ಏಶ್ಯನ್ ಪ್ಯಾರಾ ಗೇಮ್ಸ್: ದಾಖಲೆಯ 111 ಪದಕಗಳನ್ನು ಗೆದ್ದ ಭಾರತ

Update: 2023-10-28 15:40 GMT

ಹಾಂಗ್‍ಝೌ (ಚೀನಾ): ಚೀನಾದ ಹಾಂಗ್‍ಝೌನಲ್ಲಿ ಶನಿವಾರ ಮುಕ್ತಾಯಗೊಂಡ ಏಶ್ಯನ್ ಪ್ಯಾರಾ ಗೇಮ್ಸ್‍ನಲ್ಲಿ ಭಾರತೀಯ ವಿಶೇಷಚೇತನ ಅತ್ಲೀಟ್‍ಗಳು 111 ಪದಕಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದು ಯಾವುದೇ ಪ್ರಮುಖ ಅಂತರ್‍ರಾಷ್ಟ್ರೀಯ ಬಹು ಕ್ರೀಡೆ ಕ್ರೀಡಾಕೂಟದಲ್ಲಿ ಭಾರತ ಗೆದ್ದಿರುವ ಅತ್ಯಧಿಕ ಸಂಖ್ಯೆಯ ಪದಕಗಳಾಗಿವೆ.

ಭಾರತೀಯ ವಿಶೇಷಚೇತನ ಅತ್ಲೀಟ್‍ಗಳು ಹಾಂಗ್‍ಝೌ ಏಶ್ಯನ್ ಗೇಮ್ಸ್‍ನಲ್ಲಿ ಸದೃಢ ದೇಹದ ಅತ್ಲೀಟ್‍ಗಳು ಗೆದ್ದಿರುವ ಪದಕಗಳಿಗಿಂತ ನಾಲ್ಕು ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಹಾಂಗ್‍ಝೌನಲ್ಲಿ ಸೆಪ್ಟಂಬರ್ 23ರಿಂದ ಅಕ್ಟೋಬರ್ 8ರವರೆಗೆ ನಡೆದ ಏಶ್ಯಮ್ ಗೇಮ್ಸ್‍ನಲ್ಲಿ ಭಾರತೀಯ ಸದೃಢ ದೇಹಿ ಅತ್ಲೀಟ್‍ಗಳು ಒಟ್ಟು 107 ಪದಕಗಳನ್ನು ಗೆದ್ದಿದ್ದರು.

ಈಗ ಅಲ್ಲೇ ನಡೆದ ಪ್ಯಾರಾ ಏಶ್ಯನ್ ಗೇಮ್ಸ್‍ನಲ್ಲಿ ಭಾರತೀಯ ವಿಶೇಷ ಚೇತನ ಅತ್ಲೀಟ್‍ಗಳು 29 ಚಿನ್ನ, 31 ಬೆಳ್ಳಿ ಮತ್ತು 51 ಕಂಚು ಸೇರಿದಂತೆ ಒಟ್ಟು 111 ಪದಕಗಳನ್ನು ಜಯಿಸಿದ್ದಾರೆ.

ಪದಕ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಚೀನಾ (521 ಪದಕಗಳು: 214 ಚಿನ್ನ, 167 ಬೆಳ್ಳಿ ಮತ್ತು 140 ಕಂಚು), ಎರಡನೇ ಸ್ಥಾನದಲ್ಲಿ ಇರಾನ್ (44 ಚಿನ್ನ, 46 ಬೆಳ್ಳಿ ಮತ್ತು 41 ಕಂಚು), ಮೂರನೇ ಸ್ಥಾನದಲ್ಲಿ ಜಪಾನ್ (42 ಚಿನ್ನ, 49 ಬೆಳ್ಳಿ ಮತ್ತು 59 ಕಂಚು) ಮತ್ತು ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ಕೊರಿಯ (30 ಚಿನ್ನ, 33 ಬೆಳ್ಳಿ ಮತ್ತು 40 ಕಂಚು) ಇದೆ.

2014 ಮತ್ತು 2018ರ ಪಂದ್ಯಾವಳಿಗಳಲ್ಲಿ ಭಾರತವು ಕ್ರಮವಾಗಿ 15 ಮತ್ತು 8ನೇ ಸ್ಥಾನ ಪಡೆದಿತ್ತು.

ಇದಕ್ಕಿಂತ ಮೊದಲು, ಕೇವಲ ಒಂದು ಬಾರಿ ಮಾತ್ರ ಭಾರತ ಪ್ರಮುಖ ಅಂತರ್‍ರಾಷ್ಟ್ರೀಯ ಬಹು ಕ್ರೀಡಾ ಕ್ರೀಡಾಕೂಟದಲ್ಲಿ (ಒಲಿಂಪಿಕ್ಸ್, ಏಶ್ಯನ್ ಗೇಮ್ಸ್ ಮತ್ತು ಕಾಮನ್‍ವೆಲ್ತ್ ಗೇಮ್ಸ್) 100 ಪದಕಗಳನ್ನು ಗೆದ್ದಿತ್ತು. ಅದು 2010ರಲ್ಲಿ ನಡೆದ ದಿಲ್ಲಿ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ.

ಭಾರತದ ಒಟ್ಟು 111 ಪದಕಗಳ ಪೈಕಿ ಅತ್ಲೀಟ್‍ಗಳು 55 ಪದಕ (18 ಚಿನ್ನ, 17 ಬೆಳ್ಳಿ ಮತ್ತು 20 ಕಂಚು)ಗಳನ್ನು ಗೆದ್ದಿದ್ದಾರೆ. ನಾಲ್ಕು ಚಿನ್ನದ ಪದಕಗಳು ಸೇರಿದಂತೆ 21 ಪದಕಗಳನ್ನು ಗೆದ್ದಿರುವ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಎರಡನೇ ಸ್ಥಾನದಲ್ಲಿದ್ದಾರೆ. ಚೆಸ್ ಮತ್ತು ಬಿಲ್ಲುಗಾರರು ತಲಾ ಎಂಟು ಪದಕಗಳನ್ನು ಗೆದ್ದರೆ, ಶೂಟರ್‍ಗಳು ಆರು ಪದಕಗಳನ್ನು ಜಯಿಸಿದ್ದಾರೆ.

43 ದೇಶಗಳ 4,000 ಕ್ರೀಡಾಪಟುಗಳು:

ಹಾಂಗ್‍ಝೌ ಏಶ್ಯನ್ ಗೇಮ್ಸ್‍ನಲ್ಲಿ, ರೋಯಿಂಗ್, ಕ್ಯಾನೋಯಿಂಗ್, ಲಾನ್ ಬೌಲ್, ಟೇಕ್ವೊಂಡೊ ಸೇರಿದಂತೆ 22 ಕ್ರೀಡೆಗಳ ಪೈಕಿ ಭಾರತವು 17ರಲ್ಲಿ ಸ್ಪರ್ಧಿಸಿತ್ತು.

ಈ ಕ್ರೀಡಾಕೂಟದಲ್ಲಿ43 ದೇಶಗಳ ಸುಮಾರು 4,000 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಒಟ್ಟು 566 ಚಿನ್ನದ ಪದಕಗಳಿಗಾಗಿ ಸ್ಪರ್ಧೆ ನಡೆದಿತ್ತು.

ಹಾಂಗ್‍ಝೌ ಏಶ್ಯನ್ ಪ್ಯಾರಾ ಗೇಮ್ಸ್ ಮೂಲತಃ 2022 ಅಕ್ಟೋಬರ್ 9ರಿಂದ 15ರವರೆಗೆ ನಡೆಯಬೇಕಾಗಿತ್ತು. ಆದರೆ, ಕೋವಿಡ್-19 ಬೆದರಿಕೆಯಿಂದಾಗಿ ಅದನ್ನು ಒಂದು ವರ್ಷ ಮುಂದೂಡಲಾಗಿತ್ತು.

ಅಂತಿಮ ದಿನ 4 ಚಿನ್ನ

ಅಂತಿಮ ದಿನವಾದ ಶನಿವಾರ ಭಾರತ ನಾಲ್ಕು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದಿದೆ. ಚೆಸ್ ಪಟುಗಳು ಏಳು ಪದಕಗಳನ್ನು ಗೆದ್ದರೆ, ಅತ್ಲೀಟ್‍ಗಳು ನಾಲ್ಕು ಮತ್ತು ರೋವಿಂಗ್ ಪಟುಗಳು ಒಂದು ಪದಕ ಗೆದ್ದರು.

ನೀರಜ್ ಯಾದವ್ ಪುರುಷರ ಜಾವೆಲಿನ್ ಎಸೆತ ಎಫ್55 ವಿಭಾಗದಲ್ಲಿ ಚಿನ್ನ ಗೆದ್ದರು. ಅವರು 33.69 ಮೀಟರ್ ದೂರ ಈಟಿ ಎಸೆದು ಕೂಟ ದಾಖಲೆ ನಿರ್ಮಿಸಿದರು.

ದಿಲೀಪ್ ಮಂಜು ಗವಿಯೊಟ್ ಪುರುಷರ 400 ಮೀಟರ್ ಟಿ47 ವಿಭಾಗದಲ್ಲಿ 49.48 ಸೆಕೆಂಡ್‍ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಈ ಮೂಲಕ ಅವರು ತನ್ನ ಸಂಗ್ರಹಕ್ಕೆ ಇನ್ನೊಂದು ಚಿನ್ನದ ಪದಕವನ್ನು ಸೇರಿಸಿದರು.

ಚೆಸ್‍ನಲ್ಲಿ, ಪುರುಷರ ವೈಯಕ್ತಿಕ ರ್ಯಾಪಿಡ್ ವಿಐ-ಬಿ1 ವಿಭಾಗದಲ್ಲಿ ಸತೀಶ್ ಇನಾನಿ ದರ್ಪಣ್ ಚಿನ್ನ ಗೆದ್ದರೆ, ಪ್ರಧಾನ್ ಕುಮಾರ್ ಸೌಂದರ್ಯ ಮತ್ತು ಅಶ್ವಿನ್‍ಭಾಯ್ ಕಾಂಚನ್‍ಭಾಯ್ ಮಕ್ವಾನ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು. ಈ ಮೂವರು ತಂಡ ವಿಭಾಗದಲ್ಲಿ ಚಿನ್ನವನ್ನೂ ಗೆದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News