ನಾಳೆ (ಅ.28) ಗೆಲುವಿನ ಹಾದಿಗೆ ಮರಳಲು ಬಾಂಗ್ಲಾ, ನೆದರ್ಲ್ಯಾಂಡ್ಸ್ ಹೋರಾಟ

Update: 2023-10-27 17:04 GMT

Photo- PTI

ಕೋಲ್ಕತ: ಸೆಮಿಫೈನಲ್ ಪ್ರವೇಶಿಸುವ ತಮ್ಮ ಕ್ಷೀಣ ಸಾಧ್ಯತೆಗಳನ್ನು ಸುಧಾರಿಸುವ ಮತ್ತು ಸೋಲಿನ ಸರಣಿಯನ್ನು ತುಂಡರಿಸುವ ನಿರೀಕ್ಷೆಯೊಂದಿಗೆ ಏಕದಿನ ವಿಶ್ವಕಪ್ ನಲ್ಲಿ ಶನಿವಾರ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಮುಖಾಮುಖಿಯಾಗಲಿವೆ. 

ವಿಶ್ವಕಪ್ ಪಂದ್ಯಾವಳಿ ಆರಂಭಗೊಂಡು 23 ದಿನಗಳು ಮತ್ತು 27 ಪಂದ್ಯಗಳು ಸಂದ ಬಳಿಕ ಪಂದ್ಯವೊಂದು ಕೋಲ್ಕತದ ಈಡನ್ ಗಾರ್ಡನ್ಸ್ ಮೈದಾನಕ್ಕೆ ಬರುತ್ತಿದೆ. ಇದು ಈಡನ್ ಗಾರ್ಡನ್ಸ್ ನಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಯ ಮೊದಲ ಪಂದ್ಯವಾಗಿದೆ.

ಪಂದ್ಯಾವಳಿಯಲ್ಲಿ ಈವರೆಗೆ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ಗಳು ತಲಾ ಐದು ಪಂದ್ಯಗಳನ್ನು ಆಡಿದ್ದು, ಕೇವಲ ಒಂದರಲ್ಲಿ ಗೆದ್ದಿವೆ.

ಅಫ್ಘಾನಿಸ್ತಾನದ ವಿರುದ್ಧ ಸಮಗ್ರ ಗೆಲುವನ್ನು ದಾಖಲಿಸುವ ಮೂಲಕ ಬಾಂಗ್ಲಾದೇಶವು ತನ್ನ ವಿಶ್ವಕಪ್ ಅಭಿಯಾನವನ್ನು ಧನಾತ್ಮಕವಾಗಿ ಆರಂಭಿಸಿತು. ಆದರೆ ಬಳಿಕ ಹಾಲಿ ಚಾಂಪಿಯನ್ ಇಂಗ್ಲೆಂಡ್, ನ್ಯೂಝಿಲ್ಯಾಂಡ್, ಆತಿಥೇಯ ಭಾರತ ಮತ್ತು ಇತ್ತೀಚೆಗೆ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯಗಳನ್ನು ಕಳೆದುಕೊಂಡಿತು.

ಬಾಂಗ್ಲಾದೇಶದ ನಾಯಕ ಶಾಕಿಬ್ ಅಲ್ ಹಸನ್ ತನ್ನ ಐಪಿಎಲ್ ತವರು ಮೈದಾನದಲ್ಲಿ ತನ್ನ ತಂಡದ ಸೋಲಿನ ಸರಣಿಗೆ ಅಂತ್ಯ ಹಾಡಲು ಶಕ್ತರಾಗುತ್ತಾರೆಯೇ ಎನ್ನುವುದನ್ನು ಕಾದುನೋಡಬೇಕಾಗಿದೆ.

ಇನ್ನೊಂದು ಕಡೆ, ನೆದರ್ಲ್ಯಾಂಡ್ಸ್ ತಂಡವು ದಕ್ಷಿಣ ಆಫ್ರಿಕದ ವಿರುದ್ಧ ಸ್ಮರಣೀಯ ವಿಜಯವೊಂದನ್ನು ಸಂಪಾದಿಸಿ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಆದರೆ, ಆ ಬಳಿಕ ಅದು ಶ್ರೀಲಂಕಾ ಮತ್ತು ಆಸ್ಟ್ರೇಲಿಯ ತಂಡಗಳ ವಿರುದ್ಧ ಸೋಲನುಭವಿಸಿದೆ.

ಅದು ಆಸ್ಟ್ರೇಲಿಯದ ವಿರುದ್ಧ ಇತ್ತೀಚೆಗೆ ಅನುಭವಿಸಿದ ಸೋಲು ಬೃಹತ್ ಸ್ವರೂಪದ್ದಾಗಿದೆ. ಗೆಲ್ಲಲು 400 ರನ್ ಗಳ ಬೃಹತ್ ಗುರಿಯನ್ನು ಬೆಂಬತ್ತಿದ ನೆದರ್ಲ್ಯಾಂಡ್ಸ್ ಕೇವಲ 90 ರನ್ ಗಳಿಗೆ ತನ್ನ ಇನಿಂಗ್ಸ್ ಮುಕ್ತಾಯಗೊಳಿಸಿತು. ಆ ಮೂಲಕ 309 ರನ್ ಗಳ ಬೃಹತ್ ಸೋಲಿಗೆ ಶರಣಾಯಿತು.

ಮುಖಾಮುಖಿ

ಏಕದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಒಮ್ಮೆ ಬಾಂಗ್ಲಾದೇಶ ಗೆದ್ದರೆ, ಇನ್ನೊಮ್ಮೆ ನೆದರ್ಲ್ಯಾಂಡ್ಸ್ ವಿಜಯಿಯಾಗಿ ಹೊರಹೊಮ್ಮಿದೆ.

ಮುನ್ನುಗ್ಗಲು ಆಸಿಸ್, ಕಿವೀಸ್ ಪೈಪೋಟಿ:

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ 27ನೇ ಪಂದ್ಯದಲ್ಲಿ ಆಸ್ಟ್ರೇಲಿಯವು ನ್ಯೂಝಿಲ್ಯಾಂಡ್ ತಂಡವನ್ನು ಶನಿವಾರ ಎದುರಿಸಲಿದೆ.

ಹಿಮಾಚಲ ಪ್ರದೇಶದ ಧರ್ಮಶಾಲಾದ ಎಚ್ಪಿಸಿಎ ಸ್ಟೇಡಿಯಮ್ನಲ್ಲಿ ನಡೆಯುವ ಪಂದ್ಯವು ತಮ್ಮ ಸ್ಥಿತಿಯನ್ನು ಬಲಪಡಿಸಿಕೊಳ್ಳಲು ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಇದು ಧರ್ಮಶಾಲಾದಲ್ಲಿ ನಡೆಯುವ ಈ ವಿಶ್ವಕಪ್ ನ ಕೊನೆಯ ಪಂದ್ಯವಾಗಿದೆ.

ಆಸ್ಟ್ರೇಲಿಯವು ತನ್ನ ಕೊನೆಯ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಗೆಲುವು ಪಡೆದಿತ್ತು. ಅದು 50 ಓವರ್ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 399 ರನ್ ಗಳನ್ನು ಗಳಿಸಿತ್ತು. ಬಳಿಕ ನೆದರ್ಲ್ಯಾಂಡ್ಸ್ ನ ಇನಿಂಗ್ಸನ್ನು 90 ರನ್ ಗಳಿಗೆ ಸೀಮಿತಗೊಳಿಸಿತ್ತು.

ನ್ಯೂಝಿಲ್ಯಾಂಡ್ ತನ್ನ ಕೊನೆಯ ಪಂದ್ಯದಲ್ಲಿ ಭಾರತವನ್ನು ಎದುರಿಸಿತ್ತು. ಅದು 50 ಓವರ್ಗಳಲ್ಲಿ 273 ರನ್ ಗಳನ್ನು ಗಳಿಸಿ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಅದರ ಬ್ಯಾಟಿಂಗ್ ಸರದಿ ಕೊನೆಯ 15 ಓವರ್ಗಳಲ್ಲಿ ಕುಸಿಯಿತು. ಅದರ ಕೊನೆಯ ಆರು ವಿಕೆಟ್ ಗಳು ಕೇವಲ 68 ರನ್ ಗಳಿಗೆ ಉರುಳಿದವು. ಆ ಪಂದ್ಯವನ್ನು ಭಾರತ 4 ವಿಕೆಟ್ ಗಳಿಂದ ಗೆದ್ದಿತು.

ಈ ಪಂದ್ಯಾವಳಿಯಲ್ಲಿ ಈವರೆಗೆ ಆಸ್ಟ್ರೇಲಿಯವು ಐದು ಪಂದ್ಯಗಳನ್ನು ಆಡಿ ಮೂರರಲ್ಲಿ ಗೆದ್ದಿದೆ ಹಾಗೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅದೇ ವೇಳೆ, ನ್ಯೂಝಿಲ್ಯಾಂಡ್ ಐದು ಪಂದ್ಯಗಳನ್ನು ಆಡಿ ನಾಲ್ಕರಲ್ಲಿ ಜಯಭೇರಿ ಬಾರಿಸಿದೆ ಹಾಗೂ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಮುಖಾಮುಖಿ

ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ ತಂಡಗಳು ಈವರೆಗೆ ಒಟ್ಟು 141 ಏಕದಿನ ಪಂದ್ಯಗಳನ್ನು ಆಡಿವೆ. ಆಸ್ಟ್ರೇಲಿಯ 95 ಪಂದ್ಯಗಳನ್ನು ಗೆದ್ದರೆ, ನ್ಯೂಝಿಲ್ಯಾಂಡ್ 39 ಪಂದ್ಯಗಳಲ್ಲಿ ವಿಜಯ ಸಂಪಾದಿಸಿದೆ. ಏಳು ಪಂದ್ಯಗಳು ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿವೆ.

ಪಿಚ್ ವರದಿ

ಈ ಪಂದ್ಯದಲ್ಲಿ ಪಿಚ್ ಬ್ಯಾಟರ್ಗಳಿಗೆ ಉತ್ತಮ ನೆರವು ನೀಡುವ ನಿರೀಕ್ಷೆಯಿದೆ. ಈ ಮೈದಾನದಲ್ಲಿ ಆಡಲಾಗಿರುವ ಕಳೆದ 5 ಪಂದ್ಯಗಳಲ್ಲಿ ಸರಾಸರಿ ಮೊದಲ ಇನಿಂಗ್ಸ್ ಮೊತ್ತ 263 ರನ್ ಆಗಿದೆ. ಟಾಸ್ ಜಯಿಸುವ ತಂಡವು ಬೌಲಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ.

ಇಲ್ಲಿನ ಉಷ್ಣತೆ 15 ಮತ್ತು 34 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕಿಂತಲೂ ಮೊದಲು ಇಲ್ಲಿ ನಡೆದಿರುವ ಪಂದ್ಯಗಳಿಗೆ ಮಳೆ ಮತ್ತು ಮಂಜು ಅಡ್ಡಿಪಡಿಸಿದೆ. ಆದರೆ, ಶನಿವಾರದ ಪಂದ್ಯವು ಹಗಲು ನಡೆಯುವುದರಿಂದ ಮಳೆ ಸುರಿಯುವ ಸಾಧ್ಯತೆಯಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News