ತಮಿಳುನಾಡು ರಾಜ್ಯಪಾಲರ ಉದ್ಧಟತನ

Update: 2024-02-20 06:09 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ತಮಿಳುನಾಡು ಮತ್ತು ಕೇರಳದ ರಾಜ್ಯಪಾಲರ ವರ್ತನೆಯ ಬಗ್ಗೆ ಸಾಕಷ್ಟು ವಿವಾದಗಳು ಉಂಟಾಗಿವೆ. ಈ ಹುದ್ದೆಯ ಔಚಿತ್ಯದ ಬಗ್ಗೆ ಪ್ರಶ್ನೆಗಳು ಉದ್ಭವ ವಾಗಿವೆ. ಅದರಲ್ಲೂ ತಮಿಳುನಾಡಿನ ರಾಜ್ಯಪಾಲ ಆರ್. ಎನ್. ರವಿ ಕೇಂದ್ರ ಸರಕಾರದ ಬಗ್ಗೆ ಟೀಕೆ ಇರುವ ಅಂಶಗಳನ್ನು ಸದನದಲ್ಲಿ ಓದಲು ನಿರಾಕರಿಸಿ ಸದನದಿಂದ ಹೊರಗೆ ಬಂದಿರುವುದು ಉದ್ಧಟತನದ ಪರಮಾವಧಿಯಾಗಿದೆ. ರಾಜ್ಯಪಾಲರ ಇಂಥ ವರ್ತನೆ ಇದೇ ಮೊದಲ ಬಾರಿಯೇನೂ ಅಲ್ಲ. ರಾಜ್ಯದ ಚುನಾಯಿತ ಸರಕಾರದ ವಿರುದ್ಧ ಪೂರ್ವಗ್ರಹ ಪೀಡಿತ ಅಥವಾ ದಿಲ್ಲಿಯ ದೊರೆಗಳನ್ನು ಓಲೈಸಲು ರಾಜ್ಯಪಾಲರಿಂದ ಆಗಾಗ ಇಂತಹ ಅತಿರೇಕದ ವರ್ತನೆ ಕಂಡುಬರುತ್ತಿದೆ. ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಕೂಡ ರಾಜ್ಯ ವಿಧಾನಸಭೆ ಅಂಗೀಕರಿಸಿದ್ದ ಮಸೂದೆಗಳಿಗೆ ಅಂಕಿತ ಹಾಕದಿದ್ದುದರಿಂದ ಕೇರಳದ ಎಡರಂಗ ಸರಕಾರ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಪಂಜಾಬ್ ರಾಜ್ಯಪಾಲರು ಇದೇ ರೀತಿ ವರ್ತಿಸಿದಾಗ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.ಇದಕ್ಕೆಲ್ಲ ಕಾರಣ ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರದ ಒಳ ಕುಮ್ಮಕ್ಕಲ್ಲದೆ ಬೇರೇನೂ ಅಲ್ಲ.

ಎಲ್ಲ ರಾಜ್ಯಪಾಲರು ಹಾಗಿದ್ದಾರೆಂದಲ್ಲ. ಉದಾಹರಣೆಗೆ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸಿದ್ಧಪಡಿಸಿದ ಭಾಷಣವನ್ನು ಯಥಾವತ್ತಾಗಿ ಓದಿ ಸದನದಲ್ಲಿ ಗಂಭೀರವಾಗಿ ನಡೆದುಕೊಂಡು ಸಾಂವಿಧಾನಿಕ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿದರೆಂಬುದನ್ನು ಮರೆಯಬಾರದು.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಪಾಲರಾದವರು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸಿ ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕು. ರಾಜ್ಯ ಸರಕಾರದ ಆಡಳಿತ ರಾಜ್ಯಪಾಲರ ಹೆಸರಿನಲ್ಲಿಯೇ ನಡೆಯುತ್ತದೆ. ಆದರೆ ಸಂವಿಧಾನದ ಪ್ರಕಾರ ರಾಜ್ಯಪಾಲರಿಗೆ ಯಾವುದೇ ಆಡಳಿತಾತ್ಮಕ ಅಧಿಕಾರವಿಲ್ಲ. ರಾಜ್ಯದ ಚುನಾಯಿತ ಸರಕಾರದ ದಾಖಲೆ, ಕಾಗದ ಪತ್ರಗಳಿಗೆ ಅಂಕಿತ ಹಾಕುವುದಷ್ಟೇ ಅವರಿಗಿರುವ ಅಧಿಕಾರ. ರಾಜ ಭವನ ಮತ್ತು ಚುನಾಯಿತ ಸರಕಾರದ ನಡುವೆ ಯಾವುದೇ ಅನಗತ್ಯ ಸಂಘರ್ಷ ಉಂಟಾಗಬಾರದೆಂಬ ಕಾರಣಕ್ಕೆ ನಮ್ಮ ಸಂವಿಧಾನ ನಿರ್ಮಾಪಕರು ಈ ಎಚ್ಚರ ವಹಿಸಿದ್ದಾರೆ. ವಿಧಾನಸಭಾ ಅಧಿವೇಶನ ನಡೆದಾಗ ರಾಜ್ಯ ಸರಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಸದನದಲ್ಲಿ ಓದಬೇಕಾಗುತ್ತದೆ. ಭಾರತದ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರದಲ್ಲಿ ಒಂದು ಪಕ್ಷ ಅಧಿಕಾರದಲ್ಲಿ ಇದ್ದರೆ ರಾಜ್ಯದಲ್ಲಿ ಇನ್ನೊಂದು ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಭಿನ್ನ ಪಕ್ಷಗಳ ಸರಕಾರಗಳು ಅಸ್ತಿತ್ವದಲ್ಲಿರುವುದು ಸಾಮಾನ್ಯ ಸಂಗತಿಯಾಗಿದೆ. ಯಾವುದೇ ರಾಜ್ಯದ ವಿಧಾನಸಭೆಯ ವರ್ಷದ ಮೊದಲ ಅಧಿವೇಶನವನ್ನು ಉದ್ದೇಶಿಸಿ ಮಾತಾಡುವುದು ರಾಜ್ಯಪಾಲರ ಹೊಣೆಗಾರಿಕೆ ಮಾತ್ರವಲ್ಲ ಸಂವಿಧಾನಾತ್ಮಕ ಕರ್ತವ್ಯ ಕೂಡ.

ಸಂವಿಧಾನದ ಪ್ರಕಾರ ರಾಜ್ಯ ಸರಕಾರ ಸಿದ್ಧಪಡಿಸಿದ ಭಾಷಣವನ್ನು ಯಥಾವತ್ತಾಗಿ ಸದನದ ಮುಂದೆ ಓದುವುದಷ್ಟೆ ರಾಜ್ಯಪಾಲರ ಕರ್ತವ್ಯ. ಈ ಭಾಷಣದ ಅರ್ಧ ವಿರಾಮ ಇಲ್ಲವೇ ಪೂರ್ಣ ವಿರಾಮವನ್ನು ಬದಲಿಸುವ ಅಧಿಕಾರ ಕೂಡ ರಾಜ್ಯಪಾಲರಿಗಿಲ್ಲ. ಅದೇ ರೀತಿ ಯಾವುದೇ ಶಬ್ದವನ್ನು ಲಿಖಿತ ಭಾಷಣದಲ್ಲಿ ಸೇರಿಸುವಂತಿಲ್ಲ. ವಾಸ್ತವ ಸಂಗತಿ ಹೀಗಿರುವಾಗ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಕೇಂದ್ರ ಸರಕಾರದ ಬಗ್ಗೆ ಟೀಕೆ, ವಿಮರ್ಶೆಗಳಿರುವ ಅಂಶಗಳನ್ನು ಸದನದಲ್ಲಿ ಓದಲು ನಿರಾಕರಿಸಿ ಸಭಾತ್ಯಾಗ ಮಾಡುವವರಂತೆ ಸದನದಿಂದ ಹೊರಗೆ ಬಂದಿರುವುದು ಸರಿಯಲ್ಲ. ಇದು ಅವರ ಸ್ಥಾನಕ್ಕೆ ಅಪಚಾರ ಮಾಡಿದಂತೆ.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ಚುನಾಯಿತ ಸರಕಾರಕ್ಕೆ ತನ್ನ ನೀತಿ, ಧೋರಣೆಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಹೇಳಿಸುವ ಸಂವಿಧಾನಿಕ ಅಧಿಕಾರ ಇದೆ. ಅದೇ ರೀತಿ ತನಗೆ ಒಪ್ಪಿತವಲ್ಲದ ಕೇಂದ್ರ ಸರಕಾರದ ಧೋರಣೆಗಳನ್ನು ಟೀಕಿಸುವ ಅಧಿಕಾರವೂ ರಾಜ್ಯ ಸರಕಾರಗಳಿಗಿವೆ. ವಾಸ್ತವವಾಗಿ ಈ ಭಾಷಣ ರಾಜ್ಯ ಸರಕಾರದ್ದು. ಆದರೆ ರಾಜ್ಯಪಾಲರು ಸರಕಾರದ ಮುಖ್ಯಸ್ಥರಾಗಿರುವ ಕಾರಣದಿಂದಾಗಿ ಈ ಭಾಷಣವನ್ನು ರಾಜ್ಯಪಾಲರು ಮಾಡುತ್ತಾರೆ. ಈ ಸಾಂವಿಧಾನಿಕ ಕರ್ತವ್ಯವನ್ನು ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸಮರ್ಪಕವಾಗಿ ನಿರ್ವಹಿಸಿದರೆ, ತಮಿಳುನಾಡು ಮತ್ತು ಕೇರಳ ರಾಜ್ಯಪಾಲರುಗಳು ಕೇಂದ್ರ ಸರಕಾರದ ಏಜೆಂಟರಂತೆ ವರ್ತಿಸುತ್ತಾ ಬಂದಿದ್ದಾರೆ.

ವಾಸ್ತವವಾಗಿ ರಾಜ್ಯಪಾಲರುಗಳು ಕೇಂದ್ರ ಸರಕಾರದ ರಾಜಕೀಯ ಪ್ರತಿನಿಧಿಗಳಲ್ಲ, ಅವರು ರಾಷ್ಟ್ರಪತಿಗಳ ಪ್ರತಿನಿಧಿ ಆಗಿರುತ್ತಾರೆ. ರಾಜ್ಯಪಾಲರಾದವರು ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳ ಬಾರದು. ಆದರೆ ವಿಷಾದದ ಸಂಗತಿಯೆಂದರೆ ಕೇರಳ ಮತ್ತು ತಮಿಳುನಾಡು ರಾಜ್ಯಪಾಲರು ತಮ್ಮ ಕಾರ್ಯ ವ್ಯಾಪ್ತಿ ಮೀರಿ ರಾಜ್ಯದ ಚುನಾಯಿತ ಸರಕಾರವನ್ನು ಬುಡಮೇಲು ಮಾಡುವವರಂತೆ ನಡೆದುಕೊಳ್ಳುತ್ತಿದ್ದಾರೆ.

ತಮಿಳುನಾಡು ಹಾಗೂ ಕೇರಳದ ರಾಜ್ಯಪಾಲರುಗಳು ರಾಜ್ಯ ಸರಕಾರ ಸಿದ್ಧಪಡಿಸಿದ ಭಾಷಣದಲ್ಲಿನ ತಮಗೆ ಬೇಕಾದ ಕೆಲವು ವಾಕ್ಯಗಳನ್ನು ಮಾತ್ರ ಓದಿ ತಮ್ಮ ಸ್ಥಾನದ ಘನತೆ ಮತ್ತು ಗೌರವಗಳನ್ನು ತಾವಾಗಿ ಕುಗ್ಗಿಸಿಕೊಂಡರು.ತಮಿಳುನಾಡು ರಾಜ್ಯಪಾಲ ರವಿಯವರಂತೂ ರಾಷ್ಟ್ರಗೀತೆಯನ್ನು ನುಡಿಸುವ ಮೊದಲೇ ಸದನದಿಂದ ಹೊರ ನಡೆದು ಅಪಹಾಸ್ಯಕ್ಕೀಡಾದರು.

ತಮಿಳುನಾಡಿನಲ್ಲಿರುವುದು ಡಿಎಂಕೆ ಸರಕಾರ. ಅದು ಸಿದ್ಧಪಡಿಸಿದ ಭಾಷಣದಲ್ಲಿ ಸಹಜವಾಗಿ ಕೇಂದ್ರ ಸರಕಾರದ ನೀತಿ, ಧೋರಣೆಗಳ ಬಗ್ಗೆ ಟೀಕೆ ವ್ಯಕ್ತಪಡಿಸಿದೆ. ಈ ಭಾಷಣವನ್ನು ರಾಜ್ಯಪಾಲರು ಯಥಾವತ್ತಾಗಿ ಓದಬೇಕಿತ್ತು. ಆದರೆ ಅದನ್ನು ಓದಲು ನಿರಾಕರಿಸುವ ಮೂಲಕ ಸಂವಿಧಾನದ ಘನತೆ, ಗೌರವಗಳಿಗೆ ಅಪಚಾರ ಮಾಡಿದ್ದಾರೆ. ಅಲ್ಲಿನ ವಿಧಾನಸಭೆಗೆ ಅಗೌರವ ತೋರಿಸಿದ್ದಾರೆ. ರಾಜ್ಯಪಾಲರು ವಿರೋಧ ಪಕ್ಷದ ನಾಯಕನಂತೆ ವರ್ತಿಸದೆ ರಾಜ್ಯಪಾಲರಂತೆ ನಡೆದುಕೊಂಡರೆ ಅವರ ಸ್ಥಾನಕ್ಕೆ ಗೌರವ ಬರುತ್ತದೆ ಎಂಬುದನ್ನು ಮರೆಯಬಾರದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News