ವಿಶ್ವಕಪ್‌ನಿಂದ ಬೇಗನೆ ನಿರ್ಗಮನ | ವಿದೇಶಿ ಟಿ20 ಲೀಗ್‌ಗಳಲ್ಲಿ ಭಾಗವಹಿಸಲು ಆಟಗಾರರಿಗೆ ಮಿತಿ ಹೇರಿದ ಪಿಸಿಬಿ

Update: 2024-06-15 17:07 GMT

ಕರಾಚಿ : ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಾಷ್ಟ್ರೀಯ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆಟಗಾರರು ಟಿ20 ಲೀಗ್‌ಗಳಲ್ಲಿ ಭಾಗವಹಿಸುವುದನ್ನು ಮಿತಿಗೊಳಿಸುವ ಕುರಿತಂತೆ ಕಠಿಣ ನೀತಿಯನ್ನು ಮರು ಜಾರಿಗೊಳಿಸಲು ಮುಂದಾಗಿದೆ.

ರಾಷ್ಟ್ರೀಯ ತಂಡದ ಪ್ರದರ್ಶನಕ್ಕೆ ಆದ್ಯತೆ ನೀಡಲು ಹಾಗೂ ಆಟಗಾರರ ಕೆಲಸದ ಒತ್ತಡ ನಿಭಾಯಿಸಲು ಕ್ರಿಕೆಟ್ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನಿಂದ ಗ್ರೂಪ್ ಹಂತದಲ್ಲಿಯೇ ನಿರ್ಗಮಿಸಿದ ನಂತರ ಪಿಸಿಬಿ ಆಟಗಾರರ ಗುತ್ತಿಗೆಯನ್ನು ಮರು ಪರಿಶೀಲಿಸಲು ನಿರ್ಧರಿಸಿದೆ.

ಪಿಸಿಬಿಯ ಅಸ್ತಿತ್ವದಲ್ಲಿರುವ ನೀತಿಯ ಪ್ರಕಾರ ರಾಷ್ಟ್ರೀಯ ಹಾಗೂ ದೇಶೀಯ ಗುತ್ತಿಗೆ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಭಾಗವಹಿಸುವುದರ ಜೊತೆಗೆ ವರ್ಷಕ್ಕೆ ಗರಿಷ್ಠ ಎರಡು ವಿದೇಶಿ ಲೀಗ್‌ಗಳಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರಗಳನ್ನು(ಎನ್‌ಒಸಿ)ಪಡೆಯಬಹುದು. ಈ ಹಿಂದೆ ಕಟ್ಟುನಿಟ್ಟಾಗಿ ಜಾರಿಯಾಗದ ಈ ನೀತಿಯನ್ನು ಈಗ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.

ವಿಶ್ವಕಪ್ ತಂಡದಲ್ಲಿದ್ದ ಯುವ ಆಟಗಾರರಾದ ಆಝಮ್ ಖಾನ್ ಹಾಗೂ ಅಯ್ಯೂಬ್‌ರನ್ನು ಫ್ರಾಂಚೈಸಿಗಳು ತಮ್ಮೊಂದಿಗೆ ಉಳಿಸಿಕೊಂಡಿದ್ದರೂ ಕೆರಿಬಿಯನ್ ಪ್ರೀಮಿಯರ್ ಲೀಗ್‌ಗಳಲ್ಲಿ ಭಾಗವಹಿಸಲು ಎನ್‌ಒಸಿ ನಿರಾಕರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News