ರಿಲಯನ್ಸ್ ಜೊತೆಗಿನ ಒಪ್ಪಂದ | ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಗೆ 24 ಕೋಟಿ ರೂ. ನಷ್ಟ!

Update: 2024-10-05 16:08 GMT
PC : X 

ಹೊಸದಿಲ್ಲಿ : ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ರಿಲಯನ್ಸ್ ಇಂಡಿಯಾ ಲಿಮಿಟೆಡ್ (ಆರ್‌ಐಎಲ್)ನೊಂದಿಗೆ ಮಾಡಿಕೊಂಡಿರುವ ‘‘ದೋಷಪೂರಿತ’’ ಪ್ರಾಯೋಜಕ ಒಪ್ಪಂದದಿಂದ ಆರ್‌ಐಎಲ್ ಅನುಚಿತ ಪ್ರಯೋಜನಗಳನ್ನು ಪಡೆದುಕೊಂಡಿದೆ. ಆದರೆ ಐಒಎ 24 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಮಹಾಲೆಕ್ಕಪರಿಶೋಧಕ (ಸಿಎಜಿ)ರ ವರದಿಯೊಂದು ತಿಳಿಸಿದೆ.

2022 ಆಗಸ್ಟ್ ಒಂದರಂದು ಮಾಡಿಕೊಳ್ಳಲಾಗಿರುವ ಪ್ರಾಯೋಜಕ ಒಪ್ಪಂದದ ಪ್ರಕಾರ, ರಿಲಯನ್ಸ್ ಇಂಡಿಯ ಲಿಮಿಟೆಡ್‌ಗೆ ಏಶ್ಯನ್ ಗೇಮ್ಸ್ (2022 ಮತ್ತು 2026), ಕಾಮನ್‌ವೆಲ್ತ್ ಗೇಮ್ಸ್ (2022 ಮತ್ತು 2026), ಪ್ಯಾರಿಸ್ ಒಲಿಂಪಿಕ್ಸ್ 2024 ಮತ್ತು ಲಾಸ್ ಏಂಜಲಿಸ್ ಒಲಿಂಪಿಕ್ಸ್ 2028ರಲ್ಲಿ ಐಒಎಯ ಅಧಿಕೃತ ಪ್ರಧಾನ ಪಾಲುದಾರ ಹಕ್ಕನ್ನು ನೀಡಲಾಗಿದೆ. ಈ ಕ್ರೀಡಾಕೂಟಗಳ ಅವಧಿಯಲ್ಲಿ ‘ಇಂಡಿಯಾ ಹೌಸ್’ನ್ನು ನಿರ್ಮಿಸುವ ಮತ್ತು ಪ್ರದರ್ಶಿಸುವ ಹಕ್ಕುಗಳು ಸೇರಿದಂತೆ ವಿವಿಧ ಹಕ್ಕುಗಳನ್ನು ಒಪ್ಪಂದವು ಆರ್‌ಐಎಲ್‌ಗೆ ನೀಡಿದೆ.

2023 ಡಿಸೆಂಬರ್ 5ರಂದು, ಒಪ್ಪಂದಕ್ಕೆ ತಿದ್ದುಪಡಿ ಮಾಡಿ, ಚಳಿಗಾಲದ ಒಲಿಂಪಿಕ್ ಗೇಮ್ಸ್ (2026, 2030) ಮತ್ತು ಯೂತ್ ಒಲಿಂಪಿಕ್ ಗೇಮ್ಸ್ (2026, 2030)ಗಳ ಹಕ್ಕುಗಳನ್ನೂ ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ಸಿಎಜಿ ವರದಿ ಬೆಟ್ಟು ಮಾಡಿದೆ.

‘‘ಈ ಒಪ್ಪಂದಗಳನ್ನು ಮಾಡಿಕೊಳ್ಳುವಾಗ, ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ತನ್ನ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ನಾಲ್ಕು ಹೆಚ್ಚುವರಿ ಪಂದ್ಯಾವಳಿಗಳ ಹಕ್ಕುಗಳನ್ನು 2023 ಡಿಸೆಂಬರ್ 5ರಂದು ನೀಡಿದ ಬಳಿಕವೂ, 35 ಕೋಟಿ ರೂಪಾಯಿ ಮೂಲ ಪ್ರಾಯೋಜಕ ಶುಲ್ಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ’’ ಎಂದು ಸೆಪ್ಟಂಬರ್ 12ರಂದು ಸಲ್ಲಿಸಲಾಗಿರುವ ತನ್ನ ಲೆಕ್ಕಪರಿಶೋಧನಾ ವರದಿಯಲ್ಲಿ ಸಿಎಜಿ ಹೇಳಿದೆ.

‘‘ಒಪ್ಪಂದಕ್ಕೆ ತಿದ್ದುಪಡಿಯಾದ ಬಳಿಕ ಐಒಎ ತನ್ನ ಪ್ರಾಯೋಜಕ ಶುಲ್ಕವನ್ನು 35 ಕೋಟಿ ರೂಪಾಯಿಯಿಂದ 59 ಕೋಟಿ ರೂಪಾಯಿಗೆ ಹೆಚ್ಚಿಸಬೇಕಾಗಿತ್ತು. 35 ಕೋಟಿ ರೂ. ಮೂಲ ಶುಲ್ಕವನ್ನು ನಿಗದಿಪಡಿಸುವಾಗ ಪ್ರತಿ ಪಂದ್ಯಾವಳಿಗೆ ತಲಾ 6 ಕೋಟಿ ರೂ.ಯಂತೆ ಲೆಕ್ಕಹಾಕಲಾಗಿತ್ತು’’ ಎಂದು ವರದಿ ತಿಳಿಸಿದೆ.

‘‘ಹಾಗಾಗಿ, ಆರ್‌ಐಎಲ್ ಜೊತೆಗಿನ ದೋಷಪೂರಿತ ಒಪ್ಪಂದದಿಂದ ಐಒಎಗೆ 24 ಕೋಟಿ ರೂ. ನಷ್ಟವಾಗಿದೆ ಮತ್ತು ಆರ್‌ಐಎಲ್‌ಗೆ ಅನುಚಿತ ಲಾಭವಾಗಿದೆ’’ ಎಂದು ಅದು ಬೆಟ್ಟು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News