ಹೊಸ ಸೈಬರ್ ನೀತಿಯಿಂದಾಗಿ ರಾಜ್ಯದಲ್ಲಿ ಸೈಬರ್ ಅಪರಾಧಗಳಿಗೆ ಕಡಿವಾಣ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಹೊಸ ಸೈಬರ್ ನೀತಿಯಿಂದಾಗಿ ರಾಜ್ಯದಲ್ಲಿ ಸೈಬರ್ ಅಪರಾಧಗಳಿಗೆ ಕಡಿವಾಣ ಬೀಳುವ ಜೊತೆಗೆ, ಜನ ಸಾಮಾನ್ಯರಿಗೆ ಭದ್ರತೆ ಒದಗಿಸಲಾಗುವುದು ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗುರುವಾರ ವಿಕಾಸಸೌಧದ ಸಭಾಂಗಣದಲ್ಲಿ ‘ಕರ್ನಾಟಕ ಸೈಬರ್ ಭದ್ರತಾ ನೀತಿ-2024’ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರ ನಿಯಂತ್ರಣ ಅಗತ್ಯವಿದೆ. ಹೀಗಾಗಿ ರಾಜ್ಯಕ್ಕೆ ಸೈಬರ್ ಭದ್ರತಾ ನೀತಿ ರಚಿಸಿಲಾಗಿದೆ ಎಂದರು.
ಈ ನೀತಿಯಿಂದಾಗಿ ಸೈಬರ್ ಅಪರಾಧ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಸೈಬರ್ ಭದ್ರತೆ, ದತ್ತಾಂಶ ಖಾಸಗಿತನದ ಕುರಿತಂತೆ ಜಾಗೃತಿ ಮೂಡಿಸಲಾಗುತ್ತದೆ. ಗ್ರಾಮ ಮಟ್ಟದಲ್ಲೂ ಸ್ವಯಂ ಸೇವಕರ ಮೂಲಕ ಜಾಗೃತಿ ಮೂಡಿಸಲಾಗುವುದು. ಜತೆಗೆ ನೂತನ ನೀತಿ ಅಡಿಯಲ್ಲಿ ಸೈಬರ್ ಭದ್ರತೆ ಹಾಗೂ ಅಪರಾಧ ತಡೆಗೆ ಹೊಸ ತಂತ್ರಾಂಶ ರೂಪಿಸಲಾಗಿದ್ದು, ಅದರ ಮೂಲಕ ಸೈಬರ್ ಅಪರಾಧ ಪತ್ತೆ, ಅದರ ತಡೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಉಲ್ಲೇಖಿಸಿದರು.
ದೇಶದ ಬಹುತೇಕ ವಲಯಗಳಲ್ಲಿ ಡಿಜಿಟಲ್ ಸೇವೆಗಳು ಹೆಚ್ಚಾಗಿದ್ದು, ಇದಕ್ಕೆ ಪೂರಕವಾಗಿ ನಾಗರಿಕರು ಸೈಬರ್ ಭದ್ರತೆ ಕುರಿತು ಅರಿತುಕೊಳ್ಳಬೇಕಿದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಐಟಿ-ಬಿಟಿ ಕಂಪೆನಿಗಳಿದ್ದು, ಸೈಬರ್ ಸುರಕ್ಷತೆಗೆ ಹಲವು ಕ್ರಮಗಳು ಅನಿವಾರ್ಯವಾಗಿದೆ. ಇನ್ನೂ, ಸರಕಾರದ ಹಲವು ಇಲಾಖೆಗಳು ಜನರಿಗೆ ಸುಲಭವಾಗಿ ಸೇವೆ ಒದಗಿಸಲು ಡಿಜಿಟಲ್ ಮೊರೆ ಹೋಗುತ್ತಿವೆ. ಸೇವಾ ಸಿಂಧು, ಮೊಬೈಲ್ ಬ್ಯಾಂಕಿಂಗ್, ವರ್ಚುವಲ್ ಕ್ಲಾಸ್‍ಗಳೂ ಸೇರಿದಂತೆ ವಿವಿಧ ರೀತಿಯ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿದ್ದಾರೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ಸೈಬರ್ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಗಮನಹರಿಸಬೇಕಿದೆ ಎಂದರು.
ಈಗಾಗಲೇ ರಾಜ್ಯ ಸರಕಾರ ಸೈಬರ್ ಅಪರಾಧ ವಿಭಾಗದ ಬಲ ಹೆಚ್ಚಿಸಲು ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ವಿವಿಧ ತಂತ್ರಜ್ಞಾನ ವಲಯಗಳಲ್ಲಿ ಪರಿಣತಿ ಹೊಂದಿರುವ ಕಂಪೆನಿಗಳ ನೆರವು ಪಡೆದುಕೊಳ್ಳುತ್ತಿದೆ ಎಂದ ಅವರು,ಕ್ರಿಯಾಶೀಲವಾದ ಮತ್ತು ಒಳಗೊಳ್ಳುವಿಕೆಯ ಅಂತರ್ ಜಾಲ ಪರಿಸರವನ್ನು ರಚಿಸಲು ವಿವಿಧ ಪಾಲುದಾರರು ಮತ್ತು ತಜ್ಞರೊಂದಿಗೆ ಕೆಲಸ ಮಾಡಲು ಸರಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಮತ್ತು ಯುವಜನರನ್ನು ಆನ್‍ಲೈನ್‍ನಲ್ಲಿ ಸುರಕ್ಷಿತವಾಗಿಡಲು ಸಿಸ್ಕೋ ಸ್ಕಿಲಿಂಗ್ ಕಂಪೆನಿಗಳು ಸರಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕ್ ರೂಪ್ ಕೌರ್ ಸೇರಿದಂತೆ ಪ್ರಮುಖರಿದ್ದರು.