ನಾಳೆ ಎರಡನೇ ಟಿ20 ಪಂದ್ಯ | ಬಾಂಗ್ಲಾದೇಶ ವಿರುದ್ಧ ಸರಣಿ ಗೆಲುವಿನ ವಿಶ್ವಾಸದಲ್ಲಿ ಭಾರತ ಕ್ರಿಕೆಟ್ ತಂಡ

Update: 2024-10-08 15:15 GMT

PC : PTI 

ಹೊಸದಿಲ್ಲಿ : ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಅಂತರ್‌ರಾಷ್ಟ್ರೀಯ ಪಂದ್ಯವು ಬುಧವಾರ ನಡೆಯಲಿದ್ದು, ಅತಿಥೇಯ ತಂಡದ ಯುವ ಆಟಗಾರರು ಪ್ರವಾಸಿ ತಂಡಕ್ಕೆ ಮತ್ತೊಮ್ಮೆ ಗಂಭೀರ ಸವಾಲೊಡ್ಡಲು ಸಜ್ಜಾಗಿದ್ದಾರೆ.

ಭಾರತ ತಂಡ ಸ್ವದೇಶಿ ಪಿಚ್ ಲಾಭ ಪಡೆಯಲು ಹವಣಿಸುತ್ತಿದ್ದರೆ, ಬಾಂಗ್ಲಾದೇಶ ತಂಡ ತಿರುಗೇಟು ನೀಡಲು ಹೆಣಗಾಡುತ್ತಿದೆ. ಇಬ್ಬರು ಹೊಸ ಆಟಗಾರರು ಹಾಗೂ ಬಹುತೇಕ ಹೊಸ ಮುಖಗಳೊಂದಿಗೆ ಗ್ವಾಲಿಯರ್‌ನಲ್ಲಿ ಮೊದಲ ಟಿ20 ಪಂದ್ಯವನ್ನು ಆಡಿದ್ದ ಭಾರತವು 128 ರನ್ ಗುರಿಯನ್ನು 12 ಓವರ್‌ನೊಳಗೆ ಚೇಸ್ ಮಾಡಿತ್ತು. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿತ್ತು.

ಗ್ವಾಲಿಯರ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪ್ರಮುಖ ಆಟಗಾರರಾದ ರಿಷಭ್ ಪಂತ್, ಅಕ್ಷರ್ ಪಟೇಲ್ ಹಾಗೂ ಜಸ್‌ಪ್ರಿತ್ ಬುಮ್ರಾ ಅನುಪಸ್ಥಿತಿಯ ಹೊರತಾಗಿಯೂ ಭಾರತವು 7 ವಿಕೆಟ್‌ಗಳ ಅಂತರದಿಂದ ಜಯಶಾಲಿಯಾಗಿತ್ತು.

2015ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ನಂತರ ಸಂಜು ಸ್ಯಾಮ್ಸನ್ ರಾಷ್ಟ್ರೀಯ ತಂಡದಲ್ಲಿ ಖಾಯಂ ಸ್ಥಾನ ಪಡೆದಿಲ್ಲ. ವಿಕೆಟ್‌ಕೀಪರ್ ಸ್ಯಾಮ್ಸನ್ ಗ್ವಾಲಿಯರ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದರು. ಸಾಮಾನ್ಯವಾಗಿ ಮಧ್ಯಮ ಸರದಿಯಲ್ಲಿ ಅಡುವ ಸ್ಯಾಮ್ಸನ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು 19 ಎಸೆತಗಳಲ್ಲಿ 29 ರನ್ ಗಳಿಸಿದ್ದಾರೆ. ಆದರೆ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಸ್ಯಾಮ್ಸನ್ ಅವರ ಆರಂಭಿಕ ಜೊತೆಗಾರ ಅಭಿಷೇಕ್ ಶರ್ಮಾ ಔಟಾಗುವ ಮೊದಲು ಉತ್ತಮ ಪ್ರದರ್ಶನ ನೀಡಿದರು.

ಶುಭಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್‌ರನ್ನು ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಈ ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ 29ರ ಹರೆಯದ ಸ್ಯಾಮ್ಸನ್ ಬ್ಯಾಟಿಂಗ್ ಜೊತೆಗೆ ವಿಕೆಟ್‌ಕೀಪರ್ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಸ್ಯಾಮ್ಸನ್ ಆರಂಭಿಕ ಆಟಗಾರ ಹಾಗೂ ವಿಕೆಟ್‌ಕೀಪಿಂಗ್ ಪಾತ್ರಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮುಂಬರುವ ಸೀಮಿತ ಓವರ್ ಪಂದ್ಯಗಳಲ್ಲಿ ತನ್ನ ಸ್ಥಾನ ಭದ್ರತಪಡಿಸಿಕೊಳ್ಳಬಹುದು.

ಮೊದಲ ಪಂದ್ಯದಲ್ಲಿ ಭಾರತ ತಂಡವು ಅಂದುಕೊಂಡಂತೆ ನಡೆದಿರುವ ಕಾರಣ ಎರಡನೇ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ.

ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ದಾಳಿಯನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಮೂರು ವರ್ಷಗಳ ನಂತರ ರಾಷ್ಟ್ರೀಯ ತಂಡಕ್ಕೆ ವಾಪಸಾಗಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಮೊದಲ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

ವರುಣ್ ಹಾಗೂ ವಾಶಿಂಗ್ಟನ್ ಸುಂದರ್ ಅವರು ರವೀಂದ್ರ ಜಡೇಜರಿಂದ ತೆರವಾಗಿರುವ ಸ್ಪಿನ್ ಆಲ್‌ರೌಂಡರ್ ಸ್ಥಾನ ತುಂಬಲು ಪ್ರಯತ್ನಿಸುತ್ತಿದ್ದಾರೆ.

ಬಾಂಗ್ಲಾದೇಶ 2ನೇ ಪಂದ್ಯದಲ್ಲಿ ಮರಳಿ ಹೋರಾಟ ನೀಡಿ ಸರಣಿಯಲ್ಲಿ ಸ್ಪರ್ಧೆಯಲ್ಲಿರಬೇಕಾದರೆ ಒಗ್ಗಟ್ಟಿನ ಪ್ರದರ್ಶನ ನೀಡುವ ಅಗತ್ಯವಿದೆ. ಬಾಂಗ್ಲಾದೇಶ ತಂಡವು ಈವರ್ಷ ನಡೆದ ವಿಶ್ವಕಪ್‌ನಲ್ಲಿ ಆಡಿರುವ ತಂಡವನ್ನೇ ಕಣಕ್ಕಿಳಿಸಿದ್ದರೂ ಟಿ20 ಮಾದರಿಯ ಕ್ರಿಕೆಟಿಗೆ ಹೊಂದಿಕೊಳ್ಳುವಲ್ಲಿ ವಿಫಲವಾಗಿದೆ. ಇಬ್ಬರು ಅನುಭವಿ ಆಟಗಾರರಾದ ಮಹ್ಮೂದುಲ್ಲಾ ಹಾಗೂ ಲಿಟನ್ ದಾಸ್ ಜವಾಬ್ದಾರಿಯುತವಾಗಿ ಆಡಬೇಕಾಗಿದೆ. ಮಹ್ಮೂದುಲ್ಲಾಗೆ ಈ ಪಂದ್ಯವು ವಿದಾಯದ ಪಂದ್ಯವಾಗಬಹುದು. ಅವರು ಬಾಂಗ್ಲಾದೇಶ ಪರ ಗರಿಷ್ಠ ಟಿ20 ಪಂದ್ಯವನ್ನಾಡಿದ ಆಟಗಾರನಾಗಿ ನಿವೃತ್ತಿಯಾಗಲಿದ್ದಾರೆ.

►ಪಿಚ್ ಹಾಗೂ ವಾತಾವರಣ

2024ರ ಐಪಿಎಲ್‌ನಲ್ಲಿ ಹೊಸದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 5 ಪಂದ್ಯಗಳನ್ನು ಆಡಲಾಗಿದ್ದು. 10 ಇನಿಂಗ್ಸ್‌ಗಳಲ್ಲಿ 8 ಬಾರಿ 200ಕ್ಕೂ ಅಧಿಕ ರನ್ ಗಳಿಸಲಾಗಿದೆ. ಇಂಪ್ಯಾಕ್ಟ್ ಆಟಗಾರನ ರೂಪದಲ್ಲಿ ಕೆಲ ತಂಡಗಳು ಹೆಚ್ಚುವರಿ ಬ್ಯಾಟರ್ ಹೊಂದಿದ್ದವು. ಬುಧವಾರದ ಪಂದ್ಯದಲ್ಲಿ ಗರಿಷ್ಠ ರನ್ ಹರಿದು ಬರುವ ನಿರೀಕ್ಷೆ ಇದೆ. ವಾತಾವರಣ ತಿಳಿಯಾಗಿದ್ದು, ಸ್ವಲ್ಪಮಟ್ಟಿನ ಮಂಜು ಬೀಳುವ ಸಾಧ್ಯತೆಯಿದೆ.

ಅಂಕಿ-ಅಂಶ

*ಬಾಂಗ್ಲಾದೇಶ ತಂಡ ಟಿ20 ಕ್ರಿಕೆಟ್‌ನಲ್ಲಿ ಭಾರತ ವಿರುದ್ದ ಆಡಿರುವ 15 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ.

* ಭಾರತದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ(87)ಹಾಗೂ ಅರ್ಷದೀಪ್ ಸಿಂಗ್(86)ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನದಲ್ಲಿದ್ದಾರೆ.

*ಟಿ20 ಕ್ರಿಕೆಟ್‌ನಲ್ಲಿ 2,000 ರನ್ ಗಳಿಸಿದ ಬಾಂಗ್ಲಾದೇಶದ ಮೂರನೇ ಬ್ಯಾಟರ್ ಎನಿಸಿಕೊಳ್ಳಲು ಲಿಟನ್ ದಾಸ್‌ಗೆ 53 ರನ್ ಅಗತ್ಯವಿದೆ.

ತಂಡಗಳು

ಭಾರತ(ಸಂಭಾವ್ಯ): 1. ಸಂಜು ಸ್ಯಾಮ್ಸನ್(ವಿಕೆಟ್‌ ಕೀಪರ್), 2. ಅಭಿಷೇಕ್ ಶರ್ಮಾ, 3. ಸೂರ್ಯಕುಮಾರ್ ಯಾದವ್(ನಾಯಕ), 4. ತಿಲಕ್ ವರ್ಮಾ, 5. ಹಾರ್ದಿಕ್ ಪಾಂಡ್ಯ, 6. ರಿಯಾನ್ ಪರಾಗ್, 7. ರಿಂಕು ಸಿಂಗ್, 8. ವಾಶಿಂಗ್ಟನ್ ಸುಂದರ್, 9. ಹರ್ಷಿತ್ ರಾಣಾ, 10. ಅರ್ಷದೀಪ್ ಸಿಂಗ್, 11. ವರುಣ್ ಚಕ್ರವರ್ತಿ.

ಬಾಂಗ್ಲಾದೇಶ(ಸಂಭಾವ್ಯ): 1. ಪರ್ವೇಝ್ ಹುಸೈನ್/ತಂಝಿದ್ ಹಸನ್, 2. ಲಿಟನ್ ದಾಸ್(ವಿಕೆಟ್‌ ಕೀಪರ್), 3. ನಜ್ಮುಲ್ ಹುಸೈನ್ ಶಾಂಟೊ(ನಾಯಕ), 4. ತೌಹಿದ್ ಹ್ರಿದೊಯ್, 5. ಮಹ್ಮೂದುಲ್ಲಾ, 6. ಜಾಕರ್ ಅಲಿ, 7. ಮೆಹದಿ ಹಸನ್ ಮಿರಾಝ್, 8. ರಿಷದ್ ಹುಸೈನ್, 9. ತಸ್ಕಿನ್ ಅಹ್ಮದ್, 10. ಶರೀಫುಲ್ ಇಸ್ಲಾಮ್, 11. ಮುಸ್ತಫಿಝುರ್ರಹ್ಮಾನ್.

ಪಂದ್ಯ ಆರಂಭದ ಸಮಯ: ರಾತ್ರಿ 7:00

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News