ಪ್ಯಾರಿಸ್ ಒಲಿಂಪಿಕ್ಸ್‌ನ 5 ಐತಿಹಾಸಿಕ ಸ್ಥಳಗಳು

Update: 2024-07-22 16:02 GMT

ಪ್ಯಾರಿಸ್: ಬೆಳಕಿನ ನಗರ ಪ್ಯಾರಿಸನ್ನು ಅದರ ವೈಭವದ ರೂಪದಲ್ಲಿ ಪ್ರದರ್ಶಿಸಲು ಸಾಧ್ಯವಾಗುವಂತೆ 2024ರ ಪ್ಯಾರಿಸ್ ಒಲಿಂಪಿಕ್ಸನ್ನು ವಿನ್ಯಾಸಗೊಳಿಸಲಾಗಿದೆ. ಒಲಿಂಪಿಕ್ಸ್‌ನ ಕಾರ್ಯಕ್ರಮಗಳು ನಗರದ ಐತಿಹಾಸಿಕ ಸ್ಥಳಗಳಲ್ಲಿ ನಡೆಯಲಿವೆ.

ಪ್ಯಾರಿಸ್‌ನ ಐತಿಹಾಸಿಕ ಐಫೆಲ್ ಟವರ್‌ನಿಂದ ಪೆಸಿಫಿಕ್ ಸಮುದ್ರದ ಮಧ್ಯ ಭಾಗದಲ್ಲಿರುವ ಫ್ರಾನ್ಸ್ ಆಡಳಿತದ ದ್ವೀಪ ಟಹಿಟಿವರೆಗಿನ 33 ಸ್ಥಳಗಳಲ್ಲಿ ಒಲಿಂಪಿಕ್ಸ್ ಸ್ಪರ್ಧೆಗಳು ನಡೆಯಲಿವೆ.

ಜುಲೈ 26ರಿಂದ 17 ದಿನಗಳ ಕಾಲ ನಡೆಯಲಿರುವ ಜಾಗತಿಕ ಕ್ರೀಡಾ ಹಬ್ಬದ ವೇಳೆ ಜನರ ಅಪಾರ ಆಕರ್ಷಣೆಗೆ ಒಳಗಾಗಿರುವ ಐದು ಸ್ಥಳಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಐಫೆಲ್ ಟವರ್

ಪ್ಯಾರಿಸ್‌ನ ಅತ್ಯಂತ ಆಕರ್ಷಣೀಯ ಸ್ಥಳವಾದ ಐಫೆಲ್ ಟವರ್‌ನಲ್ಲಿ ಬೀಚ್ ವಾಲಿಬಾಲ್ ನಡೆಯಲಿದೆ. ‘ಅಯರ್ನ್ ಲೇಡಿ’ಯ ಪಾದದ ಸಮೀಪ ನಿರ್ಮಿಸಲಾಗಿರುವ ತಾತ್ಕಾಲಿಕ ಅಂಗಳದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಟವರ್‌ನ ತಳದಲ್ಲಿರುವ ಚಾಂಪ್ಸ್ ಡಿ ಮಾರ್ಸ್ ಪಾರ್ಕ್‌ನಲ್ಲಿ ಜೂಡೊ ಮತ್ತು ಕುಸ್ತಿ ಸ್ಪರ್ಧೆಗಳು ನಡೆಯಲಿವೆ.

ಇಂಜಿನಿಯರ್ ಗುಸ್ಟಾವ್ ಐಫೆಲ್, 1889ರಲ್ಲಿ ಐಫೆಲ್ ಟವರನ್ನು ಜಾಗತಿಕ ಮೇಳಕ್ಕಾಗಿ ಅನಾವರಣಗೊಳಿಸಿದ್ದರು. ಅದು ಈಗ ರಾಜಧಾನಿಯ ಅಸ್ಮಿತೆಯಾಗಿದೆ. ಒಲಿಂಪಿಕ್ ಪಕದ ವಿಜೇತರು ಈ ಬೃಹತ್ ಕಬ್ಬಿಣದ ರಚನೆಯ ಒಂಡು ತುಂಡು ಕಬ್ಬಿಣವನ್ನು ಪದಕಗಳ ಜೊತೆಗೆ ಸ್ವೀಕರಿಸಲಿದ್ದಾರೆ.

ಗ್ರಾಂಡ್ ಪ್ಯಾಲೇಸ್

ಗ್ರಾಂಡ್ ಪ್ಯಾಲೇಸ್‌ನ ಭವ್ಯ ಅಂಗಣದಲ್ಲಿ ಕತ್ತಿವರಸೆ ಮತ್ತು ಟೇಕ್ವಾಂಡೊ ಪಂದ್ಯಗಳು ನಡೆಯಲಿವೆ.

ಗಾಜು ಮತ್ತು ಉಕ್ಕಿನ ಈ ಭವ್ಯ ಕಟ್ಟಡವನ್ನು 1900ರಲ್ಲಿ ಜಾಗತಿಕ ಮೇಳಕ್ಕಾಗಿ ನಿರ್ಮಿಸಲಾಗಿತ್ತು. ಈ ಭವ್ಯ ಕಟ್ಟಡವು 13,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ.

ಪ್ಲೇಸ್ ಡಿ ಲಾ ಕಾನ್‌ಕಾರ್ಡ್

ಚಾಂಪ್ಸ್-ಎಲೈಸೀಸ್ ಅವೆನ್ಯೂನ ತಳದಲ್ಲಿರುವ ಬೃಹತ್ ಚೌಕವು ನಗರ ಕ್ರೀಡಾ ಕೇಂದ್ರವಾಗಿ ಹೊರಹೊಮ್ಮಲಿದೆ. ಈ ಚೌಕದಲ್ಲಿ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ತಲೆಗಳು ಉರುಳಿದ್ದವು.

ಸ್ಕೇಟ್‌ಬೋರ್ಡಿಂಗ್, 3x3 ಬಾಸ್ಕೆಟ್‌ಬಾಲ್, ಬಿಎಮ್‌ಎಕ್ಸ್ ಪ್ರೀಸ್ಟೈಲ್ ಮತ್ತು ಬ್ರೇಕ್‌ಡ್ಯಾನ್ಸಿಂಗ್ (ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದೆ) ಸ್ಪರ್ಧೆಗಳು ಇಲ್ಲಿ ನಡೆಯಲಿವೆ.

ಸೀನ್ ನದಿಯ ದಂಡೆಯಲ್ಲಿರುವ ಈ ಆಕರ್ಷಕ ಚೌಕದ ಹೆಸರು ಅದರ ರಕ್ತಸಿಕ್ತ ಇತಿಹಾಸವನ್ನು ಮರೆಮಾಚುತ್ತದೆ. 1789ರ ಫ್ರೆಂಚ್ ಕ್ರಾಂತಿಯ ಬಳಿಕದ ಭಯಾನಕ ಆಡಳಿತದ ವೇಳೆ, 1793ರಲ್ಲಿ ದೊರೆ 16ನೇ ಲೂಯಿಸ್ ಮತ್ತು ಆತನ ಪತ್ನಿ ಮೇರೀ ಆ್ಯಂಟೋನೆಟ್‌ರನ್ನು ಈ ಚೌಕದಲ್ಲಿ ಗಲ್ಲಿಗೇರಿಸಲಾಗಿತ್ತು.

ವರ್ಸೇಲ್ಸ್ ಅರಮನೆ

ಪ್ಯಾರಿಸ್‌ನಿಂದ 20 ಕಿಲೋಮೀಟರ್ ದೂರದಲ್ಲಿರುವ ವರ್ಸೇಲ್ಸ್ ಅರಮನೆಯಲ್ಲಿ ಡ್ರೆಸ್ಸೇಜ್, ಶೋಜಂಪಿಂಗ್ ಮತ್ತು ಕುದುರೆ ಸವಾರಿ ಸ್ಪರ್ಧೆಗಳು ನಡೆಯಲಿವೆ. ಮ್ಯಾರತನ್ ಸರ್ಕೀಟ್‌ನಲ್ಲೂ ಇದು ಕಾಣಿಸಿಕೊಳ್ಳಲಿದೆ ಮತ್ತು ಪೆಂಟತ್ಲಾನ್‌ನ ಸ್ಪರ್ಧೆಗಳೂ ಇಲ್ಲಿ ನಡೆಯಲಿವೆ.

17ನೇ ಶತಮಾನದಲ್ಲಿ, ‘ದ ಸನ್ ಕಿಂಗ್’ 14ನೇ ಲೂಯಿಸ್, ವರ್ಸೇಲ್ಸನ್ನು ಫ್ರೆಂಚ್ ರಾಜ ಮನೆತನದ ಮನೆಯನ್ನಾಗಿ ಪರಿವರ್ತಿಸಿದರು. ಅಲ್ಲಿ ಅವರು ತನ್ನ ಸುಮಾರು 10,000 ಸಿಬ್ಬಂದಿಯೊಂದಿಗೆ ವಾಸವಾಗಿದ್ದರು.

ಮಾರ್ಸಿಲ್

ರಾಜಧಾನಿ ಪ್ಯಾರಿಸನ್ನು ಮೀರಿಯೂ ಒಲಿಂಪಿಕ್ಸ್ ಆವರಿಸಿಕೊಳ್ಳುತ್ತಿದೆ. ಮೆಡಿಟರೇನಿಯನ್ ಸಮುದ್ರದ ದಂಡೆಯಲ್ಲಿರುವ ಮಾರ್ಸಿಲ್ ನಗರದಲ್ಲಿ ಸೇಲಿಂಗ್ (ಹಾಯಿ ದೋಣಿ) ಸ್ಪರ್ಧೆಗಳು ನಡೆಯಲಿವೆ. ಇದು ಫ್ರಾನ್ಸ್‌ನ ಎರಡನೇ ಅತಿ ಮಹತ್ವದ ನಗರವಾಗಿದೆ. ಇದು ಒಲಿಂಪಿಕ್ ಮಾರ್ಸಿಲ್ ಫುಟ್ಬಾಲ್ ತಂಡದ ಮನೆ ಎಂಬುದಾಗಿ ಹೆಸರುವಾಸಿಯಾಗಿದೆ.

ನಗರಕ್ಕೆ ಹೊಂದಿಕೊಂಡಿರುವ ಮೆಡಿಟರೇನಿಯನ್ ಸಮುದ್ರದಲ್ಲಿ ಜಗತ್ತಿನ ವಿವಿಧ ಭಾಗಗಳಿಂದ ಬಂದಿರುವ 300ಕ್ಕೂ ಅಧಿಕ ಸೇಲರ್‌ಗಳು ತಮ್ಮ ಸಾಮರ್ಥ್ಯ ಪ್ರದರ್ಶನದಲ್ಲಿ ತೊಡಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News