ಸರಕಾರಿ ವಿಶ್ವವಿದ್ಯಾನಿಲಯಗಳ ದುರವಸ್ಥೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈವರೆಗೆ ಕರ್ನಾಟಕದಲ್ಲಿ ಆಡಳಿತ ನಡೆಸಿದ ಸರಕಾರಗಳು ಮತ್ತು ರಾಜಕಾರಣಿಗಳು ಯಾವುದೇ ಮಾನದಂಡ ಅನುಸರಿಸದೆ ಬೇಕಾಬಿಟ್ಟಿಯಾಗಿ ಊರೂರಿಗೆ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದರು. ಆದರೆ ಈ ವಿಶ್ವವಿದ್ಯಾನಿಲಯಗಳು ಸುಗಮವಾಗಿ ನಡೆದುಕೊಂಡು ಹೋಗಲು ಯಾವುದೇ ಯೋಜನೆಯನ್ನು ರೂಪಿಸಲಿಲ್ಲ. ಇದರ ಪರಿಣಾಮವಾಗಿ ಈಗಿರುವ ಸರಕಾರಿ ವಿಶ್ವವಿದ್ಯಾನಿಲಯಗಳು ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಅವ್ಯವಸ್ಥೆಯ ತಾಣಗಳಾಗಿವೆ. ವಾಸ್ತವವಾಗಿ ಒಂದು ಹೊಸ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಹಾಗೂ ಅವುಗಳ ಬೆಳವಣಿಗೆಗೆ ಸರಕಾರ ಐದು ವರ್ಷಗಳ ಕಾಲಾವಧಿಗೆ ಕನಿಷ್ಠ 342 ಕೋಟಿ ರೂ.ಗಳನ್ನು ವ್ಯಯಿಸಬೇಕು. 15 ರಿಂದ 250 ಎಕರೆ ಭೂಮಿಯನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಮಿತಿ ಶಿಫಾರಸು ಮಾಡಿದೆ. ಆದರೆ ಈಗಿನ ಪರಿಸ್ಥಿತಿ ಏನು? ಹೊಸದಾಗಿ ಸ್ಥಾಪನೆಯಾದ ಬಹುತೇಕ ವಿಶ್ವವಿದ್ಯಾನಿಲಯಗಳಿಗೆ ಅಗತ್ಯವಾದ ಹಣಕಾಸಿನ ನೆರವು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದ ಕಾರಣ ಅವುಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಕೆಲವು ವಿಶ್ವವಿದ್ಯಾನಿಲಯಗಳ ಕುಲಪತಿಗಳು ಬಾಡಿಗೆ ಕಾರಿನಲ್ಲಿ ಓಡಾಡುತ್ತಿದ್ದಾರೆ. ವಿಶ್ವವಿದ್ಯಾನಿಲಯಗಳು ಕಟ್ಟಡಗಳ ಕೊರತೆಯಿಂದ ಬಳಲುತ್ತಿವೆ. ಈ ಮಾತನ್ನು ಸ್ವತಃ ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರೇ ಇತ್ತೀಚೆಗೆ ಹೇಳಿದ್ದಾರೆ.
ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯ 32 ವಿಶ್ವವಿದ್ಯಾನಿಲಯಗಳಿವೆ.ಅವುಗಳಿಗೆ ಸಂಯೋಜಿತಗೊಂಡ 3,417 ಕಾಲೇಜುಗಳಿವೆ. ಈ ವಿಶ್ವವಿದ್ಯಾನಿಲಯ ಗಳಲ್ಲಿ ಮೂರೂವರೆ ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಒಟ್ಟು 3,500 ಬೋಧಕ ಹುದ್ದೆಗಳು ಇದ್ದರೂ ಅವುಗಳಲ್ಲಿ 1,942 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳದೆ ಖಾಲಿ ಉಳಿದಿವೆ. 2,278 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಯಾವ ವಿಶ್ವವಿದ್ಯಾನಿಲಯವೂ ಸುವ್ಯವಸ್ಥಿತವಾಗಿ ನಡೆದಿಲ್ಲ. ತೀವ್ರ ಸ್ವರೂಪದ ಆರ್ಥಿಕ ಬಿಕ್ಕಟ್ಟಿನ ಕಾರಣ ಬಾಗಿಲು ಮುಚ್ಚುವ ಸ್ಥಿತಿಯಲ್ಲಿ ಇವೆ. ಸರಕಾರ ನೆರವಿಗೆ ಬರದಿದ್ದರೆ ಈ ವಿಶ್ವವಿದ್ಯಾನಿಲಯಗಳು ಉಳಿಯುವುದು ಕಷ್ಟ. ಇವು ಸರಿಯಾಗಿ ನಡೆಯುವವರೆಗೆ ಹೊಸ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಸರಕಾರ ಮುಂದಾಗಬಾರದು.
ಒಂದು ಕಾಲದಲ್ಲಿ ದೇಶದಲ್ಲೇ ಹೆಸರು ಮಾಡಿದ್ದ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿ ಕುಗ್ಗಿ ಈಗ ಮೈಸೂರಿಗೆ ಸೀಮಿತವಾಗಿದೆ. ಯಾಕೆಂದರೆ ಇದರ ವ್ಯಾಪ್ತಿಯಲ್ಲಿ ಇದ್ದ ಬೆಂಗಳೂರು, ಮಂಗಳೂರು ಮತ್ತು ಶಿವಮೊಗ್ಗ ವಿಭಾಗದಲ್ಲಿ ಪ್ರತ್ಯೇಕ ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾಗಿ ವರ್ಷಗಳೇ ಗತಿಸಿದವು. ಈಗ ಪಿಂಚಣಿ ಕೊಡಲೂ ಹಣವಿಲ್ಲದ ಈ ವಿಶ್ವವಿದ್ಯಾನಿಲಯ ವಾರ್ಷಿಕ 50 ಕೋಟಿ ರೂ. ಕೊರತೆಯನ್ನು ಎದುರಿಸಿಸುತ್ತಿದೆ. ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕಾಲೇಜುಗಳು ಮೈಸೂರು ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟಿರುವ ಕಾರಣದಿಂದ ಸಂಪನ್ಮೂಲಗಳ ಕೊರತೆಯೂ ಉಂಟಾಗಿದೆ. ಈಗಿರುವ ಕಟ್ಟಡಗಳ ನಿರ್ವಹಣೆಯ ಖರ್ಚು-ವೆಚ್ಚಗಳು ದುಬಾರಿಯಾಗಿ ಪರಿಣಮಿಸಿವೆ. ಪಾಠ ಪ್ರವಚನಗಳಿಗೆ ಅತಿಥಿ ಉಪನ್ಯಾಸಕರನ್ನು ಅವಲಂಬಿಸಲಾಗಿದೆ.
ರಾಜ್ಯದ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯವಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅಮೃತ ವರ್ಷಾಚರಣೆಯ ಹೊಸ್ತಿಲಲ್ಲಿ ಇರುವ ಈ ಧಾರವಾಡದ ವಿಶ್ವವಿದ್ಯಾನಿಲಯ ನಿವೃತ್ತ ಉಪನ್ಯಾಸಕರು ಹಾಗೂ ಇತರ ಸಿಬ್ಬಂದಿಗೆ ಪಿಂಚಣಿ ನೀಡಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ವಿಶ್ವವಿದ್ಯಾನಿಲಯದ 578 ಬೋಧಕ ಹುದ್ದೆಗಳಲ್ಲಿ 359 ಹುದ್ದೆಗಳು ಖಾಲಿ ಉಳಿದಿವೆ.ಇಲ್ಲೂ ಬಹುತೇಕ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರೇ ಪಾಠ ಮಾಡುತ್ತಾರೆ.ವಿದ್ಯಾರ್ಥಿಗಳು ಪಾವತಿಸುವ ಶುಲ್ಕದ ಹೊರತಾಗಿ ಬೇರೆ ಯಾವ ಆದಾಯವೂ ಇಲ್ಲ. ಹೀಗಾಗಿ ಒಂದು ಕಾಲದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾನಿಲಯವೆಂದು ಹೆಸರಾಗಿದ್ದ ಡಾ.ಡಿ.ಸಿ. ಪಾವಟೆಯವರು ಕಟ್ಟಿ ಬೆಳೆಸಿದ ಧಾರವಾಡ ವಿಶ್ವವಿದ್ಯಾನಿಲಯದ ಪರಿಸ್ಥಿತಿಯೂ ಚೆನ್ನಾಗಿಲ್ಲ.
ರಾಜಕಾರಣಿಗಳ ತೆವಲಿಗೆ ಬಲಿಯಾದ ಇನ್ನೊಂದು ವಿಶ್ವವಿದ್ಯಾನಿಲಯವೆಂದರೆ ಅರುವತ್ತು ವರ್ಷಗಳ ಇತಿಹಾಸವಿರುವ ಬೆಂಗಳೂರು ವಿಶ್ವವಿದ್ಯಾನಿಲಯ. ಇದನ್ನು ಈಗ ವಿಭಜಿಸಿ ಬೆಂಗಳೂರು ನಗರ ಮತ್ತು ಬೆಂಗಳೂರು ಉತ್ತರ ಎಂದು ಎರಡು ವಿಶ್ವವಿದ್ಯಾನಿಲಯಗಳನ್ನಾಗಿ ಮಾಡಲಾಗಿದೆ. ಈ ವಿಭಜನೆಯಿಂದಾಗಿ ಹೊಸ ಎರಡು ವಿಶ್ವವಿದ್ಯಾನಿಲಯಗಳಿಗೆ ಕಾಲೇಜುಗಳು ಹಂಚಿಕೆಯಾದ ಪರಿಣಾಮವಾಗಿ ಮೂಲ ವಿಶ್ವವಿದ್ಯಾನಿಲಯಕ್ಕೆ ಹಣಕಾಸಿನ ಸಂಪನ್ಮೂಲದ ತೀವ್ರ ಕೊರತೆ ಎದುರಾಗಿದೆ. ಹಣಕಾಸು ಕೊರತೆಯನ್ನು ನೀಗಿಸಲು ಸರಕಾರಕ್ಕೆ 67 ಕೋಟಿ ರೂ. ನೀಡಬೇಕೆಂದು ಪ್ರಸ್ತಾವ ಸಲ್ಲಿಸಿದರೆ ಮಂಜೂರಾಗಿದ್ದು ಕೇವಲ 15 ಕೋಟಿ ರೂ. ಮಾತ್ರ. ಇದರ ಪರಿಣಾಮವಾಗಿ 1,536 ನಿವೃತ್ತ ನೌಕರರ ಪಿಂಚಣಿಗೆ ತೊಂದರೆಯಾಗಿದೆ.
ಇನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕತೆ ಭಿನ್ನವಾಗಿಲ್ಲ. ಈ ವಿಶ್ವವಿದ್ಯಾನಿಲಯಕ್ಕೆ ಯುಜಿಸಿಯಿಂದ ಬರುತ್ತಿದ್ದ ಅನುದಾನ ನಿಂತು ಹೋಗಿದೆ.ರಾಜ್ಯ ಸರಕಾರದಿಂದ ಬರುತ್ತಿದ್ದ ಅನುದಾನವೂ ಕಡಿಮೆಯಾಗಿದೆ. ಹೀಗಾಗಿ ಈ ವಿಶ್ವವಿದ್ಯಾನಿಲಯವೂ ದುಸ್ಥಿತಿಯಲ್ಲಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಸೆಮಿನಾರುಗಳು ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಈ ವಿಶ್ವವಿದ್ಯಾನಿಲಯದಲ್ಲಿ 128 ಬೋಧಕ ಹುದ್ದೆಗಳು ಖಾಲಿ ಉಳಿದಿವೆ. ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಗುಲಬರ್ಗಾ, ಹಂಪಿ ವಿಶ್ವವಿದ್ಯಾನಿಲಯಗಳ ಪರಿಸ್ಥಿತಿ ಕೂಡ ಭಿನ್ನವಲ್ಲ. ಗುಲಬರ್ಗಾ ವಿವಿಯಲ್ಲಿ 27 ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಹಂಪಿ ವಿಶ್ವವಿದ್ಯಾ ನಿಲಯಕ್ಕೆ ಯುಜಿಸಿ ಅನುದಾನ 2014ರ ನಂತರ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ವಿಶ್ವವಿದ್ಯಾನಿಲಯದ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು ಶುಲ್ಕದ ರೂಪದಲ್ಲಿ ನೀಡುವ ಹಣವೇ ಆಧಾರವಾಗಿದೆ. ಇನ್ನು ಶಿಗ್ಗಾವಿಯ ಜಾನಪದ ವಿಶ್ವವಿದ್ಯಾನಿಲಯ, ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಕಾನೂನು ವಿಶ್ವವಿದ್ಯಾನಿಲಯ ಸೇರಿದಂತೆ ವಿಭಿನ್ನವಾದ ವಿಶ್ವವಿದ್ಯಾನಿಲಯಗಳಿಗೆ ಅನುದಾನ ದೊರಕಿಲ್ಲ. ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ. ಸಂಗೀತ ವಿಶ್ವವಿದ್ಯಾನಿಲಯಕ್ಕೆ ತನ್ನದೇ ಆದ ಸ್ವಂತ ನೆಲೆಯಿಲ್ಲ. ಕೃಷಿ, ತೋಟಗಾರಿಕೆ ವಿಶ್ವವಿದ್ಯಾನಿಲಯ, ತಾಂತ್ರಿಕ ವಿಶ್ವವಿದ್ಯಾನಿಲಯಗಳ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ.
ಕೆಲವು ವಿಶ್ವವಿದ್ಯಾನಿಲಯಗಳು ಹಗರಣಗಳಿಂದ ಮುಕ್ತವಾಗಿಲ್ಲ. ಪಿಎಚ್.ಡಿ. ಸೀಟುಗಳ ಮಾರಾಟದ ಆರೋಪಗಳೂ ಇವೆ. ಹಂಪಿ ವಿಶ್ವವಿದ್ಯಾನಿಲಯ ನೀಡುವ ನಾಡೋಜ ಪ್ರಶಸ್ತಿಯನ್ನು ಮನ ಬಂದಂತೆ ಯಾರ್ಯಾರಿಗೋ ನೀಡುತ್ತ ಬರಲಾಗಿದೆ. ಸಕ್ಕರೆ ಕಾರ್ಖಾನೆ ಮಾಲಕರೊಬ್ಬರು ನಾಡೋಜ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಒಟ್ಟಾರೆ ನಮ್ಮ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಶೀಲತೆ ಮಾಯವಾಗುತ್ತಿದೆ. ವಶೀಲಿಬಾಜಿ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಈಗ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾನಿಲಯಗಳಿಗೆ ಅನುದಾನ ನೀಡಿ ಬದುಕಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದು ಹೊಸ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಅನುಮತಿ ನೀಡಬಾರದು. ಬಿಜೆಪಿ ಸರಕಾರವಿದ್ದಾಗ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಕೋಮುವಾದಿ ರಾಜಕೀಯ ಸಿದ್ಧಾಂತದ ನುಸುಳುವಿಕೆ ನಾನಾ ರೀತಿಯಲ್ಲಿ ನಡೆದಿದೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಈ ಅಪಾಯದಿಂದ ವಿಶ್ವವಿದ್ಯಾನಿಲಯಗಳನ್ನು ಕಾಪಾಡುವುದು ತುರ್ತು ಅಗತ್ಯವಾಗಿದೆ.