ಸೆಮೀಸ್ ನಿಂದ ಹೊರಬಿದ್ದ ಅಫ್ಘಾನ್: ಪಾಕಿಸ್ತಾನದ ಭವಿಷ್ಯ ಏನು?
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ ಗಳ ಸೋಲಿನೊಂದಿಗೆ ಅಫ್ಘಾನಿಸ್ತಾನದ ವಿಶ್ವಕಪ್ ಅಭಿಯಾನ ಅಂತ್ಯವಾಗಿದೆ. ಸೆಮಿಫೈನಲ್ ರೇಸ್ ನಲ್ಲಿ ಪಾಕಿಸ್ತಾನ ಹಾಗೂ ನ್ಯೂಝಿಲೆಂಡ್ ಜತೆ ಉಳಿಯಲು ಅಪ್ಘಾನಿಸ್ತಾನ, ಈ ಪಂದ್ಯದಲ್ಲಿ ಬೃಹತ್ ಗೆಲುವು ಸಾಧಿಸಬೇಕಿತ್ತು. ಇದೀಗ ವಿಶ್ವಕಪ್ ಸೆಮಿಫೈನಲ್ ನ ಮೂರು ಸ್ಥಾನಗಳು ನಿರ್ಧರಿತವಾಗಿದ್ದು, ನಾಲ್ಕನೇ ಸ್ಥಾನಕ್ಕೆ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ ನಡುವೆ ಪೈಪೋಟಿ ಇದೆ.
9 ಪಂದ್ಯಗಳಿಂದ 10 ಅಂಕ ಪಡೆದಿರುವ ನ್ಯೂಝಿಲೆಂಡ್ ಉತ್ತಮ ನಿವ್ವಳ ರನ್ ಸರಾಸರಿ ಹೊಂದಿರುವುದರಿಂದ ನಾಲ್ಕರ ಘಟ್ಟಕ್ಕೆ ಮುನ್ನಡೆಯುವ ಅವಕಾಶ ಅಧಿಕವಾಗಿದೆ. 8 ಪಂದ್ಯಗಳಿಂದ 8 ಅಂಕ ಸಂಗ್ರಹಿಸಿರುವ ಪಾಕಿಸ್ತಾನ, ತನ್ನ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದಲ್ಲಿ 287 ರನ್ ಗಳ ಭರ್ಜರಿ ಗೆಲುವು ಸಾಧಿಸಬೇಕಿದೆ. ಒಂದು ವೇಳೆ ಪಾಕಿಸ್ತಾನ, ಎದುರಾಳಿಯ ಗುರಿಯನ್ನು ಬೆನ್ನಟ್ಟಿದಲ್ಲಿ 284 ಎಸೆತಗಳು ಬಾಕಿ ಇರುವಾಗ ಅಂದರೆ 47 ಓವರ್ ಇರುವಂತೆಯೇ ಗೆಲುವು ಸಾಧಿಸಬೇಕು.
245 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 47.4 ಓವರ್ ಗಳಲ್ಲಿ ವಿಜಯದ ನಗೆ ಬೀರಿತು. ಅಂಕ ಪಟ್ಟಿಯಲ್ಲಿ 14 ಅಂಕಗಳೊಂದಿಗೆ ಭಾರತದ ಬಳಿಕ ಎರಡನೇ ಸ್ಥಾನ ಪಡೆಯಿತು. ಭಾರತ ಎಂಟು ಪಂದ್ಯಗಳ ಅಜೇಯ ಅಭಿಯಾನದಲ್ಲಿ 16 ಅಂಕಗಳನ್ನು ಹೊಂದಿದ್ದು, ಒಂದು ಪಂದ್ಯ ಬಾಕಿ ಇದೆ.