ಒಲಿಂಪಿಕ್ ಕ್ರೀಡೆಗೆ ವರ್ಣರಂಜಿತ ತೆರೆ; ಅಮೆರಿಕಕ್ಕೆ ಅಗ್ರಸ್ಥಾನ

Update: 2024-08-12 04:24 GMT

ಪ್ಯಾರಿಸ್: ಇಲ್ಲಿನ ಸ್ಟೇಡ್ ಡೇ ಫ್ರಾನ್ಸ್ ನಲ್ಲಿ ಹದಿನೇಳು ದಿನಗಳಿಂದ ನಡೆಯುತ್ತಿದ್ದ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾನುವಾರ ವರ್ಣರಂಜಿತ ತೆರೆ ಬಿದ್ದಿತು. ಸ್ನೂಪ್ ಡಾಗ್, ರೆಡ್ ಹಾಟ್ ಚಿಲ್ಲಿ ಪೆಪ್ಪರ್ಸ್ ಮತ್ತು ಬಿಲ್ಲೀ ಎಲ್ಲೀಶ್ ಸೇರಿದಂತೆ ಹಲವು ವಿಶ್ವವಿಖ್ಯಾತ ಸಂಗೀತ ತಂಡಗಳು ಮುಕ್ತಾಯ ಕಾರ್ಯಕ್ರಮದಲ್ಲಿ ಆಕರ್ಷಕ ಪ್ರದರ್ಶನ ನೀಡಿದವು. ಎಲ್ಲ ಸ್ಪರ್ಧೆಗಳ ಕೊನೆಗೆ ಚೀನಾದ ಜತೆ 40 ಚಿನ್ನದ ಪದಕ ಗೆದ್ದು ಸಮಬಲ ಸಾಧಿಸಿದ ಅಮೆರಿಕ ಪದಕ ಪಟ್ಟಿಯಲ್ಲಿ ಒಟ್ಟಾರೆ ಅಗ್ರಸ್ಥಾನ ಪಡೆಯಿತು.

ಕ್ರೀಡಾಕೂಟದ ಕೊನೆಯ ಸ್ಪರ್ಧೆಯಲ್ಲಿ ಅಮೆರಿಕದ ಬಾಸ್ಕೆಟ್ ಬಾಲ್ ತಂಡ ಫ್ರಾನ್ಸ್ ತಂಡವನ್ನು ರೋಚಕ ಹೋರಾಟದಲ್ಲಿ 67-66 ಪಾಯಿಂಟ್ ಗಳಿಂದ ಸೋಲಿಸಿ ಚಿನ್ನದ ಪದಕ ಪಡೆಯಿತು. ಈ ವಿಭಾಗದಲ್ಲಿ ಅಮೆರಿಕ ವನಿತೆಯರು ಸತತ ಎಂಟನೇ ಚಿನ್ನದ ಪದಕವನ್ನು ಗಳಿಸುವ ಮೂಲಕ ದಾಖಲೆ ಬರೆದರು. ಇದರಿಂದ ಅಮೆರಿಕ ಅಥ್ಲೀಟ್ಗಳು ಗೆದ್ದ ಚಿನ್ನದ ಪದಕದ ಸಂಖ್ಯೆ 40ಕ್ಕೇರಿತು.

ಇದರಿಂದಾಗಿ ಒಟ್ಟಾರೆ ಪದಕ ಪಟ್ಟಿಯಲ್ಲಿ 126 ಪದಕಗಳೊಂದಿಗೆ ಅಮೆರಿಕ ಅಗ್ರಸ್ಥಾನಿಯಾಯಿತು. 91 ಪದಕಗಳನ್ನು ಗೆದ್ದ ಚೀನಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಅಮೆರಿಕ 40 ಚಿನ್ನ, 44 ಬೆಳ್ಳಿ ಹಾಗೂ 42 ಕಂಚಿನ ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿತು. ತೀವ್ರ ಸ್ಪರ್ಧೆ ನೀಡಿದ ಚೀನಾ 40 ಚಿನ್ನ 27 ಬೆಳ್ಳಿ ಹಾಗೂ 24 ಕಂಚಿನ ಪದಕ ಸಂಪಾದಿಸಿತು.

ಜಪಾನ್ ಒಟ್ಟಾರೆ 20 ಚಿನ್ನ 12 ಬೆಳ್ಳಿ ಹಾಗೂ 13 ಕಂಚಿನ ಪದಕಗಳು ಸೇರಿ 45 ಪದಕ ಗೆದ್ದು ಮೂರನೇ ಸ್ಥಾನ ಪಡೆದರೆ, ಆಸ್ಟ್ರೇಲಿಯಾ 18 ಚಿನ್ನ, 19 ಬೆಳ್ಳಿ ಹಾಗೂ 16 ಕಂಚಿನ ಪದಕಗಳೊಂಧಿಗೆ 53 ಪದಕಗಳನ್ನು ಬುಟ್ಟಿಗೆ ಹಾಕಿಕೊಂಡಿತು. ಅತಿಥೇಯ ಫ್ರಾನ್ಸ್ 16 ಚಿನ್ನ, 26 ಬೆಳ್ಳಿ ಹಾಗೂ 22 ಕಂಚಿನ ಪದಕ ಸಹಿತ 64 ಪದಕ ಪಡೆದರೂ, ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಭಾರತ ಈ ಬಾರಿ ಚಿನ್ನದ ಪದಕ ಇಲ್ಲದೇ 1 ಬೆಳ್ಳಿ ಹಾಗೂ 5 ಕಂಚಿನ ಪದಕಗಳೊಂದಿಗೆ 71ನೇ ಸ್ಥಾನಕ್ಕೆ ಕುಸಿಯಿತು. ಕಳೆದ ಒಲಿಂಪಿಕ್ಸ್ ನಲ್ಲಿ ಭಾರತ 1 ಚಿನ್ನ 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳೊಂದಿಗೆ ಏಳು ಪದಕ ಸಂಪಾದಿಸಿ 48ನೇ ಸ್ಥಾನದಲ್ಲಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News