ಸ್ವದೇಶದಲ್ಲಿ ಮೊದಲ 10 ಇನಿಂಗ್ಸ್‌ಗಳಲ್ಲಿ 750ಕ್ಕೂ ಅಧಿಕ ರನ್ | ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಜೈಸ್ವಾಲ್
ಚೆನ್ನೈ : ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ಗುರುವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಭಾರತವು ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ದೃತಿಗೆಡದ ಜೈಸ್ವಾಲ್ ಬಾಂಗ್ಲಾದೇಶದ ಗಮನಾರ್ಹ ಬೌಲಿಂಗ್ ದಾಳಿ ಎದುರು ದಿಟ್ಟ ಅರ್ಧಶತಕ ಗಳಿಸಿದರು. ಈ ಮೂಲಕ 147 ವರ್ಷಗಳ ಇತಿಹಾಸ ಹೊಂದಿರುವ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ವದೇಶದಲ್ಲಿ ಆಡಿರುವ ತನ್ನ ಮೊದಲ 10 ಇನಿಂಗ್ಸ್‌ಗಳಲ್ಲಿ 750ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಈ ದಾಖಲೆಯು ವೆಸ್ಟ್‌ಇಂಡೀಸ್‌ನ ಜಾರ್ಜ್ ಹೆಡ್ಲಿ ಹೆಸರಲ್ಲಿತ್ತು. ಹೆಡ್ಲಿ 1935ರಲ್ಲಿ 747 ರನ್ ಗಳಿಸಿದ್ದರು.
ಭಾರತವು ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸಹಿತ ಪ್ರಮುಖ ಆಟಗಾರರನ್ನು ಕಳೆದುಕೊಂಡು ಪಂದ್ಯ ಆರಂಭವಾಗಿ ಒಂದು ಗಂಟೆಯೊಳಗೆ 34 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ 56 ರನ್ ಗಳಿಸಿದ ಜೈಸ್ವಾಲ್ ಅವರು ರಿಷಭ್ ಪಂತ್ ಅವರೊಂದಿಗೆ 62 ರನ್ ಜೊತೆಯಾಟ ನಡೆಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಜೈಸ್ವಾಲ್ ಅರ್ಧಶತಕ ಗಳಿಸಿದ ಸ್ವಲ್ಪ ಹೊತ್ತಿನಲ್ಲೇ ಬಾಂಗ್ಲಾದೇಶದ ವೇಗಿ ನಹೀದ್ ರಾಣಾಗೆ ವಿಕೆಟ್ ಒಪ್ಪಿಸಿದರು.
►ಸ್ವದೇಶದಲ್ಲಿ ಮೊದಲ 10 ಇನಿಂಗ್ಸ್‌ಗಳ ನಂತರ ಗರಿಷ್ಠ ರನ್ ಗಳಿಸಿದ ಬ್ಯಾಟರ್‌ಗಳು
755-ಯಶಸ್ವಿ ಜೈಸ್ವಾಲ್(ಭಾರತ)
747-ಜಾರ್ಜ್ ಹೆಡ್ಲ್ಲಿ(ವೆಸ್ಟ್‌ಇಂಡೀಸ್)
743-ಜಾವೇದ್ ಮಿಯಾಂದಾದ್(ಪಾಕಿಸ್ತಾನ)
687-ಡೇವ್ ಹೌಟನ್(ಝಿಂಬಾಬ್ವೆ)
680-ಸರ್ ವಿವಿ ರಿಚರ್ಡ್ಸ್(ವೆಸ್ಟ್‌ಇಂಡೀಸ್)