ಅಂಬೇಡ್ಕರ್ ಪುತ್ಥಳಿಗೆ ಚಪ್ಪಲಿ ಹಾರ: ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರ

Update: 2024-01-24 04:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಹಲವೆಡೆ ಹಿಂಸಾಚಾರಗಳು ನಡೆದಿರುವ ಕುರಿತಂತೆ ವರದಿಗಳು ಬಂದಿವೆ. ಹಿಂಸಾಚಾರಗಳನ್ನು ಸರಕಾರವೂ ಸಂಭ್ರಮದ ಒಂದು ಭಾಗವಾಗಿ ಸ್ವೀಕರಿಸಿದಂತಿದೆ. ಮಹಾರಾಷ್ಟ್ರದ ಮೀರಾ- ಭಾಯಂದರ್‌ನಲ್ಲಿ ದುಷ್ಕರ್ಮಿಗಳ ಗುಂಪು ಮಾರಕಾಯುಧಗಳ ಜೊತೆಗೆ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಹಿಂಸೆ ಸ್ಫೋಟಿಸಿ ನಾಶ ನಷ್ಟ ಸಂಭವಿಸಿದೆ. ಘಟನೆಗೆ ಸಂಬಂಧಿಸಿ 13 ಜನರನ್ನು ಬಂಧಿಸಲಾಗಿದೆ. ವಿಪರ್ಯಾಸವೆಂದರೆ, ಮಾರಕಾಯುಧಗಳೊಂದಿಗೆ ಉದ್ವಿಗ್ನಕಾರಿ ಘೋಷಣೆಗಳನ್ನು ಕೂಗಿದವರ ಮೇಲೆ ಕ್ರಮ ತೆಗೆದುಕೊಳ್ಳದೆ ನಿರ್ದಿಷ್ಟ ಸಮುದಾಯದ ಜನರನ್ನು ಬಂಧಿಸಿದೆ. ಮಾತ್ರವಲ್ಲ, ಅಕ್ರಮ ಕಟ್ಟಡಗಳು ಎಂದು ಆರೋಪಿಗಳ ನಿವಾಸಗಳನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದೆ. ಹೀಗೆ ಬಡವರ ಮನೆಯನ್ನು ಧ್ವಂಸಗೊಳಿಸಿ, ಅವರ ಕುಟುಂಬಗಳನ್ನು ಬೀದಿಯಲ್ಲಿ ನಿಲಿಸಿ ‘ಮಂದಿರದ ಉದ್ಘಾಟನೆ’ಯನ್ನು ಮಹಾರಾಷ್ಟ್ರ ಸರಕಾರ ಅರ್ಥಪೂರ್ಣಗೊಳಿಸಿದೆ. ಪುಣೆಯಲ್ಲಿರುವ ಭಾರತೀಯ ಚಿತ್ರ ಮತ್ತು ಟೆಲಿವಿಷನ್ ಸಂಸ್ಥೆ (ಎಫ್‌ಟಿಐಐ)ಗೆ ನುಗ್ಗಿದ ಸಂಘಪರಿವಾರ ಗುಂಪು ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಚಿತ್ರವೊಂದನ್ನು ಸುಟ್ಟು ಹಾಕಿದೆ. ಅಷ್ಟೇ ಅಲ್ಲ, ಅಲ್ಲಿರುವ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ಇಲ್ಲಿ ದಾಳಿ, ಆಕ್ರಮಣ, ದೌರ್ಜನ್ಯಗಳೆಲ್ಲ ರಾಮಭಕ್ತಿಯ ಭಾಗವೆಂದು ಸರಕಾರ ಭಾವಿಸಿರುವುದರಿಂದಲೋ ಏನೋ, ಈ ದುಷ್ಕರ್ಮಿಗಳ ಮನೆಗಳ ಮೇಲೆ ಯಾವುದೇ ಬುಲ್ಡೋಜರ್‌ಗಳನ್ನು ಬಳಕೆ ಮಾಡಿಲ್ಲ. ಉತ್ತರ ಪ್ರದೇಶದಲ್ಲಿ ದುಷ್ಕರ್ಮಿಗಳು ಮಸೀದಿಯೊಂದರ ಮೇಲೆ ಕೇಸರಿ ಧ್ವಜವನ್ನು ಹಾರಿಸಿದ್ದಾರೆ. ಇದು ಕೂಡ ರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮದ ಭಾಗವೆಂದು ಅಲ್ಲಿನ ಸರಕಾರ ಭಾವಿಸಿರಬೇಕು. ಯೋಗಿ ಆದಿತ್ಯನಾಥರ ಬುಲ್ಡೋಜರ್ ಇಲ್ಲೂ ಕೆಲಸ ಮಾಡಿಲ್ಲ. ಮಧ್ಯಪ್ರದೇಶದಲ್ಲಿ ದುಷ್ಕರ್ಮಿಗಳು ಚರ್ಚ್ ಒಂದರ ಮೇಲೆ ದಾಳಿ ನಡೆಸಿದ್ದಾರೆ.

ವಿಪರ್ಯಾಸವೆಂದರೆ, ಸೌಹಾರ್ದದ ನೆಲೆ ಬೀಡಾಗಿರುವ ಕರ್ನಾಟಕದಲ್ಲೂ ಕೆಲವು ದುಷ್ಕರ್ಮಿಗಳು ರಾಮಮಂದಿರದ ಹೆಸರಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಲು ಯತ್ನಿಸಿದ್ದಾರೆ. ಕಲಬುರಗಿಯಲ್ಲಿ ಶೋಭಾಯಾತ್ರೆ ಹಾಗೂ ಶ್ರೀರಾಮನ ಮೂರ್ತಿ ಮೆರವಣಿಗೆ ವೇಳೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲೇ ದುಷ್ಕರ್ಮಿಗಳು ಅಂಬೇಡ್ಕರ್ ಪುತ್ಥಳಿಗೆ ಚಪ್ಪಲಿ ಹಾರವನ್ನು ಹಾಕಿ ವಿಕೃತಿಯನ್ನು ಮೆರೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮತ್ತು ಇತರ ಸಿಬ್ಬಂದಿ ವರ್ಗ ಚಪ್ಪಲಿ ಹಾರವನ್ನು ತೆರವು ಗೊಳಿಸಿ ಊರಿನ ಶಾಂತಿ ಕಾಪಾಡಿದ್ದಾರೆ. ರಾಮ ಮಂದಿರ ನಿರ್ಮಾಣದ ಸಂಭ್ರಮವನ್ನು ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಆಚರಿಸುವುದರ ಹಿಂದೆ ಹಿಂದೆ ಹತ್ತು ಹಲವು ಸಂದೇಶಗಳಿವೆ. ಸಂಘಪರಿವಾರ ಕಾರ್ಯಕರ್ತರು ರಾಮನನ್ನು ಭೀಮನ ವಿರುದ್ಧ ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ರಾಮನನ್ನು ಗೌರವಿಸುವುದೆಂದರೆ, ಪರೋಕ್ಷವಾಗಿ ಭೀಮರಾವ್ ಅಂಬೇಡ್ಕರ್ ಅವರನ್ನು ಅವಮಾನಿಸುವುದು ಎಂದು ತಿಳಿದುಕೊಂಡ ಅವಿವೇಕಿಗಳಿಂದ ಈ ಕೃತ್ಯ ನಡೆದಿದೆ. ಕಲಬುರಗಿಯಲ್ಲಿ ಅಂಬೇಡ್ಕರ್‌ಗೆ ಆಗಿರುವ ಅಪಚಾರದ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿವೆ. ಹಲವು ಸಂಘಟನೆಗಳು, ರಾಜಕೀಯ ನಾಯಕರು ಈ ಕೃತ್ಯವನ್ನು ಖಂಡಿಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಇನ್ನೂ ಯಶಸ್ವಿಯಾಗಿಲ್ಲ.

ಅಂಬೇಡ್ಕರ್ ಹುತಾತ್ಮರಾದ ಡಿಸೆಂಬರ್ 6ರಂದೇ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಈ ಧ್ವಂಸವನ್ನು ಮಹಾ ಅಪರಾಧ ಪ್ರಕರಣವೆಂದು ಸುಪ್ರೀಂಕೋರ್ಟ್ ಕೂಡ ಬಣ್ಣಿಸಿದೆ. ಈ ಅಪರಾಧ ಕೃತ್ಯಕ್ಕಾಗಿ ಡಿಸೆಂಬರ್ 6ರ ದಿನವನ್ನು ಆಯ್ಕೆ ಮಾಡಿರುವುದು ಆಕಸ್ಮಿಕ ಅಲ್ಲ. ಅಂದು ಧ್ವಂಸವಾಗಿರುವುದು ಮಸೀದಿಯಲ್ಲ, ಸಂವಿಧಾನ ಎಂದು ಹಲವು ರಾಜಕೀಯ ತಜ್ಞರು ವ್ಯಾಖ್ಯಾನಿಸಿದ್ದಾರೆ. ಹಾಗೆ ಧ್ವಂಸಗೊಂಡ ಜಾಗದಲ್ಲೇ ಇದೀಗ ರಾಮಮಂದಿರ ನಿರ್ಮಾಣವಾಗಿದೆ ಮತ್ತು ಅದನ್ನು ಸುಪ್ರೀಂಕೋರ್ಟ್ ಅನುಮೋದಿಸಿದೆ. ಒಂದು ರೀತಿಯಲ್ಲಿ ಮಂದಿರ ಧ್ವಂಸಗೊಂಡ ಅಂಬೇಡ್ಕರ್ ಆಶಯಗಳ ತಳಹದಿಯ ಮೇಲೆ ನಿಂತಿದೆ. ಬಾಬರಿ ಮಸೀದಿ ಧ್ವಂಸದ ಹಿಂದಿರುವ ಶಕ್ತಿಗಳಿಗೆ ಈವರೆಗೆ ಯಾವುದೇ ಶಿಕ್ಷೆಯಾಗಿಲ್ಲ. ಈ ಮೂಲಕ ಸಂವಿಧಾನವೇ ನ್ಯಾಯ ಸಿಗದೆ ಸಂತ್ರಸ್ತವಾಗಿದೆ. ತನಗೆ ತಾನೇ ನ್ಯಾಯವನ್ನು ಪಡೆಯಲು ವಿಫಲವಾಗಿರುವ ಸುಪ್ರೀಂಕೋರ್ಟ್ ಈ ದೇಶದ ಜನರಿಗೆ ನ್ಯಾಯವನ್ನು ನೀಡುವುದು ಹೇಗೆ ಸಾಧ್ಯ? ಎಂದು ಜನರು ಪ್ರಶ್ನಿಸುವಂತಾಗಿದೆ. ಸಂವಿಧಾನವನ್ನು ಅವಮಾನಿಸುವ ಮುಂದುವರಿದ ಭಾಗವಾಗಿ, ಕಲಬುರ್ಗಿಯಲ್ಲಿ ರಾಮಮಂದಿರ ಮೆರವಣಿಗೆಯ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಅಂಬೇಡ್ಕರ್‌ಅವರಿಗೆ ಚಪ್ಪಲಿ ಹಾರವನ್ನು ಹಾಕಿದ್ದಾರೆ. ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವ ದ್ರೌಪದಿ ಮರ್ಮು ಅವರನ್ನು ಯಾಕೆ ದೂರ ಇಡಲಾಯಿತು ಎನ್ನುವುದನ್ನು ನಾವು ಈ ಹಿನ್ನೆಲೆಯಲ್ಲಿಯೇ ಅರ್ಥ ಮಾಡಿಕೊಳ್ಳಬೇಕು. ದ್ರೌಪದಿ ಮರ್ಮು ಅವರನ್ನು ಈ ದೇಶದ ರಾಷ್ಟ್ರಾಧ್ಯಕ್ಷರನ್ನಾಗಿಸಿದ್ದು ಅಂಬೇಡ್ಕರ್ ಅವರ ಸಂವಿಧಾನ. ಶೋಷಿತ ಸಮುದಾಯ ಈ ದೇಶದಲ್ಲಿ ತಲೆಯೆತ್ತಿ ನಿಲ್ಲಲು ಅವಕಾಶ ಮಾಡಿಕೊಟ್ಟಿರುವುದು ಅಂಬೇಡ್ಕರ್. ತಲೆತಲಾಂತರಗಳಿಂದ ಧರ್ಮ, ಶಾಸ್ತ್ರಗಳ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಗೆ ಸಣ್ಣದೊಂದು ತಡೆ ಹಾಕಿದವರು ಅಂಬೇಡ್ಕರ್. ಆ ಕಾರಣಕ್ಕಾಗಿಯೇ ಅವರು ಅಂಬೇಡ್ಕರ್‌ರನ್ನು ದ್ವೇಷಿಸುತ್ತಿದ್ದಾರೆ.

ಕಲಬುರಗಿಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಚಪ್ಪಲಿ ಹಾರ ಹಾಕಿದಾಕ್ಷಣ ನಾವೆಲ್ಲರೂ ಆಕ್ರೋಶಗೊಳ್ಳುತ್ತೇವೆ. ಆದರೆ ಅಂಬೇಡ್ಕರ್ ಸಂವಿಧಾನಕ್ಕೆ ಧಕ್ಕೆಯಾದಾಗ, ಅಂಬೇಡ್ಕರ್ ಚಿಂತನೆಗಳಿಗೆ ನಮ್ಮ ಕಣ್ಣ ಮುಂದೆಯೇ ಅನ್ಯಾಯಗಳಾಗುತ್ತಿರುವಾಗ ಯಾಕೆ ಮೌನ ತಳೆಯುತ್ತಿದ್ದೇವೆ ಎನ್ನುವ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ದೇಶವನ್ನು ಧರ್ಮ, ದೇವರು, ಮಂದಿರಗಳ ಹೆಸರಿನಲ್ಲಿ ಮುನ್ನಡೆಸಲು ಹೊರಟ ಗುಂಪು ಆ ಮೂಲಕ ಅಂಬೇಡ್ಕರ್ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರಗಳನ್ನು ನಾವು ಕಣ್ಣು ತೆರೆದು ನೋಡಬೇಕಾಗಿದೆ. ಪುತ್ಥಳಿ ಒಂದು ಸಂಕೇತ ಮಾತ್ರ. ಅದಕ್ಕೆ ಧಕ್ಕೆಯಾದರೆ ಅದನ್ನು ಸರಿಪಡಿಸಬಹುದು. ಆದರೆ ಸಂವಿಧಾನಕ್ಕೆ ಧಕ್ಕೆಯಾದರೆ ಅದರ ಪರಿಣಾಮವನ್ನು ದೇಶದ ಶೋಷಿತ ಸಮುದಾಯ ಅನುಭವಿಸಬೇಕಾಗುತ್ತದೆ. ಇಂದು ಹಂತಹಂತವಾಗಿ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಮೀಸಲಾತಿಯೂ ಸೇರಿದಂತೆ ಶೋಷಿತರ ಒಂದೊಂದೇ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಮಾಯಾ ಜಿಂಕೆಯನ್ನು ಮುಂದಿಟ್ಟುಕೊಂಡು ಸೀತೆಯನ್ನು ರಾವಣ ಅಪಹರಿಸಿದ. ಸೀತೆಯನ್ನು ಅಪಹರಿಸುವ ಸಂದರ್ಭದಲ್ಲಿ ರಾವಣ ಸನ್ಯಾಸಿಯ ವೇಷದಲ್ಲಿದ್ದನಂತೆ. ವಿಷಾದನೀಯ ಸಂಗತಿಯೆಂದರೆ, ಇಂದು ಕೆಲವು ರಾಜಕೀಯ ಶಕ್ತಿಗಳು ರಾಮನ ಹೆಸರನ್ನೇ ಮುಂದಿಟ್ಟುಕೊಂಡು, ವೇಷ ಮರೆಸಿ ಸಂವಿಧಾನವನ್ನು ಅಪಹರಿಸಲು ಮುಂದಾಗಿವೆ. ಈ ಅಪಹರಣಕ್ಕೆ ಶೋಷಿತ ಸಮುದಾಯದ ಯುವಕರನ್ನೇ ಬಳಕೆ ಮಾಡುತ್ತಿದೆ. ಈ ಧರ್ಮದ ಮರೆಯಲ್ಲಿರುವ ರಾವಣರನ್ನು ಗುರುತಿಸುವ ಶಕ್ತಿಯನ್ನು ನಾವು ನಮ್ಮದಾಗಿಸಿಕೊಳ್ಳಬೇಕು. ಸಂವಿಧಾನದ ಅಪಹರಣವನ್ನು ತಡೆಯಲು ದೇಶ ಒಂದಾಗಬೇಕು. ಕಲಬುರಗಿಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅಪಚಾರ ಮಾಡಿದವರ ಉದ್ದೇಶವನ್ನು ಅರ್ಥಮಾಡಿಕೊಳ್ಳದೆ ಇದ್ದರೆ, ಇಂತಹ ಅಪಚಾರಗಳು ಸಂವಿಧಾನವನ್ನು ಸಂಪೂರ್ಣವಾಗಿ ಬಲಿತೆಗೆಯುವವರೆಗೆ ಮುಂದುವರಿಯುತ್ತಲೇ ಹೋಗುತ್ತದೆ. ನಾಳೆ ನಮ್ಮ ಕೈಗೆ ಅಂಬೇಡ್ಕರ್ ಪುತ್ಥಳಿಯನ್ನು ಕೊಟ್ಟು, ಸಂವಿಧಾನವನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯಬಹುದು. ಸಂವಿಧಾನ ಅಳಿದು ಪುತ್ಥಳಿ ಉಳಿದರೆ ಅದರಿಂದ ದೇಶಕ್ಕಾಗಲಿ, ಶೋಷಿತ ಸಮುದಾಯಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News