ಭಾರತ ಟೆಸ್ಟ್ ತಂಡಕ್ಕೆ ಹಿನ್ನಡೆ: ಅರ್ಧದಲ್ಲೇ ತಂಡದಿಂದ ಹೊರನಡೆದ ಆರ್. ಅಶ್ವಿನ್
ರಾಜ್ಕೋಟ್: ಭಾರತ ಟೆಸ್ಟ್ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಕುಟುಂಬದಲ್ಲಿ ತುರ್ತು ವೈದ್ಯಕೀಯ ಸ್ಥಿತಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಅರ್ಧದಿಂದಲೇ ಪಂದ್ಯ ತೊರೆಯಲಿದ್ದಾರೆ ಎಂದು ಬಿಸಿಸಿಐ ಶುಕ್ರವಾರ ತಡರಾತ್ರಿ ಘೋಷಿಸಿದೆ.
ಭಾರತದ ಈ ಆಟಗಾರನ ಖಾಸಗೀತನವನ್ನು ಗೌರವಿಸಿ, ಈ ಬಗ್ಗೆ ಯಾವುದೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಅಗತ್ಯವಿರುವ ಈ ತುರ್ತು ಸಂದರ್ಭದಲ್ಲಿ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದೆ.
ಇಲ್ಲಿ ಬಹಿರಂಗಡಿಸುವಂಥ ಹೆಚ್ಚಿನ ಅಂಶಗಳೇನೂ ಇಲ್ಲ. ತೀವ್ರ ಅಸ್ವಸ್ಥರಾಗಿರುವ ತಾಯಿಯನ್ನು ಸೇರಿಕೊಳ್ಳಲು ಅಶ್ವಿನ್ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ವಿವರಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರ ತಾಯಿ ಶೀಘ್ರ ಗುಣಮುಖರಾಗಲಿ ಎಂಬ ಹಾರೈಕೆ ನಮ್ಮದು. ತಾಯಿಯ ಜತೆ ಇರುವ ಸಲುವಾಗಿ ರಾಜ್ಕೋಟ್ ಟೆಸ್ಟ್ನಿಂದ ಹೊರಬಂದು ಅವರು ಚೆನ್ನೈಗೆ ಬರಬೇಕಾದ ಅನಿವಾರ್ಯತೆ ಇದೆ" ಎಂದು ಶುಕ್ಲಾ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಅಶ್ವಿನ್ ಅವರು ಶುಕ್ರವಾರವಷ್ಟೇ 500ನೇ ಟೆಸ್ಟ್ ವಿಕೆಟ್ ಪಡೆದ ಎರಡನೇ ಭಾರತೀಯ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.