ಕಾನ್ಪುರ ಸ್ಟೇಡಿಯಮ್‌ನಲ್ಲಿ ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Update: 2024-09-27 16:51 GMT

PC : PTI 

ಕಾನ್ಪುರ : ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಶುಕ್ರವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಯೊಬ್ಬ ಅಸ್ವಸ್ಥನಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಸೂಪರ್ ಫ್ಯಾನ್ ರಾಬಿ ಎಂದು ತನ್ನನ್ನು ತಾನು ಕರೆದುಕೊಳ್ಳುತ್ತಿರುವ ಈ ವ್ಯಕ್ತಿಯು ಬಾಂಗ್ಲಾದೇಶದ ಪಂದ್ಯಗಳ ವೇಳೆ ಹುಲಿ ವೇಷಭೂಷಣವನ್ನು ಧರಿಸುತ್ತಾನೆ. ʼಸಿʼ ಸ್ಟ್ಯಾಂಡ್‌ನಲ್ಲಿ ಕುಳಿತ್ತಿದ್ದಾಗ ಅಸ್ವಸ್ಥಗೊಂಡಿದ್ದ ಈತನನ್ನು ಕ್ರೀಡಾಂಗಣದಿಂದ ಹೊರಗೆ ಕರೆದೊಯ್ಯಲಾಗಿತ್ತು. ರಾಬಿ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿತ್ತು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು.

ಘಟನೆಯಲ್ಲಿ ನಿಜವಾಗಿಯೂ ಏನಾಗಿದೆ ಎಂಬ ಬಗ್ಗೆ ರಾಬಿ ಸರಿಯಾಗಿ ಹೇಳುತ್ತಿಲ್ಲ. ಆದರೆ ಆತನಿಗೆ ಏನೋ ಆಗಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಗಳ ನಡೆದಾಗ ನನ್ನ ಹೊಟ್ಟೆಗೆ ಗುದ್ದಲಾಗಿದೆ ಎಂದು ಮಾಧ್ಯಮದೊಂದಿಗೆ ಮಾತನಾಡುತ್ತಾ ರಾಬಿ ಹೇಳಿದ್ದಾರೆ. ಆದರೆ, ನಂತರ ಆಸ್ಪತ್ರೆಯಲ್ಲಿ ಹೇಳಿಕೆಯೊಂದನ್ನು ನೀಡಿದ್ದ ರಾಬಿ, ನಾನು ಅಸ್ವಸ್ಥನಾಗಿದ್ದೆ. ಸ್ಥಳೀಯ ಪೊಲೀಸರು ನನ್ನ ನೆರವಿಗೆ ಬಂದಿದ್ದಾರೆ ಎಂದಿದ್ದಾನೆ.

ನಾನು ಅಸ್ವಸ್ಥನಾಗಿದ್ದೆ. ಪೊಲೀಸರು ಆಸ್ಪತ್ರೆಗೆ ಕರೆ ತಂದಿದ್ದಾರೆ. ಇದೀಗ ನಾನು ಚೇತರಿಸಿಕೊಂಡಿರುವೆ. ನನ್ನ ಹೆಸರು ರೊಬಿ. ನಾನು ಬಾಂಗ್ಲಾದೇಶದಿಂದ ಬಂದಿದ್ದೇನೆ ಎಂದು ಸಂಕ್ಷಿಪ್ತ ವೀಡಿಯೊ ಕ್ಲಿಪ್‌ನಲ್ಲಿ ಹೇಳಿದ್ದಾನೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೇಳೆ ಟೈಗರ್ ಹೆಸರಿನ ವ್ಯಕ್ತಿ ಹಠಾತ್ತನೆ ಅಸ್ವಸ್ಥನಾಗಿ ಕೆಳಗೆ ಬಿದ್ದಿದ್ದಾನೆ. ಪೊಲೀಸರು ತಕ್ಷಣವೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಮೊದಲು ವರದಿಯಾದಂತೆ ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಯ ಮೇಲೆ ಹಲ್ಲೆಯಾಗಿಲ್ಲ. ಹಲ್ಲೆಯ ವರದಿಯಲ್ಲಿ ಹುರುಳಿಲ್ಲ. ಅಂತಹ ಘಟನೆ ನಡೆದಿಲ್ಲ ಎಂದು ಎಸಿಪಿ(ಕಲ್ಯಾಣ್‌ಪುರ್)ಅಭಿಷೇಕ್ ಪಾಂಡೆ ಹೇಳಿದ್ದಾರೆ.

ಬಾಂಗ್ಲಾ ಅಭಿಮಾನಿ ಸ್ಟ್ಯಾಂಡ್‌ನಿಂದ ಹೊರ ಬರುತ್ತಿದ್ದಂತೆ ನೋವಿನಿಂದ ಒದ್ದಾಡುತ್ತಿರುವುದು ಕಂಡುಬಂದಿದೆ ಅವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡಲಾಯಿತು. ಆದರೆ ಅವರು ಕೆಳಗೆ ಬಿದ್ದಿದ್ದಾರೆ. ಕ್ರಿಕೆಟ್ ಅಭಿಮಾನಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಆತನಿಗಾಗಿ ಆ್ಯಂಬುಲೆನ್ಸ್‌ ಗೆ ಕರೆ ಮಾಡಲಾಗಿತ್ತ್ತು. ಅಭಿಮಾನಿಗಳ ಮೇಲೆ ಕಣ್ಣಿಡಲು ಆ ಸ್ಟ್ಯಾಂಡ್ ಬಳಿ ನಮ್ಮ ಕಾನ್ಸ್‌ ಟೇಬಲ್ ಇದ್ದರು ಎಂದು ಕಾನ್ಪುರ ಕ್ರೀಡಾಂಗಣದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News