ಶ್ರೀಲಂಕಾ ವಿರುದ್ಧ 3 ವಿಕೆಟ್‌ಗಳ ಗೆಲುವು ಸಾಧಿಸಿದ ಬಾಂಗ್ಲಾದೇಶ
ಹೊಸದಿಲ್ಲಿ: ಇಲ್ಲಿನ ಅರುಣ್ ಜೇಟ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಬಾಂಗ್ಲಾದೇಶ 3 ವಿಕೆಟ್ ಗಳ ಗೆಲುವು ಸಾಧಿಸಿದೆ.
ಈ ಆಕರ್ಷಕ ಗೆಲುವಿನ ಬಳಿಕ ಬಾಂಗ್ಲಾ ತಂಡ ಸೆಮಿಫೈನಲ್ ತಲುಪುದು ಅಸಾಧ್ಯವಾಗಿದ್ದರೂ 2025ರ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಈ ಗೆಲುವು ಅನಿವಾರ್ಯವಾಗಿದೆ. ಅಗ್ರ ಎಂಟರ ಘಟ್ಟಕ್ಕೆ ತಲುಪಿದ ತಂಡಗಳು ಮಾತ್ರವೇ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲಿದೆ. ಈ ಗೆಲುವಿನ ಮೂಲಕ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ 7 ನೇ ಸ್ಥಾನಕ್ಕೆ ಏರಿಕೆಯಾಗಿದೆ.
ಶ್ರೀಲಂಕಾ ನೀಡಿದ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿಲು ಬ್ಯಾಟಿಂಗ್ ಗೆ ಬಂದ ಬಾಂಗ್ಲಾ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್ ತಂಝಿದ್ ಹಸನ್ 9 ರನ್ ಗೆ ಮದುಶಂಕ ಬೌಲಿಂಗ್ ನಲ್ಲಿ ಪಾತುಮ್ ನಿಸಾಂಕಗೆ ಕ್ಯಾಚಿತ್ತು ಔಟ್ ಆದರೆ ಲಿಟನ್ ದಾಸ್ 23 ರನ್ ಗೆ ಎಲ್ ಬಿಡಬ್ಲೂ ಆದರು. 6.2 ಓವರ್ ನಲ್ಲಿ 41 ರನ್ ಆರಂಭಿಕ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದ ನಜ್ಮುಲ್ ಹಸೈನ್ ಶಾಂಟೋ ಹಾಗೂ ನಾಯಕ ಶಕೀಬ್ ಅಲ್ ಹಸನ್ ಲಂಕಾ ಬೌಲಿಂಗ್ ದಾಳಿ ಯನ್ನು ಸಮರ್ಥವಾಗಿ ಎದುರಿಸಿ ಪರಸ್ಪರ ಅರ್ಧಶತಕ ಬಾರಿಸುವ ಮೂಲಕ ಭರ್ಜರಿ ಗೆಲುವಿನ ಜೊತೆಯಾಟ ನೀಡಿದರು.
ಶಾಂಟೋ 101 ಎಸೆತಗಳಲ್ಲಿ 12 ಬೌಂಡರಿ ಸಹಿತ 90 ರನ್ ಗಳಿಸಿ ಏಂಜಲೋ ಮಾಥ್ಯೂಸ್ ಬೌಲಿಂಗ್ ನಲ್ಲಿ ಔಟ್ ಆಗುವ ಮೂಲಕ ಶತಕ ವಂಚಿತರಾದರು. ನಾಯಕ ಶಕೀಬ್ ಅಲ್ ಹಸನ್ 65 ಎಸೆತಗಳಲ್ಲಿ 12 ಬೌಂಡರಿ 2 ಸಿಕ್ಸರ್ ಸಹಿತ ಸ್ಟೋಟಕ 82 ರನ್ ಬಾರಿಸಿ ಏಂಜಲೋ ಮಾಥ್ಯೂಸ್ ಎಸೆತದಲ್ಲಿ ಬೌಲ್ಡ್ ಆದರು. ಬಾಂಗ್ಲಾ ಪರ ಮಹಮ್ಮದುಲ್ಲಾ 22 ರನ್ ಹಾಗೂ ಮುಶ್ಫಿಕುರ್ ರಹೀಮ್ 10 ರನ್ ಬಾರಿಸಿ ನಿರ್ಗಮಿಸಿದರು. ಬಳಿಕ ತಂಡವನ್ನು ಗೆಲುವಿನ ದಡ ಸೇರಿಸಿದ ತೌಹೀದ್ ಹೃದೋಯ್ 15 ರನ್ ಬಾರಿಸಿದರೆ, ಮಿರಾಝ್ ಹಾಗೂ ತಂಝಿದ್ ಹಸನ್ ಸಾಕಿಬ್ ಕ್ರಮವಾಗಿ 3, 4 ರನ್ ಗಳಿಸಿದರು.
ಶ್ರೀಲಂಕಾ ಪರ ದಿಲ್ಶಾನ್ ಮದುಶಂಕ 3 ವಿಕೆಟ್ ಪಡೆದರೆ ಮಹೇಶ ತೀಕ್ಷಣ ಹಾಗೂ ಮಾಥ್ಯೂಸ್ ತಲಾ 2 ವಿಕೆಟ್ ಕಬಳಿಸಿದರು.
ಈ ಮೊದಲು ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ದುಕೊಂಡು, ಲಂಕನ್ನರಿಗೆ ಬ್ಯಾಟಿಂಗ್ ಆಹ್ವಾನ ನೀಡಿತು. ಬ್ಯಾಟಿಂಗ್ ಗೆ ಬಂದ ಲಂಕಾ ಓಪನರ್ ಕುಸಾಲ್ ಪರೇರಾ ಕೇವಲ 5 ರನ್ ಗೆ ಮೊದಲ ಓವರ್ ನಲ್ಲಿಯೇ ಶರೀಫುಲ್ ಇಸ್ಲಾಂ ಎಸೆತದಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಇನ್ನೋರ್ವ ಬ್ಯಾಟರ್ ಪಾತುಮ್ ನಿಸಾಂಕ 41 ರನ್ ಬಾರಿಸಿ ತಂಝಿಮ್ ಹಸನ್ ಶಾಕಿಬ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ನಾಯಕ ಕುಸಾಲ್ ಮೆಂಡಿಸ್ 19 ರನ್ ಗಳಿಸಿ ಶಾಕಿಬ್ ಉಲ್ ಹಸನ್ ಗೆ ವಿಕೆಟ್ ಒಪ್ಪಿಸಿ ಟೂರ್ನಿಯಲ್ಲಿ ಮತ್ತೊಂದು ಕಳಪೆ ಆಟ ಪ್ರದರ್ಶಿಸಿದರು. ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಶತಕಕ್ಕೆ ಅಭಿನಂದಿಸುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ನಾನು ಯಾಕೆ ಅಭಿನಂದಿಸಬೇಕು ಎಂಬ ಉಡಾಫೆ ಉತ್ತರ ನೀಡಿದ್ದ ಕುಸಾಲ್ ಮೆಂಡಿಸ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಬಳಿಕ ಬ್ಯಾಟಿಂಗ್ ಬಂದ ಸದೀರ ಸಮರವಿಕ್ರಮ 41 ರನ್ ಗಳಿಸಿ ಔಟ್ ಆದರೆ 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರಬೇಕಿದ್ದ ಏಂಜಲೋ ಮಾಥ್ಯೂಸ್ ಬೌಲಿಂಗ್ ಎದುರಿಸದೆಯೇ ವಿಚಿತ್ರ ರೀತಿಯಲ್ಲಿ ಔಟ್ ಆದ ಪ್ರಸಂಗವು ನಡೆಯಿತು. ಸಮರವಿಕ್ರಮ ಔಟ್ ಆದ ಬಳಿಕ ಬ್ಯಾಟಿಂಗ್ ಬರ ಬೇಕಿದ್ದ ಮಾಥ್ಯೂಸ್ ತಮ್ಮ ಹೆಲ್ಮೆಟ್ ಹುಡುಕಾದದಲ್ಲಿದ್ದರಿಂದ ನಿಗದಿತ ಸಮಯದಲ್ಲಿ ಕ್ರೀಡಾಂಗಣಕ್ಕೆ ಬರಲಾಗಲಿಲ್ಲ ಪರಿಣಾಮ ಅಂಪೈರ್ ಅವರನ್ನು ಟೈಮ್ಡ್ ಔಟ್ ಎಂದು ಘೊಷಿಸಿದರು.
ಟೈಮ್ಡ್ ಔಟ್ ಎಂದರೆ :ಒಂದು ವಿಕೆಟ್ ಪತನಗೊಂಡಾಗ ಅಥವಾ ಬ್ಯಾಟರ್ ಒಬ್ಬರು ಯಾವುದೋ ಕಾರಣಕ್ಕೆ ಮೈದಾನದಿಂದ ಹೊರಹೋಗಲು ನಿರ್ಧರಿಸಿದಲ್ಲಿ ಹಾಗಾದ ಮೂರು ನಿಮಿಷಗಳೊಳಗೆ ಹೊಸ ಬ್ಯಾಟರ್ ಕ್ರೀಸಿಗೆ ಬಂದು ಮುಂದಿನ ಬಾಲ್ ಎದುರಿಸಲು ಸಜ್ಜಾಗಬೇಕು. ಇಲ್ಲದೇ ಹೋದಲ್ಲಿ ಟೈಮ್ಡ್ ಔಟ್ ಘೋಷಿಸಲಾಗುತ್ತದೆ. ವಿಶ್ವಕಪ್‌ನಲ್ಲಿ 3 ನಿಮಷಗಳನ್ನು 2 ನಿಮಗಳಿಗಿಳಿಸಲಾಗಿತ್ತು.
ಶ್ರೀಲಂಕಾ ತಂಡ 24.2 ಓವರ್ ನಲ್ಲಿ135 ರನ್ ಗೆ ತನ್ನ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಜೊತೆಯಾದ ಚರಿತ್ ಅಸಲಂಕ ಹಾಗೂ ಧನಂಜಯ ಡಿಸಿಲ್ವ ಜೋಡಿ 78 ರನ್ ಗಳ ಜೊತೆಯಾಟದ ಮೂಲಕ ತಂಡವನ್ನು ಚೇತರಿಕೆಯತ್ತ ಕೊಂಡೊಯ್ದರು. ಲಂಕಾ ಪರ ಧನಂಜಯ ಡಿಸಿಲ್ವ34 ರನ್ ಬಾರಿಸಿ ಉತ್ತಮ ಜೊತೆಯಾಟ ನೀಡುತ್ತಿದ್ದ ಸಂದರ್ಭ ಮಿಂಚಿನ ಸ್ಟಂಪ್ ವಿಕೆಟ್ ಮೂಲಕ ಮುಶ್ಪಿಕುರ್ ರಹೀಮ್, ಡಿಸಿಲ್ವ ವಿಕೆಟ್ ಕೆಡವಿದರು. ತಂಡದ ಪರ ಏಕಾಂಗಿ ಅದ್ಭುತ ಪ್ರದರ್ಶನ ನೀಡಿದ ಚರಿತ್ ಅಸಲಂಕ 105 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್ ಸಹಿತ 108 ರನ್ ಬಾರಿಸಿ ಬಾಂಗ್ಲಾ ಬೌಲರ್ ಗಳನ್ನು ದಂಡಿಸಿದರು. ಪರಿಣಾಮ ಲಂಕಾ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಮಹೇಶ ತೀಕ್ಷಣ 22 ,ಚಮೀರ 4 ರನ್ ಗಳಿಸಿದರೆ ರಜಿತಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಬಾಂಗ್ಲಾದೇಶ ಪರ ತಂಝಿಮ್ ಹಸನ್ 3 ವಿಕೆಟ್ ಪಡೆದರೆ ನಾಯಕ ಶಾಕಿಬ್ ಉಲ್ ಹಸನ್ , ಶರೀಫುಲ್ ಇಸ್ಲಾಂ 2 ವಿಕೆಟ್ ಪೆಡೆದುಕೊಂಡರು ಹಾಗೂ ಹಸನ್ ಮಿರಾಝ್ ಒಂದು ವಿಕೆಟ್ ಕಬಳಿಸಿದರು