ಟ್ವೆಂಟಿ-20 ಸರಣಿಗೆ ಮೊದಲು ಆಸ್ಟ್ರೇಲಿಯದ ನಾಯಕ ಮಾರ್ಷ್ ಗೆ ಕೋವಿಡ್
ಬ್ರಿಸ್ಬೇನ್: ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವ ನಾಯಕ ಮಿಚೆಲ್ ಮಾರ್ಷ್ ಶುಕ್ರವಾರ ಆರಂಭವಾಗಲಿರುವ ವೆಸ್ಟ್ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಅಂತರ್ರಾಷ್ಟ್ರೀಯ ಸರಣಿಯ ಮೊದಲ ಪಂದ್ಯದಲ್ಲಿ ಅಂತರ ಕಾಯ್ದುಕೊಂಡು ಆಡಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಗುರುವಾರ ತಿಳಿಸಿದೆ.
ಆಲ್ರೌಂಡರ್ ಮಾರ್ಶ್ ಗೆ ಹೊಬರ್ಟ್ನಲ್ಲಿ ನಡೆಯುವ ಪಂದ್ಯದಲ್ಲಿ ಆಡಲು ಅನುವು ಮಾಡಿಕೊಡಲಾಗುವುದು. ಆದರೆ ಅವರಿಗೆ ಪ್ರತ್ಯೇಕ ಡ್ರೆಸ್ಸಿಂಗ್ ರೂಮ್ ಇರಲಿದೆ. ಮೈದಾನದಲ್ಲಿ ಇತರ ಆಟಗಾರರಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ.
ಮಾರ್ಷ್ ಇತ್ತೀಚೆಗಷ್ಟೇ ನ್ಯೂಝಿಲ್ಯಾಂಡ್ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದರು. ಜೂನ್ ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ನಾಯಕನ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.
ಜೋಶ್ ಇಂಗ್ಲಿಸ್ ಹಾಗೂ ಕ್ಯಾಮರೂನ್ ಗ್ರೀನ್ ಕೋವಿಡ್ ಪಾಸಿಟಿವ್ ಆಗಿದ್ದರೂ ಇತ್ತೀಚೆಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಆಸ್ಟ್ರೇಲಿಯದ ಕೋಚ್ ಆ್ಯಂಡ್ರೂ ಮೆಕ್ಡೊನಾಲ್ಡ್ ಗೆ ಕಳೆದ ತಿಂಗಳು ಕೋವಿಡ್ ಸೋಂಕು ತಗಲಿತ್ತು.