ದ್ವಿತೀಯ ಟೆಸ್ಟ್: ಆಸ್ಟ್ರೇಲಿಯ ಗೆಲುವಿಗೆ 279 ರನ್ ಗುರಿ ನೀಡಿದ ನ್ಯೂಝಿಲ್ಯಾಂಡ್

Update: 2024-03-10 16:17 GMT

ಕ್ರೈಸ್ಟ್‌ಚರ್ಚ್: ರಚಿನ್ ರವೀಂದ್ರ(82 ರನ್, 153 ಎಸೆತ), ಟಾಮ್ ಲ್ಯಾಥಮ್(73 ರನ್, 168 ಎಸೆತ), ಡ್ಯಾರಿಲ್ ಮಿಚೆಲ್(58 ರನ್, 98 ಎಸೆತ)ಹಾಗೂ ಕೇನ್ ವಿಲಿಯಮ್ಸನ್(51 ರನ್, 107 ಎಸೆತ) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಆತಿಥೇಯ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡ ಆಸ್ಟ್ರೇಲಿಯ ತಂಡಕ್ಕೆ 2ನೇ ಟೆಸ್ಟ್ ಪಂದ್ಯದ ಗೆಲುವಿಗೆ 279 ರನ್ ಗುರಿ ನೀಡಿದೆ.

ಗೆಲ್ಲಲು ಸವಾಲಿನ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯ 3ನೇ ದಿನದಾಟದಂತ್ಯಕ್ಕೆ 24 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 77 ರನ್ ಗಳಿಸಿದೆ. ನಾಲ್ಕನೇ ದಿನದಾಟವಾದ ಸೋಮವಾರ 6 ವಿಕೆಟ್ ನೆರವಿನಿಂದ ಇನ್ನೂ 202 ರನ್ ಗಳಿಸಬೇಕಾಗಿದೆ. ಟ್ರಾವಿಸ್ ಹೆಡ್(17 ರನ್) ಹಾಗೂ ಮಿಚೆಲ್ ಮಾರ್ಷ್(27 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.

3ನೇ ದಿನದಾಟವಾದ ರವಿವಾರ ಕೊನೆಯ 90 ನಿಮಿಷಗಳ ಆಟದಲ್ಲಿ ನಾಟಕೀಯವಾಗಿ ಪ್ರತಿ ಹೋರಾಟ ನೀಡಿದ ನ್ಯೂಝಿಲ್ಯಾಂಡ್ ವೇಗಿಗಳಾದ ಮ್ಯಾಟ್ ಹೆನ್ರಿ (2-37)ಹಾಗೂ ಚೊಚ್ಚಲ ಪಂದ್ಯವನ್ನಾಡುತ್ತಿರುವ ಬೆನ್ ಸೀಯರ್ಸ್ (2-22)ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಈ ಮೂಲಕ 4ನೇ ದಿನದಾಟವನ್ನು ಕುತೂಹಲ ಕೆರಳಿಸುವಂತೆ ಮಾಡಿದ್ದಾರೆ.

ಈ ಇಬ್ಬರು ಬೌಲರ್‌ಗಳು ಆಸ್ಟ್ರೇಲಿಯದ ಪ್ರಮುಖ ಬ್ಯಾಟರ್‌ಗಳಾದ ಸ್ಟೀವನ್ ಸ್ಮಿತ್(9 ರನ್), ಲಾಬುಶೇನ್(6 ರನ್), ಉಸ್ಮಾನ್ ಖ್ವಾಜಾ(11 ರನ್) ಹಾಗೂ ಕ್ಯಾಮರೂನ್ ಗ್ರೀನ್(5 ರನ್)ವಿಕೆಟ್‌ಗಳನ್ನು ಉರುಳಿಸಿದ್ದಾರೆ.

14.2 ಓವರ್‌ಗಳಲ್ಲಿ 34 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡ ಹೊರತಾಗಿಯೂ ಆಸ್ಟ್ರೇಲಿಯ ಮರು ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ. ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 77 ರನ್ ಗಳಿಸಿದೆ. ಮಾರ್ಷ್ ಹಾಗೂ ಟ್ರಾವಿಸ್ ಕ್ರೀಸ್‌ನಲ್ಲಿದ್ದು, ಆಸ್ಟ್ರೇಲಿಯ ಗೆಲುವಿಗೆ ಅಗತ್ಯವಿರುವ ರನ್ ಗಳಿಸುವ ಗುರಿ ಇಟ್ಟುಕೊಂಡಿದೆ.

*ನ್ಯೂಝಿಲ್ಯಾಂಡ್ 372 ರನ್‌ಗೆ ಆಲೌಟ್: ಇದಕ್ಕೂ ಮೊದಲು 2 ವಿಕೆಟ್‌ಗಳ ನಷ್ಟಕ್ಕೆ 134 ರನ್‌ನಿಂದ ಎರಡನೇ ಇನಿಂಗ್ಸ್ ಆರಂಭಿಸಿದ ನ್ಯೂಝಿಲ್ಯಾಂಡ್ 108.2 ಓವರ್‌ಗಳಲ್ಲಿ 372 ರನ್ ಗಳಿಸಿ ಆಲೌಟಾಯಿತು.

ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ 62 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಆಸ್ಟ್ರೇಲಿಯವು ಟೀ ವಿರಾಮದ ನಂತರ ಕಿವೀಸ್ ತಂಡವನ್ನು 2ನೇ ಇನಿಂಗ್ಸ್‌ನಲ್ಲಿ 372 ರನ್‌ಗೆ ನಿಯಂತ್ರಿಸಿತು.

ನ್ಯೂಝಿಲ್ಯಾಂಡ್‌ನ ಹಲವು ಬ್ಯಾಟರ್‌ಗಳು 2ನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನು ಪಡೆದಿದ್ದರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಬೆಳಗ್ಗಿನ ಅವಧಿಯಲ್ಲಿ ಕಮಿನ್ಸ್ ಅವರು ಲ್ಯಾಥಮ್ ವಿಕೆಟನ್ನು ಉರುಳಿಸಿದರು. ಔಟಾಗದೆ 65 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ್ದ ಲ್ಯಾಥಮ್ 73 ರನ್ ಗಳಿಸಿ ಔಟಾದರು. 153 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ 82 ರನ್ ಕೊಡುಗೆ ನೀಡಿದ ರಚಿನ್ ರವೀಂದ್ರ ಕೂಡ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು.

ಕೆಳ ಕ್ರಮಾಂಕದ ಬ್ಯಾಟರ್‌ಗಳು ಒಂದಷ್ಟು ಪ್ರತಿರೋಧ ಒಡ್ಡಿದರು. ಸ್ಕಾಟ್ ಕುಗ್ಗೆಲಿನ್(44 ರನ್), ಡ್ಯಾರಿಲ್ ಮಿಚೆಲ್(58 ರನ್) ಹಾಗೂ ಗ್ಲೆನ್ ಫಿಲಿಪ್ಸ್ (26 ರನ್)ಉಪಯುಕ್ತ ಕೊಡುಗೆ ನೀಡಿದರು.

ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯದ ಬೌಲಿಂಗ್ ದಾಳಿಗೆ ನಾಥನ್ ಲಿಯೊನ್(3-49) ಹಾಗೂ ಕ್ಯಾಮರೂನ್ ಗ್ರೀನ್(1-48) ಸಾಥ್ ನೀಡಿದರು.

ದ್ವಿತೀಯ ಟೆಸ್ಟ್ ಪಂದ್ಯವು ರೋಚಕವಾಗಿ ಕೊನೆಗೊಳ್ಳಲು ವೇದಿಕೆ ಸಿದ್ದವಾಗಿದ್ದು, ಎರಡೂ ತಂಡಗಳು ಗೆಲುವು ತನ್ನದಾಗಿಸಿಕೊಳ್ಳಲು ಸಜ್ಜಾಗಿವೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News