ಸಭಾಪತಿ ಅಣಕದ ವಸ್ತುವಾಗದಿರಲಿ...

Update: 2023-12-23 03:51 GMT

Photo: PTI

ಸಂಸತ್ ಭದ್ರತಾ ವೈಫಲ್ಯದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ ತೀವ್ರವಾಗುತ್ತಿರುವಂತೆಯೇ ಅಮಾನತುಗೊಂಡ ಸಂಸದರ ಸಂಖ್ಯೆ 146ಕ್ಕೇರಿದೆ. ಸಂಸತ್ ಈ ದೇಶವನ್ನು ಪ್ರತಿನಿಧಿಸುತ್ತದೆ ಎನ್ನುವುದಾದರೆ ಅಷ್ಟೂ ಸಂಸದರ ಜೊತೆಗೆ ಹಲವು ಕೋಟಿ ಭಾರತೀಯರನ್ನೂ ಸಂಸತ್‌ನಿಂದ ಹೊರಗಿಟ್ಟಂತಾಯಿತು. ಸದ್ಯಕ್ಕೆ ನಮ್ಮ ಸಂಸತ್ತು ಈ ದೇಶವನ್ನು ಪೂರ್ಣವಾಗಿ ಪ್ರತಿನಿಧಿಸುತ್ತಿಲ್ಲ. ಅಮಾನತುಗೊಂಡ ಸಂಸದರ ಅನುಪಸ್ಥಿತಿಯಲ್ಲಿ ಹಲವು ಮಹತ್ವದ ಮಸೂದೆಗಳನ್ನು ಯಾವ ಚರ್ಚೆಯೂ ಇಲ್ಲದೆ ಲೋಕಸಭೆ ಅನುಮೋದಿಸಿದೆ. ಅಂದರೆ ದೇಶದ ಬಹುಮತದ ಅನುಮೋದನೆಗಳನ್ನು ತಿರಸ್ಕರಿಸಿ ಸರಕಾರ ಆತುರಾತುರವಾಗಿ ಮಸೂದೆಗಳನ್ನು ಜಾರಿಗೊಳಿಸುತ್ತಿದೆ. ಸರಕಾರದ ವರ್ತನೆ ನೋಡುತ್ತಿದ್ದರೆ ಅಧಿವೇಶನವನ್ನು ದಿಕ್ಕು ತಪ್ಪಿಸುವ ಭಾಗವಾಗಿ, ಭದ್ರತಾ ಲೋಪ ಸಂಭವಿಸಿತೆ ಎಂದು ಅನುಮಾನಿಸುವಂತಾಗಿದೆ. ಭದ್ರತಾ ಲೋಪವನ್ನು ಮುಂದಿಟ್ಟುಕೊಂಡು ತಮ್ಮನ್ನು ಪ್ರಶ್ನಿಸುವ ಸಂಸದರನ್ನು ಸಾರಾಸಗಟಾಗಿ ನಿವಾರಿಸಲು ಸರಕಾರಕ್ಕೆ ಸಾಧ್ಯವಾಗಿದೆ.

ಸಂಸತ್‌ನಲ್ಲಿ ಲೋಕಸಭಾ ಸದಸ್ಯರು ಯಾವುದೋ ಮೂರನೇ ದರ್ಜೆಯ ವಿಷಯಕ್ಕಾಗಿ ಗದ್ದಲ ಎಬ್ಬಿಸುತ್ತಿಲ್ಲ. ಸಂಸತ್‌ನೊಳಗೆ ದುಷ್ಕರ್ಮಿಗಳು ನುಗ್ಗಿ ದಾಂಧಲೆ ನಡೆಸಿದ್ದಾರೆ. ಭಾರೀ ಭದ್ರತಾ ವೈಫಲ್ಯ ಸಂಭವಿಸಿದೆ. ಒಂದು ವೇಳೆ ದುಷ್ಕರ್ಮಿಗಳು ಮಾರಕಾಯುಧಗಳನ್ನು ಗುಟ್ಟಾಗಿ ತಂದಿದ್ದರೆ ಪರಿಣಾಮ ಇನ್ನೂ ಭೀಕರವಾಗಿ ಬಿಡುತ್ತಿತ್ತು. ಈ ಭದ್ರತಾ ವೈಫಲ್ಯ ದೇಶದ ಆಂತರಿಕ ಭದ್ರತೆಯೊಂದಿಗೂ ತಳಕು ಹಾಕಿಕೊಂಡಿದೆ. 20 ವರ್ಷಗಳ ಹಿಂದೆ ಸಂಸತ್‌ನೊಳಗೆ ನುಗ್ಗಲು ಉಗ್ರ ಗಾಮಿಗಳು ನಡೆಸಿದ ವಿಫಲ ಪ್ರಯತ್ನ, ಸಂಭವಿಸಿದ ಸಾವುನೋವುಗಳ ಗಂಭೀರತೆಯ ಬಗ್ಗೆ ಅರಿವಿರುವ ಯಾವುದೇ ಪ್ರಧಾನಿಗೆ ವಿಪಕ್ಷಗಳ ಆತಂಕ ಅರ್ಥವಾಗುತ್ತಿತ್ತು. ಭಾರೀ ಅನಾಹುತಗಳಿಗೆ ಕಾರಣವಾಗಬಹುದಾದ ಭದ್ರತಾ ವೈಫಲ್ಯಕ್ಕೆ ನೇರ ಹೊಣೆಗಾರರಾಗಿ ಗೃಹ ಇಲಾಖೆಯ ಮುಖ್ಯಸ್ಥರನ್ನು ಹಾಗೂ ಪಾಸ್‌ಕೊಟ್ಟು ಸಂಸತ್‌ಗೆ ಪ್ರವೇಶಿಸಲು ದುಷ್ಕರ್ಮಿಗಳಿಗೆ ಅವಕಾಶ ನೀಡಿದ ಸಂಸದರ ಮೇಲೆ ಕ್ರಮ ಜರುಗಿಸಿ ದೇಶಕ್ಕೆ ತಕ್ಷಣದ ಸಮಾಧಾನವನ್ನು ಹೇಳಬೇಕಾಗಿತ್ತು. ಒಂದು ವೇಳೆ ಪಾಸ್‌ಕೊಟ್ಟವರು ವಿಪಕ್ಷ ಸಂಸದರೇ ಆಗಿದ್ದರೆ ಅವರ ಮೇಲೆ ಸರಕಾರ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲವೆ? ದೇಶದ ಆಂತರಿಕ ಭದ್ರತೆಯ ಮುಂದೆ ಯಾರೂ ದೊಡ್ಡವರಲ್ಲ. ಆದರೆ ಸಂಸತ್‌ನ ಭದ್ರತೆಗಿಂತಲೂ ತನ್ನ ಪಕ್ಷದ ವರ್ಚಸ್ಸು ಮುಖ್ಯ ಎಂದು ಸರಕಾರ ಹಟ ಹಿಡಿದು ಕೂತಿದೆ. ಅಷ್ಟೇ ಅಲ್ಲ, ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಎಲ್ಲ ಸಂಸದರನ್ನು ಹಂತ ಹಂತವಾಗಿ ಅಮಾನತು ಮಾಡುತ್ತಾ, ಪ್ರಶ್ನಿಸುವವರೇ ಇಲ್ಲದ ಲೋಕಸಭೆಯನ್ನು ಸೃಷ್ಟಿ ಮಾಡುತ್ತಿದೆ. ಸಂಸತ್ ಇರುವುದೇ ಪ್ರಶ್ನಿಸುವುದಕ್ಕೆ. ಆದರೆ ಇಂದು ಸಂಸತ್‌ನೊಳಗೆ ಪ್ರಶ್ನಿಸುವುದೇ ಅಪರಾಧವಾಗಿ ಬಿಟ್ಟಿದೆ.

ವಿಪರ್ಯಾಸವೆಂದರೆ ಸಂಸದರು ಸಂಸತ್‌ನ ಒಳಗೆ ಮಾತ್ರವಲ್ಲ, ಹೊರಗೂ ಮಾತನಾಡುವುದು ತಪ್ಪು ಎನ್ನುತ್ತಿದೆ ಸರಕಾರ. ಸಂಸತ್ತಿನ ಹೊರಗೆ ಸಭಾಪತಿ ಧನ್ಕರ್ ಅವರ ವರ್ತನೆಯನ್ನು ಸಂಸದರು ಟೀಕಿಸಿದರು ಮಾತ್ರವಲ್ಲ, ಸಂಸತ್‌ನಲ್ಲಿ ಅವರ ವರ್ತನೆಯನ್ನು ಅಮಾನತುಗೊಂಡ ಸಂಸದರು ಪ್ರತಿಭಟನಾರೂಪದಲ್ಲಿ ವ್ಯಂಗ್ಯ ಮಾಡಿದರು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇದನ್ನು ಚಿತ್ರೀಕರಿಸಿದರು. ಇಷ್ಟನ್ನೇ ಇಟ್ಟುಕೊಂಡು, ‘ಇಡೀ ಸಂಸತ್‌ಗೇ ಇದರಿಂದ ಅವಮಾನವಾಯಿತು’ ಎಂದು ಸರಕಾರ ಗೋಳಾಡತೊಡಗಿತು. ಸ್ವತಃ ಸಭಾಪತಿ ಧನ್ಕರ್ ಇದನ್ನು ಖಂಡಿಸಿ ‘‘ಇದು ಸಭಾಪತಿ ಸ್ಥಾನದ ಅವಮಾನ ಮಾತ್ರವಲ್ಲ, ನನ್ನ ಸಮುದಾಯದ ರೈತರ ಅವಮಾನ’’ ಎಂದು ಹೇಳಿಕೆ ನೀಡಿದರು. ಈ ದೇಶದ ಲಕ್ಷಾಂತರ ರೈತರು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವಾಗ ಅವರನ್ನು ಸರಕಾರ ಹೇಗೆ ನಡೆಸಿಕೊಂಡಿತು ಎನ್ನುವುದು ಧನ್ಕರ್ ಅವರಿಗೆ ನೆನಪಿರಬಹುದು. ತಮ್ಮದೇ ಸಮುದಾಯದ ಜನರ ಮೇಲೆ, ರೈತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದರು. ಲಾಠಿ ಚಾರ್ಜ್ ನಿಂದ ಹಲವರು ಗಾಯಗೊಂಡರು. ಧರಣಿ ನಿರತ ರೈತರ ಮೇಲೆ ಕೇಂದ್ರ ಸಚಿವನ ಪುತ್ರನೊಬ್ಬ ವಾಹನವನ್ನೇ ಹರಿಸಿದ. ಸರಕಾರ ರೈತರನ್ನು ಭಯೋತ್ಪಾದಕರು, ಉಗ್ರವಾದಿಗಳು ಎಂದು ಕರೆಯಿತು. ಚಳಿ, ಮಳೆಯಲ್ಲಿ ಧರಣಿ ನಿರತ 100ಕ್ಕೂ ಅಧಿಕ ರೈತರು ಮೃತಪಟ್ಟರು. ಆ ಸಂದರ್ಭದಲ್ಲಿ ತನ್ನ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಯಾರಿಗೂ ಯಾಕೆ ಅನ್ನಿಸಲಿಲ್ಲ? ಸಭಾಪತಿ ಎಲ್ಲ ಜಾತಿ, ಸಮುದಾಯಗಳನ್ನು ಮೀರಿ ತನ್ನ ಸ್ಥಾನವನ್ನು ನಿರ್ವಹಿಸುತ್ತಾರೆ. ಸಂಸತ್‌ನಲ್ಲಿ ಪ್ರಜಾಸತ್ತೆಯ ಮೇಲೆ ದಾಳಿ ನಡೆದರೆ, ಸಂವಿಧಾನ ವಿರೋಧಿ ಕೃತ್ಯಗಳು ಜರುಗಿದರೆ ತನ್ನ ಪಕ್ಷ, ಸಿದ್ಧಾಂತವೆಲ್ಲವನ್ನು ಬದಿಗಿಟ್ಟು ಸಂವಿಧಾನದ ರಕ್ಷಣೆಗೆ ಧಾವಿಸುವುದು ಸಭಾಪತಿಯ ಕರ್ತವ್ಯ. ಸರಕಾರವನ್ನು ಪ್ರಶ್ನಿಸಿದ ಸಂಸದರನ್ನು ಸಾಲು ಸಾಲಾಗಿ ಅಮಾನತುಗೊಳಿಸುವ ಮೂಲಕ ಮೊತ್ತ ಮೊದಲು ಈ ದೇಶದ ಪ್ರಜಾಸತ್ತೆಯನ್ನು ಅಣಕಿಸಿದವರು ಯಾರು? ಸಭಾಪತಿ ತಾನೆ? ಈ ದೇಶದ ಪ್ರಜಾಸತ್ತೆಯನ್ನು ಹಾಡಹಗಲೇ ಸಂಸತ್‌ನೊಳಗೆ ಅಣಕಿಸುವುದು ಸರಿಯೆಂದಾದರೆ, ಸಂಸತ್‌ನ ಹೊರಗೆ ಸಭಾಪತಿ ವರ್ತನೆಯನ್ನು ಅಮಾನತುಗೊಂಡ ಸಂಸದರು ಯಾಕೆ ಅಣಕಿಸ ಬಾರದು?

ಭದ್ರತಾಲೋಪಕ್ಕೆ ಸಂಬಂಧಿಸಿ ಸರಕಾರ ಯಾವುದೇ ಗಂಭೀರ ಕ್ರಮ ತೆಗೆದುಕೊಳ್ಳದೇ ಇರುವುದು, ನಿರ್ದಿಷ್ಟ ಸಚಿವಾಲಯದ ಮುಖ್ಯಸ್ಥರನ್ನು ಹೊಣೆ ಮಾಡದೇ ಇರುವುದು ಸಂಸತ್ ಭದ್ರತಾ ಲೋಪವನ್ನು ಸರಕಾರ ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎನ್ನುವುದನ್ನು ಹೇಳುತ್ತದೆ. 2001ರಲ್ಲಿ ನಡೆದ ಸಂಸತ್ ದಾಳಿಯನ್ನು ನೆನೆಯುತ್ತಾ ಪ್ರತೀ ವರ್ಷ ಸರಕಾರ ಸುರಿಸುತ್ತಾ ಬಂದಿರುವ ಕಣ್ಣೀರು ಮೊಸಳೆ ಕಣ್ಣೀರೇ ಎಂದು ಜನರು ಪ್ರಶ್ನಿಸುವಂತಾಗಿದೆ. ಅಂದು ಸಂಸತ್ ಆವರಣದಲ್ಲಿ ತಮ್ಮ ಪ್ರಾಣವನ್ನು ಬಲಿಕೊಟ್ಟು ಸಿಬ್ಬಂದಿ ಉಗ್ರರನ್ನು ತಡೆಯದೇ ಇದ್ದಿದ್ದರೆ ಆಗಬಹುದಾಗಿದ್ದ ಅನಾಹುತವನ್ನು ಒಮ್ಮೆ ನೆನೆಯೋಣ. ಅವರ ಬಲಿದಾನಕ್ಕೆ ನಾವು ನೀಡಬಹುದಾದ ಅತಿ ದೊಡ್ಡ ಗೌರವವೆಂದರೆ, ಅಂತಹ ಘಟನೆ ಸಂಸತ್‌ನಲ್ಲಿ ಮರುಕಳಿಸದಂತೆ ನೋಡಿಕೊಳ್ಳುವುದು. ಆದರೆ ಸರಕಾರ ಅದರಲ್ಲಿ ವಿಫಲವಾಗಿದೆ. ಸರಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಅಂತಹ ತಪ್ಪು ನಡೆಯದಂತೆ ತಿದ್ದಿಕೊಳ್ಳಲು ಸಾಧ್ಯ. ಆದರೆ ಈವರೆಗೆ ಪ್ರಧಾನಿ ಮೋದಿಯವರು ಸಂಸತ್‌ನಲ್ಲಿ ನಡೆದ ಲೋಪಕ್ಕೆ ದೇಶದ ಮುಂದೆ ವಿಷಾದವನ್ನು ವ್ಯಕ್ತಪಡಿಸಿಲ್ಲ. ಇದನ್ನು ಪ್ರಶ್ನಿಸಿದ, ಟೀಕಿಸಿದ ಸಂಸದರನ್ನು ಸಾಲುಸಾಲಾಗಿ ಅಮಾನತುಗೊಳಿಸುವುದು ಸಂಸತ್‌ನ ಅಣಕವಲ್ಲದೆ ಇನ್ನೇನು? ಈ ಅಣಕದ ಕುರಿತಂತೆ ದೇಶದ ರಾಷ್ಟ್ರಪತಿ ಈವರೆಗೆ ಯಾವುದೇ ಕಳವಳವನ್ನು ವ್ಯಕ್ತಪಡಿಸಿಲ್ಲ. ಆದರೆ ಸಂಸತ್‌ನ ಹೊರಗೆ ನಡೆದಿದೆಯೆನ್ನಲಾಗಿರುವ ಸಭಾಪತಿ ಧನ್ಕರ್ ಅವರ ಅಣಕವನ್ನು ಖಂಡಿಸಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸಭಾಪತಿ ಸ್ಥಾನದ ಹಿರಿಮೆಗೆ ಚ್ಯುತಿ ಬಂದಾಗ, ಆ ಸ್ಥಾನವನ್ನು ನಿರ್ವಹಿಸುವ ವ್ಯಕ್ತಿ ಸಹಜವಾಗಿಯೇ ಅಣಕದ ವಸ್ತುವಾಗಿ ಬಿಡುತ್ತಾರೆ. ಮೊತ್ತ ಮೊದಲು ಧನ್ಕರ್ ತಾನು ಕುಳಿತಿರುವ ಸಭಾಪತಿ ಸ್ಥಾನದ ಘನತೆಯನ್ನು ಕಾಪಾಡಬೇಕಾಗಿದೆ.

ಆ ಸ್ಥಾನದಲ್ಲಿ ಕುಳಿತು ಪಕ್ಷಭೇದಗಳನ್ನು ಬದಿಗಿಟ್ಟು ಪ್ರಜಾಸತ್ತೆಯ, ಸಂವಿಧಾನದ ಹಿರಿಮೆಯನ್ನು ಎತ್ತಿ ಹಿಡಿಯಬೇಕಾಗಿದೆ. ಸೂಕ್ತ ಮಾರ್ಗದರ್ಶನ ನೀಡಿ ಅಧಿವೇಶನವನ್ನು ಮುನ್ನಡೆಸಬೇಕಾದ ಸಭಾಪತಿಯೇ ಸಂಸತ್ ದಿಕ್ಕು ತಪ್ಪಲು ಕಾರಣರಾಗಿ ಅಣಕಕ್ಕೆ ವಸ್ತುವಾದರೆ ಇತರರನ್ನು ದೂಷಿಸಿ ಫಲವೇನು?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News