ಇದು ಪ್ರಜಾತಂತ್ರಕ್ಕೆ ಅಪಚಾರ

Update: 2024-02-27 05:26 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ದೇಶ ನಮ್ಮದು. ಈ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಇರುವಂತೆ ವಿರೋಧ ಪಕ್ಷಗಳೂ ಇರುತ್ತವೆ.ಆಡಳಿತದ ಲೋಪಗಳನ್ನು ಪ್ರಶ್ನಿಸುವುದು, ಆಡಳಿತ ಪಕ್ಷ ಅಂಥ ಲೋಪ ನಿಜವಾಗಿದ್ದರೆ ತಿದ್ದಿಕೊಳ್ಳುವುದು ಜನತಂತ್ರದ ಸಹಜ ಪ್ರಕ್ರಿಯೆ. ಆದರೆ ಈಗಿನ ಕೇಂದ್ರದಲ್ಲಿರುವ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ದೇಶದಲ್ಲಿ ವಿರೋಧ ಪಕ್ಷವೇ ಅಸ್ತಿತ್ವದಲ್ಲಿರಬಾರದೆಂದು ನಾನಾ ಮಸಲತ್ತುಗಳನ್ನು ನಡೆಸುತ್ತ ಬಂದಿದೆ. ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಬಳಸಿಕೊಂಡು ಪ್ರತಿಪಕ್ಷ ಗಳ ಬಾಯಿ ಮುಚ್ಚಿಸಲು ಹೊರಟಿದೆ. ಭ್ರಷ್ಟಾಚಾರದ ಹಗರಣಗಳಲ್ಲಿ ಸಿಲುಕಿದ್ದಾರೆಂದು ಆರೋಪಿಸಿ ತನಿಖಾ ಸಂಸ್ಥೆಗಳನ್ನು ಛೂ ಬಿಡುತ್ತದೆ.ಅಂಥವರು ಬಿಜೆಪಿ ಸೇರಿಬಿಟ್ಟರೆ ಅವರನ್ನು ಆರೋಪ ಮುಕ್ತರನ್ನಾಗಿ ಮಾಡಲಾಗುತ್ತದೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿಸಿದ ಪರಿಣಾಮವಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರಿಗೂ ಇದೇ ಕಿರಿ ಕಿರಿ ಮಾಡಲಾಗುತ್ತಿದೆ. ಈ ಕಾಟದಿಂದ ಪಾರಾಗಲು ಶರದ್ ಪವಾರ್‌ರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವನ್ನು ಒಡೆದು ಇಬ್ಭಾಗ ಮಾಡಿದ ಅಜಿತ್ ಪವಾರ್‌ರನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಇಂಥ ನೂರಾರು ಉದಾಹರಣೆಗಳನ್ನು ಕೊಡಬಹುದು.

ಇದು ಮಾತ್ರವಲ್ಲದೆ ಮುಖ್ಯ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಸ್ಥಗಿತಗೊಳಿಸಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ತಾಂತ್ರಿಕ ನೆಪ ಮುಂದೆ ಮಾಡಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ. ಇದರಿಂದ ಕಾಂಗ್ರೆಸ್ ಪಕ್ಷದ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗಿದೆ ಎಂದು ಪಕ್ಷ ದೂರಿದೆ. 2018-19ರ ಸಾಲಿನ ಆದಾಯ ತೆರಿಗೆ ವಿವರಗಳನ್ನು ತಡವಾಗಿ ಸಲ್ಲಿಸಿದ್ದಕ್ಕಾಗಿ ಈ ಉಗ್ರಕ್ರಮವನ್ನು ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಪಕ್ಷವು ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣವಿದ್ದ ಖಾತೆಯನ್ನೂ ಸ್ಥಗಿತಗೊಳಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ಈ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿಯ ಮೊರೆ ಹೋಗಿದೆ. ನ್ಯಾಯ ಮಂಡಳಿ ಸದ್ಯಕ್ಕೆ ಈ ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆಸಲು ಅನುಮತಿ ನೀಡಿದೆ

ಆದರೆ ವಿಚಾರಣೆ ಮುಗಿಯುವವರೆಗೆ ಖಾತೆಗಳಲ್ಲಿ 115 ಕೋಟಿ ರೂ. ಗಳನ್ನು ಹಾಗೇ ಇಡಬೇಕು ಹಾಗೂ ರೂ. 115 ಕೋಟಿಗಿಂತ ಹೆಚ್ಚುವರಿ ಯಾಗಿರುವ ಮೊತ್ತವನ್ನು ಮಾತ್ರ ಖರ್ಚು ಮಾಡಬೇಕೆಂದು ಷರತ್ತು ವಿಧಿಸಿದೆ. ಆದರೆ ಪಕ್ಷದ ಪ್ರಕಾರ ಚಾಲ್ತಿ ಖಾತೆಯಲ್ಲಿ ಅಷ್ಟೊಂದು ಹಣವಿಲ್ಲ.

ಆದಾಯ ತೆರಿಗೆ ಇಲಾಖೆಯ ಈ ಕ್ರಮ ದುರುದ್ದೇಶದಿಂದ ಕೂಡಿದೆ ಎಂದರೆ ತಪ್ಪಿಲ್ಲ. 2018-19 ಚುನಾವಣಾ ವರ್ಷವಾಗಿತ್ತು. ಆಗ ಕಾಂಗ್ರೆಸ್ ಪಕ್ಷ ತಡಮಾಡಿ ತೆರಿಗೆ ವಿವರಗಳನ್ನು ಸಲ್ಲಿಸಿದೆಯೆಂದು ಇದಕ್ಕಾಗಿ 210 ಕೋಟಿ ರೂ. ದಂಡ ಪಾವತಿಸಬೇಕೆಂದು ನೋಟಿಸ್ ನೀಡಿರುವುದು ಅತಿರೇಕದ ಕ್ರಮವಾಗುತ್ತದೆ. ಇದು ಕೇಂದ್ರದ ಆಡಳಿತ ಪಕ್ಷದ ಕುಮ್ಮಕ್ಕಿನಿಂದ ನಡೆದ ಹುನ್ನಾರ ಎಂದರೆ ತಪ್ಪಿಲ್ಲ.

ಲೋಕಸಭಾ ಚುನಾವಣೆಗೆ ಇನ್ನು ಸುಮಾರು ಎರಡು ತಿಂಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ತನ್ನ ಸಾಧನೆಗಳನ್ನು ಜನರ ಮುಂದಿಟ್ಟು ಮತ ಕೇಳಲಿ. ಕಳೆದ ಒಂಭತ್ತು ವರ್ಷಗಳಿಂದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರವೇ ಅಸ್ತಿತ್ವದಲ್ಲಿದೆ. ನಿರುದ್ಯೋಗ, ಬಡತನ ನಿವಾರಣೆ ಮತ್ತು ಬೆಲೆ ಏರಿಕೆ ನಿಯಂತ್ರಣಕ್ಕೆ ಸರಕಾರ ಕೈಗೊಂಡ ಕ್ರಮಗಳೇನು ಎಂಬುದನ್ನು ಬಿಜೆಪಿ ಜನರ ಮುಂದಿಡಲಿ. ಅದನ್ನು ಬಿಟ್ಟು ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ಕೈ ಕಟ್ಟಿ ಹಾಕುವ ಇಂಥ ಕ್ರಮಗಳು ಜನತಂತ್ರ ವಿರೋಧಿಯಲ್ಲದೆ ಬೇರೇನೂ ಅಲ್ಲ.

ಎನ್‌ಡಿಎ ಸರಕಾರ ತಂದಿದ್ದ ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮಾರನೇ ದಿನವೇ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷದ ವಿರುದ್ಧ ಈ ಕ್ರಮವನ್ನು ಕೈಗೊಂಡಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಪ್ರತಿಪಕ್ಷ ನಾಯಕರನ್ನು ಬೆದರಿಸುವ, ಅವುಗಳ ಕೈ ಕಟ್ಟಿ ಹಾಕುವ ಕೇಂದ್ರೀಯ ತನಿಖಾ ಸಂಸ್ಥೆಗಳ ಕಾರ್ಯಾಚರಣೆಯ ಭಾಗವಾಗಿ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಚುನಾವಣೆಗೆ ಮುನ್ನ ಪ್ರತಿಪಕ್ಷಗಳನ್ನು ಇಲ್ಲದ ನೆಪ ಮುಂದೆ ಮಾಡಿ ದುರ್ಬಲಗೊಳಿಸಲು ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡಿಸುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಮಹಾ ಭ್ರಷ್ಟರು, ಖದೀಮರು ಬಿಜೆಪಿ ಸೇರಿದ ತಕ್ಷಣ ಸತ್ಯ ಹರಿಶ್ಚಂದ್ರರಾಗಿ ದೋಷ ಮುಕ್ತರಾಗುತ್ತಿರುವುದು ವ್ಯಾಪಕವಾಗಿ ನಡೆದಿದೆ. ಆಪರೇಶನ್ ಕಮಲದ ಮೂಲಕ ಪ್ರತಿಪಕ್ಷಗಳ ಚುನಾಯಿತ ಸರಕಾರಗಳನ್ನು ಉರುಳಿಸುವುದೂ ಸೇರಿದಂತೆ ಮೋದಿ ಸರಕಾರ ಜನತಂತ್ರ ವ್ಯವಸ್ಥೆಗೆ ಅಪಚಾರ ಮಾಡುತ್ತಿದೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೇಶದ ಮೊದಲ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ್ ನೆಹರೂ ಅವರು ಅತ್ಯಂತ ಎಚ್ಚರದಿಂದ ಉಳಿದವರಿಗೆ ಮಾದರಿಯಾಗುವಂತೆ ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಸಂಸತ್ತಿನಲ್ಲಿ ಸರಕಾರದ ಲೋಪದೋಷಗಳನ್ನು ಟೀಕಿಸುವ ಪ್ರತಿಪಕ್ಷ ನಾಯಕರಾದ ಡಾ.ರಾಮ ಮನೋಹರ ಲೋಹಿಯಾ ಮತ್ತು ಭೂಪೇಶ್ ಗುಪ್ತಾರಂಥವರ ಮಾತುಗಳನ್ನು ಆಲಿಸಿ ಸಮರ್ಪಕವಾದ ಉತ್ತರ ನೀಡುತ್ತಿದ್ದರು. ನೆಹರೂ ಎಷ್ಟು ಪ್ರಜಾತಂತ್ರವಾದಿಯಾಗಿದ್ದರೆಂದರೆ ಲೋಹಿಯಾ, ನಾಥ್ ಪೈ ಅವರಂಥ ಸಮಾಜವಾದಿ ನಾಯಕರು ಸದನದಲ್ಲಿ ಇರಬೇಕೆಂದು ಚುನಾವಣೆಯಲ್ಲಿ ಅವರ ಎದುರಿಗೆ ಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸಿ ಸರಕಾರವನ್ನು ಟೀಕಿಸುವ ಪ್ರತಿಪಕ್ಷ ನಾಯಕರು ಗೆದ್ದು ಬರುವಂತೆ ನೋಡಿಕೊಳ್ಳುತ್ತಿದ್ದರು.

ನೆಹರೂ, ಲೋಹಿಯಾ, ಡಾಂಗೆ, ಗೋಪಾಲನ್ ಅವರಂಥ ಸಂಸದೀಯ ಪಟುಗಳಿಂದಾಗಿ ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಆರೋಗ್ಯಕರವಾಗಿ ಬೆಳೆದು ಬಂತು. ಮೋದಿಯವರು ಪ್ರಧಾನಿಯಾಗಲು ಸಾಧ್ಯವಾಗಿದ್ದು ಈ ಉನ್ನತ ಪರಂಪರೆಯ ಕೊಡುಗೆ ಎಂದರೆ ತಪ್ಪಲ್ಲ. ಹಾಗಾಗಿ ಈಗಿನ ಕೇಂದ್ರ ಸರಕಾರ ಪ್ರತಿಪಕ್ಷಗಳನ್ನು ಕಟ್ಟಿ ಹಾಕುವ ಹಾಗೂ ಬಾಯಿ ಮುಚ್ಚಿಸುವ ಜನತಂತ್ರ ವಿರೋಧಿ ನೀತಿಯನ್ನು ಕೈ ಬಿಡಬೇಕು. ಟೀಕೆ, ವಿಮರ್ಶೆಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News