ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಅರ್ಧಶತಕ | ಪಂಜಾಬ್ ವಿರುದ್ಧ ಆರ್ ಸಿ ಬಿಗೆ 60 ರನ್ ಜಯ
ಧರ್ಮಶಾಲಾ : ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ(92 ರನ್, 47 ಎಸೆತ, 7 ಬೌಂಡರಿ,6 ಸಿಕ್ಸರ್)ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ರಜತ್ ಪಾಟಿದಾರ್(55 ರನ್, 23 ಎಸೆತ, 3 ಬೌಂಡರಿ, 6 ಸಿಕ್ಸರ್)ಅರ್ಧಶತಕದ ಕೊಡುಗೆ, ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್ ಅಂತರದಿಂದ ಮಣಿಸಿದೆ.
ಗುರುವಾರ ನಡೆದ 58ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್ ಸಿ ಬಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 241 ರನ್ ಕಲೆ ಹಾಕಿದೆ. ಇದಕ್ಕೆ ಉತ್ತರವಾಗಿ ಪಂಜಾಬ್ ತಂಡ 17 ಓವರ್ಗಳಲ್ಲಿ 181 ರನ್ ಗಳಿಸಿ ಆಲೌಟಾಗಿದೆ.
ಪಂಜಾಬ್ ಪರ ರಿಲೀ ರೊಸ್ಸೌ(61 ರನ್, 27 ಎಸೆತ,9 ಬೌಂಡರಿ, 3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಶಶಾಂಕ್ ಸಿಂಗ್(37 ರನ್, 19 ಎಸೆತ) , ಸ್ಯಾಮ್ ಕರ್ರನ್(22 ರನ್,16 ಎಸೆತ )ಹಾಗೂ ಜಾನಿ ಬೈರ್ಸ್ಟೋವ್(27 ರನ್, 16 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಈ ಗೆಲುವಿನೊಂದಿಗೆ ಆರ್ ಸಿ ಬಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ. ಪಂಜಾಬ್ ತಂಡ ಪ್ಲೇ ಆಫ್ ರೇಸ್ನಿಂದ ಹೆಚ್ಚು ಕಡಿಮೆ ಹೊರ ನಡೆದಿದೆ. ಆರ್ ಸಿ ಬಿ ಪರ ಮುಹಮ್ಮದ್ ಸಿರಾಜ್(3-43) ಯಶಸ್ವಿ ಪ್ರದರ್ಶನ ನೀಡಿದರು. ಕರ್ಣ್ ಶರ್ಮಾ(2-36) , ಸ್ವಪ್ನಿಲ್ ಸಿಂಗ್(2-28) ಹಾಗೂ ಫರ್ಗ್ಯುಸನ್ (2-29) ತಲಾ ಎರಡು ವಿಕೆಟ್ ಗಳನ್ನು ಉರುಳಿಸಿದರು.
ಆರ್ ಸಿ ಬಿ ತಂಡವು ನಾಯಕ ಎಫ್ಡು ಪ್ಲೆಸಿಸ್(9 ರನ್) ಹಾಗೂ ವಿಲ್ ಜಾಕ್ಸ್(12 ರನ್)ವಿಕೆಟ್ ಗಳನ್ನು ಪವರ್ ಪ್ಲೇ ಮುಗಿಯುವ ಮೊದಲೇ ಕಳೆದುಕೊಂಡಿತು. ಆಗ ಜೊತೆಯಾದ ಕೊಹ್ಲಿ ಹಾಗೂ ಪಾಟಿದಾರ್ 3ನೇ ವಿಕೆಟ್ ಗೆ ಕ್ಷಿಪ್ರವಾಗಿ 76 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಕೇವಲ 23 ಎಸೆತಗಳಲ್ಲಿ 6 ಸಿಕ್ಸರ್, 3 ಬೌಂಡರಿ ಸಹಿತ 55 ರನ್ ಗಳಿಸಿದ ಪಾಟಿದಾರ್ ಅವರು ಕರ್ರನ್ ಗೆ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 92 ರನ್ ಸಿಡಿಸಿ 18ನೇ ಓವರ್ನಲ್ಲಿ ಅರ್ಷದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿ ಶತಕ ವಂಚಿತರಾದರು. ಕ್ಯಾಮರೂನ್ ಗ್ರೀನ್ 27 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 46 ರನ್ ಗಳಿಸಿ ಇನಿಂಗ್ಸ್ಗೆ ಅಂತಿಮ ಸ್ಪರ್ಶ ನೀಡಿದರು.
ಪಂಜಾಬ್ ಪರ ಹರ್ಷಲ್ ಪಟೇಲ್(3-38) ಹಾಗೂ ವಿದ್ವತ್ ಕಾವೇರಪ್ಪ(2-36) ಐದು ವಿಕೆಟ್ ಗಳನ್ನು ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್ಗಳಲ್ಲಿ 241/7
(ವಿರಾಟ್ ಕೊಹ್ಲಿ 92, ರಜತ್ ಪಾಟಿದಾರ್ 55, ಕ್ಯಾಮರೂನ್ ಗ್ರೀನ್ 46, ಹರ್ಷಲ್ ಪಟೇಲ್ 3-38, ವಿದ್ವತ್ ಕಾವೇರಪ್ಪ 2-36)
ಪಂಜಾಬ್ ಕಿಂಗ್ಸ್: 17 ಓವರ್ಗಳಲ್ಲಿ 181/10
(ರೊಸ್ಸೌ 61, ಶಶಾಂಕ್ ಸಿಂಗ್ 37, ಬೈರ್ಸ್ಟೋವ್ 27, ಮುಹಮ್ಮದ್ ಸಿರಾಜ್ 3-43, ಸ್ವಪ್ನಿಲ್ ಸಿಂಗ್ 2-28, ಕರ್ಣ್ ಶರ್ಮಾ 2-36, ಫರ್ಗ್ಯುಸನ್ 2-29)