ಉಕ್ರೇನ್ ಮೇಲಿರುವ ಪ್ರೀತಿ ಮೋದಿಗೆ ಮಣಿಪುರದ ಮೇಲೆ ಯಾಕಿಲ್ಲ?

Update: 2023-09-30 04:52 GMT

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಪ್ರಧಾನಿ ಮೋದಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ಭಾರತದಲ್ಲಿ ನಡೆದ ಶೃಂಗ ಸಭೆ ಯಶಸ್ವಿಯಾಗಿದೆ ಎಂದು ಪ್ರಧಾನಿ ಮೋದಿ ನೂತನ ಸಂಸತ್‌ನ ವಿಶೇಷ ಅಧಿವೇಶನದಲ್ಲಿ ಘೋಷಿಸಿದ್ದಾರೆ. ಇದರಿಂದ ಭಾರತದ ವರ್ಚಸ್ಸು ವಿಶ್ವದಲ್ಲಿ ಹೆಚ್ಚಿದೆ ಎಂದೂ ಹೇಳಿಕೊಂಡಿದ್ದಾರೆ. ಈ ಬಾರಿಯ ಶೃಂಗಸಭೆಯಲ್ಲಿ ಉಕ್ರೇನ್ ಮೇಲಿನ ದಾಳಿಯ ಬಗ್ಗೆ ಭಾರತ ತಳೆದ ನಿಲುವು ಪ್ರಧಾನವಾಗಿತ್ತು. ಭಾರತದ ಜೊತೆಗೆ ಎಲ್ಲ ರಾಷ್ಟ್ರಗಳೂ ಕೈ ಜೋಡಿಸಿದ್ದವು. ಉಕ್ರೇನ್ ಮೇಲಿನ ಯುದ್ಧದ ಕುರಿತಂತೆ ಭಾರತ ಹೊಂದಿರುವ ಕಾಳಜಿ, ತನ್ನದೇ ದೇಶದ ಭಾಗವಾಗಿರುವ ಮಣಿಪುರದ ಮೇಲೆ ಯಾಕಿಲ್ಲ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಕಳೆದೆರಡು ದಿನಗಳಿಂದ ಮತ್ತೆ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ‘‘ಮಣಿಪುರದಲ್ಲಿ ಪರಿಸ್ಥಿತಿ ತಹಬದಿಗೆ ಬಂದಿದೆ. ಕಾನೂನುಸುವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ’’ ಎಂದು ಪ್ರಧಾನಿ ಮೋದಿಯವರು ವಿಶ್ವಕ್ಕೆ ನೀಡಿದ ಭರವಸೆ ಹುಸಿಯಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಮಾನವ ಹಕ್ಕು ದಮನಗಳ ಬಗ್ಗೆ ವಿಶ್ವಸಂಸ್ಥೆ ವ್ಯಕ್ತ ಪಡಿಸಿರುವ ಆಕ್ಷೇಪಗಳನ್ನು ಭಾರತ ನಿರಾಕರಿಸಿದ ಎರಡು ವಾರಗಳ ಬಳಿಕ ಹಿಂಸೆ ಇನ್ನಷ್ಟು ತಾರಕಕ್ಕೇರಿದೆ.

ಮಣಿಪುರದ ವಿಷಯದಲ್ಲಿ ಹಿಂಸಾಚಾರವನ್ನು ನಿಯಂತ್ರಿಸುವ ಬದಲಿಗೆ ನಡೆಯುತ್ತಿರುವ ಹಿಂಸಾಚಾರವನ್ನು ಜಗತ್ತಿಗೆ ಮುಚ್ಚಿಡುವ ಕೆಲಸವನ್ನಷ್ಟೇ ಸರಕಾರ ಮಾಡುತ್ತಿದೆ. ಯಾಕೆಂದರೆ ಮಣಿಪುರದ ಹಿಂಸಾಚಾರದ ಹಿಂದೆ ರಾಜಕೀಯ ಶಕ್ತಿಗಳ ನೇರ ಕೈವಾಡವಿದೆ. ಅದರಲ್ಲೂ ಮುಖ್ಯವಾಗಿ ರಾಜ್ಯ ಸರಕಾರದ ಕುಮ್ಮಕ್ಕಿನಿಂದಲೇ ಮಣಿಪುರದಲ್ಲಿ ಗಲಭೆ ಭುಗಿಲೆದ್ದಿದೆ ಎಂದು ಆರೋಪಿಸಲಾಗುತ್ತಿದೆ. ಸ್ಥಳೀಯ ಕುಕಿ ಬುಡಕಟ್ಟು ಸಮುದಾಯದ ವಿರುದ್ಧ ಮೆತೈ ಸಮುದಾಯವನ್ನು ಎತ್ತಿ ಕಟ್ಟಿರುವುದು ಬಿಜೆಪಿ ಮತ್ತು ಸಂಘಪರಿವಾರ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಬುಡಕಟ್ಟು ಸಮುದಾಯಕ್ಕೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಮೆತೈ ಸಮುದಾಯಕ್ಕೆ ವಿಸ್ತರಿಸಲು ಸರಕಾರ ನಡೆಸಿದ ಪ್ರಯತ್ನ ಅಂತಿಮವಾಗಿ ಹಿಂಸಾಚಾರಗಳಿಗೆ ಕಾರಣವಾಯಿತು. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅತ್ಯಧಿಕ ಪ್ರಾತಿನಿಧ್ಯವುಳ್ಳ ಮೈತಿ ಸಮುದಾಯವನ್ನು ಕುಕಿ ಸಮುದಾಯದ ವಿರುದ್ಧ ಎತ್ತಿ ಕಟ್ಟಿ ಅದನ್ನು ‘ಹಿಂದೂ-ಕ್ರಿಶ್ಚಿಯನ್’ ನಡುವಿನ ಸಂಘರ್ಷವಾಗಿ ಪರಿವರ್ತಿಸಿದ್ದು ಸ್ಥಳೀಯ ಸಂಘಪರಿವಾರ ರಾಜಕಾರಣ. ನೂರಾರು ಜನರ ಕಗ್ಗೊಲೆಗಳು, ಮಹಿಳೆಯರ ಬೆತ್ತಲೆಮೆರವಣಿಗೆ, ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಗಳು ಮಣಿಪುರದಾಚೆಗೆ ಭಾರತದ ಜನರಿಗೇ ಗೊತ್ತಾಗಲು ಸುಮಾರು ಒಂದು ತಿಂಗಳು ಹಿಡಿಯಿತು. ಅಂದರೆ ಸರಕಾರ ಹಿಂಸಾಚಾರಗಳನ್ನು ವ್ಯವಸ್ಥಿತವಾಗಿ ಮುಚ್ಚಿಡುತ್ತಾ ಅವುಗಳನ್ನು ಪ್ರೋತ್ಸಾಹಿಸಿತು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ವಿಶ್ವಸಂಸ್ಥೆಯೂ ಸೇರಿದಂತೆ ವಿಶ್ವದ ಹಲವು ದೇಶಗಳು ಧ್ವನಿಯೆತ್ತಿವೆ. ಆದರೆ ಅದರ ವಿರುದ್ಧ ಭಾರತ ಆಕ್ಷೇಪ ವ್ಯಕ್ತಪಡಿಸಿದೆ ಮಾತ್ರವಲ್ಲ, ಮಣಿಪುರದಲ್ಲಿ ಎಲ್ಲವೂ ಶಾಂತವಾಗಿದೆ ಎಂದು ಹೇಳಿ ತನ್ನ ಮಾನವನ್ನು ಉಳಿಸಿಕೊಳ್ಳಲು ನೋಡಿತು. ಆದರೆ ಮಣಿಪುರದ ಬೆಂಕಿ ಆರಿಲ್ಲ ಎನ್ನುವುದನ್ನು ಕಳೆದೆರಡು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ಜಗತ್ತಿಗೆ ಬಹಿರಂಗಪಡಿಸಿದೆ. ತಾನೇ ಹಚ್ಚಿದ ಬೆಂಕಿಯನ್ನು ಇದೀಗ ಆರಿಸಲು ಸಾಧ್ಯವಾಗದೆ ಬಿಜೆಪಿ ಸರಕಾರ ಒದ್ದಾಡುತ್ತಿದೆ.

ಇಬ್ಬರು ವಿದ್ಯಾರ್ಥಿಗಳ ನಾಪತ್ತೆ ಪ್ರಕರಣ ತಿರುವು ಪಡೆದಿರುವುದು ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೇಳುವುದಕ್ಕೆ ಕಾರಣವಾಗಿದೆ. ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹದ ಪೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳೆದ ಮೇ ತಿಂಗಳಲ್ಲಿ ಕುಕಿ ಮಹಿಳೆಯರ ಮೇಲೆ ಬರ್ಬರ ದಾಳಿಗಳು ನಡೆಯುವುದಕ್ಕೂ ಸಾಮಾಜಿಕ ಜಾಲತಾಣಗಳೇ ಕಾರಣವಾಗಿದ್ದವು. ಮೆತೈ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರಗೈಯಲಾಗಿದೆ ಎನ್ನುವ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿ ಅಂತಿಮವಾಗಿ ಅದು ಕುಕಿ ಸಮುದಾಯದ ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರಗಳಿಗೆ ನೆಪವಾಯಿತು. ಇದೀಗ ಮೃತ ವಿದ್ಯಾರ್ಥಿಗಳು ಕೂಡ ಮೆತೈ ಸಮುದಾಯಕ್ಕೆ ಸೇರಿದವರು. ಈ ವಿದ್ಯಾರ್ಥಿಗಳನ್ನು ಸಶಸ್ತ್ರ ಪಡೆಗಳು ಗುಂಡಿಟ್ಟುಕೊಂದಿವೆ ಎನ್ನುವ ವದಂತಿಗಳೂ ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ಕುಕಿ ದುಷ್ಕರ್ಮಿಗಳ ಗುಂಪು ವಿದ್ಯಾರ್ಥಿಗಳನ್ನು ಹತ್ಯೆಗೈದ ಬಗ್ಗೆಯೂ ಸುದ್ದಿಗಳನ್ನು ಹರಡಲಾಗುತ್ತಿದೆ. ಸಂಘಟನಾತ್ಮಕವಾಗಿ ಮೆತೈ ಸಮುದಾಯ ಬಲಾಢ್ಯವಾಗಿರುವುದರಿಂದ ಈ ವಿದ್ಯಾರ್ಥಿಗಳ ಸಾವು ಮಣಿಪುರದ ಸ್ಥಿತಿಯನ್ನು ಇನ್ನಷ್ಟು ಭೀಕರವಾಗಿಸುವ ಸಾಧ್ಯತೆಗಳು ಕಾಣುತ್ತಿವೆ.

ಇದೇ ಸಂದರ್ಭದಲ್ಲಿ ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಆಫ್‌ಸ್ಪಾ)ವನ್ನು ವಿಸ್ತರಿಸಲಾಗಿದೆ. ಕುಕಿ ಸಮುದಾಯ ಬಹುಸಂಖ್ಯಾತವಾಗಿರುವ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಈ ಸರ್ವಾಧಿಕಾರಿ ಪಡೆಗಳನ್ನು ನೇಮಿಸಲಾಗಿದೆ ಎನ್ನುವ ಆರೋಪಗಳನ್ನು ಕುಕಿ ಸಂಘಟನೆಗಳು ಮಾಡುತ್ತಿವೆ. ಸರಕಾರ ಮೈತಿ ಸಮುದಾಯಗಳು ಬಹುಸಂಖ್ಯಾತವಾಗಿರುವ ಪ್ರದೇಶಗಳಲ್ಲಿ ಮೃದು ನಿಲುವನ್ನು ಅನುಸರಿಸುತ್ತಿದೆ ಎನ್ನಲಾಗುತ್ತಿದೆ. ‘‘ಮಣಿಪುರದ ಇಂದಿನ ಸ್ಥಿತಿಗೆ ಪ್ರಧಾನಿ ಮೋದಿಯವರ ನಿರ್ಲಕ್ಷ್ಯವೇ ಮುಖ್ಯ ಕಾರಣ. ಮಣಿಪುರದ ಇಂದಿನ ಸ್ಥಿತಿಯನ್ನು ಮೋದಿ ಮತ್ತು ಅಮಿತ್ ಶಾ ಹೊತ್ತುಕೊಳ್ಳಬೇಕು’’ ಎಂದು ‘ವಿಕಲ್ಪ ಸಂಗಮ್’ ಸಂಘಟನೆ ಆರೋಪಿಸಿದೆ. ಕೇಂದ್ರೀಯ ಪಡೆಗಳ ಉಪಸ್ಥಿತಿಯ ನಡುವೆಯೂ ದುಷ್ಕರ್ಮಿಗಳ ಗುಂಪು ಪೊಲೀಸ್ ಪಡೆಗಳ ಶಸ್ತ್ರಾಗಾರಕ್ಕೆ ಹಾಗೂ ಮನೆಗಳಿಗೆ ಬೆಂಕಿ ಹಚ್ಚುತ್ತಿರುವುದನ್ನು ಈ ಸಂಘಟನೆ ಉಲ್ಲೇಖಿಸಿದೆ. ಜಿಲ್ಲಾಧಿಕಾರಿ ಕಚೇರಿಯ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮಣಿಪುರದಲ್ಲಿ ಶಾಂತಿಯನ್ನು ಸ್ಥಾಪಿಸುವ ಇಚ್ಛಾಶಕ್ತಿಯೇ ಕೇಂದ್ರ ಸರಕಾರಕ್ಕಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಮಣಿಪುರದಲ್ಲಿರುವ ಈಗಿನ ಸರಕಾರವನ್ನು ತಕ್ಷಣ ವಜಾಗೊಳಿಸಬೇಕು. ಸೇನಾಪಡೆಗಳು ನಿಷ್ಪಕ್ಷವಾಗಿ ಗಲಭೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಮಣಿಪುರದ ಈ ಹಿಂಸಾಚಾರ ಇಡೀ ಈಶಾನ್ಯ ಭಾರತವನ್ನು ಪ್ರಕ್ಷುಬ್ಧಗೊಳಿಸಬಹುದು ಎನ್ನುವ ಎಚ್ಚರಿಕೆ ಯನ್ನಿಟ್ಟುಕೊಂಡು ಕೇಂದ್ರ ಸರಕಾರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News