ಪೌರ ಕಾರ್ಮಿಕನಿಗಿಂತ ರೌಡಿಶೀಟರ್‌ನ ಜೀವ ಹೆಚ್ಚು ಬೆಲೆಬಾಳುವುದೇಕೆ?

Update: 2023-07-12 06:52 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಗಲಭೆ, ಗುಂಪು ಹತ್ಯೆಯಂತಹ ಸಂದರ್ಭಗಳಲ್ಲಿ ಅರ್ಹ ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸ್ಪಷ್ಟವಾದ ಪರಿಹಾರ ನೀತಿಯೊಂದರ ಅಗತ್ಯ ಎದ್ದು ಕಾಣುತ್ತಿದೆ. ಯಾವ ಪ್ರಕರಣದಲ್ಲಿ ಪರಿಹಾರ ನೀಡಬೇಕು, ಪರಿಹಾರ ಪಡೆಯಲು ಸಂತ್ರಸ್ತರಿಗೆ ಇರಬೇಕಾದ ಅರ್ಹತೆಗಳು, ಎಷ್ಟು ಪರಿಹಾರ ನೀಡಬೇಕು ಮತ್ತು ಯಾವ ನಿಧಿಯಿಂದ ಪರಿಹಾರ ನೀಡಬೇಕು ಎನ್ನುವ ಬಗೆಗಿರುವ ಗೊಂದಲಗಳ ಲಾಭವನ್ನು, ಅನರ್ಹರು ತಮ್ಮದಾಗಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿವೆ. ಸರಕಾರ ನೀಡುತ್ತಿರುವ ಪರಿಹಾರದಲ್ಲಿ ಗೊಂದಲಗಳು, ಅನ್ಯಾಯಗಳು ಹೆಚ್ಚುತ್ತಿವೆ. ಅನರ್ಹರು ಸರಕಾರದಿಂದ ಹೆಚ್ಚು ಹೆಚ್ಚು ಪರಿಹಾರಗಳನ್ನು ಬಾಚಿಕೊಳ್ಳುತ್ತಿದ್ದರೆ, ಅರ್ಹ ಸಂತ್ರಸ್ತರು ಸರಕಾರದ ಯಾವ ನೆರವೂ ಸಿಗದೇ ಕಣ್ಣೀರಿನಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಜಕೀಯ ಸಂಪರ್ಕದಲ್ಲಿರುವ ರೌಡಿ ಶೀಟರ್‌ಗಳು ಪರಸ್ಪರ ಹೊಡೆದಾಡಿಕೊಂಡು ಸತ್ತರೆ ಅವರಿಗೆ ಪರಿಹಾರ ಕೊಡಿಸಲು ರಾಜಕೀಯ ಪಕ್ಷಗಳ ನಾಯಕರು ಬೀದಿಗಿಳಿಯುತ್ತಾರೆ. ಇವರಿಗೆ ನೀಡುವ ಪರಿಹಾರದ ಮೊತ್ತಕ್ಕೆ ಹೋಲಿಸಿದರೆ, ನಾಡಿಗಾಗಿ ಹುತಾತ್ಮರಾದ ಪೊಲೀಸರು, ಸೈನಿಕರು ಪೌರಕಾರ್ಮಿಕರಿಗೆ ನೀಡುವ ಮೊತ್ತ ಏನೇನೂ ಅಲ್ಲ. ಇದೇ ಸಂದರ್ಭದಲ್ಲಿ ಜಾತಿ, ಧರ್ಮದ ಆಧಾರಗಳಲ್ಲಿ ಪರಿಹಾರ ನೀಡುವ ಹೊಸ ಚಾಳಿಯೊಂದನ್ನು ಕಳೆದ ಬೊಮ್ಮಾಯಿ ನೇತೃತ್ವದ ಸರಕಾರ ಆರಂಭಿಸಿದೆ. ಪರಿಹಾರ ನೀಡುವ ಸಂದರ್ಭದಲ್ಲಿ ಸರಕಾರ ಅನುಸರಿಸುತ್ತಿರುವ ಇಂತಹ ಮಲತಾಯಿ ಧೋರಣೆಯ ವಿರುದ್ಧ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನೂ ದಾಖಲಿಸಲಾಗಿದ್ದು, ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ನ್ಯಾಯಾಲಯ ಸ್ಪಷ್ಟೀಕರಣವನ್ನೂ ಕೇಳಿದೆ.

ಕೋಮುಗಲಭೆ ಸೃಷ್ಟಿಸಲೆಂದೇ ದುಷ್ಕರ್ಮಿಗಳು ಅಮಾಯಕ ಶ್ರೀಸಾಮಾನ್ಯರನ್ನು, ಕಾರ್ಮಿಕರನ್ನು, ಬೀದಿ ವ್ಯಾಪಾರಿಗಳನ್ನು ಹತ್ಯೆ ನಡೆಸಿದ ಸಂದರ್ಭದಲ್ಲಿ ಪ್ರಕರಣಕ್ಕೆ ನ್ಯಾಯ ಸಿಗಬೇಕಾದರೆ ಆರೋಪಿಗಳನ್ನು ಬಂಧಿಸಿ ಶಿಕ್ಷಿಸುವುದು ಮಾತ್ರವಲ್ಲ, ಬಲಿಯಾದ ಅಮಾಯಕರ ಕುಟುಂಬಕ್ಕೆ ಪರಿಹಾರವನ್ನು ನೀಡುವುದು ಅತ್ಯಗತ್ಯ. ಜನರ ಮಾನ, ಪ್ರಾಣಗಳಿಗೆ ಭದ್ರತೆ ನೀಡುವುದಕ್ಕಾಗಿಯೇ ಜನಸಾಮಾನ್ಯರ ತೆರಿಗೆಯ ಕೋಟ್ಯಂತರ ಹಣವನ್ನು ಪೊಲೀಸ್ ಇಲಾಖೆಗಳಿಗೆ ವ್ಯಯ ಮಾಡಲಾಗುತ್ತದೆ. ಈ ಕಾರಣಕ್ಕಾಗಿಯೇ, ಅಮಾಯಕರು ದುಷ್ಕರ್ಮಿಗಳಿಂದ ಹತ್ಯೆಗೀಡಾದಾಗ ಅದರ ಹೊಣೆಯನ್ನು ಸರಕಾರ ಹೊತ್ತುಕೊಳ್ಳಬೇಕು ಮಾತ್ರವಲ್ಲ, ಅವರಿಗೆ ಪರಿಹಾರವನ್ನು ನೀಡುವ ವ್ಯವಸ್ಥೆಯನ್ನು ತಕ್ಷಣವೇ ಮಾಡಬೇಕು. ಇದೇ ಸಂದರ್ಭದಲ್ಲಿ, ಸಮಾಜದಲ್ಲಿ ಉದ್ವಿಗ್ನತೆ, ಕೋಮುಗಲಭೆಗಳನ್ನು ಸೃಷ್ಟಿಸುವುದಕ್ಕಾಗಿಯೇ ಸಂಘಟನೆಗಳನ್ನು ಕಟ್ಟಿ ಅದರ ಕಾರ್ಯಕರ್ತರು, ಮುಖಂಡರು ಎಂದು ಓಡಾಡುವ ದುಷ್ಕರ್ಮಿಗಳ ಗುಂಪುಗಳು ಸಮಾಜದಲ್ಲಿ ಸಕ್ರಿಯವಾಗಿವೆ. ವಿವಿಧ ರಾಜಕೀಯ ಪಕ್ಷಗಳೊಂದಿಗೆ ಇವರು ನಂಟನ್ನು ಹೊಂದಿದ್ದಾರೆ. ಜಾತಿ, ಧರ್ಮಗಳ ಹೆಸರಿನಲ್ಲಿ ಅಮಾಯಕರನ್ನು ಕೊಂದು ಗಲಭೆಗಳನ್ನು ಸೃಷ್ಟಿಸಿ ರಾಜಕೀಯ ಲಾಭ ಮಾಡಿಕೊಡುವುದಕ್ಕಾಗಿಯೇ ರಾಜಕೀಯ ನಾಯಕರು ಇವರನ್ನು ಸಾಕಿರುತ್ತಾರೆ. ಇವರು ಕೆಲವೊಮ್ಮೆ ತಮ್ಮೆಳಗೆ ಹೊಡೆದಾಡಿಕೊಂಡು ಸಾಯುವುದಿದೆ. ಇಂತಹ ಸಂದರ್ಭದಲ್ಲಿ ಸರಕಾರ ಇವರಿಗೆ ಪರಿಹಾರ ನೀಡುವುದು ಸರಿಯೆ? ಎನ್ನುವ ಪ್ರಶ್ನೆಯೊಂದು ಇದೀಗ ಮುನ್ನೆಲೆಗೆ ಬಂದಿದೆ. ಎರಡು ದಿನಗಳ ಹಿಂದೆ ತೀ ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನೊಬ್ಬ ತನ್ನದೇ ಸಂಘಟನೆಯ ಗುಂಪಿನಿಂದ ಬರ್ಬರವಾಗಿ ಹತ್ಯೆಗೀಡಾದಾಗ, ಬಿಜೆಪಿ ನಾಯಕರು ಬೀದಿಗಿಳಿದು ಸಂತ್ರಸ್ತನಿಗೆ ಪರಿಹಾರವನ್ನು ನೀಡಲು ಒತ್ತಾಯಿಸಿದರು. ರಾಜಕೀಯ ನಂಟಿದೆ ಎನ್ನುವ ಒಂದೇ ಕಾರಣಕ್ಕಾಗಿ ವೈಯಕ್ತಿಕ ವೈಷಮ್ಯಗಳ ಕಾರಣದಿಂದ ಹತ್ಯೆಯಾದವರಿಗೆ ಪರಿಹಾರವನ್ನು ನೀಡುತ್ತಾ ಹೋದರೆ ಸರಕಾರದ ಬೊಕ್ಕಸದ ಎಲ್ಲ ಹಣವನ್ನು ಈ ಪರಿಹಾರಕ್ಕಾಗಿಯೇ ಮೀಸಲಿಡಬೇಕಾಗುತ್ತದೆ.

ಮೊತ್ತ ಮೊದಲು ಹತ್ಯೆ, ಹತ್ಯೆಯತ್ನದಂತಹ ಆರೋಪಗಳನ್ನು ಹೊಂದಿರುವ ಯಾವುದೇ ರೌಡಿಶೀಟರ್‌ಗಳು ಸಂತ್ರಸ್ತರಾದರೂ ಅವರ ಕುಟುಂಬಕ್ಕೆ ಸರಕಾರ ಪರಿಹಾರವನ್ನು ನೀಡಬಾರದು. ರಾಜಕೀಯ ಸಂಘಟನೆಯೊಳಗಿದ್ದು ಪರಸ್ಪರ ವೈಷಮ್ಯ, ದ್ವೇಷಗಳ ಕಾರಣದಿಂದ ಹೊಡೆದಾಡಿಕೊಂಡು ಹತ್ಯೆಯಾದವರಿಗೂ ಸರಕಾರ ವೈಯಕ್ತಿಕ ನೆಲೆಯಲ್ಲಿ ಪರಿಹಾರವನ್ನು ಕೊಡುವುದು ಪರೋಕ್ಷವಾಗಿ ನಾಡಿನಲ್ಲಿ ಕ್ರಿಮಿನಲ್ ಕೃತ್ಯಗಳನ್ನು ಹಣ ನೀಡಿ ಪೋಷಿಸಿದಂತಾಗುತ್ತದೆ. ಅಮಾಯಕರು ಬಲಿಯಾದಾಗ ಮಾತ್ರ ಅವರಿಗಾಗಿ ಸರಕಾರ ಮಿಡಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅರ್ಹರನ್ನು ಗುರುತಿಸಲು ಸರಕಾರದ ಬಳಿ ಸ್ಪಷ್ಟ ಮಾನದಂಡವೊಂದು ಇರಬೇಕು. ಆ ಮಾನದಂಡದ ಆಧಾರದಲ್ಲಿ ಸಮಿತಿ ಪರಿಶೀಲಿಸಿ ಪರಿಹಾರವನ್ನು ನೀಡಬೇಕಾಗಿದೆ. ಇದೇ ಸಂದರ್ಭದಲ್ಲಿ ಯಾರಿಗೆ? ಎಷ್ಟು ಪರಿಹಾರ? ಎನ್ನುವುದಕ್ಕೂ ಒಂದು ನೀತಿ ಸಂಹಿತೆಯ ಅಗತ್ಯವಿದೆ. ನಿರ್ದಿಷ್ಟ ಧರ್ಮಕ್ಕೆ ಸೇರಿದ, ರಾಜಕೀಯ ಗುಂಪುಗಳಿಗೆ ಸೇರಿದ ಕಾರ್ಯಕರ್ತರ ಹತ್ಯೆಯಾದಾಗ ಅವರಿಗೆ ಅಧಿಕ ಪರಿಹಾರವನ್ನು ನೀಡುವುದು, ಇದೇ ಸಂದರ್ಭದಲ್ಲಿ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ, ಜಾತಿ, ಧರ್ಮದ ಬಲವಿಲ್ಲದ ಅಮಾಯಕರು ಮೃತರಾದಾಗ ಜುಜುಬಿ ಪರಿಹಾರವನ್ನು ನೀಡುವಂತಹ ಪರಿಪಾಠ ಇನ್ನಾದರೂ ನಿಲ್ಲಬೇಕು. ಬೊಮ್ಮಾಯಿ ನೇತೃತ್ವದ ಸರಕಾರವಂತೂ ರಾಜಕೀಯ ಹಿನ್ನೆಲೆಯಿರುವ ಕಾರ್ಯಕರ್ತ ಹತ್ಯೆಯಾದಾಗ ಆತನಿಗೆ ಪರಿಹಾರದ ಹೊಳೆಯನ್ನೇ ಹರಿಸಿತು. ಇದೇ ಸಂದರ್ಭದಲ್ಲಿ ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎನ್ನುವ ಒಂದೇ ಕಾರಣಕ್ಕಾಗಿ ದುಷ್ಕರ್ಮಿಗಳಿಂದ ಹತ್ಯೆಯಾದ ಕೆಲವು ಅಮಾಯಕ ಯುವಕರ ಕುಟುಂಬಗಳಿಗೆ ಪರಿಹಾರವನ್ನೇ ನೀಡಲಿಲ್ಲ ಮಾತ್ರವಲ್ಲ, ಕನಿಷ್ಠ ಸಾಂತ್ವನ ಹೇಳುವ ಕೆಲಸವನ್ನೂ ಮಾಡಲಿಲ್ಲ. ಇದೇ ಸಂದರ್ಭದಲ್ಲಿ ಯಾವ ನಿಧಿಯಿಂದ ಪರಿಹಾರವನ್ನು ನೀಡಬೇಕು ಎನ್ನುವುದರ ಬಗ್ಗೆಯೂ ಸರಕಾರಕ್ಕೆ ಸ್ಪಷ್ಟತೆಯಿರಬೇಕು.

ಶಿವಮೊಗ್ಗ ನಗರದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಬಜರಂಗದಳ ಕಾರ್ಯಕರ್ತ, ರೌಡಿಶೀಟರ್ ಒಬ್ಬನಿಗೆ ಮುಖ್ಯಮಂತ್ರಿ ಬೊಮ್ಮಾಯಿಯವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ.ಯನ್ನು ನೀಡಿದ್ದರು. ಇದಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಯ ಅಂದಿನ ಅಧಿಕಾರಿಗಳು ತಮ್ಮ ತಕರಾರು ಎತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅಧಿಕಾರಿಗಳ ತಕರಾರನ್ನು ಬದಿಗಿಟ್ಟು ಹತ್ಯೆ ಸಂತ್ರಸ್ತರಿಗೆ ಮುಖ್ಯಮಂತ್ರಿ ನಿಧಿಯಿಂದ ಇತ್ತೀಚೆಗೆ ಪರಿಹಾರವನ್ನು ನೀಡಿದ್ದರು. ಸಾಧಾರಣವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ದುಡಿಯುವ ವ್ಯಕ್ತಿ ಅವಘಡಗಳಿಗೆ ಸಿಲುಕಿ ಮೃತಪಟ್ಟರೆ, ಯುದ್ಧದಲ್ಲಿ ಸೈನಿಕ ಸಾವನ್ನಪ್ಪಿದಾಗ ಪರಿಹಾರ ನೀಡಲಾಗುತ್ತದೆ. ವಿಪರ್ಯಾಸವೆಂದರೆ, ಈ ನಿಧಿಯಿಂದ ಒಬ್ಬ ಸೈನಿಕನಿಗೆ ಹೆಚ್ಚೆಂದರೆ 10ರಿಂದ 15 ಲಕ್ಷ ರೂ. ಪರಿಹಾರವನ್ನು ನೀಡಲಾಗುತ್ತಿತ್ತು. ಆದರೆ ಶಿವಮೊಗ್ಗದಲ್ಲಿ ಬಜರಂಗದಳದ ರೌಡಿಶೀಟರ್ ಹತ್ಯೆಯಾದಾಗ ಆತನಿಗೆ 25 ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ.

ಮತ, ಧರ್ಮ, ಜಾತಿ ವೈಷಮ್ಯದ ಸಂದರ್ಭದಲ್ಲಿ ಬಲಿಯಾಗುವ ಅಮಾಯಕರಿಗೆ ಪರಿಹಾರವನ್ನು ನೀಡುವುದು ಅತ್ಯಗತ್ಯ ನಿಜ. ಇದೇ ಸಂದರ್ಭದಲ್ಲಿ ಈ ನಾಡಿನ ಕ್ಷೇಮಕ್ಕಾಗಿ ಪ್ರಾಣ ಕಳೆದುಕೊಳ್ಳುವ ಜನರ ಬಗ್ಗೆಯೂ ಸರಕಾರ ತನ್ನ ಕಾಳಜಿ ವ್ಯಕ್ತಪಡಿಸಬೇಕಾಗಿದೆ. ಮ್ಯಾನ್‌ಹೋಲ್ ಶುಚಿಗೊಳಿಸುವುದಕ್ಕಾಗಿ ಇಳಿದು ಮೃತಪಡುವ ಕಾರ್ಮಿಕರು ಪತ್ರಿಕೆಗಳಲ್ಲಿ ಪದೇ ಪದೇ ಸುದ್ದಿಯಾಗುತ್ತಿರುತ್ತಾರೆ. ಆದರೆ ಇವರಿಗೆ ಸರಕಾರ ನೀಡುವ ಪರಿಹಾರ ಏನೇನೂ ಅಲ್ಲ. ಸಮಾಜದ ಶಾಂತಿಯನ್ನು ಕೆಡಿಸಿದ ಕಾರಣಕ್ಕಾಗಿ ಪೊಲೀಸರಿಂದ ರೌಡಿ ಶೀಟರ್ ಎಂದು ಗುರುತಿಸಲ್ಪಟ್ಟ ಯುವಕ ಸತ್ತಾಗ ಸರಕಾರ 25 ಲಕ್ಷ ರೂ. ಘೋಷಿಸುತ್ತದೆಯಾದರೆ, ಮ್ಯಾನ್‌ಹೋಲ್‌ನಲ್ಲಿ ಸಾಯುವ ಪೌರಕಾರ್ಮಿಕನಿಗೆ ಘೋಷಿಸುವ ಪರಿಹಾರ ಎಷ್ಟಿರಬೇಕು? ನಾಡಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಪೌರಕಾರ್ಮಿಕನ ಮುಂದೆ ಆ ರೌಡಿ ಶೀಟರ್ ಎಷ್ಟರವನು? ಅಷ್ಟೇ ಏಕೆ? ಅತಿವೃಷ್ಟಿಯಿಂದ ಮನೆ,ಮಠ, ಜಮೀನು, ಬೆಳೆ ಕಳೆದುಕೊಳ್ಳುವ ರೈತರಿಗೆ ಪರಿಹಾರವನ್ನು ಘೋಷಿಸುವ ಸಂದರ್ಭದಲ್ಲಿ ಯಾಕೆ ಸರಕಾರ ಜಿಪುಣತನ ತೋರಿಸುತ್ತದೆ? ಈ ಮೂಲಕ ಸಮಾಜಕ್ಕೆ ಸರಕಾರ ಯಾವ ಸಂದೇಶವನ್ನು ನೀಡಲು ಹೊರಟಿದೆ? ರೈತ, ಪೌರಕಾರ್ಮಿಕ, ಪೊಲೀಸ್ ಪೇದೆಯ ಜೀವಕ್ಕಿಂತ ಒಬ್ಬ ರೌಡಿಶೀಟರ್‌ನ ಜೀವ ಹೆಚ್ಚು ಬೆಲೆ ಬಾಳುತ್ತದೆ ಎಂದೇ?

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News