ನಿರಾಶ್ರಿತರಿಗೂ ಬೇಕಾಗಿದೆ ನೆಮ್ಮದಿಯ ನಿದ್ದೆ

Update: 2024-02-17 05:11 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈ ದೇಶದಲ್ಲಿ ಬಡವರ ಸಾವುಗಳನ್ನು ‘ಕಾಲಗಳ’ದ ತಲೆಗೂ ಕಟ್ಟುತ್ತಾ ಬಂದಿದೆ ಸರಕಾರ. ಬೇಸಿಗೆಗಾಲ ಬಂದಂತೆ, ‘ಬಿಸಿಲಿಗೆ ಹತ್ತು ಸಾವು’ ಎಂದು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತವೆ. ಚಳಿಗಾಲ ಬಂದರೆ ‘ಚಳಿಗೆ ಇಪ್ಪತ್ತು ಸಾವು’ ಎಂದು ಮಾಧ್ಯಮಗಳು ವರದಿ ಮಾಡುತ್ತವೆ. ಮಳೆಗಾಲದಲ್ಲಿ ಸಂಭವಿಸುವ ಸಾವು ನೋವುಗಳನ್ನಂತೂ ನಾವು ಅತ್ಯಂತ ಸಹಜ ಎಂದು ಸ್ವೀಕರಿಸುತ್ತಾ ಬಂದಿದ್ದೇವೆ. ಈ ವರ್ಷದ ಜನವರಿ ತಿಂಗಳ ಮೊದಲ 23 ದಿನಗಳಲ್ಲಿ ಚಳಿಗೆ 180 ಮಂದಿ ಮೃತರಾಗಿದ್ದಾರೆ ಎಂದು ಪೊಲೀಸರ ದಾಖಲೆಗಳು ಹೇಳುತ್ತವೆ. ಅಂದರೆ ಇಲ್ಲಿ, ಅವರ ಸಾವಿಗೆ ನಿಜವಾದ ಹೊಣೆಗಾರ ‘ಅತಿಯಾದ ಚಳಿ’ ಎಂದು ಸರಕಾರ ಹೇಳುತ್ತದೆ. ಹತ್ತು ತಿಂಗಳ ಹಿಂದೆ ಮಹಾರಾಷ್ಟ್ರ ಸರಕಾರ ಅಮಿತ್ ಶಾ ನೇತೃತ್ವದಲ್ಲಿ ಹಮ್ಮಿಕೊಂಡ ಸಮಾವೇಶವೊಂದರಲ್ಲಿ ಸುಮಾರು 15 ಮಂದಿ ಸತ್ತು, 100ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡರು. ಮಾಧ್ಯಮಗಳಲ್ಲಿ ‘ಬಿಸಿಲ ಬೇಗೆಗೆ ನೂರಕ್ಕೂ ಅಧಿಕ ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು’ ಎಂದು ಈ ಪ್ರಕರಣ ವರದಿಯಾಯಿತು. ಆದರೆ ಅಲ್ಲಿ ನಡೆದಿರುವುದೇ ಬೇರೆ. ಸಮಾವೇಶಕ್ಕೆ ದೂರ ದೂರದಿಂದ ಹಳ್ಳಿಯ ಜನರನ್ನು ಕರೆದುಕೊಂಡು ಬರಲಾಗಿತ್ತು. ಜನನಾಯಕರು ಆಗಮಿಸುವುದು ತಡವಾದುದರಿಂದ ಗಂಟೆಗಟ್ಟಲೆ ಅವರು ಬಿಸಿಲಲ್ಲಿ ಕಾಯಬೇಕಾಯಿತು. ಕುಡಿಯುವುದಕ್ಕೆ ನೀರಿನ ವ್ಯವಸ್ಥೆಯೂ ಅಲ್ಲಿರಲಿಲ್ಲ. ನೀರಿಗಾಗಿ ಹಾಹಾಕಾರ ಗೈದು ಅವರು ಕುಸಿದು ಬಿದ್ದಿದ್ದರು. ಸರಿಯಾದ ರೀತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಿದ್ದರೆ ಅವರಾರೂ ಸಾಯುವ ಸ್ಥಿತಿ ಬರುತ್ತಿರಲಿಲ್ಲ. ಆದರೆ ಮಾಧ್ಯಮಗಳು ಮಾತ್ರ ಈ ಸಾವು ನೋವುಗಳನ್ನು ಬಿಸಿಲಿನ ತಲೆಗೆ ಕಟ್ಟಿ, ಕಾರ್ಯಕ್ರಮದ ಒಟ್ಟು ಅವ್ಯವಸ್ಥೆಯನ್ನು ಮುಚ್ಚಿ ಹಾಕಿತು.

ತೀವ್ರವಾದ ಚಳಿಗೆ ಯಾರೂ ಸಾಯುವುದಿಲ್ಲ. ಯಾರೆಲ್ಲ ಮನೆಗಳಿಲ್ಲದೆ ನಿರ್ಗತಿಕರಾಗಿ ರಾತ್ರಿ ಬೀದಿಯಲ್ಲಿ ಮಲಗಿರುತ್ತಾರೋ ಅವರು ಮಾತ್ರ ಈ ಚಳಿಯ ನೇರ ಬಲಿಪಶುಗಳಾಗಿರುತ್ತಾರೆ. ಚಳಿಗಾಲದಲ್ಲಿ ಇವರಿಗೆ ಸರಿಯಾದ ಆಶ್ರಯ ದೊರಕಿದ್ದರೆ, ಮನೆರಹಿತ ಈ ವ್ಯಕ್ತಿಗಳಿಗೆ ಮಲಗುವುದಕ್ಕಾಗಿ ಒಂದು ವ್ಯವಸ್ಥೆ ಮಾಡಿದ್ದೇ ಆದಲ್ಲಿ ಅವರು ಸಾಯುವ ಸ್ಥಿತಿ ಬರುವುದಿಲ್ಲ. ಆಶ್ರಯ ತಾಣಗಳ ಕೊರತೆಯಿಂದ ಕಠಿಣ ಚಳಿಗಾಲದಲ್ಲಿ ಹೊದೆಯಲು ಹೊದಿಕೆಯೂ ಇಲ್ಲದೆ ಬಯಲಲ್ಲಿ, ರಸ್ತೆ ಬದಿಯಲ್ಲಿ ಮಲಗುವ ಕಾರಣದಿಂದ ತೀವ್ರ ಅಸ್ವಸ್ಥಗೊಂಡು ಇವರು ಸಾಯಬೇಕಾಗುತ್ತದೆ. ದಿಲ್ಲಿಯಂತಹ ನಗರಗಳಲ್ಲಿ ಇಂತಹ ನಿರಾಶ್ರಿತರಿಗಾಗಿ ಆಶ್ರಯ ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ. ದಿಲ್ಲಿಯಲ್ಲಿ ಇಂತಹ ಐದು ಆಶ್ರಯ ಸ್ಥಳಗಳನ್ನು ಈ ವರ್ಷ ಸರಕಾರ ಮುಚ್ಚಿದೆ. 2023ರಲ್ಲಿ ಇಂತಹ ಒಂಭತ್ತು ಆಶ್ರಯ ತಾಣಗಳನ್ನು ಸರಕಾರದ ನೇತೃತ್ವದಲ್ಲೇ ಧ್ವಂಸಗೊಳಿಸಲಾಗಿದೆ. ಈ ಮೂಲಕ ನಿರಾಶ್ರಿತರನ್ನು ರಾತ್ರಿ ಚಳಿಯಲ್ಲಿ ಕಳೆಯುವಂತೆ ಮಾಡಿದ ಸರಕಾರವೇ ಅವರನ್ನು ಪರೋಕ್ಷವಾಗಿ ಕೊಂದಿದೆ. ಇದು ದಿಲ್ಲಿಗಷ್ಟೇ ಸೀಮಿತವಲ್ಲ. ಎಲ್ಲ ನಗರ ಪ್ರದೇಶಗಳಲ್ಲಿ ಇಂತಹ ನಿರಾಶ್ರಿತರ ದೊಡ್ಡ ಪಡೆಯೇ ಇದೆ. ರೈಲ್ವೆ ನಿಲ್ದಾಣ, ಸಾರ್ವಜನಿಕ ಮೈದಾನಗಳೇ ಇವರ ಆಶ್ರಯ ತಾಣ. ಇಲ್ಲೆಲ್ಲ ಚಳಿ, ಬಿಸಿಲಿನ ಹೆಸರಿನಲ್ಲಿ ಸಾಯುವ ಇವರು ಅನೇಕ ಬಾರಿ ಸರಕಾರದ ಅಂಕಿಅಂಶಗಳ ಪುಸ್ತಕಗಳಲ್ಲಿ ದಾಖಲಾಗುವುದೇ ಇಲ್ಲ.

ಹೀಗೆ ಸಾಯುವವರೆಲ್ಲ ಯಾರು? ಅವರು ಯಾವುದೇ ಅನ್ಯಗ್ರಹದಿಂದ ಇಳಿದು ಬಂದವರಲ್ಲ. ರಾತ್ರಿ ಮಲಗುವುದಕ್ಕಾಗಿ ರೈಲು ನಿಲ್ದಾಣ, ಮೈದಾನ, ರಸ್ತೆ ಬದಿಗಳನ್ನು ಆಯ್ಕೆ ಮಾಡುವ ಬಹುತೇಕರು ದಿನಗೂಲಿ ಕಾರ್ಮಿಕರು. ಗ್ರಾಮೀಣ ಪ್ರದೇಶದಿಂದ ಕೂಲಿ ಅರಸಿಕೊಂಡು ನಗರ ಪ್ರದೇಶಗಳಿಗೆ ವಲಸೆ ಬಂದವರು. ಅವರಲ್ಲೂ ಹೆಚ್ಚಿನವರು ಕಟ್ಟಡ ಕಾರ್ಮಿಕರು. ಇವರನ್ನು ತಮ್ಮ ಅಗತ್ಯಕ್ಕೆ ಹಗಲಲ್ಲಿ ಬಳಸಿಕೊಳ್ಳುವ ನಗರ, ರಾತ್ರಿ ಕೈ ಬಿಟ್ಟು ಬಿಡುತ್ತದೆ. ಮಹಿಳೆಯರು, ಮಕ್ಕಳ ಸ್ಥಿತಿಯಂತೂ ಅತ್ಯಂತ ಭಯಾನಕ. ಇವರ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಅಭಿವೃದ್ಧಿಗಾಗಿ ಕೋಟಿಗಟ್ಟಳೆ ಸುರಿಯುವ ಸರಕಾರಕ್ಕೆ, ಆ ಅಭಿವೃದ್ಧಿಯ ಭಾಗವೇ ಆಗಿರುವ ಕೂಲಿಯಾಳುಗಳಿಗೆ ರಾತ್ರಿ ನೆಮ್ಮದಿಯಿಂದ ಮಲಗುವ ವ್ಯವಸ್ಥೆ ಮಾಡುವುದು ತನ್ನ ಕರ್ತವ್ಯವೆಂದು ತಿಳಿದಿಲ್ಲ. ಜನಸಾಮಾನ್ಯರ ಅಗತ್ಯವಲ್ಲದ ಮಂದಿರ, ಪ್ರತಿಮೆಗಳಿಗೆ ಖರ್ಚು ಮಾಡಲು ಸರಕಾರದ ಬಳಿ ಸಾಕಷ್ಟು ಹಣವಿದೆ. ಆದರೆ ಮನುಷ್ಯರಿಗಾಗಿ ವ್ಯಯ ಮಾಡುವ ಸಂದರ್ಭದಲ್ಲಿ ಸರಕಾರಕ್ಕೆ ಹಣದ ಕೊರತೆ ಎದುರಾಗುತ್ತದೆ. ಇಲ್ಲಿನ ನಿಜವಾದ ಸಮಸ್ಯೆಯೆಂದರೆ, ಮನೆರಹಿತ ಜನರ ಸಮಸ್ಯೆಗಳ ನಿವಾರಣೆಯನ್ನು ಆದ್ಯತೆಯಾಗಿ ಸರಕಾರ ಪರಿಗಣಿಸಿಯೇ ಇಲ್ಲ. ಯಾಕೆಂದರೆ, ನಗರಗಳಲ್ಲಿ ಬೀದಿ ಬದಿಯಲ್ಲಿ ಮಲಗುವ ಜನರು ಸಂಘಟಿತರಲ್ಲ. ಇಲ್ಲಿರುವ ಬಹುಸಂಖ್ಯಾತರಿಗೆ ವಿಳಾಸವೇ ಇಲ್ಲ. ಇವರ ಮೇಲೆ ಯಾವುದೇ ಅಪರಾಧಗಳು ನಡೆದರೂ ಅವು ಮುಚ್ಚಿ ಹೋಗುವುದೇ ಅಧಿಕ. ಈ ನಿರ್ಗತಿಕರ ಸಮಸ್ಯೆಗಳು ಸಾಮಾನ್ಯವಾಗಿ ಚಳಿಗಾಲದ ತಿಂಗಳುಗಳಲ್ಲಿ ಮಾತ್ರ ಪ್ರಚಾರಕ್ಕೆ ಬರುತ್ತವೆ. ಆದರೆ ಬೇಸಿಗೆ ತಿಂಗಳುಗಳ ಸುಡುವ ಮಧ್ಯಾಹ್ನಗಳು ಮತ್ತು ಮಳೆಗಾಲದ ತಿಂಗಳುಗಳಲ್ಲಿ ಸುರಿಯುವ ಜಡಿ ಮಳೆಯ ಅವಧಿಯಲ್ಲೂ ಅವರಿಗೆ ಆಶ್ರಯ ಬೇಕು. ಬರಗಾಲ, ಅತಿವೃಷ್ಟಿಯ ಮೊದಲ ಬಲಿಪಶುಗಳು ಇದೇ ನಿರಾಶ್ರಿತರು.

ಮನೆರಹಿತ ಜನರಿಗಾಗಿ ಹೆಚ್ಚು ಸಂಪನ್ಮೂಲಗಳು ಬೇಕು ಎನ್ನುವುದು ಸ್ಪಷ್ಟ. ಅದೇ ವೇಳೆ, ಈ ಸಂಪನ್ಮೂಲಗಳ ಬಳಕೆಗೆ ಉತ್ತಮ ಯೋಜನೆಯೂ ಬೇಕು. ಮೂಲಸೌಕರ್ಯಗಳಿರುವ ಆಶ್ರಯ ತಾಣವೊಂದು ಮನೆರಹಿತರ ಅತ್ಯಂತ ತುರ್ತು ಅಗತ್ಯ. ಆದರೆ, ಅದು ಮಾತ್ರವಲ್ಲ. ಆರೋಗ್ಯ, ಆಹಾರ ಭದ್ರತೆ ಮತ್ತು ಗುರುತು ಪತ್ತೆ (ಅಂಚೆ ವಿಳಾಸವೊಂದನ್ನು ಅವರಿಗೆ ಒದಗಿಸುವುದು) ಮುಂತಾದ ಹೆಚ್ಚು ಸಮಗ್ರ ಯೋಜನೆಗಳ ಅಗತ್ಯವೂ ಅವರಿಗಿದೆ. ಈ ಬೀದಿ ಬದಿಯ ನಿರಾಶ್ರಿತರು ನಗರಗಳಲ್ಲಿ ವಾಸಿಸುವ ಅತ್ಯಂತ ಬಡ ವರ್ಗ. ಆದರೆ, ಪಡಿತರ ಚೀಟಿಗಳ ಮೂಲಕ ಪಡೆಯಬಹುದಾದ ಕಡಿಮೆ ದರದ ಆಹಾರ ಪದಾರ್ಥಗಳು ಅವರಿಗೆ ಸಿಗುತ್ತಿಲ್ಲ. ಅವರು ಹಸಿವಿನಿಂದ ಸತ್ತರೂ, ರೋಗದಿಂದ ಸತ್ತರೂ ಚಳಿಗಾಲ ಅಥವಾ ಬೇಸಿಗೆ ಗಾಲವನ್ನು ದೂರಿ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತದೆ. ಅವರಿಗೆ ರಿಯಾಯಿತಿ ದರದಲ್ಲಿ ಕಡಿಮೆ ಬೆಲೆಗೆ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯವಾಗುವ ಕಾರ್ಯಕ್ರಮಗಳನ್ನು ಜಾರಿಗೆ ತಂದರೆ ಅವರ ಬದುಕನ್ನು ಸ್ವಲ್ಪವಾದರೂ ಉತ್ತಮಪಡಿಸಲು ಸಾಧ್ಯವಿದೆ.

ಈ ದಿನಗಳಲ್ಲಿ, ಅಕ್ರಮ ಜೋಪಡಿಗಳು ಎಂಬ ನೆಪವೊಡ್ಡಿ ವಿವಿಧ ನಗರಗಳಲ್ಲಿ ಮನೆಗಳ ಧ್ವಂಸ ಕಾರ್ಯಾಚರಣೆ ನಡೆಯುತ್ತಲೇ ಇವೆ. ಇದರಿಂದಾಗಿ ಮನೆರಹಿತರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಈ ಧ್ವಂಸ ಕಾರ್ಯಾಚರಣೆಗಳನ್ನು ಪುನರ್ವಸತಿ ಕಾರ್ಯಕ್ರಮಗಳಿಲ್ಲದೇ ನಡೆಸುತ್ತಿದ್ದಾರೆ. ಬುಲ್ಡೋಜರ್‌ಗಳಿಂದ ಧ್ವಂಸಗೊಂಡ ಮನೆಗಳಲ್ಲಿ ವಾಸಿಸುತ್ತಿದ್ದವರು ಎಲ್ಲಿಗೆ ಹೋಗಬೇಕು? ಒಂದು ಕಡೆ, ಈಗ ಇರುವ ಮನೆರಹಿತರ ಅವಶ್ಯಕತೆಗಳನ್ನು ಪೂರೈಸಲು ಮನೆಗಳ ಕೊರತೆಯಿದೆ. ಇನ್ನೊಂದೆಡೆ, ಅನ್ಯಾಯದ ಧ್ವಂಸ ಕಾರ್ಯಾಚರಣೆಗಳಿಂದಾಗಿ ಮನೆರಹಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ದೇಶಾದ್ಯಂತ ಇರುವ ಮನೆರಹಿತ ಜನರಿಗಾಗಿ ಸಹಾನುಭೂತಿಯ ನಿಯಮಗಳನ್ನು ತರಬೇಕು ಎಂಬ ವಿವಿಧ ನ್ಯಾಯಾಲಯಗಳ ಆದೇಶಗಳನ್ನು ಮತ್ತು ಸರಕಾರಗಳ ಬದ್ಧತೆಗಳನ್ನು ಎಷ್ಟರ ಮಟ್ಟಿಗೆ ಜಾರಿಗೆ ತರಲಾಗಿದೆ ಮತ್ತು ಎಷ್ಟರ ಮಟ್ಟಿಗೆ ಉಲ್ಲಂಘಿಸಲಾಗಿದೆ ಎನ್ನುವುದರ ಮೇಲೆ ಇನ್ನೊಮ್ಮೆ ನಿಗಾ ಇಡಬೇಕಾದ ಸಮಯ ಬಂದಿದೆ. ಜೊತೆಗೆ, ಮನೆರಹಿತರ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಗರಿಷ್ಠ ಆದ್ಯತೆಯನ್ನು ನೀಡಬೇಕಾಗಿದೆ. ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಗಾಲಗಳಿರುವುದು ಮನುಷ್ಯನ ಬದುಕಿನಲ್ಲಿ ಬದಲಾವಣೆಗಳನ್ನು ತರುವುದಕ್ಕೆ . ಆ ಬದಲಾವಣೆಗಳು ನಗರಗಳಲ್ಲಿ ನಿರಾಶ್ರಿತರಾಗಿ ರಸ್ತೆ ಬದಿಗಳಲ್ಲಿ, ರೈಲು ನಿಲ್ದಾಣಗಳಲ್ಲಿ, ಮೈದಾನಗಳಲ್ಲಿ ರಾತ್ರಿ ಕಳೆಯುವ ಕೂಲಿ ಕಾರ್ಮಿಕರ ಬದುಕಲ್ಲೂ ಬರಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News