ಏಶ್ಯನ್ ಗೇಮ್ಸ್: ಚೀನಾ ನಂ.1, ಭಾರತದ ಚಾರಿತ್ರಿಕ ಸಾಧನೆ

Update: 2023-10-08 18:32 GMT

ಹಾಂಗ್ಝೌ: ಭಾರತವು 72 ವರ್ಷಗಳ ಏಶ್ಯನ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿ 100ಕ್ಕೂ ಅಧಿಕ ಪದಕಗಳನ್ನು ಗೆದ್ದುಕೊಂಡು ಚಾರಿತ್ರಿಕ ಸಾಧನೆ ಮಾಡಿದೆ. ಜಕಾರ್ತದಲ್ಲಿ 4 ವರ್ಷಗಳ ಹಿಂದೆ ನಡೆದಿದ್ದ ಗೇಮ್ಸ್ ನಲ್ಲಿ ಭಾರತವು 16 ಚಿನ್ನ ಸಹಿತ ಒಟ್ಟು 70 ಪದಕಗಳನ್ನು ಜಯಿಸಿತ್ತು. ಹಾಂಗ್ಝೌ ಗೇಮ್ಸ್ ನಲ್ಲಿ ಭಾರತವು 28 ಚಿನ್ನ, 31 ಬೆಳ್ಳಿ ಹಾಗೂ 48 ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಿಷನ್-100 ಯಶಶ್ವಿಯಾಗಿದೆ.

ಪದಕ ಪಟ್ಟಿಯಲ್ಲಿ ಭಾರತವು 4ನೇ ಸ್ಥಾನ ಪಡೆದಿದೆ. 1951ರಲ್ಲಿ ದಿಲ್ಲಿ ಗೇಮ್ಸ್ ನಲ್ಲಿ 2ನೇ ಹಾಗೂ 1962ರಲ್ಲಿ ಜಕಾರ್ತ ಗೇಮ್ಸ್ ನಲ್ಲಿ 3ನೇ ಸ್ಥಾನ ಪಡೆದಿದ್ದ ಭಾರತವು ಈಗ ಮೂರನೇ ಶ್ರೇಷ್ಠ ಸಾಧನೆ ಮಾಡಿದೆ. ಭಾರತವು ಈ ಬಾರಿ ಅತ್ಯಂತ ಹೆಚ್ಚು ಅತ್ಲೀಟ್ಗಳನ್ನು(655)ಏಶ್ಯನ್ ಗೇಮ್ಸ್ಗೆ ಕಳುಹಿಸಿಕೊಟ್ಟಿತ್ತು. ಸೆ.23ರಂದು ಗೇಮ್ಸ್ ಆರಂಭವಾದ ನಂತರ ಶೂಟರ್ಗಳು ಆರಂಭಿಸಿದ್ದ ಪದಕ ಬೇಟೆಗೆ ಫೀಲ್ಡ್ ಆ್ಯಂಡ್ ಟ್ರ್ಯಾಕ್ ನಲ್ಲಿ ಅತ್ಲೀಟ್ ಗಳು ಅಂತಿಮ ಸ್ಪರ್ಶ ನೀಡಿದರು. ಅತ್ಲೆಟಿಕ್ಸ್ ಹಾಗೂ ಶೂಟಿಂಗ್ ನಲ್ಲಿ ಭಾರತವು ಹೆಚ್ಚು ಪದಕಗಳನ್ನು ಗೆದ್ದುಕೊಂಡಿದೆ. ಶೂಟಿಂಗ್ ರೇಂಜ್ನಲ್ಲಿ 22 ಪದಕಗಳು ಬಂದರೆ, ಅತ್ಲೀಟ್ ಗಳು ಟ್ರ್ಯಾಕ್ ಹಾಗೂ ಫೀಲ್ಡ್ ಗಳಲ್ಲಿ 29 ಪದಕಗಳನ್ನು ಗೆದ್ದುಕೊಟ್ಟರು. ಅತ್ಲೀಟ್ ಗಳು 6 ಚಿನ್ನ ಜಯಿಸಿದರೆ, ಒಟ್ಟು 9 ಪದಕ ಜಯಿಸಿದ್ದ ಆರ್ಚರಿಗಳು 5 ಚಿನ್ನದ ಪದಕ ಬಾಚಿಕೊಂಡರು. ಕುಸ್ತಿಪಟುಗಳು 6 ಪದಕಗಳು, ಸ್ಕ್ವಾಷ್ ಹಾಗೂ ರೋವಿಂಗ್ ನಲ್ಲಿ ತಲಾ 5 ಪದಕ ಗೆಲ್ಲಲಾಗಿದೆ.

ಭಾರತ ಗೆದ್ದಿರುವ 107 ಪದಕಗಳ ಪೈಕಿ 52 ಪದಕಗಳನ್ನು ಪುರುಷರು ಗೆದ್ದುಕೊಂಡರೆ, ಮಹಿಳೆಯರು 46 ಪದಕಗಳನ್ನು ಜಯಿಸಿದರು. 9 ಪದಕಗಳು ಮಿಶ್ರ ಸ್ಪರ್ಧೆಗಳಲ್ಲಿ ಬಂದಿದೆ.

ಭಾರತದ 34 ಅತ್ಲೀಟ್ ಗಳು ಒಂದಕ್ಕಿಂತ ಹೆಚ್ಚು ಪದಕ ಜಯಿಸಿದರು. ಶೂಟರ್ಗಳಾದ ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್ (2 ಚಿನ್ನ, 1 ಬೆಳ್ಳಿ, 1 ಕಂಚು) ಹಾಗೂ ಇಶಾ ಸಿಂಗ್(1 ಚಿನ್ನ, 3 ಬೆಳ್ಳಿ) ತಲಾ 4 ಪದಕ ಜಯಿಸಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ತಲಾ 3 ಚಿನ್ನದ ಪದಕ ಜಯಿಸಿದ್ದ ಬಿಲ್ಗಾರರಾದ ಜ್ಯೋತಿ ಸುರೇಖಾ ಹಾಗೂ ಓಜಾಸ್ ಪ್ರವೀಣ್ ದೆವೋತಾಳೆ ಭಾರತದ ಅತ್ಯಂತ ಯಶಸ್ವಿ ಅತ್ಲೀಟ್ ಗಳೆನಿಸಿಕೊಂಡರು.

ಕುದುರೆ ಸವಾರಿಯ ಟೀಮ್ ಡ್ರೆಸ್ಸೆಜ್ ನಲ್ಲಿ ಭಾರತವು ಮೊದಲ ಬಾರಿ ಚಿನ್ನ ಜಯಿಸಿ ಇತಿಹಾಸ ನಿರ್ಮಿಸಿತು. ಸಾತ್ವಿಕ್-ಚಿರಾಗ್ ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗದಲ್ಲಿ ಮೊತ್ತ ಮೊದಲ ಚಿನ್ನ ಗೆದ್ದುಕೊಟ್ಟರು. ಮಹಿಳೆಯರ 50 ಮೀ. ತ್ರಿ ಪೊಸಿಶನ್ಸ್ ನಲ್ಲಿ ರೈಫಲ್ ಶೂಟರ್ ಸಿಫ್ಟ್ ಕೌರ್ ಶರ್ಮಾ ವಿಶ್ವ ದಾಖಲೆಯೊಂದಿಗೆ ಚಿನ್ನ ಜಯಿಸಿದ್ದರು. ಹಾಲಿ ವಿಶ್ವ ಚಾಂಪಿಯನ್ ಗಳನ್ನು ಮಣಿಸಿದ ಸುತೀರ್ಥ ಮುಖರ್ಜಿ ಹಾಗೂ ಅಹಿಕಾ ಮುಖರ್ಜಿ ಟೇಬಲ್ ಟೆನಿಸ್ ಡಬಲ್ಸ್ ಸ್ಫರ್ಧೆಯಲ್ಲಿ ಕಂಚು ಜಯಿಸಿದ್ದರು. ಎಚ್.ಎಸ್. ಪ್ರಣಯ್ ಏಶ್ಯನ್ ಗೇಮ್ಸ್ ನಲ್ಲಿ ಪುರುಷರ ಸಿಂಗಲ್ಸ್ ನಲ್ಲಿ 41 ವರ್ಷಗಳ ಪದಕದ ಬರ ನೀಗಿಸಿದರು. ನೀರಜ್ ಚೋಪ್ರಾ ನಂತರ 2ನೇ ಸ್ಥಾನ ಪಡೆದಿದ್ದ ಕಿಶೋರ್ ಕುಮಾರ್ ಜೆನಾ ಪ್ಯಾರಿಸ್ ಒಲಿಂಪಿಕ್ಸ್ಗೆ ಟಿಕೆಟ್ ಪಡೆದರು. ಪುರುಷರ ಹಾಕಿ ತಂಡವು ಫೈನಲ್ನಲ್ಲಿ ಜಪಾನ್ ತಂಡವನ್ನು ಸೋಲಿಸಿ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಿತು. 15ರ ಹರೆಯದ ಅನಾಹತ್ ಸಿಂಗ್ ಹಾಗೂ ಸಂಜನಾ ಬಥುಲಾ ಕ್ರಮವಾಗಿ ಸ್ಕ್ವಾಷ್ ಸ್ಪರ್ಧೆಗಳಲ್ಲಿ 2 ಕಂಚಿನ ಪದಕ ಹಾಗೂ ರೋಲಿಂಗ್ ಸ್ಕೇಟಿಂಗ್ ನಲ್ಲಿ ಕಂಚು ಜಯಿಸಿದರು. 65ರ ವಯಸ್ಸಿನ ಬ್ರಿಡ್ಜ್ ಸ್ಪರ್ಧೆಯ ಆಟಗಾರ ಜಗ್ಗಿ ಶಿವದಾಸನಿ ಬೆಳ್ಳಿ ಜಯಿಸಿ ಸಾಧನೆಗೆ ವಯಸ್ಸು ಅಡ್ಡಿಯಾಗದು ಎಂದು ಸಾಬೀತುಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News