ಉದ್ಯೋಗ ಕೇಳಿದ ಯುವಕರ ಬಾಯಿಗೆ ಅಕ್ಕಿಕಾಳು !
ಕರ್ನಾಟಕ ಸರಕಾರ ಬಡವರಿಗೆ ಉಚಿತ ಅಕ್ಕಿ ವಿತರಣೆ, ನಿರುದ್ಯೋಗಿ ಯುವಕರಿಗೆ ಯುವನಿಧಿಯಂತಹ ಯೋಜನೆಗಳನ್ನು ಹಮ್ಮಿಕೊಂಡು ಅದನ್ನು ಅನುಷ್ಠಾನಗೊಳಿಸಲು ಹೆಣಗಾಡುತ್ತಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರ, ಅಕ್ಕಿ, ಉದ್ಯೋಗ ಕೇಳಿದವರ ಬಾಯೊಳಗೆ ಅಕ್ಕಿ ಕಾಳು ಹಾಕಿ ಅವರ ಬಾಯಿ ಮುಚ್ಚಿಸಲು ಮುಂದಾಗಿದೆ. ದೇಶದ ಯುವಕರು ನಿರುದ್ಯೋಗಗಳಿಂದ ತತ್ತರಿಸಿಕೂತಿರುವ ಹೊತ್ತಿನಲ್ಲಿ ಕೇಂದ್ರ ಸರಕಾರ ಮಂದಿರ, ಮಸೀದಿ ಹೆಸರಿನಲ್ಲಿ ಅರಾಜಕತೆಯನ್ನು ಸೃಷ್ಟಿಸಿ ಯುವಕರಿಗೆ ಉದ್ಯೋಗ ನೀಡಲು ಹೊರಟಿದೆ. ಮನೆ ಮನೆಗೆ ಮಂದಿರದ ಹೆಸರಿನಲ್ಲಿ ಕೆಲವು ಸಂಘಟನೆಗಳು ಹಂಚಲು ಮುಂದಾಗಿರುವ ಮಂತ್ರಾಕ್ಷತೆ ಕಾಳು ಇದರ ಮುಂದುವರಿದ ಭಾಗವಾಗಿದೆ. ಈ ದೇಶದ ಬಡತನ, ಹಸಿವು, ಅನಾರೋಗ್ಯ, ಅನಕ್ಷರತೆ, ನಿರುದ್ಯೋಗ ಇವೆಲ್ಲ ಕೊರತೆಗಳನ್ನು ರಾಮಮಂದಿರದ ಮೂಲಕ ತುಂಬಿಸಿಕೊಡಲು ಮುಂದಾಗಿದೆ. ಕಾಯಿಲೆಗಳಿಂದ ಒದ್ದಾಡುತ್ತಿರುವ ಮನುಷ್ಯನಿಗೆ ಅಫೀಮು ನೀಡಿ ಅಮಲಲ್ಲಿರಿಸಿ ನೋವಿನಿಂದ ಪಾರು ಮಾಡುವ ಪ್ರಯತ್ನದಂತಿದೆ ಇದು.
ಭಾರತದಲ್ಲಿ ಪ್ರತಿವರ್ಷ ಸುಮಾರು 1.1 ಕೋಟಿ ಜನರು ಉದ್ಯೋಗಗಳಿಗೆ ಕೈ ಚಾಚುತ್ತಾರೆ. ಮತ್ತು ಕನಿಷ್ಠ 2 ಕೋಟಿ ಜನರು ನಿರುದ್ಯೋಗಿಗಳಾಗಿ ಮುಂದುವರಿಯುತ್ತಿದ್ದಾರೆ. ಮೇಲಿನ ಅಂಕಿಸಂಖ್ಯೆಗಳ ಪ್ರಕಾರ ನಿರುದ್ಯೋಗದಲ್ಲಿ ಪ್ರತಿವರ್ಷ 4.1 ಶೇಕಡ ಏರಿಕೆಯಾಗುತ್ತಿದೆ ಹಾಗೂ ಜನಸಂಖ್ಯಾ ದರದಲ್ಲಿ ವಾರ್ಷಿಕ ಸುಮಾರು 1.9 ಶೇಕಡ ಹೆಚ್ಚಳವಾಗುತ್ತಿದೆ. ಅಂದರೆ, ನಿರುದ್ಯೋಗ ಪರಿಸ್ಥಿತಿಯು ದಿನಗಳೆದಂತೆ ಹದಗೆಡದಿರಬೇಕಾದರೆ, ಉದ್ಯೋಗಾವಕಾಶವು ವರ್ಷಕ್ಕೆ ಕನಿಷ್ಠ 6 ಶೇಕಡ ದರದಲ್ಲಿ ಏರಿಕೆಯಾಗಬೇಕು.
ಮುಖ್ಯವಾಗಿ, ಇಲ್ಲಿ ಉದ್ಯೋಗ ಹೊಂದಿದ ಯುವಕರು ಕೂಡ ಭಾಗಶಃ ನಿರುದ್ಯೋಗಿಗಳೇ ಆಗಿದ್ದಾರೆ. ದೈನಂದಿನ ಬದುಕಿಗಾಗಿ ಏನಾದರೂ ಮಾಡಲೇ ಬೇಕು ಎನ್ನುವ ಕಾರಣದಿಂದ ತಕ್ಷಣದ ಅಗತ್ಯಕ್ಕಾಗಿ ಕನಿಷ್ಠ ವೇತನ ಪಡೆದು ದುಡಿಯುವ ಯುವಕರು ಸರಕಾರದ ಪಾಲಿಗೆ ನಿರುದ್ಯೋಗಿಗಳಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಯುವನಿಧಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ನಿರುದ್ಯೋಗಿ ಯುವಕರಿಗೆ ಭತ್ತೆಯನ್ನು ನೀಡಲು ಮುಂದಾಗಿದೆ. ನಿರುದ್ಯೋಗದಿಂದಾಗಿ ಯುವಶಕ್ತಿ ಕಳಾಹೀನವಾಗದಿರಲಿ ಎಂಬ ಕಾರಣಕ್ಕಾಗಿ ನೀಡುವ ‘ಗ್ಲೂಕೋಸ್’ ಇದು. ಈ ಯೋಜನೆಯನ್ನು ಉದ್ಯೋಗ ಅರಸಲು ಯುವಕರು ಪೂರಕವಾಗಿ ಬಳಸಿಕೊಳ್ಳಬೇಕು. ಆದರೆ ಹೊಸ ಉದ್ಯೋಗಗಳ ಹೆಬ್ಬಾಗಿಲು ತೆರೆಯದೇ ಇದ್ದರೆ, ರಾಜ್ಯದ ಯುವಕರೆಲ್ಲ ಯುವನಿಧಿಯ ಫಲಾನುಭವಿಗಳಾಗಿ ಬದುಕು ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಬಹುದು.
ನಿರುದ್ಯೋಗವನ್ನು ಕಡಿಮೆಗೊಳಿಸಲು ಕಾರ್ಪೊರೇಟ್ ಕೈಗಾರಿಕೀಕರಣವು ಪರಿಹಾರವಲ್ಲ. ಅದು ಉದ್ಯೋಗ ನೀಡುವ ಬದಲು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡುತ್ತದೆ. ಬೃಹತ್ ಕೈಗಾರಿಕೆಗಳಿಗಾಗಿ ಭಾರೀ ಪ್ರಮಾಣದಲ್ಲಿ ಜಮೀನು ಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಇದರಿಂದ ಸಾವಿರಾರು ಜನರು ತಮ್ಮ ಅತ್ಯಮೂಲ್ಯ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಾರೆ. ಭವಿಷ್ಯದಲ್ಲಿ ಇದು ಹೆಚ್ಚಿನ ನಿರುದ್ಯೋಗಕ್ಕೆ ಕಾರಣವಾಗುತ್ತದೆ. ಜನರು ತಮ್ಮ ಜೀವನೋಪಾಯಗಳನ್ನೇ ಕಳೆದುಕೊಳ್ಳುತ್ತಾರೆ. ಸದ್ಯಕ್ಕೆ ಭಾರತದ ಅಭಿವೃದ್ಧಿ ಪಥ ಈ ಮಾದರಿಯಲ್ಲಿದೆ. ಈ ಪಥದಲ್ಲಿ ಭಾರತ ಸಾಗುವವರೆಗೆ ನಿರುದ್ಯೋಗ ಸಮಸ್ಯೆಯು ಉಲ್ಬಣಗೊಳ್ಳುತ್ತಾ ಸಾಗುತ್ತದೆ. ಕೈಗಾರೀಕರಣದಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡುವ ಉದ್ದೇಶ ವಿವಿಧ ಯೋಜನೆಗಳನ್ನು, ಅದರಲ್ಲೂ ಮುಖ್ಯವಾಗಿ ಉಚಿತ ಕೊಡುಗೆಗಳನ್ನು ರಾಜಕೀಯ ಪಕ್ಷಗಳು ಚುನಾವಣೆಗೆ ಮುಂಚಿತವಾಗಿ ಘೋಷಿಸುತ್ತವೆ. ಆದರೆ ಅದನ್ನು ಜಾರಿಗೆ ತರುವ ಸಂದರ್ಭದಲ್ಲಿ ಮಾತ್ರ ವಿಫಲವಾಗುತ್ತದೆ.
ಸಂತ್ರಸ್ತರ ಪರಿಹಾರ ನಿಧಿಯನ್ನು ವಿಸ್ತರಿಸಬೇಕಾದರೆ, ಶ್ರೀಮಂತ ಕಾರ್ಪೊರೇಟ್ ಕಂಪೆನಿಗಳು ಮತ್ತು ಶ್ರೀಮಂತ ವರ್ಗಗಳಿಗೆ ಭಾರೀ ಪ್ರಮಾಣದಲ್ಲಿ ತೆರಿಗೆ ವಿಧಿಸಬೇಕಾಗುತ್ತದೆ. ಅಥವಾ, ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳನ್ನು ಮಾತ್ರವಲ್ಲ, ಪ್ರಾಕೃತಿಕ ಸಂಪನ್ಮೂಲಗಳನ್ನೂ ಮಾರಾಟಕ್ಕಿಡಬೇಕಾಗುತ್ತದೆ.ಭಾರತದಲ್ಲಿ ನಾವೀಗ ಇನ್ನೊಂದು ವಿದ್ಯಮಾನವನ್ನು ನೋಡುತ್ತಿದ್ದೇವೆ. ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿಗಳನ್ನು ಕೊಡುವ ಬದಲಿಗೆ, ಭೂಮಿ, ನೀರು, ಗ್ರಾಮಗಳು, ಸಮುದ್ರ ತೀರಗಳು ಮತ್ತು ಅರಣ್ಯಗಳು ಮುಂತಾದ ನೈಸರ್ಗಿಕ ಸಂಪನ್ಮೂಲಗಳನ್ನು ಸರಕಾರ ಬೃಹತ್ ಉದ್ದಿಮೆಗಳಿಗೆ ನೀಡುತ್ತಿದೆ. ಅಧಿಕ ಆರ್ಥಿಕ ಬೆಳವಣಿಗೆಗಾಗಿ ಕಾರ್ಪೊರೇಟ್‌ಗಳಿಗೆ ವಿನಾಯಿತಿ ನೀಡುವ ಹೆಸರಿನಲ್ಲಿ ಇದನ್ನು ಮಾಡುತ್ತಿದೆ. ಸ್ಥಳೀಯರು ತಮ್ಮ ಖಾಸಗಿ ಭೂಮಿ ಮಾತ್ರವಲ್ಲ, ತಮ್ಮ ಊರಿನ ನದಿ, ಕಡಲ ತೀರ, ಅರಣ್ಯ, ಮರಗಿಡಗಳ ಮೇಲಿನ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ ಅದಕ್ಕೆ ಪ್ರತಿಯಾಗಿ ಅವರಿಗೆ ಏನೂ ಸಿಗುತ್ತಿಲ್ಲ. ಇಂತಹ ವಾತಾವರಣದಲ್ಲಿ ಉದ್ಯೋಗ ಸೃಷ್ಟಿ ಕೇವಲ ಭರವಸೆಯಾಗಿ ಮಾತ್ರ ಉಳಿಯುತ್ತದೆ. ಕಾರ್ಪೊರೇಟ್ ವಲಯದಲ್ಲಿ ಹೂಡಿಕೆೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಸರಕಾರ ಕಾರ್ಪೊರೇಟ್ ತೆರಿಗೆಯನ್ನು ಎರಡು ವರ್ಷಗಳ ಹಿಂದೆ ಇಳಿಕೆ ಮಾಡಿತ್ತು. ಪರಿಣಾಮವಾಗಿ ಸರಕಾರಕ್ಕೆ ಸುಮಾರು 2 ಲಕ್ಷ ಕೋಟಿ ರೂ. ನಷ್ಟವಾಗಿದೆ. ತೆರಿಗೆ ಇಳಿಕೆ ಮಾಡಿದ್ದರಿಂದ ಎಷ್ಟರಮಟ್ಟಿಗೆ ಹೂಡಿಕೆ ಅಧಿಕವಾಯಿತು ಎನ್ನುವುದರ ಬಗ್ಗೆ ಸರಕಾರದ ಬಳಿ ಯಾವುದೇ ಮಾಹಿತಿಗಳಿಲ್ಲ. ಉದ್ಯೋಗ ಹೆಚ್ಚಳವಾದ ಬಗ್ಗೆಯೂ ದಾಖಲೆಗಳಿಲ್ಲ. ಆದರೆ ಈ ನಷ್ಟವನ್ನು ಮಾತ್ರ ಮತ್ತೆ ಜನಸಾಮಾನ್ಯರೇ ತುಂಬಿಕೊಡಬೇಕಾಗಿದೆ. ಈ ಬಂಡವಾಳ ಹೂಡಿಕೆ ಹೆಚ್ಚಳದಿಂದ ಉದ್ಯೋಗ ಹೆಚ್ಚುತ್ತದೆ ಎನ್ನುವ ಭರವಸೆ ಈ ಮೂಲಕ ಹುಸಿಯಾಗಿದೆ.
ನಿರುದ್ಯೋಗ ಸಮಾಜದಲ್ಲಿ ಹೆಚ್ಚಾಗುತ್ತಾ ಹೋದಂತೆಯೇ ಅರಾಜಕತೆಗಳೂ ಹೆಚ್ಚುತ್ತವೆ. ಜನರು ಉದ್ಯೋಗಗಳ ಬಗ್ಗೆ ಮಾತನಾಡಬಾರದು ಎನ್ನುವ ಕಾರಣಕ್ಕಾಗಿಯೇ ಕೋಮು ಉದ್ವಿಗ್ನ ವಾತಾವರಣವನ್ನು ಸಮಾಜದಲ್ಲಿ ಸೃಷ್ಟಿಸಲಾಗುತ್ತದೆ. ಕೇಂದ್ರ ಸರಕಾರವಂತೂ ಉದ್ಯೋಗ ನೀಡುವುದು, ಜನರ ಮೂಲಭೂತ ಅಗತ್ಯಗಳನ್ನು ಈಡೇರಿಸುವುದು ತನ್ನ ಹೊಣೆಗಾರಿಕೆಯಲ್ಲ ಎಂದು ಭಾವಿಸಿದೆ. ಒಂದೆಡೆ ರಾಜ್ಯಗಳ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡು ಅವುಗಳನ್ನು ಮಂದಿರ, ಪ್ರತಿಮೆಗಳಿಗೆ ಪೋಲು ಮಾಡುತ್ತಿವೆ. ರಾಜ್ಯಗಳು ‘ನಮ್ಮ ತೆರಿಗೆ ಹಣವನ್ನು ಮರಳಿಸಿ’ ಎಂದು ಒಕ್ಕೊರಲಿನಿಂದ ಕೇಂದ್ರವನ್ನು ಕೇಳುತ್ತಿವೆಯಾದರೂ, ಕೇಂದ್ರ ಸರಕಾರ ಕಿವುಡನಂತೆ ನಟಿಸುತ್ತಿದೆ. ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ರಾಜ್ಯಗಳ ತೆರಿಗೆ ಹಣವನ್ನು ಉತ್ತರದ ರಾಜ್ಯಗಳಿಗೆ ನೀಡಿ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎನ್ನುವ ಆರೋಪವೂ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಆಕ್ರೋಶವನ್ನು ತಣಿಸುವುದಕ್ಕಾಗಿಯೇ ಕೇಂದ್ರ ಸರಕಾರ ಇದೀಗ ಮಂದಿರದ ಹೆಸರಿನಲ್ಲಿ ದೇಶದ ಜನತೆಗೆ ಅಕ್ಕಿ ಕಾಳು ಹಂಚಲು ಹೊರಟಿದೆ. ಇತ್ತ ರಾಜ್ಯದಲ್ಲಿ ವಿರೋಧ ಪಕ್ಷಗಳು ಜನರ ಅಭಿವೃದ್ಧಿಯ ಬಗ್ಗೆ ಮಾತನಾಡುವುದರ ಬದಲು ಅಪರಾಧಿಗಳು, ರೌಡಿಗಳನ್ನು ಮುಂದಿಟ್ಟುಕೊಂಡು ಸಮಾಜದ ಶಾಂತಿಯನ್ನು ಕೆಡಿಸಲು ಪ್ರಯತ್ನಿಸುತ್ತಿವೆ. ಬರಪರಿಹಾರಕ್ಕಾಗಿ ಕೇಂದ್ರವನ್ನು ಒತ್ತಾಯಿಸಬೇಕಾದ ಬಿಜೆಪಿಯ ನಾಯಕರು, ಯಾವುದೋ ರೌಡಿಯನ್ನು ಬಂಧಿಸಿದ ಕಾರಣಕ್ಕಾಗಿ ಬೀದಿಯಲ್ಲಿ ಧರಣಿ ಕೂತಿದ್ದಾರೆ. ಜನರನ್ನು ಪರೋಕ್ಷವಾಗಿ ಹಿಂಸೆಗೆ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಕೇಳಿದ ಕೈಗಳಿಗೆ ಮಾರಕಾಯುಧಗಳನ್ನು ಬಲವಂತವಾಗಿ ನೀಡುವ ಪ್ರಯತ್ನ ನಡೆಯುತ್ತಿದೆ. ಇದು ಹೀಗೆ ಮುಂದುವರಿದದ್ದೇ ಆದರೆ, ಈಗ ಇರುವ ನಿರುದ್ಯೋಗದ ಜೊತೆಗೆ ದೇಶಕ್ಕೆ ಇನ್ನಷ್ಟು ನಾಶ ನಷ್ಟಗಳು ಸಂಭವಿಸುವ ಸಾಧ್ಯತೆಗಳಿವೆ. ತಮ್ಮ ಅಗತ್ಯಗಳೇನು ಎನ್ನುವುದನ್ನು ಅರಿತು ಯುವಕರು ಮುಂದಡಿ ಇಡಬೇಕಾದ ಸಮಯ ಬಂದಿದೆ.