ಏಷ್ಯಾ ಕಪ್ 2023: ತಂಡದಿಂದ ಚಾಹಲ್ ಕೈಬಿಟ್ಟಿದ್ದಕ್ಕೆ ಕಾರಣ ನೀಡಿದ ರೋಹಿತ್ ಶರ್ಮಾ
ಹೊಸದಿಲ್ಲಿ: ಮುಂಬರುವ ಏಷ್ಯಾ ಕಪ್ 2023 ಪಂದ್ಯಾವಳಿಗಾಗಿ ಇಂದು ಘೋಷಣೆಯಾದ ಭಾರತದ ತಂಡದಲ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರನ್ನು ಕೈಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಪ್ತಾನ ರೋಹಿತ್ ಶರ್ಮಾ, ಆಯ್ಕೆಗಾರರು ಭಾರತದ ಬ್ಯಾಟಿಂಗ್ ಸರದಿಯನ್ನು ಬಲಗೊಳಿಸಲು ಹೆಚ್ಚಿನ ಒತ್ತು ನೀಡಿದ ಕಾರಣ ಚಾಹಲ್ ಅವರನ್ನು ಆಯ್ಕೆಮಾಡಲಾಗಿಲ್ಲ ಎಂದು ವಿವರಿಸಿದ್ದಾರೆ.
ತಂಡದಲ್ಲಿ ಉಳಿದಂತೆ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಸ್ಥಾನ ದೊರಕಿದೆ.
“ಆಯ್ಕೆಗಾರರು ಚಾಹಲ್ ಮತ್ತು ಆಫ್ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನೂ ಪರಿಗಣಿಸಿದ್ದರು. ನಮಗೆ ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲವರು ಬೇಕಿತ್ತು, ಅಕ್ಷರ್ ಪಟೇಲ್ ಈ ವರ್ಷ ಉತ್ತಮ ಸ್ಕೋರ್ ಮಾಡಿದ್ದಾರೆ ಹಾಗೂ ಚೆನ್ನಾಗಿ ಬ್ಯಾಟ್ ಮಾಡಿದ್ದಾರೆ,” ಎಂದು ಶರ್ಮ ಹೇಳಿದರು.
“ತಂಡದಲ್ಲಿ ಕೇವಲ 17 ಆಟಗಾರರನ್ನು ಮಾತ್ರ ಹೊಂದಬಹುದಾಗಿದ್ದರಿಂದ ಚಾಹಲ್ ಅವರನ್ನು ಕೈಬಿಡಬೇಕಾಯಿತು. ಅವರನ್ನು ಸೇರಿಸಬೇಕಿದ್ದರೆ ಸೀಮರ್‌ಗಳಲ್ಲಿ ಒಬ್ಬರನ್ನು ಕೈಬಿಡಬೇಕಿತ್ತು, ಆದರೆ ಹಾಗೆ ಮಾಡುವುದು ಸಾಧ್ಯವಿಲ್ಲವಾಗಿತ್ತು,” ಎಂದು ರೋಹಿತ್ ಶರ್ಮಾ ಹೇಳಿದರು.
ಅದೇ ಸಮಯ, ಈ ಹಂತದಲ್ಲಿ ಯಾರಿಗೂ ಯಾವ ಬಾಗಿಲೂ ಮುಚ್ಚಿಲ್ಲ. ಚಾಹಲ್ ಅವರು ಸಾಕಷ್ಟು ಅನುಭವಿ. ಅವರು ವಿಶ್ವ ಕಪ್ ಪಂದ್ಯಕ್ಕೆ ಬೇಕೆಂದಿದ್ದರೆ ಅವರನ್ನು ಹೇಗೆ ಸೇರಿಸಬೇಕೆಂದು ಯೋಚಿಸಬೇಕಿದೆ. ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ವಿಚಾರವೂ ಅದೇ ಆಗಿದೆ. ಎಲ್ಲರಿಗೂ ಆಯ್ಕೆ ತೆರೆದೇ ಇದೆ,” ಎಂದು ಹೇಳಿದರು.
ಆಯ್ಕೆಗಾರರ ತಂಡದ ಅಧ್ಯಕ್ಷ ಅಜಿತ್ ಅಗರ್ಕರ್ ಪ್ರತಿಕ್ರಿಯಿಸಿ, “ಏಷ್ಯಾ ಕಪ್ ತಂಡಕ್ಕಾಗಿ ಇಬ್ಬರು ರಿಸ್ಟ್ ಸ್ಪಿನ್ನರ್‌ಗಳನ್ನು ಹೊಂದುವುದು ಕಷ್ಟವಾಗಿತ್ತು. ಅಕ್ಷರ್ ಪಟೇಲ್ ಮತ್ತು ಕುಲದೀಪ್ ಚೆನ್ನಾಗಿ ಬ್ಯಾಟ್ ಮಾಡಬಲ್ಲರು. ಈ ಕಾರಣ ಅವರು ಚಾಹಲ್‌ಗಿಂತ ಸ್ವಲ್ಪ ಮುಂದೆ ಇದ್ದಾರೆ,” ಎಂದು ಹೇಳಿದರು.