ಪ್ಯಾರಿಸ್ ಒಲಿಂಪಿಕ್ಸ್ ಗೆ ಅದ್ದೂರಿ ತೆರೆ | 2028ರ ಒಲಿಂಪಿಕ್ಸ್ ಗೆ ಲಾಸ್ಏಂಜಲೀಸ್ ಆತಿಥ್ಯ
ಪ್ಯಾರಿಸ್ : ಬೆಳಕಿನ ನಗರಿ ಪ್ಯಾರಿಸ್ ನಲ್ಲಿ ನಡೆದ ಈ ಬಾರಿಯ ವಿಶ್ವದ ಮಹಾನ್ ಕ್ರೀಡಾಮೇಳ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಸೀನ್ ನದಿಯಲ್ಲಿ ವಿಶಿಷ್ಟವಾಗಿ ಉದ್ಘಾಟನೆಗೊಂಡಿರುವ 33ನೇ ಆವೃತ್ತಿಯ ಒಲಿಂಪಿಕ್ಸ್ ಪ್ರತಿಷ್ಠಿತ ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಅದ್ದೂರಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿದೆ.
ಪ್ಯಾರಿಸ್ ಬರೋಬ್ಬರಿ 100 ವರ್ಷಗಳ ನಂತರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಿತ್ತು. 45,000 ಸ್ವಯಂಸೇವಕರ ದಣಿವರಿಯದ ಪ್ರಯತ್ನವನ್ನು ಸಂಘಟಕರು ಶ್ಲಾಘಿಸಿದರು.
ಈ ಬಾರಿಯ ಒಲಿಂಪಿಕ್ಸ್ ನಲ್ಲಿ ನಾಲ್ಕು ಚಿನ್ನದ ಪದಕ ಜಯಿಸಿರುವ ಫ್ರೆಂಚ್ ಐಕಾನ್ ಲಿಯೊನ್ ಮರ್ಚಂದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 205 ನಿಯೋಗಗಳ ಧ್ವಜಧಾರಿಗಳು ಕ್ರೀಡಾಂಗಣಕ್ಕೆ ಪ್ರವೇಶಿಸಿ ಕೇಂದ್ರ ವೇದಿಕೆಯಲ್ಲಿ ಜಮಾಯಿಸಿದರು. ಸುಮಾರು 9,000 ಕ್ರೀಡಾಪಟುಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದು ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಪಿ.ಆರ್. ಶ್ರೀಜೇಶ್ ಹಾಗೂ ಪ್ಯಾರಿಸ್ ಒಲಿಂಪಿಕ್ಸ್ ಎರಡು ಪದಕ ಜಯಿಸಿರುವ ಶೂಟರ್ ಮನು ಭಾಕರ್ ಪರೇಡ್ ಆಫ್ ನೇಶನ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದರು.
ವಿಶ್ವದಾದ್ಯಂತದ ಕ್ರೀಡಾಪಟುಗಳ ಪ್ರದರ್ಶನವನ್ನು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಪ್ರಶಂಶಿಸಿದರು.
ಎರಡು ವಾರಗಳಿಗೂ ಅಧಿಕ ಸಮಯ ನಡೆದ ಕ್ರೀಡಾಕೂಟದಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಹೊಸ ತಾರೆಗಳು ಉದಯಿಸಿದರು. ಹತ್ತಾರು ಅವಿಸ್ಮರಣೀಯ ಕ್ರೀಡಾಸ್ಫೂರ್ತಿಯ ಕ್ಷಣಗಳು ಸಾಕ್ಷಿಯಾದವು.
2028ರಲ್ಲಿ ಒಲಿಂಪಿಕ್ಸ್ ಕೂಟಕ್ಕೆ ಆತಿಥ್ಯವಹಿಸಲಿರುವ ಮನರಂಜನೆಯ ನಗರಿ ಲಾಸ್ ಏಂಜಲೀಸ್ಗೆ ಒಲಿಂಪಿಕ್ಸ್ ಬಾವುಟವನ್ನು ಹಸ್ತಾಂತರಿಸಲಾಯಿತು. ಪ್ಯಾರಿಸ್ ಮೇಯರ್ ಅನ್ನೆ ಹಿಡಾಲ್ಗೊ ಅವರು ಲಾಸ್ ಏಂಜಲೀಸ್ ಮೇಯರ್ ಕರೆನ್ ಬಾಸ್ಗೆ ಧ್ವಜವನ್ನು ಹಸ್ತಾಂತರಿಸಿದರು. ಆತಿಥೇಯ ಫ್ರಾನ್ಸ್ ನ ಈಜು ಚಾಂಪಿಯನ್ ಲಿಯೊ ಮೊರಷಾ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು. ಒಟ್ಟು 126 ಪದಕಗಳನ್ನು ಜಯಿಸಿ ಅಗ್ರ ಸ್ಥಾನ ಪಡೆದಿರುವ ಅಮೆರಿಕವು ತನ್ನ ದೇಶದ ಲಾಸ್ ಏಂಜಲೀಸ್ ನಲ್ಲಿ ಮುಂದಿನ ಬಾರಿ ಒಲಿಂಪಿಕ್ಸ್ ಗೆ ಆತಿಥ್ಯವಹಿಸುತ್ತಿರುವುದು ವಿಶೇಷವಾಗಿದೆ.
ಜುಲೈ 26ರಂದು ಸೀನ್ ನದಿಯಲ್ಲಿ ಸುಮಾರು 4 ತಾಸು ನಡೆದಿದ್ದ ಭವ್ಯ ಸಮಾರಂಭದಲ್ಲಿ ಒಲಿಂಪಿಕ್ಸ್ ಉದ್ಘಾಟನೆಯಾಗಿತ್ತು. ಆದರ ನಂತರ 200ಕ್ಕೂ ಅಧಿಕ ದೇಶಗಳ 10,000ಕ್ಕೂ ಅಧಿಕ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಪಣಕ್ಕೊಡ್ಡಿದ್ದರು.
ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಫ್ರಾನ್ಸ್ ದೇಶದ ಜನಪದ ಕಲೆಗಳ ಪ್ರದರ್ಶನ, ನೃತ್ಯ, ಸಂಗೀತದ ರಸದೌತಣ ನಡೆಯಿತು. ಕ್ರೀಡೆಗಳು ಹಾಗೂ ಸಮಾರಂಭವನ್ನು ಕಣ್ತುಂಬಿಕೊಂಡ ಲಕ್ಷಾಂತರ ಕ್ರೀಡಾಭಿಮಾನಿಗಳು ನೆನಪಿನ ಬುತ್ತಿಯೊಂದಿಗೆ ತಾಯ್ನಾಡಿಗೆ ವಾಪಸಾದರು.