ಶಿವಮೊಗ್ಗದಲ್ಲಿ ಮಲೆನಾಡ ಕರಕುಶಲ ಉತ್ಸವ, ಸರಸ್ ಮೇಳ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪಂಚಾಯತ್, ತೊಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ಅಲ್ಲಮಪ್ರಭು ಉದ್ಯಾನವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಮಲೆನಾಡ ಕರಕುಶಲ ಉತ್ಸವ, ಸರಸ್ ಮೇಳ ಹಾಗೂ ಪುಷ್ಪ ಸಿರಿ ಫಲಪುಷ್ಪ ಪ್ರದರ್ಶನಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಶುಕ್ರವಾರ ಚಾಲನೆ ನೀಡಿದರು.
ಮೋಹಕ ವರ್ಣಮಯ ಲೋಕವನ್ನೇ ತೆರದಿಟ್ಟಿರುವ ಫಲಪುಷ್ಪಗಳು, ಹೂವಿನಲ್ಲಿ ಅರಳಿದ ರಾಷ್ಟ್ರ ಕವಿ ಕುವೆಂಪುರವರ ಕವಿಶೈಲ, ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬೆ ದೇಗುಲ, ಗರಿಬಿಚ್ಚಿ ನರ್ತಿಸುತ್ತಿರುವ ನವಿಲು, ನೋಡುಗರ ಕಣ್ಮನ ಸೆಳೆಯುವ ರಂಗುರಂಗಿನ ಮತ್ಸ್ಯಗಳ ದೃಶ್ಯಗಳು, ಫಲಪುಷ್ಪ ಪ್ರದರ್ಶನ ಹಾಗೂ ಮಲೆನಾಡ ಕರಕುಶಲ ಉತ್ಸವದಲ್ಲಿ ಕಂಡು ಬಂದವು.
ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಆರಂಭದಲ್ಲಿಯೇ ಮೇಳದ ಸ್ವಾಗತ ಕಮಾನು ಸ್ವಾಗತಿಸಿದರೆ, ಶಿವಮೊಗ್ಗವನ್ನು ಬಿಂಬಿಸುವ ಆಂಗ್ಲ ಭಾಷೆಯ ಎಸ್‌ಎಂಜಿ ಸೇವಂತಿಗೆ ಹೂವಿನಲ್ಲಿ ಕಣ್ಣು ಕುಕ್ಕುತ್ತದೆ.
ಈ ಬಾರಿ ಗುಲಾಬಿ, ಸೇವಂತಿಗೆ, ಆರ್ಕಿಡ್, ಕಾರ್ನೇಷನ್, ಲಿಲ್ಲೀಸ್, ಪೊಲೀಯೇಜ್ ಮುಂತಾದ ಬಗೆಗಳ 4.80 ಲಕ್ಷ ಹೂವುಗಳನ್ನು ಬಳಸಿ ಕುಪ್ಪಳ್ಳಿ ಕವಿ ಶೈಲದ 28 ಅಡಿ ಎತ್ತರದ ಕಲಾಕೃತಿ ಹಾಗೂ ಚಂದ್ರಗುತ್ತಿ ರೇಣುಕಾಂಬೆ ದೇವಾಲಯದ 14 ಅಡಿ ಎತ್ತರದ ಕಲಾಕೃತಿ ನಿರ್ಮಿಸಲಾಗಿದೆ. 45ಕ್ಕೂ ಹೆಚ್ಚು ಬೊನ್ಸಾಯ್ ಗಿಡಗಳ ಪ್ರದರ್ಶನವೂ ನಡೆದಿದೆ.

ಮಲೆನಾಡು ಬ್ರಾಂಡ್ ಮೂಲಕ ಹಸೆ ಚಿತ್ತಾರ, ಗೃಹ ಅಲಂಕಾರ, ಟೆರಾಕೋಟಾ ವಸ್ತು, ಖಾದಿ ಉಡುಪುಗಳು ಸೇರಿದಂತೆ ಒಳಾಂಗಣದಲ್ಲಿ 30ಕ್ಕೂ ಹೆಚ್ಚು ಮಳಿಗೆ ಹಾಗೂ ಹೋರಾಂಗಣದಲ್ಲಿ 20ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಹೇಮಂತ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ, ಜಿಪಂ ಯೋಜನಾ ನಿರ್ದೇಶಕಿ ನಂದಿನಿ, ಉದ್ಯಾನ ಕಲಾ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.
ಮಲೆನಾಡ ಕರಕುಶಲ ಉತ್ಸವವನ್ನು ಬಹಳ ಅರ್ಥಪೂರ್ಣವಾಗಿ ಮಾಡಲಾಗಿದೆ ಹಾಗೂ ರಾಷ್ಟ್ರಕವಿ ಕುವೆಂಪುರವರ ಪುಸ್ತಕ ಪ್ರದರ್ಶನ ತುಂಬಾ ವಿಶೇಷವಾಗಿದೆ. ಈ ಉತ್ಸವ 3 ದಿನಗಳ ಕಾಲ ಯಶಸ್ವಿಯಾಗಿ ನಡೆಯಲಿ.
-ಆರ್.ಎಂ.ಮಂಜುನಾಥ ಗೌಡ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ
ನಮ್ಮ ಜಿಲ್ಲೆಯಲ್ಲಿ ಉತ್ತಮ ಕರಕುಶಲ ವಸ್ತುಗಳು ಸಿದ್ದವಾಗುತ್ತಿವೆ. ಆದರೆ ಅವುಗಳ ಮಾರಾಟ ಮಾತ್ರ ಕುಂಠಿತವಾಗಿದೆ. ಇಂತಹ ಮೇಳದಲ್ಲಿ ಆನ್‌ಲೈನ್ ಮೂಲಕ ಮಾರಾಟಕ್ಕೆ ಮುಂದಾಗಿದ್ದೇವೆ. ಇದರಿಂದ ಕಲಾವಿದರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ.
-ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ