ಲೋಕಸಭಾ ಚುನಾವಣೆ | ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಎ.15ಕ್ಕೆ ನಾಮಪತ್ರ ಸಲ್ಲಿಕೆ
ಶಿವಮೊಗ್ಗ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಭರ್ಜರಿ ಚುನಾವಣಾ ಪ್ರಚಾರ ಮುಂದುವರಿಸಿದ್ದು, ಮಂಗಳವಾರ ನಗರದ ಕೋಟೆ ಮಾರಿಕಾಂಬ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನಂತರ ಕೋಟೆ ರಸ್ತೆಯಲ್ಲಿರುವ ಕೋಟೆ ಸೀತಾರಾಮಾಂಜನೇಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಗೀತಾ ಶಿವರಾಜ್ ಕುಮಾರ್ ಅವರೊಂದಿಗೆ ಪತಿ ಶಿವರಾಜ್ ಕುಮಾರ್ ಹಾಗೂ ಸಹೋದರ ಮಧುಬಂಗಾರಪ್ಪ, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಚಾಲಕ ಜಿ.ಡಿ ಮಂಜುನಾಥ್ ಸೇರಿದಂತೆ ಹಲವರಿದ್ದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, "ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾದ ಅಲೆಯಿದ್ದು, ಮತದಾರರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಜನರು ಬದಲಾವಣೆಯನ್ನು ಬಯಸಿದ್ದಾರೆ" ಎಂದರು.
ಜನರ ಸೇವೆ ಮಾಡಲು ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇವೆ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿ ನ್ಯಾಯ ಒದಗಿಸುತ್ತೇನೆ ಎಂದು ಹೇಳಿದರು.
ಎಪ್ರಿಲ್ 15ಕ್ಕೆ ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ
ಸಚಿವ ಮಧು ಬಂಗಾರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕವಾದ ವಾತಾವರಣ ಇದೆ. ಜನರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟುಕೊಂಡಿದ್ದಾರೆ. ನೂರಕ್ಕೆ ನೂರು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದರು.
ಎಪ್ರಿಲ್ 15ಕ್ಕೆ ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಸಲಿದ್ದಾರೆ. ಇದೇ ವೇಳೆ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ವಿರುದ್ದ ವಾಗ್ದಾಳಿ ನಡೆಸಿದ ಅವರು, ಕಳೆದ 15 ವರ್ಷಕ್ಕೆ ರಾಘವೇಂದ್ರ ಸಂಸದರಾಗಿ ಕ್ಷೇತ್ರದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜಿಲ್ಲೆಯಲ್ಲಿ ಏನಾದರೂ ಅಭಿವೃದ್ಧಿ ಆಗಿದ್ದರೆ ಅದರಲ್ಲಿ ರಾಜ್ಯ ಸರಕಾರದ ಪಾಲಿದೆ. ರಾಘವೇಂದ್ರ ಸಾಧನೆ ಶೂನ್ಯ ಎಂದರು.