ಶ್ರೀಲಂಕಾಗೆ ಸೋಲುಣಿಸಿದ ಅಫ್ಘಾನಿಸ್ತಾನ
ಪುಣೆ : ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಮೆಂಡಿಸ್ ಬಳಗ 2023 ರ ವಿಶ್ವಕಪ್ ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಶ್ರೀಲಂಕಾ ಗೆ ಮುಂದಿನ ಹಾದಿ ದುರ್ಗಮವಾಗಿದೆ.
ಟೂರ್ನಿಯುದ್ದಕ್ಕೂ ಅಚ್ಚರಿಯ ಪ್ರದರ್ಶನದ ಮೂಲಕ ಸುದ್ದಿಯಲ್ಲಿರುವ ಅಫ್ಘಾನಿಸ್ತಾನ, ಈ ಗೆಲವುನೊಂದಿಗೆ ಅಂಕ ಪಟ್ಟಿಯಲ್ಲಿ ಸ್ಥಾನ ಉತ್ತಮ ದರ್ಜೆಗೆ ಏರಿಸಲಿದೆ. ಅಫ್ಘಾನಿಸ್ತಾನ ತಂಡದ ಅಚ್ಚರಿ ಪ್ರದರ್ಶನ ಅದನ್ನು ಈ ವಿಶ್ವಕಪ್ ನಲ್ಲಿ ಅಗ್ರ ನಾಲ್ಕರ ಪಟ್ಟಿಯಲ್ಲಿ ತಂದರೂ ಅಚ್ಚರಿಯಿಲ್ಲ.
ಈ ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ತಂಡ ಅಫ್ಘಾನಿಸ್ತಾನಕ್ಕೆ 241ರನ್ ಗಳ ಸಾಧಾರಣ ಗುರಿ ನೀಡಿತ್ತು. ಈ ಅಲ್ಪ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ದಿಲ್ಶನ್ ಮಧುಶಂಕ ಎಸೆದ ಓವರ್ ನ ನಾಲ್ಕನೇ ಎಸೆತಕ್ಕೆ ರಹ್ಮತುಲ್ಲಾ ಗರ್ಬಾಝ್ ಬೌಲ್ಡ್ ಆದಾಗ ಪಂದ್ಯ ಶ್ರೀಲಂಕಾ ಪರ ತಿರುವು ಪಡೆಯಬಹುದೇ ಎಂಬ ಕುತೂಹಲ ಹೆಚ್ಚಿತ್ತು. ಈ ವಿಕೆಟ್ ಪತನ ಅಫ್ಘಾನಿಸ್ತಾನಕ್ಕೆ ಅಕ್ಷರಶಃ ಆಘಾತ ನೀಡಿತು.
ನಂತರ ಇಬ್ರಾಹಿಂ ಝರ್ದಾನ್ ಜೊತೆಯಾಟ ನಡೆಸಿದ ರಹ್ಮಾತ್ ಶಾ ಜೋಡಿ ಕ್ರೀಸ್ ಗೆ ಅಂಟಿಕೊಂಡು ರಕ್ಷಣಾತ್ಮಕ ಆಟವಾಡಿತು. 57 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿಗಳೊಂದಿಗೆ 39 ರನ್ ಗಳಿಸಿದ್ದ ಇಬ್ರಾಹಿಂ ಝರ್ದಾನ್, ದಿಲ್ಶನ್ ಮಧುಶಂಕ ಬೌಲಿಂಗ್ ನಲ್ಲಿ ದಿಮುತ್ ಕರುಣಾರತ್ನೆ ಅವರಿಗೆ ಕ್ಯಾಚಿತ್ತು ಔಟ್ ಆದರು. ಅದರೊಂದಿಗೆ 16.5 ಓವರ್ ಗೆ 73 ರನ್ ಗಳಿಸಿದ್ದಾಗ ಅಫ್ಘಾನಿಸ್ತಾನದ 2 ನೇ ವಿಕೆಟ್ ಪತನವಾಯಿತು.
27.6 ನೇ ಓವರ್ ನಲ್ಲಿ ರಹ್ಮರ್ ಷಾ 74 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 62 ರನ್ ಗಳಿಸಿದ್ದಾಗ ಕಸುನ್ ರಜಿತ ಬೌಲಿಂಗ್ ನಲ್ಲಿ ದಿಮುತ್ ಕರುಣಾರತ್ನೆ ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ನಾಯಕ ಹಶ್ಮತುಲ್ಲಾ ಶಾಹಿದಿ 74 ಎಸೆತಗಳಲ್ಲಿ 1 ಸಿಕ್ಸರ್ 2 ಬೌಂಡರಿಗಳೊಂದಿಗೆ 58 ರನ್, ಅಝ್ಮತುಲ್ಲಾ ಒಮರ್ಝಾಯ್ 63 ಎಸೆತಗಳಿಗೆ 3ಸಿಕ್ಸರ್ 6 ಬೌಂಡರಿ ಗಳೊಂದಿಗೆ 73 ರನ್ ಸಿಡಿಸಿ ಪ್ರೇಕ್ಷಕರಿಗೆ ರಸದೌತಣ ನೀಡಿದರು.
ಶ್ರೀಲಂಕಾದ ಪರ ದಿಲ್ಶನ್ ಮಧುಶಂಕ 2, ಕಸುನ್ ರಜಿತ 1 ಒಂದು ವಿಕೆಟ್ ಕಬಳಿಸಿದರು.
ಟಾಸ್ ಗೆದ್ದ ಅಫ್ಘಾನಿಸ್ತಾನ ಫೀಲ್ಡಿಂಗ್ ಆಯ್ದುಕೊಂಡು ಶ್ರೀಲಂಕಾಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಶ್ರೀಲಂಕಾದ ಆರಂಭಿಕ ಬ್ಯಾಟರ್ ಗಳಾದ ಪಾತುಂ ನಿಸ್ಸಾಂಕ ಮತ್ತು ದಿಮುತ್ ಕರುಣಾರತ್ನೆ ನೀರಿಕ್ಷೀತ ಆರಂಭ ಪಡೆಯುವಲ್ಲಿ ಎಡವಿದರು. ದಿಮುತ್ ಕರುಣಾರತ್ನೆ 5.2 ಓವರ್ ನಲ್ಲಿ ಫಝಲ್ ಹಕ್ ಫಾರೂಕ್ ಬೌಲಿಂಗ್ ನಲ್ಲಿ 15 ರನ್ ಗೆ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು.
22 ರನ್ ಗೆ ಮೊದಲ ವಿಕೆಟ್ ಕಳೆದುಕೊಂಡ ಶ್ರೀಲಂಕಾ ಆಘಾತ ಅನುಭವಿಸಿತು. ಓಪನರ್ ಬ್ಯಾಟರ್ ಪಾತುಮ್ ನಿನ್ಸಾಂಕ ಸ್ವಲ್ಪ ಮಟ್ಟಿಗೆ ಕ್ರೀಸ್ ಗೆ ಅಂಟಿಕೊಂಡು ರಕ್ಷಣಾತ್ಮಕ ಆಟವಾಡಲು ಪ್ರಯತ್ನಿಸಿದರು. 60 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 46 ರನ್ ಗಳಿಸಿದ್ದ ಅವರು, ಅರ್ಧ ಶತಕದ ಹೊಸ್ತಿಲಲ್ಲಿ ಅಝ್ಮತುಲ್ಲಾ ಓಮರ್‌ಝಾಯಿ ಅವರ ಬೌಲಿಂಗ್ ನಲ್ಲಿ ರಹ್ಮತುಲ್ಲಾ ಗರ್ಬಾಝ್ ಅವರಿಗೆ ಕ್ಯಾಚಿತ್ತು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.18.1 ಓವರ್ ಗೆ 84 ರನ್ ಗೇ ಲಂಕಾದ 2 ನೇ ವಿಕೆಟ್ ಪತನವಾಯಿತು.
27.4 ನೇ ಓವರ್ ನಲ್ಲಿ ಕುಸಾಲ್ ಮೆಂಡಿಸ್ 50 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 39 ರನ್ ಗಳಿಸಿದ್ದಾಗ ಮುಜೀಬುರ್ರಹ್ಮಾನ್ ಬೌಲಿಂಗ್ ನಲ್ಲಿ ನಜೀಬುಲ್ಲಾ ಝರ್ದಾನ್ ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು. ಸದೀರ ಸಮರವಿಕ್ರಮ ಸ್ವಲ್ಪ ಮಟ್ಟಿಗೆ ಉತ್ತಮ ಆಟ ಪ್ರದರ್ಶಿಸಿದರೂ, ಮುಜೀಬುರ್ರಹ್ಮಾನ್ ರ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದು ವಿಕೆಟ್ ಒಪ್ಪಿಸಿದರು. ಇವರನ್ನು ಹೊರತು ಪಡಿಸಿದರೆ ಲಂಕಾ ಪರ ಯಾವ ಬ್ಯಾಟರ್ ಗಳೂ ಉತ್ತಮ ರನ್ ಗಳಿಸಲಿಲ್ಲ. ಧನಂಜಯ ಡಿʼಸಿಲ್ವಾ 14, ಚರಿತ್ ಅಸಲಂಕ 22, ದುಶ್ಮಂತ ಚಮೀರ 1, ಮಹೇಶ್ ತೀಕ್ಷಣ 29, ಎಂಜೆಲೋ ಮ್ಯಾಥಿಸ್ 23, ಕಸುನ್ ರಜಿತ 5 ರನ್ ಗೆ ರನೌಟ್ ಆಗುವುದರೊಂದಿಗೆ 49.3 ಓವರ್ ಗೆ ಶ್ರೀಲಂಕಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿದ ಶ್ರೀಲಂಕಾ, ಅಫ್ಘಾನಿಸ್ತಾನದ ಎದುರು ಉತ್ತಮ ರನ್ ಗಳಿಸುವಲ್ಲಿಯೂ ವಿಫಲಗೊಂಡಿತು. ಶೀಲಂಕಾ ಬ್ಯಾಟರ್ ಗಳನ್ನು ಅಫ್ಘಾನಿಸ್ತಾನದ ಬೌಲರ್ ಗಳು ಇನ್ನಿಲ್ಲದಂತೆ ಕಾಡಿದರು.
ಅಫ್ಘಾನಿಸ್ತಾನದ ಬೌಲರ್ ಫಝಲ್ ಹಕ್ ಫಾರೂಕಿ ಒಂದು ಮೇಡನ್ ಓವರ್ ಸಹಿತ 10 ಓವರ್ ಗಳಲ್ಲಿ 34 ರನ್ ನೀಡಿ, 4 ವಿಕೆಟ್ ಪಡೆದರು. ಮುಜೀಬುರ್ರಹ್ಮಾನ್ 2 ವಿಕೆಟ್ ಪಡೆದರು. ಅಝ್ಮತುಲ್ಲಾ ಓಮರ್ಝಾಯಿ, ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು.