ಕುರಿ ಕಡಿಯುವ ಮೊದಲೇ ಊಟಕ್ಕೆ ಕೂತ ನಾಯಕರು!
ಔತಣಕ್ಕೆ ಕುರಿ ಕಡಿಯುವ ಮೊದಲೇ ಊಟದ ಪಂಕ್ತಿಯಲ್ಲಿ ಬಾಲೆ ಎಲೆ ಹಾಕಿ ಕೂತಿದ್ದಾರೆ ಕೆಲವು ಕಾಂಗ್ರೆಸ್ ನಾಯಕರು. ‘ಮುಖ್ಯಮಂತ್ರಿ ಹುದ್ದೆ’ಗೆ ನಾ ಮುಂದೆ ತಾಮುಂದೆ ಎಂದಾಡುತ್ತಿರುವ ಕಾಂಗ್ರೆಸ್ ನಾಯಕರನ್ನು ಗಮನಿಸುವಾಗ ನಿಜಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯರ ರಾಜೀನಾಮೆ ಬೇಕಾಗಿರುವುದು ಬಿಜೆಪಿಗೋ ಅಥವಾ ಈ ಕಾಂಗ್ರೆಸ್‌ನೊಳಗಿರುವ ನಾಯಕರಿಗೋ ಎಂದು ಅನುಮಾನಿಸುವಂತಾಗಿದೆ. ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗಾಗಿ ಬಿಜೆಪಿ ಪಾದಯಾತ್ರೆ ಸೇರಿದಂತೆ ಸಾಕಷ್ಟು ಪ್ರಯತ್ನಗಳನ್ನು ನಡೆಸಿತಾದರೂ, ಅದರಲ್ಲಿ ವಿಶೇಷ ಯಶಸ್ಸನ್ನೇನೂ ತನ್ನದಾಗಿಸಿಕೊಂಡಿಲ್ಲ. ಆ ಕಾರಣದಿಂದಲೇ, ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲೇ ಬೇಕಾಗುವ ಅನಿವಾರ್ಯ ಸ್ಥಿತಿಯನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ. ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಕಾನೂನು ಕ್ರಮಕ್ಕೆ ಅನುಮತಿ ನೀಡಿದ ಬಳಿಕ ಅದರ ವಿರುದ್ಧ ಸರಕಾರ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಬಗ್ಗೆ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಕಾದಿರಿಸಿದೆ. ಕನಿಷ್ಠ ಹೈಕೋರ್ಟ್ ತೀರ್ಪು ಹೊರಬೀಳುವವರೆಗೂ ಕಾಯುವುದಕ್ಕೆ ಕಾಂಗ್ರೆಸ್‌ನೊಳಗಿರುವ ನಾಯಕರು ಸಿದ್ಧರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ, ಇದೀಗ ಕೆಲವು ಕಾಂಗ್ರೆಸ್ ನಾಯಕರ ವರ್ತನೆಯ ವಿರುದ್ಧ ರಾಜ್ಯದ ವರಿಷ್ಠರು ಕೇಂದ್ರದ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ.
‘ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಬದಲಾವಣೆ ವಿಚಾರದಲ್ಲಿ ಹಲವು ಕಾಂಗ್ರೆಸ್ ನಾಯಕರು ಬಹಿರಂಗ ಹೇಳಿಕೆ ನೀಡಿ ಪಕ್ಷದ ಶಿಸ್ತನ್ನು ಉಲ್ಲಂಘಿಸುತ್ತಿದ್ದಾರೆ. ಇದನ್ನು ತಡೆಯಬೇಕು’ ಎಂದು ಒತ್ತಾಯಿಸಿ ಕಾಂಗ್ರೆಸ್‌ನೊಳಗಿರುವ ಒಂದು ಗುಂಪು ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರವನ್ನು ಬರೆದಿದೆೆ. ‘ಜನತೆ ಬಹುಮತದಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಎಲ್ಲಾ ಐದು ಗ್ಯಾರಂಟಿಗಳನ್ನು ನೂತನ ಸರಕಾರ ಯಶಸ್ವಿಯಾಗಿ ನೆರವೇರಿಸಿದೆ. ಇಂತಹ ಸಂದರ್ಭದಲ್ಲಿ ಸರಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುವಾಗ ಅದಕ್ಕೆ ಕೆಲವು ಕಾಂಗ್ರೆಸ್ ನಾಯಕರು ಪೂರಕವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂಬ ಪರೋಕ್ಷ ಕಳವಳವನ್ನು ಈ ಪತ್ರ ವ್ಯಕ್ತಪಡಿಸುತ್ತಿದೆ. ಸಚಿವರ ಲಂಗುಲಗಾಮಿಲ್ಲದ ಹೇಳಿಕೆಗಳಿಂದ ಮಾಧ್ಯಮಗಳಲ್ಲಿ ಈಗ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯಾಗುತ್ತಿದೆ. ಇದು ಪಕ್ಷದ ವರ್ಚಸ್ಸಿಗೆ ಧಕ್ಕೆ ಮಾತ್ರವಲ್ಲ, ಸರಕಾರವನ್ನು ಪರೋಕ್ಷವಾಗಿ ಅಭದ್ರಗೊಳಿಸಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ಪಕ್ಷದೊಳಗಿನ ನಾಯಕರು ಬೇಜವಾಬ್ದಾರಿಯ ಹೇಳಿಕೆಯನ್ನು ನೀಡಿ ಬಿಜೆಪಿಗೆ ಸಹಕಾರ ನೀಡುತ್ತಿರುವುದನ್ನು ಈ ಮೂಲಕ ಕಾಂಗ್ರೆಸ್ ಪಕ್ಷವೇ ಒಪ್ಪಿಕೊಂಡಿದೆ.
ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣದ ಆರೋಪ ಬಂದ ದಿನಗಳಿಂದ ಸಿದ್ದರಾಮಯ್ಯ ಪರವಾಗಿ ಒಂದೆರಡು ನಾಯಕರು ಹೇಳಿಕೆಗಳನ್ನು, ಸ್ಪಷ್ಟೀಕರಣನ್ನು ನೀಡುತ್ತಾ ಬಂದಿದ್ದಾರೆ. ಅದನ್ನು ಬಿಟ್ಟರೆ, ಸ್ವತಃ ಸಿದ್ದರಾಮಯ್ಯ ಅವರೇ ಪದೇ ಪದೇ ಪತ್ರಿಕಾಗೋಷ್ಠಿಗಳನ್ನು ನಡೆಸಿ ವಿವರಗಳನ್ನು ನೀಡಬೇಕಾಯಿತು. ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಬಲವಾಗಿ ನಿಂತು ಅವರ ಮೇಲೆ ಬಂದಿರುವ ಆರೋಪಗಳನ್ನು ನಿರಾಕರಿಸಿದ ನಾಯಕರ ಸಂಖ್ಯೆ ಬೆರಳೆಣಿಕೆಯಷ್ಟೇ ಇದೆ. ಅತ್ತ ಬಿಜೆಪಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಪ್ರತಿಭಟನೆ ಮಾಡುತ್ತಿರುವ ಹೊತ್ತಿಗೆ ಇತ್ತ ಪರಮೇಶ್ವರ್, ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಶಾಮನೂರು ಸೇರಿದಂತೆ ಹಲವು ನಾಯಕರು ‘ಮುಖ್ಯಮಂತ್ರಿ ಸ್ಥಾನಕ್ಕೆ ನಾವು ಸ್ಪರ್ಧಿಗಳು’ ಎನ್ನುವುದನ್ನು ಬಹಿರಂಗ ಹೇಳಿಕೆಯ ಮೂಲಕ ಸ್ಪಷ್ಟ ಪಡಿಸಿದ್ದರು. ಇತ್ತೀಚೆಗೆ ಸಭೆಯೊಂದರಲ್ಲಿ ಪರಮೇಶ್ವರ್ ಬೆಂಬಲಿಗರು ‘ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡಬೇಕು’ ಎಂದು ಘೋಷಣೆ ಕೂಗಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಕಾಂಗ್ರೆಸ್‌ನೊಳಗಿರುವ ಒಂದು ಗುಂಪು ಖರ್ಗೆ ಅವರಿಗೆ ಪತ್ರ ಬರೆದ ಬಳಿಕವೂ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ನಾನೂ ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದು ಶಾಮನೂರು ಸ್ಪಷ್ಟಪಡಿಸಿದ್ದಾರೆ. ‘ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಕುರ್ಚಿ ಖಾಲಿ ಬಿದ್ದರೆ ನಾವು ಸ್ಪರ್ಧಿಸಲು ಹಿಂದೇಟು ಹಾಕುವುದಿಲ್ಲ’ ಎಂದು ಅಡ್ಡ ಗೋಡೆಯ ಮೇಲೆ ದೀಪವಿಡುವ ಈ ನಾಯಕರು, ಬಿಜೆಪಿ ನಡೆಯ ವಿರುದ್ಧ ಅಷ್ಟೇ ತೀವ್ರವಾಗಿ ಹೇಳಿಕೆ ನೀಡಿದ್ದು ಕಡಿಮೆ. ಸಿದ್ದರಾಮಯ್ಯ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಕಾಂಗ್ರೆಸ್‌ನೊಳಗಿರುವ ಕೆಲವು ನಾಯಕರ ಮೌನ, ಪರೋಕ್ಷವಾಗಿ ಬಿಜೆಪಿಗೆ ಸಹಾಯವಾಗುತ್ತಿದೆ.
ತಾನೊಬ್ಬ ಹಿಂದುಳಿದ ವರ್ಗದ ನಾಯಕ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ ಅವರನ್ನು ಮುಖ್ಯಮಂತ್ರಿಯಂತಹ ಉನ್ನತ ಸ್ಥಾನಕ್ಕೆ ತಂದು ಕೂರಿಸಿದ್ದು ಖಂಡಿತವಾಗಿಯೂ ಅವರ ಜಾತಿ ಮಾತ್ರ ಅಲ್ಲ. ಈ ರಾಜ್ಯದಲ್ಲಿ ತನ್ನ ಸಮುದಾಯದ ನಾಯಕನೊಬ್ಬನನ್ನು ಮುಖ್ಯಮಂತ್ರಿ ಮಾಡುವ ರಾಜಕೀಯ ಶಕ್ತಿಯನ್ನು ಕುರುಬ ಸಮುದಾಯ ಇನ್ನೂ ತನ್ನದಾಗಿಸಿಕೊಂಡಿಲ್ಲ. ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಇರುವ ಸಂಘಟಿತ ಶಕ್ತಿ, ಆರ್ಥಿಕ, ರಾಜಕೀಯ ಬಲ ಈ ಸಮುದಾಯಕ್ಕಿಲ್ಲ. ಇವೆಲ್ಲದರ ನಡುವೆಯೂ ತನ್ನ ಪ್ರತಿಭೆ, ಮುತ್ಸದ್ದಿತನ, ಜನಪರ ಚಿಂತನೆಗಳನ್ನು ಬಳಸಿಕೊಂಡು ಸಿದ್ದರಾಮಯ್ಯ ರಾಜಕೀಯದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ್ಗ, ಎಲ್ಲ ಶೋಷಿತ ಸಮುದಾಯಗಳು ಅವರು ಮುಖ್ಯಮಂತ್ರಿಯಾಗುವುದಕ್ಕೆ ಕೈ ಜೋಡಿಸಿವೆ. ಮುಖ್ಯಮಂತ್ರಿಯಾದ ಬಳಿಕ ತನ್ನ ಜಾತಿಯ ಬಗ್ಗೆ ಅವರು ಓಲೈಕೆಯನ್ನು ತೋರಿಸಿದ ಆರೋಪಗಳು ಹಲವು ಬಾರಿ ಕೇಳಿ ಬಂದಿವೆ. ಮುಖ್ಯಮಂತ್ರಿಯಾಗಿ ದುರ್ಬಲ ಸಮುದಾಯವಾಗಿರುವ ಕುರುಬರ ಪರವಾಗಿ ಓಲೈಕೆ ಮಾಡುವುದು ತಪ್ಪೇನು ಅಲ್ಲ. ಆದರೆ ಅವರೆಂದೂ ತನ್ನ ಜಾತಿಯನ್ನಷ್ಟೇ ಅರ್ಹತೆಯನ್ನಾಗಿಸಿ ಮುಖ್ಯಮಂತ್ರಿಯಾದವರಲ್ಲ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಇದೇ ಸಂದರ್ಭದಲ್ಲಿ ಜಾತಿಯನ್ನೇ ಅರ್ಹತೆಯಾಗಿಸಿಕೊಂಡು ಕೆಲವು ನಾಯಕರು ‘ಮುಖ್ಯಮಂತ್ರಿ’ ಸ್ಥಾನಕ್ಕೆ ತಮ್ಮನ್ನು ಪರ್ಯಾಯವಾಗಿ ಬಿಂಬಿಸಿಕೊಳ್ಳುತ್ತಿರುವುದು ಮಾತ್ರ ವಿಷಾದನೀಯವಾಗಿದೆ.
‘ಉತ್ತರ ಕನ್ನಡ ಇಂದು ಕೋಮುವಾದಿಗಳಿಂದ ಸಿಲುಕಿ ನರಳುತ್ತಿದ್ದರೆ, ಸಂಘಪರಿವಾರ ಅಲ್ಲಿ ಆಳವಾಗಿ ಬೇರೂರಿದ್ದರೆ’ ಅದಕ್ಕೆ ಆರ್.ವಿ.ದೇಶಪಾಂಡೆಯ ಮೌನದ ಕೊಡುಗೆ ಬಹಳಷ್ಟಿದೆ. ಕೋಮುವಾದಿಗಳು ಉತ್ತರ ಕನ್ನಡವನ್ನು ಹರಿದು ಮುಕ್ಕುತ್ತಿರುವಾಗ ಅದಕ್ಕೆ ಪರೋಕ್ಷ ಅವಕಾಶವನ್ನು ನೀಡಿದವರು ದೇಶಪಾಂಡೆ. ಲಿಂಗಾಯತ ಸಮುದಾಯದ ನಾಯಕರಾಗಿರುವ ಶಾಮನೂರು ಶಿವಶಂಕರಪ್ಪ ವೇದಿಕೆಯೊಂದರಲ್ಲಿ ಬಿಜೆಪಿಯ ನಾಯಕ ಯಡಿಯೂರಪ್ಪ ಪುತ್ರರಿಗೆ ಬಹಿರಂಗ ಬೆಂಬಲವನ್ನು ಘೋಷಿಸಿದ್ದರು. ‘ದಲಿತ ಮುಖಂಡ’ ಎನ್ನುವ ಕಾರಣಕ್ಕೆ ತನ್ನನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಪದೇ ಪದೇ ಒತ್ತಡ ಹಾಕುತ್ತಿರುವ ಪರಮೇಶ್ವರ್ ಈ ನಾಡಿನ ದಲಿತರ ನೋವು ನಲಿವುಗಳಿಗೆ ಸ್ಪಂದಿಸಿದ್ದು ಕಡಿಮೆ. ದಲಿತರ ಮೇಲೆ ನಡೆಯುವ ದೌರ್ಜನ್ಯಗಳ ಸಂದರ್ಭದಲ್ಲಿ ಬಾಯಿ ಹೊಲಿದು ಕೂರುವ ಪರಮೇಶ್ವರ್‌ಗೆ ‘ದಲಿತ’ ಎನ್ನುವ ಗುರುತು ನೆನಪಾಗುವುದೇ ಮುಖ್ಯಮಂತ್ರಿ ಹುದ್ದೆಗೆ ಹೆಸರನ್ನು ಪ್ರತಿಪಾದಿಸುವ ಸಂದರ್ಭದಲ್ಲಿ. ಗೃಹ ಸಚಿವರಾದ ಸಂದರ್ಭದಲ್ಲಿ ಇವರು ಮೊದಲು ಪೇಜಾವರ ಶ್ರೀಗಳ ಪಾದಾರವಿಂದಕ್ಕೆ ಎರಗಿ ಕೃತಾರ್ಥರಾದವರು. ಇವರೆಲ್ಲರೂ ಕಾಂಗ್ರೆಸ್‌ನೊಳಗಿರುವ ಬಿಜೆಪಿಯ ‘ಬಿ’ ಟೀಮ್ ಎಂಬ ಆರೋಪ ಆಗಾಗ ಕೇಳಿ ಬರುತ್ತಿರುತ್ತವೆ. ಸಿದ್ದರಾಮಯ್ಯ ಅವರ ಮುಖಮಂತ್ರಿ ಕುರ್ಚಿಗೆ ಹೊರಗಿನ ಬಿಜೆಪಿಗಿಂತ, ಒಳಗಿರುವ ಈ ‘ಬಿ’ ತಂಡವೇ ಅಪಾಯಕಾರಿಯಾಗಿದೆ. ಭವಿಷ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿದರೂ, ಖಾಲಿ ಬಾಳೆಯೆಲೆಯ ಮುಂದೆ ಉಣ್ಣಲು ಕೂತ ಈ ತಂಡ ಯಾವ ರೀತಿಯಲ್ಲೂ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾಗಲಾರರು. ನಾಡಿನ ದೃಷ್ಟಿಯಿಂದಲೂ, ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದಲೂ. ಯಾಕೆಂದರೆ ಇವರ ಪಾಲಿಗೆ ಕಾಂಗ್ರೆಸ್ ಪಕ್ಷವೆನ್ನುವುದು ಉಂಡು ಎಸೆಯುವ ಬಾಳೆಯೆಲೆಯಷ್ಟೇ.