ಮಹಿಳಾ ಮಸೂದೆ: ಬಾಳೆಯೆಲೆ ಮಾತ್ರ, ಊಟವಿಲ್ಲ!
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರ ಮತಗಳು ನಿರ್ಣಾಯಕವಾಗಲಿದೆ ಎನ್ನುವುದು ಕೇಂದ್ರ ಸರಕಾರಕ್ಕೆ ಮನವರಿಕೆಯಾದಂತಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆಗಳು ಮಾಡಿರುವ ಮೋಡಿ ಕೇಂದ್ರ ಸರಕಾರಕ್ಕೆ ಸಣ್ಣದೊಂದು ಗಾಬರಿ ಹುಟ್ಟಿಸಿದಂತಿದೆ. ಆ ಕಾರಣದಿಂದ, ಇತ್ತೀಚೆಗಷ್ಟೇ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ೨೦೦ ರೂ. ಇಳಿಸಿ ‘ಮಹದುಪಕಾರ’ ಮಾಡಿದ ಕೇಂದ್ರ ಸರಕಾರ ಇದೀಗ ಮಹಿಳೆಯರಿಗೆ ತನ್ನ ಮಾಂತ್ರಿಕ ಟೋಪಿಯಿಂದ ಇನ್ನೊಂದು ಕೊಡುಗೆಯನ್ನು ಹೊರ ತೆಗೆದಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಉದ್ದೇಶದಿಂದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದ್ದು, ಲೋಕಸಭೆಯಲ್ಲಿ ಅದು ಅನುಮೋದನೆಗೊಂಡಿದೆ. ಸುಮಾರು ೨೫ ವರ್ಷಗಳಿಂದ ಬೇರೆ ಬೇರೆ ಸರಕಾರಗಳ ಅವಧಿಯಲ್ಲಿ ಚರ್ಚೆಗೊಳಗಾತ್ತಾ ಬಂದಿದ್ದ ಈ ಮೀಸಲಾತಿ, ಇದೀಗ ಪ್ರಧಾನಿ ಮೋದಿಯ ಅವಧಿಯಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಈ ಮಸೂದೆಗೆ ಪ್ರಧಾನಿ ಮೋದಿಯಿಂದ ಸುಂದರ ನಾಮಕರಣವೂ ನಡೆದಿದೆ. ‘‘ನಾರೀ ಶಕ್ತಿ ವಂದನ್ ಅಧಿನಿಯಮ್’ ಎಂದು ಮಸೂದೆಯನ್ನು ಕರೆಯಲಾಗಿದೆ. ಈ ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಗೊಂಡರೂ, ೨೦೨೪ರ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬರುವುದಿಲ್ಲ. ಒಟ್ಟಿನಲ್ಲಿ, ೨೦ ವರ್ಷದ ಬಳಿಕ ಬಡಿಸಲಿರುವ ಅನ್ನಕ್ಕೆ ಇದೀಗ ಮೋದಿ ಸರಕಾರ ಬಾಳೆಯೆಲೆಯನ್ನು ಹಾಕಿದೆ. ‘‘ಊಟಕ್ಕೆ ಸ್ವಲ್ಪ ಕಾಯಬೇಕು. ನಿಧಾನಕ್ಕೆ ಬರುತ್ತದೆ’’ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅವರು ಹಾಸಿದ ಬಾಳೆಯೆಲೆಯ ಗಾತ್ರವನ್ನು ನೋಡಿ ಮಹಿಳೆಯರು ಸದ್ಯಕ್ಕೆ ಸಂತೃಪ್ತಿ ಪಡಬೇಕಾಗಿದೆ.
ಕಳೆದ ೨೫ ವರ್ಷಗಳಿಂದ ಸಂಸತ್‌ನಲ್ಲಿ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಈ ದೇಶದ ಮಹಿಳೆಯರನ್ನು ರಾಜಕೀಯ ನಾಯಕರು ವಂಚಿಸುತ್ತಾ ಬಂದಿದ್ದಾರೆ. ಸರಕಾರ ಮಂಡಿಸಿದಂತೆ ಮಾಡುವುದು. ವಿರೋಧ ಪಕ್ಷ ಅವುಗಳನ್ನು ಬೆಂಬಲಿಸುವ ಹೆಸರಿನಲ್ಲೇ ಅನುಮೋದನೆಗೊಳ್ಳದಂತೆ ನೋಡಿಕೊಳ್ಳುವುದು ನಡೆಯುತ್ತಲೇ ಬಂದಿದೆ. ವಿಪರ್ಯಾಸವೆಂದರೆ ಇತಿಹಾಸದುದ್ದಕ್ಕೂ ಈ ಮಹಿಳಾ ಮೀಸಲಾತಿಯ ವಿರುದ್ಧ ಮಹಿಳೆಯರನ್ನೇ ಬಳಸಿಕೊಳ್ಳಲಾಗಿದೆ. ರಾಜಕೀಯದಲ್ಲಿ ಅತ್ಯುತ್ತಮ ಸ್ಥಾನಮಾನಗಳನ್ನು ಪಡೆದುಕೊಂಡ ಮೇಲ್‌ಜಾತಿಯ ಮಹಿಳೆಯರು ಈ ಮೀಸಲಾತಿಯನ್ನು ವಿರೋಧಿಸಿದ್ದರು. ಸರೋಜಿನಿನಾಯ್ಡುರಂತಹ ನಾಯಕಿಯರೂ ಈ ಸಾಲಿನಲ್ಲಿದ್ದರು ಎನ್ನುವುದನ್ನು ಸ್ಮರಿಸಿಕೊಳ್ಳ ಬೇಕಾಗಿದೆ. ಬಲಾಢ್ಯ ಜಾತಿಯಿಂದ ಬಂದ ಮಹಿಳೆಯರಿಗೆ ಮಹಿಳಾ ಮೀಸಲಾತಿಯೇ ಬೇಡವಾಗಿತ್ತು. ಇಂತಹ ಮೀಸಲಾತಿಯು ಮೇಲ್‌ಜಾತಿ ಮಹಿಳೆಯರ ಜೊತೆಗೆ ಕೆಳಜಾತಿಯ ಮಹಿಳೆಯರನ್ನು ಸರಿಸಮವಾಗಿ ನಿಲ್ಲಿಸಬಹುದು ಎನ್ನುವ ಆತಂಕ ಅವರಿಗಿತ್ತು. ಮಹಿಳಾ ಮೀಸಲಾತಿ ಕಾಂಗ್ರೆಸ್ ಸರಕಾರದ ಕನಸಿನ ಬೀಜ. ಆದರೆ ಕಾಂಗ್ರೇಸ್ಸೇತರ ಸರಕಾರಗಳೂ ಇದನ್ನು ಮಂಡಿಸುವ ಪ್ರಯತ್ನ ನಡೆಸುತ್ತಲೇ ಬಂದಿದೆ. ೧೯೯೬ರಲ್ಲಿ ಮಂಡನೆಯಾದ ಕೆಲವೇ ಸಮಯದಲ್ಲಿ ಸರಕಾರ ಉರುಳಿತು. ಐ.ಕೆ. ಗುಜ್ರಾಲ್ ನೇತೃತ್ವದ ಸರಕಾರ ಈ ಮಸೂದೆಯನ್ನು ಅಂಗೀಕರಿಸುವ ವಿಫಲ ಪ್ರಯತ್ನ ನಡೆಸಿತು. ಇದಾದ ಬಳಿಕ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವೂ ಈ ಮಸೂದೆಯನ್ನು ಜಾರಿಗೊಳಿಸುವ ಪ್ರಯತ್ನ ನಡೆಸಿತು. ಆದರೆ ಲೋಕಸಭೆಯಲ್ಲಿ ಅದು ಯಶಸ್ವಿಯಾಗಲಿಲ್ಲ.
ಮಹಿಳಾ ಮೀಸಲಾತಿಯನ್ನು ಎಲ್ಲ ಪಕ್ಷಗಳು ಬೆಂಬಲಿಸುತ್ತಿದ್ದವು. ಆದರೆ ಅದರೊಳಗಿರುವ ಕೆಲವು ಲೋಪದೋಷಗಳ ಜೊತೆಗೇ ಅದನ್ನು ಜಾರಿಗೊಳಿಸಲು ಕೆಲವು ರಾಜಕೀಯ ಶಕ್ತಿಗಳು ಪ್ರಯತ್ನಿಸುತ್ತಾ ಬಂದದ್ದೇ ಅಂಗೀಕಾರಕ್ಕೆ ತೊಡಕಾಯಿತು. ಈ ಲೋಪದೋಷಗಳ ಕಾರಣಕ್ಕೆ ತಳಸ್ತರದ ನಾಯಕರು ಮಸೂದೆಯನ್ನು ವಿರೋಧಿಸಿದರು. ಮಸೂದೆಯನ್ನು ವಿರೋಧಿಸಿದವರೆಲ್ಲರನ್ನೂ ‘ಮಹಿಳಾ ವಿರೋಧಿಗಳು’ ಎಂದು ಬಿಂಬಿಸುವ ಪ್ರಯತ್ನವೂ ಕೆಲವು ಮಾಧ್ಯಮಗಳಿಂದ ನಡೆಯಿತು. ಆದರೆ ಈ ಮಸೂದೆಯನ್ನು ವಿರೋಧಿಸಿದ ಹಲವು ನಾಯಕರು ಮಹಿಳಾ ವಿರೋಧಿಗಳಾಗಿರಲಿಲ್ಲ. ಬದಲಿಗೆ ಈ ಮಸೂದೆಯ ಮೂಲಕ ಮೇಲ್‌ಜಾತಿ ಸಂಸತ್ತಿನಲ್ಲಿ ತನ್ನ ಪ್ರಾತಿನಿಧ್ಯವನ್ನು ಹೆಚ್ಚಿಸಿಕೊಳ್ಳುವ ಅಪಾಯವನ್ನು ಮನಗಂಡಿದ್ದರು. ಈ ದೇಶದಲ್ಲಿ ಎಲ್ಲ ಜಾತಿಯ ಮಹಿಳೆಯರೂ ಶೋಷಿತರೇ ಆಗಿದ್ದಾರೆ. ಮೇಲ್‌ಜಾತಿಯ ಸಮುದಾಯಗಳಲ್ಲೂ ಮಹಿಳೆಯ ಸ್ಥಿತಿಗತಿ ಚಿಂತಾಜನಕವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಅರ್ಥ, ಎಲ್ಲ ಜಾತಿಯ ಮಹಿಳೆಯರೂ ಸಮಾನ ಶೋಷಿತರೆಂದು ಅಲ್ಲ. ಮೇಲ್‌ಜಾತಿಯ ಮಹಿಳೆಯರಿಗೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಹೆಚ್ಚು ಅವಕಾಶಗಳು ದೊರಕಿವೆ. ದಲಿತರು, ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳಲ್ಲಿ ಮಹಿಳೆಯರ ಸ್ಥಿತಿ ದಯನೀಯವಾಗಿದೆ. ಒಳ ಮೀಸಲಾತಿ ಜಾರಿಗೊಳಿಸದೆ ಎಲ್ಲ ಮಹಿಳೆಯರನ್ನು ಸಮಾನ ರೀತಿಯಲ್ಲಿ ಕಂಡು ಮೀಸಲಾತಿಯನ್ನು ಅನುಷ್ಠಾನಗೊಳಿಸಿದರೆ, ಅದರೆಲ್ಲ ಲಾಭವನ್ನು ಸಾಮಾಜಿಕ, ಆರ್ಥಿಕ, ಮತ್ತು ಶೈಕ್ಷಣಿಕವಾಗಿ ಹೆಚ್ಚು ಪ್ರಾತಿನಿಧ್ಯವನ್ನು ಪಡೆದಿರುವ ಮೇಲ್‌ಜಾತಿಯ ಮಹಿಳೆಯರು ತಮ್ಮದಾಗಿಸಿಕೊಳ್ಳುತ್ತಾರೆ. ಈ ಮಹಿಳೆಯರು ಸಂಸತ್ತಿನಲ್ಲಿ ಪುರುಷ ಸಮಾಜವನ್ನೇ ಪ್ರತಿನಿಧಿಸುತ್ತಾರೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಸರೋಜಿನಿ ನಾಯ್ಡು ಎಂದು ಇತಿಹಾಸ ಪುಸ್ತಕದಲ್ಲಿ ಗುರುತಿಸಲ್ಪಡುವ ಸರೋಜಿನಿ ಚಟ್ಟೋಪಾಧ್ಯಾಯ ಅವರು ಬ್ರಾಹ್ಮಣ ಸಮುದಾಯದಿಂದ ರಾಜಕೀಯವನ್ನು ಪ್ರತಿನಿಧಿಸಿದ್ದರು. ಆದರೆ ಮಹಿಳೆಯರಿಗೆ ಮೀಸಲಾತಿಯ ಪ್ರಸ್ತಾಪ ಬಂದಾಗ ಅದನ್ನು ಕಟುವಾಗಿ ವಿರೋಧಿಸಿದ್ದರು. ಮಹಿಳಾ ಮೀಸಲಾತಿಯನ್ನು ವಿರೋಧಿಸಿದ ಬಹುತೇಕ ಮಹಿಳೆಯರು ಮೇಲ್ಜಾತಿಗೆ ಸೇರಿರುವುದು ಕಾಕತಾಳೀಯವಲ್ಲ.
ಇದ್ದ ಹಾಗೆಯೇ ಮಸೂದೆ ಜಾರಿಗೆ ಬಂದರೆ, ಅದರಿಂದ ದುರ್ಬಲ ಸಮುದಾಯ ಸಬಲವಾಗುವ ಬದಲಿಗೆ ಪ್ರಬಲ ಜಾತಿಗಳು ಹೆಚ್ಚು ಪ್ರಾತಿನಿಧ್ಯವನ್ನು ತನ್ನದಾಗಿಸುವ ಅಪಾಯವಿತ್ತು. ಆದುದರಿಂದಲೇ ಆರ್‌ಜೆಡಿ, ಬಿಎಸ್‌ಪಿ ಸಹಿತ ಹಲವು ಪಕ್ಷಗಳು ಮಸೂದೆ ಜಾರಿಗೊಳ್ಳದಂತೆ ಅಡ್ಡಿ ಪಡಿಸಿದವು. ಇದೇ ಸಂದರ್ಭದಲ್ಲಿ ಮೇಲ್‌ಜಾತಿಯ ಜನಪ್ರತಿನಿಧಿಗಳು ಅವರನ್ನು ಸ್ತ್ರೀ ವಿರೋಧಿಗಳೆಂದು, ಮಹಿಳಾ ಮಸೂದೆಯ ವಿರೋಧಿಗಳೆಂದು ಬಿಂಬಿಸಲು ಪ್ರಯತ್ನಿಸಿದವು. ಆಳದಲ್ಲಿ ಯಾರೆಲ್ಲ ಮಹಿಳಾ ಮಸೂದೆಯನ್ನು ಬೆಂಬಲಿಸುವ ನಾಟಕವಾಡುತ್ತಿದ್ದರೋ ಅವರೆಲ್ಲ ಈ ಮಸೂದೆ ಪ್ರತಿಪಾದಿಸುವ ಮಹಿಳಾ ಸಮಾನತೆಯ ಮೌಲ್ಯವನ್ನು ಒಪ್ಪುವವರಾಗಿರಲಿಲ್ಲ. ಇದೀಗ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಮಸೂದೆ ಅಂಗೀಕಾರವಾಗಿದೆಯೇನೋ ನಿಜ. ಮಸೂದೆಯಲ್ಲಿ ದಲಿತರಿಗೆ ಮೀಸಲಾತಿಯನ್ನು ಘೋಷಿಸಿದ್ದಾರೆ. ಆದರೆ ಉಳಿದ ದೊಡ್ಡ ಪಾಲನ್ನು ಈಗಾಗಲೇ ರಾಜಕೀಯದಲ್ಲಿ ಅಸ್ತಿತ್ವ ಸ್ಥಾಪಿಸಿಕೊಂಡಿರುವ ಮೇಲ್‌ಜಾತಿಯ ಮಹಿಳೆಯರು ತಮ್ಮದಾಗಿಸಿಕೊಳ್ಳುತ್ತಾರೆ. ಹಾಗಾದರೆ ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾತಿನಿಧ್ಯವೇ ಇಲ್ಲದ ಮುಸ್ಲಿಮ್ ಮಹಿಳೆಯರನ್ನು ಈ ಮಸೂದೆ ಹೇಗೆ ಸಬಲರನ್ನಾಗಿಸುತ್ತದೆ? ಅಷ್ಟೇ ಅಲ್ಲ, ಹಿಂದುಳಿದ ವರ್ಗದಲ್ಲಿ ಗುರುತಿಸಿಕೊಂಡಿರುವ ಶೋಷಿತ ಸಮುದಾಯಕ್ಕೆ ಠಾಕೂರ್, ಜಾಟ್, ಪಟೇಲ್, ಬ್ರಾಹ್ಮಿಣ್ ಮೊದಲಾದ ಜಾತಿಗಳ ಮಹಿಳೆಯರ ಜೊತೆಗೆ ಸ್ಪರ್ಧಿಸಲು ಸಾಧ್ಯವೆ? ಅಂತಿಮವಾಗಿ ಈ ಮಸೂದೆಯ ಲಾಭ ಯಾರು ಪಡೆಯುತ್ತಾರೆ? ಆದುದರಿಂದ ಒಳ ಮೀಸಲಾತಿಯನ್ನು ಅನುಷ್ಠಾನಕ್ಕೆ ತರದೆ ಈ ಮೀಸಲಾತಿಯನ್ನು ಜಾರಿಗೆ ತರಲು ಪ್ರಯತ್ನಿಸಿದರೆ, ದುರ್ಬಲ ಸಮುದಾಯದ ಮಹಿಳೆಯರಿಗೆ ಬಹುದೊಡ್ಡ ಅನ್ಯಾಯವಾಗುತ್ತದೆ. ಇದೇ ಸಂದರ್ಭದಲ್ಲಿ, ಕ್ಷೇತ್ರ ಮರುವಿಂಗಡಣೆ, ಜನಗಣತಿಯ ನೆಪದಲ್ಲಿ ಈ ಮಸೂದೆ ಸದ್ಯಕ್ಕಂತೂ ಜಾರಿಗೊಳ್ಳುವುದಿಲ್ಲ. ಅಂದರೆ ಊಟಕ್ಕೆ ಎಲೆ ಹಾಸಲಾಗಿದೆ. ಅದರ ಮುಂದೆ ಕುಳಿತಿರುವವರು ಬರುವ ಊಟವನ್ನು ನೆನೆಯುತ್ತಾ ಜೊಲ್ಲು ಸುರಿಸಿ ಕಾಯಬೇಕಾಗಿದೆ. ಹಸಿದವರು ಊಟದ ಎಲೆಯನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳಲಂತೂ ಸಾಧ್ಯವಿಲ್ಲ.