ಎಟಿಪಿ ರ‍್ಯಾಂಕಿಂಗ್: 8ನೇ ಬಾರಿ ವರ್ಷಾಂತ್ಯದಲ್ಲಿ ನಂ.1 ಸ್ಥಾನ ಪಡೆದ ಜೊಕೊವಿಕ್

Update: 2023-12-05 16:03 GMT

ಜೊಕೊವಿಕ್(PTI) 

ಹೊಸದಿಲ್ಲಿ: ಸರ್ಬಿಯದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ದಾಖಲೆಯ 8ನೇ ಬಾರಿ ವಿಶ್ವದ ನಂ.1 ರ‍್ಯಾಂಕ್ನೊಂದಿಗೆ 2023ರ ಎಟಿಪಿ ಋತುವನ್ನು ಅಂತ್ಯಗೊಳಿಸಿದರು. ಕಾರ್ಲೊಸ್ ಅಲ್ಕರಾಝ್ ಸತತ ಎರಡನೇ ವರ್ಷ ಅಗ್ರ-2ರಲ್ಲಿ ಸ್ಥಾನ ಪಡೆದಿದ್ದಾರೆ. ಡೇನಿಯಲ್ ಮೆಡ್ವೆಡೆವ್ ಮೂರು ವರ್ಷಗಳಲ್ಲಿ ಎರಡನೇ ಬಾರಿ ಅಗ್ರ-3 ರ್ಯಾಂಕಿನೊಂದಿಗೆ ವರ್ಷವನ್ನು ಕೊನೆಗೊಳಿಸಿದರು.

24 ಗ್ರ್ಯಾನ್‌ಸ್ಲಾಮ್ ಒಡೆಯನಾಗಿರುವ ಜೊಕೊವಿಕ್ 2023ರಲ್ಲಿ ನಾಲ್ಕು ಗ್ರ್ಯಾನ್‌ಸ್ಲಾಮ್ ಟೂರ್ನಮೆಂಟ್‌ಗಳ ಪೈಕಿ ಮೂರರಲ್ಲಿ ಚಾಂಪಿಯನ್ ಆಗಿದ್ದರು. ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ಯು.ಎಸ್. ಓಪನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಜೊಕೊವಿಕ್ ಜುಲೈನಲ್ಲಿ ಯು.ಎಸ್. ಓಪನ್‌ನಲ್ಲಿ ಐತಿಹಾಸಿಕ 24ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಎತ್ತಿಹಿಡಿದಿದ್ದರು.

ಟುರಿನ್‌ನಲ್ಲಿ ನಡೆದಿದ್ದ ಎಟಿಪಿ ಫೈನಲ್ಸ್‌ನಲ್ಲಿ ಕಾರ್ಲೊಸ್ ಅಲ್ಕರಾಝ್ ವಿರುದ್ಧ ಪಂದ್ಯವನ್ನು ಗೆದ್ದುಕೊಂಡಿರುವ ಜೊಕೊವಿಕ್ 8ನೇ ಬಾರಿ ಎಟಿಪಿ ಫೈನಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ಜೊಕೊವಿಕ್ ಎಟಿಪಿ ರ‍್ಯಾಂಕಿಂಗ್ನಲ್ಲಿ 400ಕ್ಕೂ ಅಧಿಕ ವಾರಗಳನ್ನು ಅಗ್ರಸ್ಥಾನದಲ್ಲಿ ಕಳೆದ ಎರಡನೇ ಆಟಗಾರನಾಗಿದ್ದಾರೆ ಸ್ವಿಸ್ ಆಟಗಾರ ರೋಜರ್ ಫೆಡರರ್ ಈ ಐತಿಹಾಸಿಕ ಸಾಧನೆ ಮಾಡಿದ ಮೊದಲ ಆಟಗಾರನಾಗಿದ್ದಾರೆ.

ಜೊಕೊವಿಕ್ ಪ್ರಾಬಲ್ಯವನ್ನು ಮುಂದುವರಿಸಿದರೂ ವರ್ಷಾಂತ್ಯದ ರ್ಯಾಂಕಿಂಗ್‌ನಲ್ಲಿ ಯುವ ಪ್ರತಿಭೆಗಳು ಮಿಂಚಿವೆ. 20ರ ಹರೆಯದ ಹೋಲ್ಗರ್ ರೂನ್ 8ನೇ ಸ್ಥಾನ ಪಡೆಯುವುದರೊಂದಿಗೆ ಟೆನಿಸ್‌ನಲ್ಲಿ ಉಜ್ವಲ ಭವಿಷ್ಯದ ಭರವಸೆ ನೀಡಿದರು.

ಜಾನ್ನಿಕ್ ಸಿನ್ನೆರ್ ಜೀವನಶ್ರೇಷ್ಠ 4ನೇ ರ್ಯಾಂಕಿಗೆ ತಲುಪಿ ಪುರುಷರ ಟೆನಿಸ್‌ಗೆ ಮತ್ತೊಂದು ಆಯಾಮ ನೀಡಿದರು.

ಆಸ್ಟ್ರೇಲಿಯದಲ್ಲಿ ಡಿ.29ರಂದು ಯುನೈಟೆಡ್ ಕಪ್ ಆರಂಭವಾಗುವ ಮೂಲಕ 2024ರ ಎಟಿಪಿ ಟೂರ್ ಋತು ಆರಂಭವಾಗಲಿದೆ. ಜೊಕೊವಿಕ್ ವೃತ್ತಿಪರ ಟೆನಿಸ್‌ನಲ್ಲಿ ಮತ್ತೊಂದು ರೋಮಾಂಚಕ ವರ್ಷಕ್ಕೆ ವೇದಿಕೆ ಸಿದ್ದಗೊಳಿಸಿದ್ದು ಅಭಿಮಾನಿಗಳು ಟೆನಿಸ್ ಅಂಗಣದಲ್ಲಿ ಮುಂಬರುವ ಹೋರಾಟಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಎಟಿಪಿ ರ‍್ಯಾಂಕಿಂಗ್: ಟಾಪ್-10

1. ನೊವಾಕ್ ಜೊಕೊವಿಕ್

2. ಕಾರ್ಲೊಸ್ ಅಲ್ಕರಾಝ್

3. ಡೇನಿಯಲ್ ಮೆಡ್ವೆಡೆವ್

4. ಜನ್ನಿಕ್ ಸಿನ್ನೆರ್

5. ಆಂಡ್ರೆ ರುಬ್ಲೆವ್

6. ಸ್ಟೆಫನೊಸ್ ಸಿಟ್ಸಿಪಾಸ್

7. ಅಲೆಕ್ಸಾಂಡರ್ ಝ್ವೆರೆವ್

8. ಹೋಲ್ಗರ್ ರೂನ್

9. ಹ್ಯೂಬರ್ಟ್ ಹುರ್ಕಾಝ್

10. ಟೇಲರ್ ಫ್ರಿಟ್ಝ್

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News