ಮಹಿಳೆಯರ ಸಿಂಗಲ್ಸ್: ಸಿಂಧುಗೆ ಸೋಲು
Update: 2024-03-14 18:00 GMT
ಬರ್ಮಿಂಗ್ ಹ್ಯಾಮ್: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಭಾರತದ ಆಟಗಾರ್ತಿ ಪಿ.ವಿ. ಸಿಂಧು ತನ್ನ ದೀರ್ಘಕಾಲದ ಎದುರಾಳಿ ಕೊರಿಯಾದ ಆ್ಯನ್ ಸೆ ಯಂಗ್ ವಿರುದ್ಧ ನೇರ ಗೇಮ್ ಗಳ ಅಂತರದಿಂದ ಸೋತಿದ್ದಾರೆ.
ಗುರುವಾರ 42 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಡಬಲ್ ಒಲಿಂಪಿಯನ್ ಸಿಂಧು ಮರು ಹೋರಾಟ ನೀಡಲು ಯತ್ನಿಸಿದರೂ ವಿಶ್ವದ ನಂ.1 ಆಟಗಾರ್ತಿಯ ಎದುರು 19-21, 11-21 ಗೇಮ್ ಗಳ ಅಂತರದಿಂದ ಸೋತಿದ್ದಾರೆ.
ಸಿಂಧು ಸತತ ಏಳನೇ ಬಾರಿ ಸೆ ಯಂಗ್ ವಿರುದ್ಧ ಸೋತಿದ್ದಾರೆ. ಸೆ ಯಂಗ್ ಕಳೆದ ವರ್ಷ ವರ್ಲ್ಡ್ ಚಾಂಪಿಯನ್ ಶಿಪ್ ಜಯಿಸಿದ ಕೊರಿಯಾದ ಮೊದಲ ಸಿಂಗಲ್ಸ್ ಆಟಗಾರ್ತಿ ಎನಿಸಿಕೊಂಡಿದ್ದರು.
ಕೊರಿಯಾದ ಆಟಗಾರ್ತಿ ಈ ಋತುವಿನಲ್ಲಿ ಮಲೇಶ್ಯ ಹಾಗೂ ಫ್ರಾನ್ಸ್ ನಲ್ಲಿ ಜಯ ಗಳಿಸಿದ್ದರು. ಸಿಂಧು ಬಲ ಮಂಡಿಗಾಯದಿಂದ ಚೇತರಿಸಿಕೊಂಡ ನಂತರ ಈ ಟೂರ್ನಿಯಲ್ಲಿ ಪುನರಾಗಮನಗೈದಿದ್ದರು.