ಇದೆಂತಹ ಪ್ರಮಾದ?

Update: 2024-09-07 05:14 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹರ್ಯಾಣದಲ್ಲಿ ನಕಲಿ ಗೋರಕ್ಷಕರು ವಿದ್ಯಾರ್ಥಿಯೊಬ್ಬನ ಹತ್ಯೆಗೈದಿರುವುದರ ಬಗ್ಗೆ ಈ ದೇಶದ ಪ್ರಧಾನಿಯಾಗಲಿ, ಗೃಹ ಸಚಿವರಾಗಲಿ ಇನ್ನೂ ಪ್ರತಿಕ್ರಿಯಿಸಿಲ್ಲ. ಕನಿಷ್ಠ ಮೃತ ವಿದ್ಯಾರ್ಥಿಯ ಹೆಸರಿನ ಮುಂದಿರುವ ಸರ್‌ನೇಮ್ ಕಾರಣಕ್ಕಾಗಿಯಾದರೂ, ಈ ದೇಶದ ಸ್ವಯಂಘೋಷಿತ ಹಿಂದೂ ರಕ್ಷಕ ಸಂಘಟನೆಗಳು ಪ್ರತಿಭಟನೆ ಮಾಡುತ್ತವೆ, ಬೀದಿಗಿಳಿದು ‘ಹಿಂದೂಗಳನ್ನು ರಕ್ಷಿಸಿ’ ಎಂದು ಸರಕಾರವನ್ನು ಒತ್ತಾಯಿಸುತ್ತವೆ ಎಂದರೆ ಅದೂ ಇಲ್ಲ. ಕೆಲವು ರಾಜಕೀಯ ಪಕ್ಷಗಳ ಮುಖಂಡರು, ಇದರ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರಾದರೂ, ಹರ್ಯಾಣ ಸರಕಾರ ತುಟಿ ಹೊಲಿದು ಕೂತಿದೆ. ಯಾಕೆಂದರೆ, ಈ ನಕಲಿ ಗೋರಕ್ಷಕರ ಪಾಲಿಗೆ ಹರ್ಯಾಣವೆನ್ನುವುದು ಹುಲುಸಾದ ಗೋಮಾಳವಾಗಿದೆ. ಗೂಂಡಾಗಳು, ರೌಡಿಗಳು ತಮ್ಮನ್ನು ತಾವು ‘ಗೋರಕ್ಷಕರು’ ಎಂದು ಘೋಷಿಸಿಕೊಂಡರೆ, ಅವರಿಗೆ ಯಾರನ್ನೇ ಆಗಲಿ ದೋಚುವ, ತಡೆದು ಹಲ್ಲೆ ನಡೆಸುವ, ಅಂತಿಮವಾಗಿ ಕೊಂದು ಹಾಕುವ ಪರವಾನಿಗೆ ದೊರಕಿ ಬಿಡುತ್ತದೆ. ಇವರನ್ನು ಸಾಕುವುದಕ್ಕಾಗಿಯೇ ಬಿಜೆಪಿಯೊಳಗೆ ಅಕ್ರಮ ಗೋಶಾಲೆಗಳಿವೆ. ಅಕ್ರಮ ಮಾರಕಾಸ್ತ್ರಗಳು ಇವರ ಕೈ ಸೇರಿದರೆ ಸಕ್ರಮವಾಗಿ ಬಿಡುತ್ತವೆೆ. ಒಂದು ರೀತಿಯಲ್ಲಿ ಹರ್ಯಾಣದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಹಿಂದೆ, ಕೇಸರಿ ವೇಷದಲ್ಲಿರುವ ಈ ಗೂಂಡಾಗಳಿದ್ದಾರೆ. ಇವರಿಲ್ಲದೆ ಹರ್ಯಾಣದಲ್ಲಿ ರಾಜಕೀಯವೇ ಇಲ್ಲ ಎನ್ನುವ ಸ್ಥಿತಿಯಿದೆ. ಬರೇ ಬಿಜೆಪಿಯೆಂದಲ್ಲ, ಉಳಿದ ಪಕ್ಷಗಳೂ ಇವರ ವಿರುದ್ಧ ಧ್ವನಿಯೆತ್ತಲು ಅಂಜುವ ಸ್ಥಿತಿ ಹರ್ಯಾಣದಲ್ಲಿದೆ.

ವಿಪರ್ಯಾಸವೆಂದರೆ, ನಕಲಿ ಗೋರಕ್ಷಕನೂ ತಾನು ಮಾಡಿದ ತಪ್ಪಿಗೆ ವಿಷಾದ ಸೂಚಿಸಿದ್ದಾನಂತೆ. ಕೊಲೆಯಾದ ವಿದ್ಯಾರ್ಥಿ ಆರ್ಯನ್ ಮಿಶ್ರಾ ಅವರ ತಂದೆಯು ‘ತನ್ನ ಮಗನನ್ನು ಯಾಕೆ ಕೊಂದೆ?’ ಎಂದು ಕೇಳಲು ಅಪರಾಧಿಯನ್ನು ಬಂಧಿಸಿದ್ದ ಜೈಲಿಗೆ ಹೋಗಿದ್ದರಂತೆ. ಆಗ ಅವರ ಪಾದ ಮುಟ್ಟಿ ಕ್ಷಮೆಯಾಚಿಸಿದ ಗೋರಕ್ಷಕ ವೇಷದಲ್ಲಿದ್ದ ನರಭಕ್ಷಕ ‘‘ನಾನು ಮುಸ್ಲಿಮ್ ಎಂದು ಭಾವಿಸಿ ಗುಂಡು ಹಾರಿಸಿದೆ. ಕಾರಿನಲ್ಲಿರುವುದು ಹಿಂದೂ ಎಂದು ಗೊತ್ತಿರಲಿಲ್ಲ. ಬ್ರಾಹ್ಮಣನೊಬ್ಬನನ್ನು ಕೊಂದದ್ದಕ್ಕೆ ನನಗೆ ವಿಷಾದವಿದೆ’’ ಎಂದು ಪಶ್ಚಾತ್ತಾಪ ಪಟ್ಟನಂತೆ. ಜಿಲ್ಲಾ ಪೊಲೀಸರು ಕೂಡ ಹೇಳಿಕೆ ನೀಡುವ ಸಂದರ್ಭದಲ್ಲಿ ‘‘ಆರೋಪಿಗೆ ಕಾರಿನಲ್ಲಿರುವುದು ಹಿಂದೂ ಎಂದು ಗೊತ್ತಿರಲಿಲ್ಲ’’ ಎಂದು ಹೇಳಿಕೆ ನೀಡಿದ್ದಾರೆ. ಇಲ್ಲಿ ಕೊಂದದ್ದು ತಪ್ಪಲ್ಲ. ಒಂದು ವೇಳೆ ಕಾರಿನಲ್ಲಿ ಮುಸ್ಲಿಮ್ ಯುವಕನೋ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಕುಟುಂಬವೋ ಇರುತ್ತಿದ್ದರೆ ಕೊಲೆ ಮಾನ್ಯವಾಗಿಬಿಡುತ್ತಿತ್ತು. ಅಂದರೆ ಕೊಲ್ಲುವವನ ಉದ್ದೇಶ, ಗೋರಕ್ಷಣೆ ಖಂಡಿತ ಅಲ್ಲ. ಅವನ ಗುರಿ, ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಈ ಹಿಂದೆ ಹರ್ಯಾಣದಲ್ಲಿ ಗೋಸಾಗಣೆಯ ಹೆಸರಿನಲ್ಲಿ, ಗೋಮಾಂಸ ಸೇವನೆಯ ಹೆಸರಿನಲ್ಲಿ ಹಲವು ಅಮಾಯಕ ಮುಸ್ಲಿಮರ ಮೇಲೆ ಹಲ್ಲೆಗಳಾಗಿವೆ. ಹತ್ಯೆಗಳೂ ಆಗಿವೆ. ಅವರು ಅಕ್ರಮವಾಗಿ ಗೋಸಾಗಾಟ ಮಾಡಿರಲಿ, ಮಾಡದೇ ಇರಲಿ. ಗೋಮಾಂಸ ಸೇವನೆ ಮಾಡಿರಲಿ ಮಾಡದೇ ಇರಲಿ. ಹಲ್ಲೆಗೊಳಗಾದವರು, ಹತ್ಯೆಗೀಡಾದವರ ಹೆಸರು ಮುಸ್ಲಿಮನದೇ ಆಗಿದ್ದರೆ ಅಪರಾಧ ಸಾಬೀತಾಗಬೇಕಾಗಿಲ್ಲ ಮತ್ತು ಶಿಕ್ಷೆ ನೀಡಲು ನ್ಯಾಯಾಲಯದ ಅಗತ್ಯವೂ ಇಲ್ಲ. ಆರ್ಯನ್ ಮಿಶ್ರಾ ಹತ್ಯೆಯಲ್ಲಿ ಆರೋಪಿಯ ‘ವಿಷಾದ’ ಇದನ್ನು ಸ್ಪಷ್ಟ ಪಡಿಸಿದೆ.

ಈ ದೇಶದಲ್ಲಿ ಸಕ್ರಮವಾಗಿ ನೀವು ಜಾನುವಾರುಗಳನ್ನು ಸಾಗಿಸಬೇಕಾದರೂ, ಸರಕಾರ ಸಾಕಿದ ಈ ರೌಡಿಗಳು, ಗೂಂಡಾಗಳ ಮಾನ್ಯತೆ ಸಿಗಲೇ ಬೇಕಾಗುತ್ತದೆ. ಇಲ್ಲದೇ ಇದ್ದರೆ, ಅವರು ರೈತರ ಮೇಲೆ ಗುಂಡು ಹಾರಿಸಬಹುದು, ವಾಹನಗಳನ್ನು ದಹಿಸಬಹುದು. ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂಬ ಅನುಮಾನ ಬಂದರೂ ಅವರು ದಾಳಿಗಳನ್ನು ಮಾಡಬಹುದು. ಆದರೆ ಇದೀಗ ವಾಹನದಲ್ಲಿ ಮುಸ್ಲಿಮರು ಸಾಗುತ್ತಿದ್ದಾರೆ ಎಂಬ ಅನುಮಾನ ಬಂದರೂ ಈ ನಕಲಿ ಗೋರಕ್ಷಕರು ಗುಂಡು ಹಾರಿಸಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಆ ವಾಹನದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದವರ ಬದಲಿಗೆ ಬ್ರಾಹ್ಮಣರೋ, ಹಿಂದುಳಿದ ವರ್ಗದವರೋ ಇದ್ದರೆ ಅದೊಂದು ಪ್ರಮಾದವಷ್ಟೇ. ‘ವೇಗವಾಗಿ ವಾಹನ ಸಾಗುವಾಗ ನಾಯಿಮರಿ ಅಡ್ಡ ಬಂದಾಗ ಅದು ಸಾಯುವುದು ಸಹಜ’ ಎಂದು ಹಿಂದೆ ಪ್ರಧಾನಿ ಮೋದಿಯವರು ನೀಡಿದ ಉದಾಹರಣೆಯೊಂದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕು. ಆದರೆ ಈ ಸಮರ್ಥನೆಯನ್ನು ಆರ್ಯನ್ ಮಿಶ್ರಾ ಅವರ ತಾಯಿ ಉಮಾ ಮಿಶ್ರಾ ಅವರು ಒಪ್ಪಿಕೊಂಡಿಲ್ಲ ಎನ್ನುವುದು ಸಮಾಧಾನದ ವಿಷಯ. ‘‘ನನ್ನ ಮಗ ಮುಸ್ಲಿಮ್ ಎಂದುಕೊಂಡು ಕೊಂದರಂತೆ. ಮುಸ್ಲಿಮರಿಗಾದರೆ ಗುಂಡು ಹೊಡೆಯುವುದು ಯಾಕೆ? ಅವರು ಮನುಷ್ಯರಲ್ಲವಾ?’’ ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಕೊಲೆಯಾದ ಆರ್ಯನ್ ಮಿಶ್ರಾ ಅವರ ತಂದೆ ಸಿಯಾನಂದ ಮಿಶ್ರಾ ಅವರು ‘‘ಈ ಗೋರಕ್ಷಕರಿಗೆ ಬೇಕಾಬಿಟ್ಟಿ ಸ್ವಾತಂತ್ರ್ಯ ನೀಡಿದ್ದರಿಂದಲೇ ಅವರು ಜನರ ಮೇಲೆ ಗುಂಡು ಹಾರಿಸಲು ಅಕ್ರಮ ಬಂದೂಕುಗಳನ್ನು ಬಳಸುತ್ತಿದ್ದಾರೆ. ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಈ ಅಕ್ರಮ ನಿಲ್ಲಬೇಕು. ನಾನಿದನ್ನು ಒಪ್ಪಲಾರೆ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋರಕ್ಷಕ ವೇಷದ ನರಭಕ್ಷಕರಿಂದ ಕೊಲೆಯಾದ ಅಮಾಯಕರ ತಾಯಂದಿರ ನೋವಿಗೆ ಧರ್ಮದ ಹಂಗಿಲ್ಲ.

ನಕಲಿ ಗೋರಕ್ಷಕರನ್ನು ತಡೆಯಲು ಸಾಧ್ಯವೇ ಇಲ್ಲ ಎಂದರೆ ಹರ್ಯಾಣ ಸೇರಿದಂತೆ ದೇಶದ ಎಲ್ಲ ರಾಜ್ಯ ಸರಕಾರಗಳಿಗೂ ಒಂದು ಅವಕಾಶವಿದೆ. ಅದೆಂದರೆ, ಎಲ್ಲ ನಕಲಿ ಗೋರಕ್ಷಕರನ್ನು ಅಧಿಕೃತವಾಗಿ ಪೊಲೀಸ್ ಇಲಾಖೆಯ ಭಾಗವಾಗಿ ಘೋಷಿಸುವುದು ಮತ್ತು ಅವರೆಲ್ಲರಿಗೂ ಸರಕಾರದಿಂದ ಪರವಾನಿಗೆ ಸಹಿತವಾದ ಪಿಸ್ತೂಲ್‌ಗಳನ್ನೇ ನೀಡುವುದು. ಕನಿಷ್ಠ ಕೊಲೆಯಾಗುವವರಿಗೆ ತಾನು ಯಾರಿಂದ ಕೊಲೆಯಾಗುತ್ತಿದ್ದೇನೆ ಎನ್ನುವುದರ ಬಗ್ಗೆ ಇರುವ ಗೊಂದಲವಾದರೂ ನಿವಾರಣೆಯಾಗಬಹುದು. ಅಥವಾ ಪೊಲೀಸ್ ಇಲಾಖೆಯನ್ನು ಬರ್ಖಾಸ್ತು ಮಾಡಿ ಆ ಜಾಗದಲ್ಲಿ ಈ ನಕಲಿ ಗೋರಕ್ಷಕರನ್ನೇ ಕಾನೂನು ಪಾಲಕರಾಗಿ ನೇಮಕ ಮಾಡುವುದು. ಕನಿಷ್ಠ ಅಮಾಯಕರು ನ್ಯಾಯಕ್ಕಾಗಿ ಪೊಲೀಸರನ್ನು ನಂಬಿ ಮೋಸಹೋಗುವುದಾದರೂ ಇದರಿಂದ ತಪ್ಪುತ್ತದೆ. ಇದೇ ಸಂದರ್ಭದಲ್ಲಿ ಹೈನೋದ್ಯಮ ನಡೆಸುವುದನ್ನೇ ಅಕ್ರಮ ಎಂದು ಘೋಷಿಸುವುದು. ಈ ಮೂಲಕ, ಕನಿಷ್ಠ ರೈತರ ಜೀವವನ್ನು ರಕ್ಷಿಸಿದಂತಾಗುತ್ತದೆ ಅಥವಾ ಗೋರಕ್ಷಕರ ಕೈಗೇ ದನ ಸಾಕುವ ಹೊಣೆಗಾರಿಕೆಯನ್ನು ನೀಡುವುದು. ಹರ್ಯಾಣದಂತಹ ರಾಜ್ಯಗಳಲ್ಲಿ ನಿರುದ್ಯೋಗ ತುಂಬಿ ತುಳುಕುತ್ತಿದೆ. ಇತ್ತೀಚೆಗೆ ಕಸ ಗುಡಿಸುವ ಹುದ್ದೆಗಳಿಗೆ 46,000 ಮಂದಿ ಸ್ನಾತಕೋತ್ತರ ಮತ್ತು ಪದವೀಧರ ಅಭ್ಯರ್ಥಿಗಳು ಈ ರಾಜ್ಯದಲ್ಲಿ ಅರ್ಜಿ ಹಾಕಿದ್ದರಂತೆ. ಪದವಿ, ಸ್ನಾತಕೋತ್ತರ ಪದವಿಯನ್ನು ಮಾಡಿ ಕಸ ಗುಡಿಸುವ ಕೆಲಸ ಮಾಡುವುದಕ್ಕಿಂತ ಯಾವುದೇ ಶಿಕ್ಷಣವನ್ನು ಪಡೆಯದೆಯೇ ‘ಗೋರಕ್ಷಣೆ’ಯ ಹೆಸರಿನಲ್ಲಿ ಲೂಟಿ, ದರೋಡೆ, ಹತ್ಯೆಗಳನ್ನು ಮಾಡುತ್ತಾ ‘ ಹಿಂದೂ ರಕ್ಷಕರಾಗಿ’ ಗುರುತಿಸಿಕೊಳ್ಳುವುದು ಅತ್ಯುತ್ತಮ ಎಂದು ಯುವಕರಿಗೆ ಅನ್ನಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಒಂದಂತೂ ನಿಜ. ಮುಸ್ಲಿಮರೆಂದು ಅನುಮಾನಿಸಿ ನಕಲಿ ಗೋರಕ್ಷಕರು ಈ ಬಾರಿ ಬ್ರಾಹ್ಮಣ ಯುವಕನನ್ನು ಕೊಂದಿದ್ದಾರೆ. ಮುಂದಿನ ದಿನಗಳಲ್ಲಿ ತಮಗೆ ಯಾರನ್ನು ಕೊಲ್ಲಬೇಕು ಎಂದು ಅನ್ನಿಸುತ್ತದೆಯೋ ಅವರನ್ನು ಕೊಂದು, ಬಳಿಕ ಅದನ್ನು ‘ಪ್ರಮಾದ’ವೆಂದು ಘೋಷಿಸುತ್ತಾರೆ. ದುಷ್ಕರ್ಮಿಗಳಿಂದ ಕೊಲೆಯಾಗಿರುವ ಅಮಾಯಕರು ಯಾವುದೇ ಧರ್ಮಕ್ಕೆ ಸೇರಿರಲಿ, ಅದರ ವಿರುದ್ಧ ಎಲ್ಲ ಜಾತಿ, ಧರ್ಮದ ಜನರು ಒಂದಾಗಿ ಧ್ವನಿಯೆತ್ತಿದಾಗ ಮಾತ್ರ ನಾವು ಅಪರಾಧ ಮುಕ್ತ ಸಮಾಜವನ್ನು ಕಟ್ಟಲು ಸಾಧ್ಯ. ಇಂದು ಭಾರತಕ್ಕೆ ಬೇಕಾಗಿರುವುದು ಗೋರಕ್ಷಕರಲ್ಲ, ಮನುಷ್ಯತ್ವದ ರಕ್ಷಕರು. ಮನುಷ್ಯರ ರಕ್ಷಣೆಯೇ ಸಾಧ್ಯವಿಲ್ಲ ಎನ್ನುವ ಸಮಾಜದಲ್ಲಿ ದನ, ಕರು, ಹುಲಿ, ಸಿಂಹ, ಚಿರತೆಗಳನ್ನು ರಕ್ಷಿಸುವುದು ಸಾಧ್ಯವಾಗುವ ಮಾತೆ? ಮನುಷ್ಯರನ್ನು ನಡುಬೀದಿಯಲ್ಲಿ ಕೊಂದು ಹಾಕುವ ಜನರು ಗೋವುಗಳನ್ನು ರಕ್ಷಿಸುತ್ತಾರೆ ಎನ್ನುವುದೇ ಒಂದು ವ್ಯಂಗ್ಯವಲ್ಲವೆ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News