಗಳಲ್ಲಿ ಸರಕಾರದ ನೇತೃತ್ವದಲ್ಲೇ ನಡೆಯುತ್ತಿದೆ. ಮಣಿಪುರದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಹಿಂಸಾಚಾರದ ಸಂದರ್ಭದಲ್ಲಿ ನೂರಕ್ಕೂ ಅಧಿಕ ಚರ್ಚ್ ಗಳನ್ನು ಧ್ವಂಸಗೊಳಿಸಲಾಗಿದೆ. ಪ್ರಧಾನಿ ಮೋದಿಯವರಿಗೆ ಇದರ ವಿರುದ್ಧ ಒಂದೇ ಒಂದು ಖಂಡನಾ ಹೇಳಿಕೆಯನ್ನು ನೀಡಲು ಸಾಧ್ಯವಾಗಿಲ್ಲ. ಒಂದೆಡೆ ತನ್ನದೇ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಮೌನ ಕುಮ್ಮಕ್ಕು ನೀಡುತ್ತಾ, ಇನ್ನೊಂದು ದೇಶದಲ್ಲಿ ನಡೆದ ಯಾವುದೋ ಒಂದು ಘಟನೆ ಮುಂದಿಟ್ಟುಕೊಂಡು ಆಘಾತ ವ್ಯಕ್ತಪಡಿಸಿದರೆ, ಅದನ್ನು ಆ ದೇಶ ಗಂಭೀರವಾಗಿ ಸ್ವೀಕರಿಸುವುದಾದರೂ ಹೇಗೆ? ನೆರೆಯ ಬಾಂಗ್ಲಾದಲ್ಲಿ ಅಲ್ಲಿ ತಲೆತಲಾಂತರದಿಂದ ಬದುಕುತ್ತಿರುವ ಹಿಂದೂ ಸಮುದಾಯವನ್ನು ಆ ದೇಶದ ವಿರುದ್ಧವೇ ಎತ್ತಿಕಟ್ಟಲು ಪರೋಕ್ಷ ಕುಮ್ಮಕ್ಕು ನೀಡುತ್ತಾ, ಇನ್ನೊಂದೆಡೆ ತನ್ನದೇ ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ದ ಬಹುಸಂಖ್ಯಾತರನ್ನು ಎತ್ತಿಕಟ್ಟುತ್ತಾ ದೂರದ ಕೆನಡಾಕ್ಕೆ ಕಾನೂನನ್ನು ಎತ್ತಿ ಹಿಡಿಯಲು ಉಪದೇಶ ನೀಡಿದರೆ ಅದು ಪರಿಣಾಮ ಬೀರಬಲ್ಲುದೆ? ತನ್ನ ಪಾದಬುಡದಲ್ಲೇ ಬೆಳೆಯುತ್ತಿರುವ ಕೇಸರಿ ಉಗ್ರವಾದಕ್ಕೆ ನೀರೆರೆಯುತ್ತಾ, ಕೆನಡಾ ಖಾಲಿಸ್ತಾನಿಗಳಿಗೆ ಬೆಂಬಲ ನೀಡುತ್ತದೆ ಎಂದು ಆರೋಪಿಸುವುದು ದ್ವಂದ್ವವಾಗುವುದಿಲ್ಲವೇ? ಭಯೋತ್ಪಾದನೆ, ಉಗ್ರವಾದದ ಬಗ್ಗೆ ತಾನು ಅನುಸರಿಸುತ್ತಿರುವ ದ್ವಂದ್ವಗಳಿಂದ ಹೊರ ಬಂದು, ಅದರ ವಿರುದ್ಧ ಸ್ಪಷ್ಟ ನಿಲುವು ತಳೆಯಲು ಭಾರತದ ಯಾವಾಗ ಶಕ್ತವಾಗುತ್ತದೋ ಆಗ ತನ್ನಷ್ಟಕ್ಕೆ ಭಾರತ ಮಾತುಗಳನ್ನು ಇತರ ದೇಶಗಳು ಗಂಭೀರವಾಗಿ ಸ್ವೀಕರಿಸಲು ಆರಂಭಿಸುತ್ತವೆ.