ಟೆನಿಸ್ ಗೆ ನಿವೃತ್ತಿ ಘೋಷಿಸಿದ 22 ಬಾರಿಯ ಗ್ರಾಂಡ್‌ಸ್ಲಾಮ್ ಚಾಂಪಿಯನ್ ರಫೆಲ್ ನಡಾಲ್

Update: 2024-10-10 10:49 GMT

ರಫೆಲ್ ನಡಾಲ್ (Photo: PTI)

ಪ್ಯಾರಿಸ್: ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾದ ರಫೆಲ್ ನಡಾಲ್ ಟೆನಿಸ್ ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಕುರಿತು ಭಾವನಾತ್ಮಕ ವೀಡಿಯೊ ಹಂಚಿಕೊಂಡಿರುವ 22 ಬಾರಿ ಗ್ರಾಂಡ್‌ಸ್ಲಾಮ್ ಚಾಂಪಿಯನ್ ಅವರು, ಸಾರ್ವಕಾಲಿಕ ಅತ್ಯಂತ ಪ್ರೀತಿಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ನಿರ್ಮಿಸಿದ ಆಟಕ್ಕೆ ವಿದಾಯ ಹೇಳಿದರು.

ನವೆಂಬರ್ 8 ರಂದು ನಡೆಯಲಿರುವ ಡೇವಿಸ್ ಕಪ್ ವೃತ್ತಿಪರ ಟೆನಿಸ್ ಆಟಗಾರನಾಗಿ ನಡಾಲ್ ಅವರ ಕೊನೆಯ ಆಟ ಆಗಲಿದೆ.

ಸ್ಪೇನ್ ಆಟಗಾರ ರಫೇಲ್ ನಡಾಲ್ ಟೆನಿಸ್ ಅಂಗಳದಲ್ಲಿನ ಸಾರ್ವಕಾಲಿಕ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಅವರು ಗೆದ್ದ 22 ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳಲ್ಲಿ, 14 ಫ್ರೆಂಚ್ ಓಪನ್ ಪ್ರಶಸ್ತಿಗಳು ಎಂಬುದು ವಿಶೇಷ.

ನಡಾಲ್ ಅವರು 36 ಮಾಸ್ಟರ್ಸ್ ಪ್ರಶಸ್ತಿಗಳು, ಒಲಂಪಿಕ್ ಚಿನ್ನದ ಪದಕ ಸೇರಿದಂತೆ ಒಟ್ಟು 92 ATP ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಿಂಗಲ್ಸ್‌ನಲ್ಲಿ ವೃತ್ತಿಜೀವನದ ಗೋಲ್ಡನ್ ಸ್ಲಾಮ್ ಅನ್ನು ಪೂರ್ಣಗೊಳಿಸಿದ ಮೂವರು ಪುರುಷರ ಟೆನಿಸ್ ಆಟಗಾರರ ಪೈಕಿ ಒಬ್ಬರು ಎಂಬ ಅನನ್ಯ ದಾಖಲೆಯನ್ನು ಹೊಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ವಿಡಿಯೋ ಮೂಲಕ ನಿವೃತ್ತಿ ಸುದ್ದಿ ಪ್ರಕಟಿಸಿದ್ದಾರೆ.

"ನಾನು ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ಕಳೆದ ಎರಡು ವರ್ಷಗಳು ವಿಶೇಷವಾಗಿ ನನ್ನ ಪಾಲಿಗೆ ಕಠಿಣವಾಗಿದ್ದವು. ನಿಸ್ಸಂಶಯವಾಗಿ ಇದು ಕಠಿಣ ನಿರ್ಧಾರವಾಗಿದೆ. ಇದು ಪ್ರಕಟಿಸಲು ನನಗೆ ಸ್ವಲ್ಪ ಸಮಯ ಬೇಕಾಯಿತು . ಈ ಜೀವನದಲ್ಲಿ ಪ್ರತಿಯೊಂದಕ್ಕೂ ಪ್ರಾರಂಭ ಮತ್ತು ಅಂತ್ಯವಿದೆ," ಎಂದು ಭಾವನಾತ್ಮಕವಾಗಿ ಅವರು ನಿವೃತ್ತಿಯನ್ನು ಪ್ರಕಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News