ಪ್ರಭಾಕರ ಭಟ್ ಹೇಳಿಕೆ ʼಭಯೋತ್ಪಾದನಾ ಕೃತ್ಯʼ, ಇದನ್ನು ಎನ್ಐಎ ತನಿಖೆ ಮಾಡಬೇಕು : ವಕೀಲ ಎಸ್. ಬಾಲನ್
ಬೆಂಗಳೂರು : “ಐಪಿಸಿ ಸೆಕ್ಷನ್ 153 A, 505 (2) ಅಡಿಯಲ್ಲಿ ಪ್ರಭಾಕರ ಭಟ್ ಪ್ರಕರಣ ಬರುವುದರಿಂದ ಇದು ಗಂಭೀರ ಅಪರಾಧ, ಭಯೋತ್ಪಾದನಾ ಕೃತ್ಯವೂ ಹೌದು. ಮುಸ್ಲಿಂ ಮಹಿಳೆಯರ ವಿರುದ್ಧ ಹೇಳಿಕೆ ನೀಡಿರುವುದು ಸಮಾಜವಿರೋಧಿ ಹೇಳಿಕೆ. ಈ ಪ್ರಕರಣವನ್ನು ಎನ್ಐಎ ತನಿಖೆ ಮಾಡಬೇಕು” ಎಂದು ವಕೀಲ ಎಸ್. ಬಾಲನ್ ಹೇಳಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ 3 ನೇ ಅಪರ ಜಿಲ್ಲಾ ಸೆಷನ್ ನ್ಯಾಯಾಲಯದಲ್ಲಿ ನಡೆಯಿತು. ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಗೆ ನೀಡಿರುವ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಬೇಕು ಎಂದು ದೂರುದಾರೆ ನಜ್ಮಾ ಚಿಕ್ಕನೇರಳೆ ಪರ ಹಿರಿಯ ವಕೀಲ ಎಸ್. ಬಾಲನ್ ವಾದ ಮಂಡಿಸಿದರು. ಈ ಬಗ್ಗೆ ʼವಾರ್ತಾಭಾರತಿʼ ಜೊತೆ ಮಾತನಾಡಿದ ವಕೀಲ ಎಸ್. ಬಾಲನ್ ಅವರು ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
“ಚಾರ್ಜ್ ಶೀಟ್ ಸಿದ್ಧವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅದನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸಲ್ಲಿಸುತ್ತಾರೆ. ಬಳಿಕ ಪ್ರಭಾಕರ ಭಟ್ ನ್ಯಾಯಾಲಯಕ್ಕೆ ಓಡಾಡಬೇಕಾಗುತ್ತದೆ. ವಿಚಾರಣೆ ಆಗಿಯೇ ಆಗುತ್ತದೆ. ಆರೋಪ ಸಾಬೀತಾದರೆ ಕನಿಷ್ಠ ಮೂರು ವರ್ಷ ಜೈಲು ಶಿಕ್ಷೆ ಆಗುತ್ತದೆ. ರಾಹುಲ್ ಗಾಂಧಿ ಮೋದಿ ಬಗ್ಗೆ ಒಂದು ಪದ ಹೇಳಿದ್ದಕ್ಕೆ ಎರಡು ವರ್ಷ ಶಿಕ್ಷೆ ಪ್ರಕಟಿಸಿದ್ದಾರೆ. ಪ್ರಭಾಕರ ಭಟ್ ನೀಡಿರುವ ಹೇಳಿಕೆಗೆ 7-8 ವರ್ಷ ಶಿಕ್ಷೆಯಾಗುವ ಸಂಭವವಿದೆ” ಎಂದು ವಕೀಲ ಎಸ್. ಬಾಲನ್ ಹೇಳಿದ್ದಾರೆ.
“ವಿಚಾರಣೆ ನಡೆಯುತ್ತಿರುವುದು ಸೆಷನ್ಸ್ ನ್ಯಾಯಾಲಯದಲ್ಲಿ. ಚಾರ್ಜ್ ಶೀಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಬೇಕಾಗುತ್ತದೆ. ಹಾಗಾಗಿ ಪೊಲೀಸರು ವರದಿ ನೀಡಿದ್ದಾರೆ. ತನಿಖೆ ವೇಗವಾಗಿ ನಡೆದು, ಚಾರ್ಜ್ ಶೀಟ್ ಸಿದ್ಧವಾಗಿರುವುದು ಒಳ್ಳೆಯ ಬೆಳವಣಿಗೆ” ಎಂದು ಪೊಲೀಸ್ ತನಿಖೆಯ ವೇಗವನ್ನು ಅವರು ಶ್ಲಾಘಿಸಿದರು.
“ಪ್ರಭಾಕರ ಭಟ್ ಪದೇ ಪದೇ ಈ ರೀತಿಯ ಅಪರಾಧ ಎಸಗುತ್ತಿದ್ದಾರೆ. ಹಾಗಾಗಿ ಅವರೊಬ್ಬ ರೂಢಿ ಅಪರಾಧಿ(habitual offender). ಕೋಕಾ ಕಾಯ್ದೆಯಡಿಯೂ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ತನಿಖೆ ನಡೆಸಬೇಕು ಎಂದು ನ್ಯಾಯಾಯಲಯದ ಗಮನಕ್ಕೆ ತರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿ ಪರ ಕಿರಿಯ ವಕೀಲರು, ನಮ್ಮ ಪರ ಹಿರಿಯ ವಕೀಲರು ಇಂದು ಹಾಜರಿಲ್ಲ. ಆರೋಪಿಯ ಕುರಿತು ಹೈಕೋರ್ಟ್ ನಲ್ಲಿ ಜ.9ಕ್ಕೆ ಪ್ರಕರಣದ ವಿಚಾರಣೆಗೆ ಬರಲಿದೆ. ಆದುದರಿಂದ ಜ. 10ರ ವರೆಗೆ ಅವಕಾಶ ಕೇಳಿದರು. ಆಗ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರುವ ಪ್ರಕರಣಕ್ಕೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಇದು ನೀರೀಕ್ಷಣಾ ಜಾಮೀನು ಪ್ರಕರಣ. ಹೈಕೋರ್ಟ್ ಪ್ರಕರಣವನ್ನೆಲ್ಲಾ ಇದಕ್ಕೆ ತಳುಕು ಹಾಕಬೇಡಿ ಎಂದು ನ್ಯಾಯಾಯಲದ ಗಮನಕ್ಕೆ ತರಲಾಯಿತು” ಎಂದು ಬಾಲನ್ ತಿಳಿಸಿದ್ದಾರೆ.
“ವಾದ ಆಲಿಸಿದ ನ್ಯಾಯಾಧೀಶರು, ಜ.10ರಂದು ಸಂಜೆ ನಾಲ್ಕು ಗಂಟೆಗೆ ಬನ್ನಿ. ನಾನು ವಾದವನ್ನು ಆಲಿಸುತ್ತೇನೆ. ಆರೋಪಿ ಪರ ವಕೀಲರು ಪ್ರಕರಣವನ್ನು ಮತ್ತೆ ಮುಂದೆ ಹಾಕುವಂತೆ ವಿನಂತಿಸಿದರೂ, ಅವರಿಗೆ ಸಮಯ ನೀಡುವುದಿಲ್ಲ. ನಿಮಗೆ ಅವಕಾಶ ಮಾಡಿ ಕೊಡುತ್ತೇನೆಂದು ತಿಳಿಸಿದರು” ಎಂದು ಪ್ರಕರಣದ ವಿಚಾರಣೆ ಕುರಿತು ಮಾಹಿತಿ ನೀಡಿದರು.
“ಇದೊಂದು ಗಂಭೀರ ಪ್ರಕರಣ. ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಂದು ಗಂಡ ಎಂದರೇನರ್ಥ? ಮುಸ್ಲಿಂ ಮಹಿಳೆಯರು ದೇಶದ ಪ್ರಜೆಗಳಲ್ಲವೇ? 153A, 354(2)4 ಪ್ರಕಾರ ಇದೊಂದು ಘೋರ ಅಪರಾಧ. ಇದರ ಬಗ್ಗೆ ಎನ್ಐಎ ತನಿಖೆ ಮಾಡಬೇಕು. ಇದು ಸಮಾಜವಿರೋಧಿ ಕೃತ್ಯ ಎಂದು ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಲಾಯಿತು” ಎಂದು ಬಾಲನ್ ಪ್ರತಿಕ್ರಿಯೆ ನೀಡಿದರು.