ಬುಮ್ರಾಗೆ 6 ವಿಕೆಟ್; ಮಾರಕ ದಾಳಿಗೆ ಮಗುಚಿದ ಇಂಗ್ಲೆಂಡ್

Update: 2024-02-03 16:44 GMT

ಬುಮ್ರಾ | Photo: NDTV 



ವಿಶಾಖಪಟ್ಟಣಂ : ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ರ ಭವ್ಯ ದ್ವಿಶತಕ ಮತ್ತು ವೇಗಿ ಜಸ್ಪ್ರೀತ್ ಬುಮ್ರಾರ ಮಾರಕ ಬೌಲಿಂಗ್ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ನ ಎರಡನೇ ದಿನವಾದ ಶನಿವಾರ ಭಾರತ ಅತ್ಯುತ್ತಮ ಸ್ಥಿತಿಯಲ್ಲಿದೆ.

ಇಂಗ್ಲೆಂಡ್ ತಂಡದ ಪ್ರಥಮ ಇನ್ನಿಂಗ್ಸ್ ನಲ್ಲಿ ರಿವರ್ಸ್ ಸ್ವಿಂಗನ್ನು ನಿಖರವಾಗಿ ಬಳಸಿದ ಬುಮ್ರಾ 15.5 ಓವರ್ ಗಳಲ್ಲಿ ಕೇವಲ 45 ರನ್ಗಳನ್ನು ನೀಡಿ ಆರು ವಿಕೆಟ್ಗಳನ್ನು ಉರುಳಿಸಿದರು. ಇದು ಭಾರತದಲ್ಲಿ ಅವರ ಶ್ರೇಷ್ಠ ಸಾಧನೆಯಾಗಿದೆ.

ಈ ಮೂಲಕ, 150 ಟೆಸ್ಟ್ ವಿಕೆಟ್ಗಳನ್ನು ವೇಗವಾಗಿ ಗಳಿಸಿದ ಏಶ್ಯದ ಎರಡನೇ ಬೌಲರ್ ಆದರು. ಮೊದಲ ಸ್ಥಾನದಲ್ಲಿ ಪಾಕಿಸ್ತಾನದ ವಕಾರ್ ಯೂನಿಸ್ ಇದ್ದಾರೆ.

ಇದರೊಂದಿಗೆ ಇಂಗ್ಲೆಂಡ್ಗೆ ತನ್ನ ಮೊದಲ ಇನಿಂಗ್ಸ್ ನಲ್ಲಿ 55.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು ಕೇವಲ 253 ರನ್ಗಳನ್ನು ಗಳಿಸಲು ಸಾಧ್ಯವಾಯಿತು.

ಇದಕ್ಕೂ ಮೊದಲು, ಭಾರತವು ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ರ ಭರ್ಜರಿ 209 ರನ್ಗಳ ನೆರವಿನಿಂದ 396 ರನ್ಗಳನ್ನು ಗಳಿಸಿತು.

ದಿನದಾಟ ಕೊನೆಗೊಂಡಾಗ ಭಾರತ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 28 ರನ್ಗಳನ್ನು ಗಳಿಸಿದೆ. ಈ ಮೂಲಕ ಭಾರತ ಈಗ ಒಟ್ಟಾರೆ 171 ರನ್ಗಳ ಮುನ್ನಡೆಯಲ್ಲಿದೆ.

ಶನಿವಾರ ಬೆಳಗ್ಗೆ, ಭಾರತ ತನ್ನ ಮೊದಲ ಇನಿಂಗ್ಸನ್ನು ಮುನ್ನಾ ದಿನದ ಮೊತ್ತವಾದ 6 ವಿಕೆಟ್ಗಳ ನಷ್ಟಕ್ಕೆ 336 ರನ್ ಇದ್ದಲ್ಲಿಂದ ಆರಂಭಿಸಿತು.

ಮುನ್ನಾ ದಿನ 179 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಯಶಸ್ವಿ ಜೈಸ್ವಾಲ್ ಶನಿವಾರ ತನ್ನ ಚೊಚ್ಚಲ ದ್ವಿಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ, ಟೆಸ್ಟ್ ದ್ವಿಶತಕ ಬಾರಿಸಿದ ಭಾರತದ ಮೂರನೇ ಅತಿ ಕಿರಿಯ ಆಟಗಾರನಾದರು.

ಭಾರತೀಯ ಇನ್ನಿಂಗ್ಸ್ ನಲ್ಲಿ ಜೈಸ್ವಾಲ್ರ ಬ್ಯಾಟಿಂಗ್ ವೈಭವವೇ ಮುಖ್ಯ ಅಂಶವಾಗಿತ್ತು. ಉಳಿದಂತೆ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಯಾವುದೇ ಭಾರತೀಯ ಬ್ಯಾಟರ್ ಗಳಿಗೆ ಸಾಧ್ಯವಾಗಲಿಲ್ಲ.

ಜೈಸ್ವಾಲ್ ಸೇರಿದಂತೆ ಜೇಮ್ಸ್ ಆ್ಯಂಡರ್ಸನ್ ದಾಳಿಯನ್ನು ಎದುರಿಸಲು ಭಾರತೀಯ ಬ್ಯಾಟರ್ ಗಳು ಪರದಾಡಿದರು. ಅಂತಿಮವಾಗಿ ಜೈಸ್ವಾಲ್ ಕೂಡ ಆ್ಯಂಡರ್ಸನ್ ಎಸೆತಕ್ಕೆ ಬಲಿಯಾದರು.

ಜೈಸ್ವಾಲ್ರನ್ನು ಹೊರತುಪಡಿಸಿದರೆ, ಶುಬ್ಮನ್ ಗಿಲ್ ಗಳಿಸಿದ 34 ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಇಂಗ್ಲೆಂಡ್ ಪರವಾಗಿ ಜೇಮ್ಸ್ ಆ್ಯಂಡರ್ಸನ್, ಶುಐಬ್ ಬಶೀರ್ ಮತ್ತು ರೆಹಾನ್ ಅಹ್ಮದ್ ತಲಾ ಮೂರು ವಿಕೆಟ್ಗಳನ್ನು ಉರುಳಿಸಿದರು. ಮೊದಲ ಟೆಸ್ಟ್ ನಲ್ಲಿ ಆಕ್ರಮಣಕಾರಿ ಬೌಲಿಂಗ್ ನಡೆಸಿದ್ದ ಟಾಮ್ ಹಾಟ್ರ್ಲಿಗೆ ಒಂದು ವಿಕೆಟ್ ಮಾತ್ರ ಲಭಿಸಿತು.

ಬಳಿಕ, ಇಂಗ್ಲೆಂಡ್ ತನ್ನ ಎರಡನೇ ಇನಿಂಗ್ಸ್ ನಲ್ಲಿ 253 ರನ್ಗಳಿಗೆ ಆಲೌಟಾಯಿತು. ಆ ಮೂಲಕ ಭಾರತ 143 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು.

ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್ ನ ಆರಂಭ ಆಕ್ರಮಣಕಾರಿಯಾಗಿತ್ತು. ಆರಂಭಿಕ ಝ್ಯಾಕ್ ಕ್ರಾಲಿ 78 ಎಸೆತಗಳಲ್ಲಿ 76 ರನ್ಗಳನ್ನು ಸಿಡಿಸಿದರು.

ಬಳಿಕ ತನ್ನ ಬತ್ತಳಿಕೆಯಿಂದ ರಿವರ್ಸ್ ಸ್ವಿಂಗನ್ನು ಹೊರತೆಗೆದ ಬುಮ್ರಾ ಇಂಗ್ಲೆಂಡ್ನ ಧಾವಂತಕ್ಕೆ ಕಡಿವಾಣ ಹಾಕಿದರು. ಈ ಪ್ರಕ್ರಿಯೆಯಲ್ಲಿ ಅವರು ತನ್ನ 10ನೇ ಐದು ವಿಕೆಟ್ ಗೊಂಚಲು ಪಡೆದರು.

ಜೋ ರೂಟ್ (5), ಓಲೀ ಪೋಪ್ (23), ಜಾನಿ ಬೈರ್ಸ್ಟೋ (25), ಬೆನ್ ಸ್ಟೋಕ್ಸ್ (47), ಟಾಮ್ ಹಾಟ್ರ್ಲಿ (21) ಮತ್ತು ಜೇಮ್ಸ್ ಆ್ಯಂಡರ್ಸನ್ (6) ಬುಮ್ರಾರ ರಿವರ್ಸ್ ಸ್ವಿಂಗ್ ದಾಳಿಯ ಬಲಿಪಶುಗಳಾದರು.

ಸರಣಿಯಲ್ಲಿ ತನ್ನ ಮೊದಲ ಪಂದ್ಯವನ್ನಾಡುತ್ತಿರುವ ಕುಲದೀಪ್ ಯಾದವ್ ಮೂರು ವಿಕೆಟ್ಗಳನ್ನು ಉರುಳಿಸಿದರು.

ಇಂಗ್ಲೆಂಡ್ನ ಮೊದಲ ಇನಿಂಗ್ಸ್ ಮುಕ್ತಾಯದ ಬಳಿಕ, ಎರಡನೇ ದಿನದಾಟ ಮುಗಿಯುವ ಮುನ್ನ ಭಾರತ ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ 5 ಓವರ್ ಗಳನ್ನು ಎದುರಿಸಬೇಕಾಗಿತ್ತು. ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದೆ 28 ರನ್ಗಳನ್ನು ಗಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News