ಆಸ್ಟ್ರೇಲಿಯ-ಇಂಗ್ಲೆಂಡ್ 2ನೇ ಟೆಸ್ಟ್‌ಗೆ ಅಲ್ಪಕಾಲ ಅಡ್ಡಿಪಡಿಸಿದ ಪ್ರತಿಭಟನಾಕಾರರು

Update: 2023-06-28 16:46 GMT

ಫೋಟೋ: PTI

ಲಾರ್ಡ್ಸ್, ಜೂ.28: ಕೆಲವು ಪ್ರತಿಭಟನಾಕಾರರು ಮೈದಾನದೊಳಗೆ ನುಗ್ಗಿ ಸ್ವಲ್ಪ ಸಮಯ ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ 2ನೇ ಆ್ಯಶಸ್ ಟೆಸ್ಟ್ ಪಂದ್ಯವನ್ನು ಸ್ಥಗಿತಗೊಳಿಸಿರುವ ವಿಲಕ್ಷಣ ಘಟನೆಯೊಂದು ಬುಧವಾರ ನಡೆದಿದೆ.

ಬೆಳಗ್ಗಿನ ಅವಧಿಯಲ್ಲಿ ಜೇಮ್ಸ್ ಆ್ಯಂಡರ್ಸನ್ ಅವರ ಮೊದಲ ಓವರ್ ಅಂತ್ಯವಾದ ಬೆನ್ನಿಗೇ ಇಬ್ಬರು 'ಜಸ್ಟ್ ಸ್ಟಾಪ್ ಆಯಿಲ್' ಪ್ರತಿಭಟನಾಕಾರರು ಸ್ಟಾಂಡ್‌ನಿಂದ ಮೈದಾನದತ್ತ ಓಡಿ ಬಂದು ಆರೆಂಜ್ ಪೌಡರನ್ನು ಎಸೆದರು. ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಜಾನಿ ಬೈರ್‌ಸ್ಟೋವ್ ಅವರು ಮೈದಾನಕ್ಕೆ ನುಗ್ಗಿದವನೊಬ್ಬನನ್ನು ಭುಜದ ಮೇಲೆ ಹೊತ್ತುಕೊಂಡು ಮೈದಾನದಿಂದ ಹೊರಗೆ ಹಾಕಿದರು. ಮೈದಾನದ ಸಿಬ್ಬಂದಿ ಇನ್ನೊಬ್ಬ ವ್ಯಕ್ತಿಯನ್ನು ಆಟದ ಮೈದಾನದಿಂದ ಹೊರ ಹಾಕಿದರು.

5-10 ನಿಮಿಷಗಳ ವಿಳಂಬದ ನಂತರ ಪಂದ್ಯವು ಪುನರಾರಂಭವಾದಾಗ ಬೈರ್‌ಸ್ಟೋವ್ ಡ್ರೆಸ್ಸಿಂಗ್ ರೂಮ್‌ಗೆ ಹೋಗಿ ಶರ್ಟ್ ಬದಲಾಯಿಸಿ ವಾಪಸಾದರು.



ಇಂದು ಲಾರ್ಡ್ಸ್ ಕ್ರಿಕೆಟ್ ಮೈದಾನದ ಪಿಚ್‌ನೊಳಗೆ ಪ್ರತಿಭಟನಾಕಾರರು ನುಗ್ಗುತ್ತಾರೆ ಎಂಬ ಕುರಿತು ನಮಗೆ ಗೊತ್ತಿತ್ತು. ಪೊಲೀಸರು ಮೂವರನ್ನು ಬಂಧಿಸಿ, ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ಮೆಟ್ರೊಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

'ಜಸ್ಟ್ ಸ್ಟಾಪ್ ಆಯಿಲ್' ಪ್ರತಿಭಟನಾಕಾರರು ಈ ವರ್ಷ ಬ್ರಿಟನ್‌ನಲ್ಲಿ ಇತರ ಪ್ರಮುಖ ಕ್ರೀಡಾಕೂಟಗಳನ್ನು ಕೂಡ ಅಡ್ಡಿಪಡಿಸಿದ್ದಾರೆ. ಈ ತಿಂಗಳು ಲಂಡನ್‌ನಲ್ಲಿ ನಡೆದಿದ್ದ ಐರ್‌ಲ್ಯಾಂಡ್ ವಿರುದ್ಧದ ಟೆಸ್ಟ್‌ನಲ್ಲಿ ಅವರು ಇಂಗ್ಲೆಂಡ್ ತಂಡದ ಬಸ್ ಅನ್ನು ಸ್ವಲ್ಪಕಾಲ ತಡೆ ಹಿಡಿದಿದ್ದರು. ಪ್ರೀಮಿಯರ್ ಲೀಗ್ ಸಾಕರ್ ಪಂದ್ಯಗಳು, ಪ್ರೀಮಿಯರ್‌ಶಿಪ್ ರಗ್ಬಿ ಫೈನಲ್ ಹಾಗೂ ವರ್ಲ್ಡ್ ಸ್ನೂಕರ್ ಚಾಂಪಿಯನ್‌ಶಿಪನ್ನು ಗುರಿಯಾಗಿಸಿಕೊಂಡಿದ್ದಾರೆ.

ಬ್ರಿಟನ್ ಸರಕಾರವು ಹೊಸ ಇಂಧನ ಪರವಾನಗಿ ಹಾಗೂ ಉತ್ಪಾದನೆಯನ್ನು ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

"ಕ್ರಿಕೆಟ್ ನಮ್ಮ ರಾಷ್ಟ್ರೀಯ ಪರಂಪರೆಯ ಪ್ರಮುಖ ಭಾಗವಾಗಿದೆ. ಆದರೆ ಕ್ರಿಕೆಟ್ ಪ್ರಪಂಚವು ಮನುಷ್ಯರು ವಾಸಿಸಲು ಅಯೋಗ್ಯವಾಗಿರುವಾಗ ನಾವು ಇಂಗ್ಲೆಂಡ್-ಆಸ್ಟ್ರೇಲಿಯ ಪಂದ್ಯವನ್ನು ಹೇಗೆ ಆನಂದಿಸಬಹುದು?ಕ್ರಿಕೆಟ್ ಪ್ರೇಮಿಗಳು ಹಾಗೂ ಈ ಪರಿಸ್ಥಿತಿಯ ತೀವ್ರತೆಯನ್ನು ಅರ್ಥಮಾಡಿಕೊಳ್ಳುವ ಎಲ್ಲರೂ ಬೀದಿಗಿಳಿಯಲು ಹಾಗೂ ಕಾನೂನು ಬಾಹಿರ, ಕ್ರಿಮಿನಲ್ ಸರಕಾರದಿಂದ ಕ್ರಮಕ್ಕಾಗಿ ಬೇಡಿಕೆ ಸಲ್ಲಿಸುವ ಸಮಯ ಇದಾಗಿದೆ' ಎಂದು 'ಜಸ್ಟ್ ಸ್ಟಾಪ್ ಆಯಿಲ್' ವಕ್ತಾರರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News