ವೃದ್ಧರ ಆರೋಗ್ಯವೇ ದೇಶದ ಆರೋಗ್ಯ

Update: 2024-05-27 05:57 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಣ್ಣ ಕುಟುಂಬ ಎಂದರೆ ವೃದ್ಧರಿಲ್ಲದ ಅಥವಾ ಹಿರಿಯರಿಲ್ಲದ ಕುಟುಂಬ ಎನ್ನುವ ನಂಬಿಕೆ ಯುವಕರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೇರಿಲ್ಲದ ಮರವನ್ನು ಬಯಸಿದಂತೆ, ಹಿರಿಯರಿಲ್ಲದ ಕುಟುಂಬವನ್ನು ಬಯಸುವ ಒಂದು ಸ್ವಾರ್ಥಿ ಗುಂಪು ನಮ್ಮ ನಡುವೆ ಬೆಳೆಯುತ್ತಿದೆ. ಇದೇ ಸಂದರ್ಭದಲ್ಲಿ ಜನಸಂಖ್ಯೆಯನ್ನೇ ಸಮಸ್ಯೆಯೆಂದು ಭಾವಿಸಿ ಅದನ್ನು ಇಳಿಸುವುದಕ್ಕಾಗಿ ಸರಕಾರ ಇಟ್ಟ ಹೆಜ್ಜೆಗಳು ಹಿರಿಯರು-ಕಿರಿಯರ ನಡುವೆ ಅಸಮತೋಲನವನ್ನು ಸೃಷ್ಟಿಸಿದೆ. ಚೀನಾ ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ‘ಒಂದೇ ಮಗು’ ಎನ್ನುವ ನೀತಿಯಿಂದಾಗಿ ಚೀನಾದಲ್ಲಿ ವೃದ್ಧರ ಸಂಖ್ಯೆ ಹೆಚ್ಚಿದೆ. ಯುವಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಪರಿಣಾಮವಾಗಿ ಚೀನಾ ತನ್ನ ಜನಸಂಖ್ಯಾ ನೀತಿಯಲ್ಲೇ ಬದಲಾವಣೆ ಮಾಡಬೇಕಾಗಿ ಬಂತು. ಒಂದು ಮಗು ಸಾಕು ಎನ್ನುವ ನಿರ್ಧಾರದಿಂದ ಹಿಂದೆ ಸರಿಯಿತು. ಇಷ್ಟಾದರೂ ಇಂದು ವೃದ್ಧರನ್ನು ನೋಡಿಕೊಳ್ಳುವುದು ಚೀನಾ ಸರಕಾರಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಯಾಕೆಂದರೆ, ಏಕ ಸದಸ್ಯ ಕುಟುಂಬ ಈ ಹೊರೆಯನ್ನು ಪೂರ್ಣವಾಗಿ ಸರಕಾರದ ತಲೆಯ ಮೇಲೆ ಹಾಕಿ ಬಿಟ್ಟಿದೆ. ಪಾಶ್ಚಿಮಾತ್ಯ ದೇಶದಲ್ಲೂ ವೃದ್ಧರು ಒಂದು ಸಮಸ್ಯೆಯಾಗಿ ಪರಿಣಮಿಸುತ್ತಿರುವುದು ಇದೇ ಕಾರಣಕ್ಕೆ. ಇವರ ಯೋಗಕ್ಷೇಮಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಸರಕಾರ ಹಾಕಿಕೊಂಡಿರುವುದರಿಂದ ಅವರ ಬದುಕು ಸಹ್ಯವಾಗಿದೆ. ಆದರೆ ಭಾರತ ಅತ್ಯುತ್ತಮ ಕೌಟುಂಬಿಕ ವ್ಯವಸ್ಥೆಯನ್ನು ಹೊಂದಿಯೂ ವೃದ್ಧರ ಬಗ್ಗೆ ತೀವ್ರ ನಿರ್ಲಕ್ಷ್ಯವನ್ನು ವಹಿಸುತ್ತಿರುವ ಆರೋಪಕ್ಕೆ ಗುರಿಯಾಗುತ್ತಿದೆ. ಕುಟುಂಬದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ವೃದ್ಧರು ಬೀದಿಯಲ್ಲಿ ಭಿಕ್ಷುಕರಾಗಿ ಕಾಲ ಕಳೆಯುತ್ತಿರುವ ವರದಿಗಳು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಕುಟುಂಬ ಸದಸ್ಯರು ಜೊತೆಗಿಲ್ಲದೆ ಮನೆಯಲ್ಲಿ ಒಂಟಿಯಾಗಿ ಬದುಕಿ ಅನಾಥರಾಗಿ ಮೃತಪಡುವ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಕುಟುಂಬದಲ್ಲಿದ್ದೂ, ಸದಸ್ಯರಿಂದ ನಿರ್ಲಕ್ಷ್ಯಕ್ಕೊಳಗಾಗಿ, ಚಿಕಿತ್ಸೆಗೆ ಹಣವಿಲ್ಲದೆ ದಯನೀಯ ಬದುಕು ಸಾಗಿಸುತ್ತಿರುವವರ ಸಂಖ್ಯೆಯೂ ಬಹುದೊಡ್ಡದಿದೆ.

2023ರ ಅಂಕಿಅಂಶಗಳ ಪ್ರಕಾರ, 2050ರ ವೇಳೆಗೆ ಹಿರಿಯ ನಾಗರಿಕರ ಅಂದರೆ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಪ್ರಮಾಣವು ನಮ್ಮ ಜನಸಂಖ್ಯೆಯ 20.8 ಶೇಕಡಕ್ಕೆ ಹೆಚ್ಚುತ್ತದೆ. ಅಂದರೆ ಅದು ಸುಮಾರು 34.7 ಕೋಟಿ ಆಗುತ್ತದೆ. 2020ರಲ್ಲಿ, ಭಾರತದಲ್ಲಿ 70 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ 5.25 ಕೋಟಿ ಆಗಿತ್ತು ಮತ್ತು 75 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ 2.8 ಕೋಟಿ ಆಗಿತ್ತು. ವೃದ್ಧರನ್ನು ನಿಭಾಯಿಸಲು ಶ್ರೀಮಂತ ರಾಷ್ಟ್ರಗಳೇ ಏದುಸಿರು ಬಿಡುತ್ತಿರುವಾಗ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶ ಇದಕ್ಕೆ ಈಗಲೇ ಸಿದ್ಧತೆಯನ್ನು ಮಾಡಬೇಕು. ಭವಿಷ್ಯದಲ್ಲಿ ಇವರ ಇನ್ನಿತರ ಅಗತ್ಯಗಳು ಪಕ್ಕಕ್ಕಿರಲಿ, ಕನಿಷ್ಠ ಅವರ ಆರೋಗ್ಯದ ಬಗ್ಗೆ ಸರಕಾರ ಕಾಳಜಿಯನ್ನು ವಹಿಸಲೇ ಬೇಕಾಗಿದೆ. ಕಳೆದ ಕೊರೋನದಲ್ಲಿ ಈ ವೃದ್ಧರು ಹೇಗೆ ಸಮಾಜದ ನಿರ್ಲಕ್ಷ್ಯಕ್ಕೊಳಗಾದರು ಎನ್ನುವುದನ್ನು ನಾವು ನೋಡಿದ್ದೇವೆ. ಕೊರೋನ ಕಾಲದಲ್ಲಿ ವೃದ್ಧರ ಸಾವನ್ನು ಎಲ್ಲರೂ ಸಹಜವಾಗಿ ಸ್ವೀಕರಿಸಿದರು. ಆದುದರಿಂದ, ಭಾರತದಲ್ಲಿ ಸಂಭವಿಸಿದ ಲಕ್ಷಾಂತರ ಮಂದಿಯ ಸಾವಿನಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಿತ್ತು.

ಕೊರೋನವನ್ನು ಇಡೀ ವಿಶ್ವ ತನಗೆ ‘ಭಾರವಾಗಿರುವ’ ವೃದ್ಧರ ಮಾರಣ ಹೋಮಕ್ಕೆ ನೆಪವಾಗಿ ಬಳಸಿಕೊಂಡಿತೇ ಎನ್ನುವ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಆದುದರಿಂದ, ಕನಿಷ್ಠ ವೃದ್ಧರ ಆರೋಗ್ಯ ವಿಮೆಯ ಬಗ್ಗೆಯಾದರೂ ಸರಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಬೇಕಾಗಿದೆ.

ವೃದ್ಧರಲ್ಲಿ ಹೆಚ್ಚಿನವರಿಗೆ ತಮ್ಮದೇ ಆದ ಸಂಪಾದನೆ ಇರುವುದಿಲ್ಲ. ‘‘60 ವರ್ಷಕ್ಕಿಂತ ಹೆಚ್ಚಿನವರ ಪೈಕಿ ಸುಮಾರು 36 ಶೇಕಡ ಮಂದಿ ಆದಾಯ ಗಳಿಕೆಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಪೈಕಿ ಕೇವಲ 5 ಶೇಕಡ ಮಂದಿ ಪೂರ್ಣಕಾಲಿಕ ಕೆಲಸದಲ್ಲಿ ತೊಡಗಿದ್ದಾರೆ. ಈ ಪೈಕಿ ಕೇವಲ 25 ಶೇಕಡ ಮಂದಿಯಲ್ಲಿ ಮಾತ್ರ ತಾವು ಕೆಲಸದಲ್ಲಿ ಇರುವುದನ್ನು ತೋರಿಸುವ ದಾಖಲೆಗಳಿವೆ’’ ಎಂದು ಸಂಶೋಧನೆ ಹೇಳುತ್ತದೆ. ಆರ್ಥಿಕತೆಯಲ್ಲಿ 92.4 ಶೇಕಡ ಅನೌಪಚಾರಿಕ ಕೆಲಸಗಾರರಿದ್ದಾರೆ. ಅವರಿಗೆ ವೇತನಸಹಿತ ರಜೆ ಮತ್ತು ಇತರ ಸವಲತ್ತುಗಳಿಲ್ಲ. ಹಾಗಾಗಿ, ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡಿ ಈಗ ಕೆಲಸ ಮಾಡುವುದನ್ನು ನಿಲ್ಲಿಸಿರುವ ಹಿರಿಯರಿಗೆ ಯಾವುದೇ ಪಿಂಚಣಿ ಸಿಗುವುದಿಲ್ಲ. ಅವರಿಗೆ ಯಾವುದೇ ಸಾಮಾಜಿಕ ಭದ್ರತೆಯೂ ಇಲ್ಲ. ಇಂಥ ಪರಿಸ್ಥಿತಿಗಳಲ್ಲಿ, ಅವರು ತಮ್ಮ ಅಗತ್ಯಗಳಿಗಾಗಿ ತಮ್ಮ ಮಕ್ಕಳನ್ನು ಅವಲಂಬಿಸಬೇಕಾಗುತ್ತದೆ. ಕೆಲವು ದುರದೃಷ್ಟಕರ ಸನ್ನಿವೇಶಗಳಲ್ಲಿ ಕುಟುಂಬಗಳು ತಮ್ಮ ಹಿರಿಯರನ್ನು ಕಡೆಗಣಿಸುವ ಸಂದರ್ಭಗಳೂ ಇವೆ. ಆಗ ಅವರ ನೆರವಿಗೆ ಯಾರೂ ಒದಗುವುದಿಲ್ಲ. ಹಿರಿಯರಿಗೆ ಅನುಕಂಪ ಮಾತ್ರವಲ್ಲ, ಕೆಲವು ಸಲ ಅವರಿಗೆ ಪದೇ ಪದೇ ತುರ್ತು ಆರೋಗ್ಯ ಸೇವೆ ಬೇಕಾಗುತ್ತದೆ. ಇದಕ್ಕೆ ಅನುಸಾರವಾಗಿ ಹಿರಿಯರ ಆರೋಗ್ಯರಕ್ಷಣಾ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ಅವರ ಪುನರ್ವಸತಿ ಮತ್ತು ವೃದ್ಧಾಪ್ಯದ ಕಾಯಿಲೆಗಳಿಗೆ ಒತ್ತು ನೀಡಬೇಕಾಗುತ್ತದೆ.

ಆರೋಗ್ಯ ವಿಮೆ ಮಾಡಿಸಲು ಇರುವ 65 ವರ್ಷ ಮಿತಿಯನ್ನು ತೆಗೆದುಹಾಕಿ, ವಯಸ್ಸಿನ ನಿರ್ಬಂಧವಿಲ್ಲದೆ ಎಲ್ಲರಿಗೂ ಈ ಸೌಲಭ್ಯವನ್ನು ಒದಗಿಸುವಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ವು ಇತ್ತೀಚೆಗೆ ಆರೋಗ್ಯ ವಿಮಾ ಕಂಪೆನಿಗಳಿಗೆ ಸೂಚಿಸಿದೆ. ಇದೊಂದು ಉತ್ತಮ ನಿರ್ಧಾರವೇ ಆಗಿದೆ. ಆದರೆ, ಇಲ್ಲಿನ ಪ್ರಶ್ನೆಯೆಂದರೆ, ನಮ್ಮ ನಾಗರಿಕರ, ಅದರಲ್ಲೂ ಮುಖ್ಯವಾಗಿ ಹಿರಿಯ ನಾಗರಿಕರ ಅಗತ್ಯಗಳನ್ನು ವಿಮಾ ಆಧಾರಿತ ಆರೋಗ್ಯ ರಕ್ಷಣಾ ವ್ಯವಸ್ಥೆಯು ಈಡೇರಿಸುವುದೇ?ಹಲವು ಆರೋಗ್ಯ ಯೋಜನೆಗಳು ಆರೋಗ್ಯ ಅವಶ್ಯಕತೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಸಿಜಿಎಚ್‌ಎಸ್, ಇಸಿಎಚ್‌ಎಸ್ ಮತ್ತು ಇಎಸ್‌ಐಸಿಯನ್ನು ಹೊರತುಪಡಿಸಿ ಇತರ ಎಲ್ಲಾ ಕಾರ್ಯಕ್ರಮಗಳು ಕೇವಲ ಪ್ರೀಮಿಯಮ್ ಆಧಾರಿತ ಸೀಮಿತ ಸೌಲಭ್ಯಗಳನ್ನು ಒದಗಿಸುತ್ತವೆ. ಆಯುಷ್ಮಾನ್ ಭಾರತ್ ಸೇರಿದಂತೆ ಈ ಕಾರ್ಯಕ್ರಮಗಳು ಆಸ್ಪತ್ರೆಯಲ್ಲಿ ದಾಖಲಾದರೆ ಮಾತ್ರ ಸವಲತ್ತುಗಳನ್ನು ನೀಡುತ್ತವೆ. ಹೊರರೋಗಿ ಸೇವೆಯು ಇದರಲ್ಲಿ ಲಭ್ಯವಿಲ್ಲ. ದೈನಂದಿನ ಆರೋಗ್ಯ ಆರೈಕೆಗಾಗಿ ಜನರು ಹೊರರೋಗಿ ವಿಭಾಗಗಳಲ್ಲಿ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ ಹಾಗೂ ತಪಾಸಣೆ ಮತ್ತು ಔಷಧಿಗಳಿಗೆ ತಮ್ಮ ಜೇಬಿನಿಂದಲೇ ಖರ್ಚು ಮಾಡಬೇಕಾಗುತ್ತದೆ.

ಆಯುಷ್ಮ್ಮಾನ್ ಕಾರ್ಡ್ ಪಡೆಯಲು ಹಲವು ಶರತ್ತುಗಳನ್ನು ಪೂರೈಸಬೇಕಾಗುತ್ತದೆ. ದ್ವಿಚಕ್ರ, ತ್ರಿಚಕ್ರ ಮತ್ತು ಚತುಷ್ಚಕ್ರ ವಾಹನಗಳನ್ನು ಹೊಂದಿದವರು, ಯಾಂತ್ರೀಕೃತ ಕೃಷಿ ಉಪಕರಣಗಳನ್ನು ಹೊಂದಿದವರು, ಸರಕಾರಿ ಉದ್ಯೋಗಿಗಳು, ತಿಂಗಳಿಗೆ 10,000 ರೂ.ಗಿಂತ ಹೆಚ್ಚಿನ ವರಮಾನ ಇರುವವರು, ಫ್ರಿಜ್ ಮತ್ತು ಲ್ಯಾಂಡ್‌ಲೈನ್ ಟೆಲಿಫೋನ್ ಇರುವವರು, ಪಕ್ಕಾ ಮನೆ ಇರುವವರು, ಕೃಷಿ ಭೂಮಿ ಇರುವವರು ಮತ್ತು 50,000 ರೂ. ಕ್ರೆಡಿಟ್ ಮಿತಿ ಇರುವ ಕಿಸಾನ್ ಕಾರ್ಡ್ ಹೊಂದಿದವರು ಇದಕ್ಕೆ ಅರ್ಹರಾಗುವುದಿಲ್ಲ.

ಹಾಗಾಗಿ, ಹೆಚ್ಚಿನ ಜನರು ಖಾಸಗಿ ಅಥವಾ ಸರಕಾರಿ ಒಡೆತನದ ಕಂಪೆನಿಗಳಿಂದ ಆರೋಗ್ಯ ವಿಮೆಯನ್ನು ಖರೀದಿಸುತ್ತಾರೆ. ಇಂಥ ವಿಮೆಗಳ ಪ್ರೀಮಿಯಮ್ ತುಂಬಾ ದುಬಾರಿಯಾಗಿರುತ್ತದೆ ಮತ್ತು ಅದು ಸಾಮಾನ್ಯ ನಾಗರಿಕರ ಕೈಗೆ ಎಟಕುವುದಿಲ್ಲ. ಉದಾಹರಣೆಗೆ; 10 ಲಕ್ಷ ರೂಪಾಯಿ ಮೊತ್ತದ ವಿಮೆಗಾಗಿ 71-75ರ ವಯೋಗುಂಪಿನಲ್ಲಿರುವ ವ್ಯಕ್ತಿಯೊಬ್ಬ, ನ್ಯೂ ಇಂಡಿಯಾ ಮೆಡಿಕ್ಲೇಮ್ ನೀತಿಯ ಪ್ರಕಾರ, 57,024 ರೂ. ಮತ್ತು 18 ಶೇಕಡ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಆದರೂ, ಈ ಪಾಲಿಸಿಯಲ್ಲಿ ಹೊರರೋಗಿ ಚಿಕಿತ್ಸೆಯು ಲಭಿಸುವುದಿಲ್ಲ. ಇಷ್ಟು ದೊಡ್ಡ ಪ್ರೀಮಿಯಮ್ ಪಾವತಿಸಲು ಜನಸಂಖ್ಯೆಯ ದೊಡ್ಡ ಭಾಗಕ್ಕೆ ಸಾಧ್ಯವಾಗುವುದಿಲ್ಲ.ಹಾಗಾಗಿ, ದೇಶದ ಜನರಿಗೆ ಸಾರ್ವತ್ರಿಕ ಆರೋಗ್ಯ ಸೇವೆಯನ್ನು ಒದಗಿಸುವ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳಬೇಕು. ಆರೋಗ್ಯ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ಜಿಡಿಪಿಯ 6 ಶೇಕಡಕ್ಕೆ ಏರಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಆದರೆ, ದುರದೃಷ್ಟದ ಸಂಗತಿಯೆಂದರೆ, ನಮ್ಮ ದೇಶದಲ್ಲಿ ಆರೋಗ್ಯಕ್ಕೆ ಸರಕಾರ ಖರ್ಚು ಮಾಡುವ ಹಣವು ಹೆಚ್ಚಿನ ದೇಶಗಳಿಗಿಂತ ತುಂಬಾ ಕಡಿಮೆ.

ಎಲ್ಲಕ್ಕಿಂತ ಮುಖ್ಯವಾಗಿ ವೃದ್ಧರು ‘ಅನುಪಯುಕ್ತರು’ ಎನ್ನುವ ಮನಸ್ಥಿತಿಯಿಂದ ಸಮಾಜ ಹೊರ ಬರಬೇಕು. ಹಿರಿಯರು ತಮ್ಮ ಬದುಕನ್ನಿಡೀ ಸವೆಸಿ ದೇಶವನ್ನು ಕಟ್ಟಿದ್ದಾರೆ. ಈ ದೇಶದ ಮೇಲೆ ಅವರು ಕಟ್ಟಿದ ತೆರಿಗೆಯ ಋಣವಿದೆ. ಅವರ ಆಲೋಚನೆ, ಚಿಂತನೆ, ಜೀವನಾನುಭದ ತಳಹದಿಯ ಮೇಲೆ ಈ ದೇಶ ನಿಂತಿದೆ ಎನ್ನುವುದನ್ನು ನಾವೆಲ್ಲರೂ ಮರೆಯಬಾರದು. ತನ್ನ ಮನೆಯ ಅಡಿಗಲ್ಲು ತನ್ನ ತಾತ, ತಂದೆ,ತಾಯಿ ಎಂದು ತಿಳಿದುಕೊಂಡು ಅವರ ಹೊಣೆಗಾರಿಕೆಯನ್ನು ಕುಟುಂಬದ ಯುವ ಸದಸ್ಯರು ಹೊತ್ತುಕೊಳ್ಳಬೇಕು. ಅದರ ಜೊತೆ ಜೊತೆಗೇ ಸರಕಾರವೂ, ಈ ದೇಶದ ಎಲ್ಲ ಹಿರಿಯರಿಗೆ ವ್ಯಯಿಸುವ ಪ್ರತಿ ಪೈಸೆಯೂ ಅವರದೇ ಕೈಯಿಂದ ಕಿತ್ತುಕೊಂಡಿರುವುದು ಎನ್ನುವುದನ್ನು ನೆನಪಿನಲ್ಲಿಟ್ಟು ಅವರ ಯೋಗಕ್ಷೇಮಕ್ಕೆ ಯೋಜನೆಯನ್ನು ರೂಪಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News