39ರ ವಯಸ್ಸಿನಲ್ಲಿ ಹಸಿವಿನಿಂದ ಸಾವನ್ನಪ್ಪಿದ ವೇಗನ್ ಕಚ್ಚಾ ಆಹಾರ ಪ್ರತಿಪಾದಕಿ ಝನ್ನಾ

Update: 2023-08-01 16:22 GMT

ಹೊಸದಿಲ್ಲಿ: ವರ್ಷಗಳಿಂದ ಸಂಪೂರ್ಣವಾಗಿ ಕಚ್ಚಾ ವೇಗನ್ ಅಥವಾ ಸಸ್ಯಜನ್ಯ ಆಹಾರವನ್ನು ಸೇವಿಸುತ್ತಿದ್ದ ರಶ್ಯದ ಪ್ರಜೆ, ವೇಗನ್ ಪ್ರಭಾವಿ ಝನ್ನಾ ಸ್ಯಾಮ್ಸೊನೋವಾ ಅವರು ತನ್ನ 39ರ ಹರೆಯದಲ್ಲಿ ನಿಧನರಾಗಿದ್ದಾರೆ. ಹಸಿವೆಯಿಂದ ಅವರ ಸಾವು ಸಂಭವಿಸಿದೆ ಎನ್ನಲಾಗಿದೆ.

ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿರುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಝನ್ನಾ ಡಿ’ಆರ್ಟ್ ಹೆಸರಿನಿಂದ ಖ್ಯಾತರಾಗಿದ್ದ ಅವರು ಜು.21ರಂದು ಆಗ್ನೇಯ ಏಶ್ಯಾ ಪ್ರವಾಸದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆದ ಬಳಿಕ ಮೃತಪಟ್ಟಿದ್ದಾರೆ.

ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಚ್ಚಾ ಆಹಾರಗಳನ್ನು ಪ್ರಚಾರ ಮಾಡುತ್ತಿದ್ದ ಝನ್ನಾ ಕನಿಷ್ಠ ನಾಲ್ಕು ವರ್ಷಗಳಿಂದ ಸಂಪೂರ್ಣ ಕಚ್ಚಾ ವೇಗನ್ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಅವರು ಕೇವಲ ಹಣ್ಣುಗಳು,ಮೊಳಕೆ ಬರಿಸಿದ ಸೂರ್ಯಕಾಂತಿ ಬೀಜಗಳು,ಹಣ್ಣುಗಳ ರಸಗಳನ್ನು ಸೇವಿಸುತ್ತಿದ್ದರು.

ತನ್ನ ಮಗಳ ಸಾವಿಗೆ ‘ಕಾಲರಾ ತರಹದ ಸೋಂಕು ’ ಕಾರಣವೆಂದು ಝನ್ನಾರ ತಾಯಿ ಹೇಳಿದ್ದಾರೆ. ಆದರೆ ಅವರ ಸಾವಿಗೆ ಅಧಿಕೃತ ಕಾರಣವನ್ನು ಘೋಷಿಸಲಾಗಿಲ್ಲ. ತಮ್ಮ ಪುತ್ರಿಯ ಸಾವಿಗೆ ಕಾರಣವನ್ನು ನಿರ್ಧರಿಸುವ ವೈದ್ಯಕೀಯ ವರದಿ ಮತ್ತು ಮರಣ ಪ್ರಮಾಣಪತ್ರಕ್ಕಾಗಿ ಕುಟುಂಬವು ಕಾಯುತ್ತಿದೆ.

‘ಕೆಲವು ತಿಂಗಳುಗಳ ಹಿಂದೆ ಶ್ರೀಲಂಕಾದಲ್ಲಿ ನಾನು ಝನ್ನಾರನ್ನು ನೋಡಿದಾಗ ದುಗ್ಧರಸವನ್ನು ಸ್ರವಿಸುತ್ತಿದ್ದ ಊದಿಕೊಂಡಿದ್ದ ಕಾಲುಗಳೊಂದಿಗೆ ಅದಾಗಲೇ ದಣಿದವರಂತೆ ಕಂಡು ಬಂದಿದ್ದರು. ಅವರನ್ನು ಚಿಕಿತ್ಸೆಗಾಗಿ ಮನೆಗಾಗಿ ಕಳುಹಿಸಲಾಗಿತ್ತು. ಆದರೆ ಆಕೆ ಅಲ್ಲಿಂದ ಮತ್ತೆ ಓಡಿ ಹೋಗಿದ್ದರು. ಅವರನ್ನು ಫುಕೆಟ್ನಲ್ಲಿ ಮತ್ತೆ ನೋಡಿದಾಗ ನಾನು ಭಯಗೊಂಡಿದ್ದೆ ’ ಎಂದು ಮಾಧ್ಯಮದೊಂದಿಗೆ ಮಾತನಾಡಿದ ಸ್ನೇಹಿತೆಯೋರ್ವಳು ತಿಳಿಸಿದಳು.

‘ನಾನು ಝನ್ನಾರ ಫ್ಲ್ಯಾಟ್ಗಿಂತ ಮೇಲಿನ ಅಂತಸ್ತಿನಲ್ಲಿ ವಾಸವಿದ್ದೇನೆ. ಪ್ರತಿದಿನ ಬೆಳಿಗ್ಗೆ ಜೀವಚ್ಛವದಂತಿದ್ದ ಅವರನ್ನು ನೋಡಿ ದಿಗಿಲುಗೊಳ್ಳುತ್ತಿದ್ದೆ. ಚಿಕಿತ್ಸೆ ಪಡೆಯುವಂತೆ ನಾನು ಅವರ ಮನವೊಲಿಸಿದ್ದೆ,ಆದರೆ ಆಕೆ ಚಿಕಿತ್ಸೆಯನ್ನು ಪಡೆಯಲಿಲ್ಲ ’ಎಂದರು.

ಝನ್ನಾ ಹೆಚ್ಚು ವಯಸ್ಸಾದವರಂತೆ ಕಾಣುತ್ತಿದ್ದ ತನ್ನದೇ ವಯಸ್ಸಿನ ಇತರರನ್ನು ಕಂಡು ಪ್ರೇರಿತರಾಗಿದ್ದರು.ಜಂಕ್ ಫುಡ್ ಸೇವನೆ ಅವರ ಈ ಸ್ಥಿತಿಗೆ ಕಾರಣ ಎಂದು ಝನ್ನಾ ಹೇಳಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ನಿರ್ಬಂಧಿತ ಆಹಾರ ಕ್ರಮವನ್ನು ಬಣ್ಣಿಸುವಾಗ ಝನ್ನಾ,‘ನನ್ನ ಶರೀರ ಮತ್ತು ಮನಸ್ಸು ಪ್ರತಿದಿನ ಪರಿವರ್ತನೆಗೊಳ್ಳುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಹೊಸ ರೂಪದಲ್ಲಿರುವ ನನ್ನನ್ನೇ ನಾನು ಪ್ರೀತಿಸುತ್ತೇನೆ,ನನ್ನ ಹಳೆಯ ಅಭ್ಯಾಸಗಳಿಗೆ ಎಂದೂ ಮರಳುವುದಿಲ್ಲ ’ ಎಂದು ಹೇಳಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News