ಆಸ್ಪತ್ರೆಗಳಲ್ಲಿ ರೋಗಿಗಳ ಸುರಕ್ಷತೆಗೂ ಆದ್ಯತೆ ಸಿಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶವನ್ನು ತಲ್ಲಣಗೊಳಿಸಿರುವ ಕೋಲ್ಕತಾ ಕಿರಿಯ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದೆ. ಈಗಾಗಲೇ ವೈದ್ಯರು ಸಂಘಟಿತರಾಗಿ ದೇಶಾದ್ಯಂತ ಪ್ರತಿಭಟನೆಯನ್ನು ನಡೆಸಿದ್ದಾರೆ. ವೈದ್ಯರು ಮತ್ತು ಆರೋಗ್ಯ ಪಾಲನಾ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ದೇಶಾದ್ಯಂತ ಭಾರೀ ಆತಂಕಗಳು ವ್ಯಕ್ತವಾಗಿವೆ. ಪಶ್ಚಿಮಬಂಗಾಳದಲ್ಲಿ ವಿರೋಧ ಪಕ್ಷಗಳು ಈ ಪ್ರಕರಣವನ್ನು ಮಮತಾ ಬ್ಯಾನರ್ಜಿಯ ವಿರುದ್ಧ ಅಸ್ತ್ರವಾಗಿ ಬಳಸುತ್ತಿದ್ದಾರೆ. ಬಹುಶಃ ನಿರ್ಭಯಾ ಪ್ರಕರಣದ ಬಳಿಕ ಅತಿ ಹೆಚ್ಚು ಸದ್ದು ಮಾಡಿದ ಪ್ರಕರಣ ಇದು. ಈ ಪ್ರಕರಣವನ್ನು ಇದೀಗ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಂಡಿದೆ. ಅಷ್ಟೇ ಅಲ್ಲ, ವೈದ್ಯರು, ಆರೋಗ್ಯ ಪಾಲನಾ ಸಿಬ್ಬಂದಿಯ ಸುರಕ್ಷತೆಗೆ ರಾಷ್ಟ್ರೀಯ ಕಾರ್ಯಪಡೆ ರಚನೆಯನ್ನು ಮಾಡಿದೆ. ಕಾರ್ಯಪಡೆಯು ದೇಶಾದ್ಯಂತ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಸುರಕ್ಷತೆ, ಭದ್ರತೆ ಹಾಗೂ ಸೌಲಭ್ಯಗಳನ್ನು ಖಾತರಿ ಪಡಿಸಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಿದೆ. ವೈದ್ಯಕೀಯ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಸುರಕ್ಷಿತ ಪರಿಸ್ಥಿತಿಯನ್ನು ರೂಪಿಸುವುದಕ್ಕೆ ರಾಷ್ಟ್ರೀಯ ನಿಯಮಾವಳಿಯೊಂದನ್ನು ರೂಪಿಸಬೇಕಾಗಿದೆ ಎಂದೂ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಆದರೆ ಈ ಪ್ರಕರಣ, ವೈದ್ಯರ ಮೇಲೆ ಹೊರಗಿನ ಶಕ್ತಿಗಳಿಂದ ನಡೆದ ದಾಳಿ ಎಂಬ ನಿರ್ಧಾರಕ್ಕೆ ಮೊದಲೇ ಬರುವಂತಿಲ್ಲ. ಸಂತ್ರಸ್ತ ವೈದ್ಯೆ ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಯ ಮೇಲೆಯೇ ಆರೋಪಗಳು ಕೇಳಿ ಬರುತ್ತಿವೆ. ಆರ್.ಜಿ. ಕರ್ ಆಸ್ಪತ್ರೆಯ ಹಣಕಾಸು ಅವ್ಯವಹಾರದ ತನಿಖೆಗೆ ಪಶ್ಚಿಮಬಂಗಾಳ ಸರಕಾರದಿಂದ ಈಗಾಗಲೇ ಸಿಟ್ ರಚನೆಯಾಗಿದೆ. ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮೃತದೇಹಗಳ ಮಾರಾಟ ಸೇರಿದಂತೆ ಹಲವಾರು ಅಕ್ರಮ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರೆ ಎಂದು ಆಸ್ಪತ್ರೆಯ ಮಾಜಿ ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ. ಅತ್ಯಾಚಾರ-ಕೊಲೆ ಘಟನೆಯ ಬಳಿಕ ಸಂದೀಪ್ ಘೋಷ್ರ ಸಂಶಯಾಸ್ಪದ ವರ್ತನೆಗಳ ಹಿನ್ನೆಲೆಯಲ್ಲಿ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ. ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಆನಂತರದ ಕೊಲೆಯಲ್ಲಿ ಆಸ್ಪತ್ರೆಯ ಪಾಲಿದೆಯೇ ಎನ್ನುವುದೂ ತನಿಖೆಗೊಳಪಡುತ್ತಿದೆ. ಇಷ್ಟಕ್ಕೂ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಅಪಾಯವಿರುವುದು ಸಾರ್ವಜನಿಕರಿಂದ ಮಾತ್ರವೇ ಅಲ್ಲ. ಸ್ವತಃ ಆಸ್ಪತ್ರೆಯೊಳಗಿರುವ ಶಕ್ತಿಗಳಿಂದಲೂ ಅಪಾಯಗಳಿವೆ. ಇದು ಹಲವು ಪ್ರಕರಣಗಳಲ್ಲಿ ಈಗಾಗಲೇ ಸಾಬೀತಾಗಿವೆ.
ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಲಿತ ಸಮುದಾಯಕ್ಕೆ ಸೇರಿದ ದಾದಿಯೊಬ್ಬಳ ಮೇಲೆ ವೈದ್ಯನೇ ಅತ್ಯಾಚಾರ ನಡೆಸಿರುವ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಈ ಸಂಬಂಧ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಚಂಡಿಗಡದ ರೋಹ್ಟಕ್ನ ವೈದ್ಯಕೀಯ ಕಾಲೇಜೊಂದರ ವಿದ್ಯಾರ್ಥಿನಿಯ ಮೇಲೆ ವೈದ್ಯನೊಬ್ಬ ಹಲ್ಲೆ, ದೌರ್ಜನ್ಯಗಳನ್ನು ಎಸಗಿರುವ ಬಗ್ಗೆ ಕಳೆದ ವಾರ ದೂರು ದಾಖಲಾಗಿದ್ದು ವೈದ್ಯನನ್ನು ಬಂಧಿಸಲಾಗಿದೆ. ಸುಮಾರು ಏಳು ತಿಂಗಳಿನಿಂದ ಆಕೆಗೆ ವೈದ್ಯ ದೌರ್ಜನ್ಯ ಎಸಗುತ್ತಿರುವುದು ಬೆಳಕಿಗೆ ಬಂದಿದೆ. ಇಂದಿನ ದಿನಗಳಲ್ಲಿ ಆಸ್ಪತ್ರೆ ಬರೇ ಸೇವಾ ಸಂಸ್ಥೆಯಾಗಿ ಉಳಿದಿಲ್ಲ. ಅದು ಬೃಹತ್ ಕಾರ್ಪೊರೇಟ್ ಉದ್ಯಮ ಸಂಸ್ಥೆಯಾಗಿ ಪರಿವರ್ತನೆಯಾಗಿದೆ. ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಮಾತ್ರವಲ್ಲ, ವೈದ್ಯರನ್ನು ಹಲವು ಬಗೆಯಲ್ಲಿ ಶೋಷಣೆಗೀಡು ಮಾಡುತ್ತಿವೆ. ಆದರೆ ಇದು ಸಾಧಾರಣವಾಗಿ ಬೆಳಕಿಗೆ ಬರುವುದೇ ಇಲ್ಲ. ಆಸ್ಪತ್ರೆಗಳಲ್ಲಿ ನಡೆಯುವ ಅಕ್ರಮಗಳ ವಿರುದ್ಧ ಧ್ವನಿಯೆತ್ತುವ ವೈದ್ಯರನ್ನು ಅತ್ಯಂತ ಭೀಕರವಾಗಿ ದಮನ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸ್ಗಳನ್ನು ಅತ್ಯಂತ ಕೇವಲವಾಗಿ ನಡೆಸಿಕೊಳ್ಳಲಾಗುತ್ತದೆಯಾದರೂ, ಇದರ ವಿರುದ್ಧ ಧ್ವನಿಯೆತ್ತುವ ಧೈರ್ಯ ಅವರಿಗಿರುವುದಿಲ್ಲ. ಅತ್ಯಂತ ಕಡಿಮೆ ವೇತನ, ಅತಿ ಹೆಚ್ಚು ದುಡಿಮೆ, ರಾತ್ರಿ ಪಾಳಿಯಲ್ಲಿ ಅನುಭವಿಸುವ ಹಿಂಸೆ ಇವೆಲ್ಲವುಗಳನ್ನು ಅವರು ಅನಿವಾರ್ಯವಾಗಿ ಸಹಿಸಬೇಕಾಗುತ್ತದೆ. ಅನೇಕ ಸಂದರ್ಭದಲ್ಲಿ ಹಿರಿಯ ವೈದ್ಯರು ಮಾಡುವ ತಪ್ಪುಗಳ ಹೊಣೆಯನ್ನು ಕಿರಿಯ ವೈದ್ಯರು ಹೊರಬೇಕಾಗುತ್ತದೆ. ಕಿರಿಯ ವಿದ್ಯಾರ್ಥಿನಿಯರ ಭವಿಷ್ಯ ಹಿರಿಯ ವೈದ್ಯರ ಕೈಯಲ್ಲಿರುವುದರಿಂದ ಅವರು ಹೇಳಿದ್ದನ್ನೆಲ್ಲ ಶಿರಸಾವಹಿಸಿ ಪಾಲಿಸುವುದು ಅನಿವಾರ್ಯವಾಗುತ್ತದೆ. ವೈದ್ಯರು, ಆರೋಗ್ಯ ಪಾಲನಾ ಸಿಬ್ಬಂದಿಯ ರಕ್ಷಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಬಗ್ಗೆಯೂ ಕ್ರಮ ತೆಗೆದುಕೊಳ್ಳಬೇಕು. ಮುಖ್ಯವಾಗಿ ಆಸ್ಪತ್ರೆಯೊಳಗೆ ಸಂಸ್ಥೆಯ ಮುಖ್ಯಸ್ಥರು, ಹಿರಿಯ ವೈದ್ಯರು, ಸಹ ವೈದ್ಯರಿಂದ ಮಹಿಳಾ ವೈದ್ಯರಿಗೆ, ದಾದಿಯರಿಗೆ ರಕ್ಷಣೆ ಸಿಗಬೇಕಾಗಿದೆ. ಇದಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು. ಮೊದಲು ತಮ್ಮವರಿಂದ ರಕ್ಷಣೆ ಪಡೆಯುವಲ್ಲಿ ಈ ಮಹಿಳಾ ವೈದ್ಯರು ಯಶಸ್ವಿಯಾಗಬೇಕಾಗಿದೆ. ಆ ಬಳಿಕ ಆಸ್ಪತ್ರೆಯ ಹೊರಗಿನ ಶಕ್ತಿಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು.
ಹಾಗೆಯೇ ಆಸ್ಪತ್ರೆಗಳಲ್ಲಿ ವೈದ್ಯರ ರಕ್ಷಣೆ ಮಾತ್ರವಲ್ಲ, ಆಸ್ಪತ್ರೆಗಳನ್ನು ನೆಚ್ಚಿ ಬಂದ ರೋಗಿಗಳ ರಕ್ಷಣೆಗೂ ಸುಪ್ರೀಂಕೋರ್ಟ್ನ ಕಾರ್ಯಪಡೆಯು ಆದ್ಯತೆ ನೀಡಬೇಕಾಗಿದೆ. ಯಾಕೆಂದರೆ, ಆಸ್ಪತ್ರೆಗಳಲ್ಲಿ ಐಸಿಯುನೊಳಗಿರುವ ರೋಗಿಗಳ ಮೇಲೆ ಅತ್ಯಾಚಾರ ನಡೆದಿರುವ ಹಲವು ಪ್ರಕರಣಗಳು ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿವೆ. ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವೈದರ ಬಗ್ಗೆಯೂ ಹಲವು ದೂರುಗಳು ದಾಖಲಾಗಿವೆ. ಹೇಗೆ ಹೊರಗಿರುವ ದುಷ್ಕರ್ಮಿಗಳಿಂದ ವೈದ್ಯರಿಗೆ ರಕ್ಷಣೆ ಸಿಗಬೇಕಾಗಿದೆಯೋ ಹಾಗೆಯೇ, ಆಸ್ಪತ್ರೆಯ ಸಿಬ್ಬಂದಿಯಿಂದ ರೋಗಿಗಳಿಗೂ ಯಾವುದೇ ಅಪಾಯಗಳು ಎದುರಾಗದಂತೆ ನೋಡಿಕೊಳ್ಳಲು ಕಾರ್ಯಪಡೆ ಕ್ರಮ ವಹಿಸುವುದು ಅತ್ಯಗತ್ಯ. ಇಂದು ವೈದ್ಯರು ಹಣದ ಆಸೆರೋಗಿಗಳ ಬದುಕಿನಲ್ಲಿ ಚೆಲ್ಲಾಟ ವಾಡಿದರೆ ಅದನ್ನು ಪ್ರತಿಭಟಿಸುವ ರೋಗಿಗಳ ಕುಟುಂಬಿಕರ ಹಕ್ಕುಗಳನ್ನು ಹಂತಹಂತವಾಗಿ ಕಿತ್ತುಕೊಳ್ಳಲಾಗುತ್ತಿದೆ. ಯಾವುದೋ ಭಾವಾವೇಶದಲ್ಲಿ ರೋಗಿಗಳ ಕುಟುಂಬಸ್ಥರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದರೆ ಅವರ ಮೇಲೆ ಗೂಂಡಾ ಕಾಯ್ದೆಯನ್ನು ದಾಖಲಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಗಳು ರೋಗಿಗಳ ಜೊತೆಗೆ ನಿಷ್ಕರುಣಿಯಾಗಿ ವರ್ತಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಅಷ್ಟೇ ಕಠಿಣವಾದ ಕಾನೂನುಗಳಿಲ್ಲ. ತಮ್ಮ ರಕ್ಷಣೆಗಾಗಿ ಇರುವ ಕಾಯ್ದೆ, ಕಾನೂನುಗಳನ್ನು ಆಸ್ಪತ್ರೆಗಳು ಅನೇಕ ಸಂದರ್ಭಗಳಲ್ಲಿ ದುರುಪಯೋಗಗೊಳಿಸುವುದೂ ಇದೆ. ಆಸ್ಪತ್ರೆಗಳು ಮತ್ತು ರೋಗಿಗಳು ಒಬ್ಬರನ್ನೊಬ್ಬರು ಅವಲಂಬಿಸಿರುವವರು. ಅವರ ನಡುವೆ ಬಿಕ್ಕಟ್ಟುಗಳು ಎದುರಾದಾಗ ಅದನ್ನು ಪರಿಹರಿಸಲು ಪ್ರತ್ಯೇಕ ಸಮಿತಿ ರಚನೆಯ ಅಗತ್ಯವೂ ಇದೆ.
ಕೋಲ್ಕತಾ ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಆಸ್ಪತ್ರೆಯ ವೈಫಲ್ಯಗಳೇನು ಎನ್ನುವುದು ಈ ನಿಟ್ಟಿನಲ್ಲಿ ಗಂಭೀರ ತನಿಖೆಗೆ ಒಳಗಾಗಬೇಕಾಗಿದೆ ಮತ್ತು ಈ ತನಿಖೆಯ ಫಲಿತಾಂಶದ ಆಧಾರದಲ್ಲಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರು ಮತ್ತು ನರ್ಸ್ಗಳ ಸುರಕ್ಷತೆ, ಹಾಗೆಯೇ ರೋಗಿಗಳ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಬೇಕು. ಆಸ್ಪತ್ರೆಗಳಲ್ಲಿ ನಡೆಯುವ ಅಪರಾಧಗಳನ್ನು ತಡೆಯಲು ಸಂಸ್ಥೆ, ಸಮಾಜ, ಕಾನೂನು ವ್ಯವಸ್ಥೆಯ ಸಂಘಟಿತ ಪ್ರಯತ್ನದ ಅಗತ್ಯವಿದೆ.