ಅಫ್ಘಾನಿಸ್ತಾನಕ್ಕೆ ನಾಳೆ ದಕ್ಷಿಣ ಆಫ್ರಿಕಾ ಸವಾಲು
ಅಹ್ಮದಾಬಾದ್: ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಶುಕ್ರವಾರ ನಡೆಯಲಿರುವ ವಿಶ್ವಕಪ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.
ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ತಂಡಗಳೊಂದಿಗೆ ಅಫ್ಘಾನಿಸ್ತಾನ ತಂಡ ಕೂಡ 4ನೇ ಸ್ಥಾನ ಪಡೆಯುವ ರೇಸ್ನಲ್ಲಿದೆ. ಅಫ್ಘಾನ್ ಹಾಗೂ ಪಾಕ್ ತಂಡಗಳು ಸದ್ಯ 8 ಅಂಕ ಹೊಂದಿವೆ. ಅಫ್ಘಾನ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿದರೆ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಉಳಿದುಕೊಳ್ಳಲಿದೆ.
ಫಲಿತಾಂಶ ಏನೇ ಬಂದರೂ ಪ್ರಸಕ್ತ ಟೂರ್ನಿಯಲ್ಲಿ ಅಫ್ಘಾನ್ ತಂಡ ಪ್ರಬುದ್ಧ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಅಫ್ಘಾನ್ ತಂಡ 8 ಪಂದ್ಯಗಳ ಪೈಕಿ 4ರಲ್ಲಿ ಜಯ ಸಾಧಿಸಿದೆ. ಇಂಗ್ಲೆಂಡ್ ಹಾಗೂ ಪಾಕಿಸ್ತಾನಕ್ಕೆ ಸೋಲುಣಿಸಿರುವ ಅಫ್ಘಾನ್ ತನ್ನ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಹೊಂದಿದೆ.
ರನ್ ಚೇಸಿಂಗ್ ವೇಳೆ ಎಡವುತ್ತಿರುವ ದಕ್ಷಿಣ ಆಫ್ರಿಕಾದ ಬ್ಯಾಟರ್ಗಳ ದೌರ್ಬಲ್ಯದ ಲಾಭ ಪಡೆಯಲು ಅಫ್ಘಾನ್ ನಾಯಕ ಹಶ್ಮತುಲ್ಲಾ ಶಾಹಿದಿ ಯೋಚಿಸುತ್ತಿದ್ದಾರೆ. ಅಫ್ಘಾನ್ ಸ್ಪಿನ್ನರ್ಗಳು ಈ ದೌರ್ಬಲ್ಯದ ಲಾಭ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಸ್ಪಿನ್ ಬೌಲಿಂಗ್ ಅಫ್ಘಾನ್ ತಂಡದ ಶಕ್ತಿಯಾಗಿದೆ. ತಮ್ಮ ವೇಗಿಗಳ ಮೂಲಕವೂ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ.
ಮೊದಲು ಬ್ಯಾಟಿಂಗ್ ಮಾಡಿದಾಗಲೆಲ್ಲಾ ದಕ್ಷಿಣ ಆಫ್ರಿಕಾ ಭರ್ಜರಿ ಪ್ರದರ್ಶನ ನೀಡಿದೆ. ಆದರೆ ರನ್ ಚೇಸ್ ವೇಳೆ ಎಡವಿದೆ.
ಅಫ್ಘಾನ್ ಬ್ಯಾಟಿಂಗ್ ಸರದಿಯಲ್ಲಿ ಇಬ್ರಾಹೀಂ ಝದ್ರಾನ್, ರಹಮತ್ ಶಾ ಹಾಗೂ ಶಾಹಿದಿ ಅವರಂತಹ ಪ್ರಬುದ್ಧ ಆಟಗಾರರಿದ್ದು, ಎಲ್ಲ ಪರಿಸ್ಥಿತಿಗೆ ಹೊಂದಿಕೊಂಡು ಆಡಬಲ್ಲರು.
ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಪಾಳಯದಲ್ಲಿ ಕ್ವಿಂಟನ್ ಡಿಕಾಕ್ ಶ್ರೇಷ್ಠ ಫಾರ್ಮ್ನಲ್ಲಿದ್ದಾರೆ. ಆದರೆ ನಾಯಕ ಟೆಂಬಾ ಬವುಮಾ ತನ್ನ ಲಯ ಕಂಡುಕೊಳ್ಳಬೇಕಾಗಿದೆ. ನಿರ್ಣಾಯಕ ಸೆಮಿ ಫೈನಲ್ಗೆ ಮೊದಲು ಅಫ್ಘಾನ್ ವಿರುದ್ಧ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುವ ಅಪೂರ್ವ ಅವಕಾಶ ಬವುಮಾಗಿದೆ.
ಡೇವಿಡ್ ಮಿಲ್ಲರ್ ವಿಶ್ವಕಪ್ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಎಡಗೈ ವೇಗಿ ಮಾರ್ಕೊ ಜಾನ್ಸನ್ ತನ್ನ ಎಕಾನಮಿ ರೇಟ್ ಸುಧಾರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಮಧ್ಯಮ ಓವರ್ನಲ್ಲಿ ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ರನ್ನು ಹೆಚ್ಚು ಅವಲಂಬಿಸಿದೆ. ಮಧ್ಯಮ ಸ್ಪೆಲ್ನಲ್ಲಿ ಒತ್ತಡ ಕಡಿಮೆ ಮಾಡಬಲ್ಲ ತಬ್ರೈಝ್ ಶಮ್ಸಿ ಅಫ್ಘಾನ್ ವಿರುದ್ಧ ಪಂದ್ಯದಲ್ಲಿ ಆಡುವ ಕುರಿತು ಸ್ಪಷ್ಟತೆ ಇಲ್ಲ.