ಬಿಸಿಸಿಐ ಕೇಂದ್ರೀಯ ಗುತ್ತಿಗೆಯಿಂದ ಕಿಶನ್, ಅಯ್ಯರ್ ಗೆ ಖೊಕ್?
ಮುಂಬೈ: ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ಹೊರಬಿದ್ದಿರುವ ಭಾರತೀಯ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ವಿವಿಧ ಕಾರಣಗಳಿಗಾಗಿ ರಣಜಿ ಪಂದ್ಯಗಳಿಂದ ದೂರ ಸರಿದಿದ್ದಾರೆ. ಕಿಶನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಆವೃತ್ತಿಗೆ ಮುನ್ನ ತನ್ನ “ತಂತ್ರಗಾರಿಕೆಯನ್ನು ಸುಧಾರಿಸಿಕೊಳ್ಳುತ್ತಿದ್ದಾರೆ'' ಎಂದು ಹೇಳಲಾಗುತ್ತಿದೆ. ಅದೇ ವೇಳೆ, ಅಯ್ಯರ್ ಲಘು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಉನ್ನತ ನಾಯಕತ್ವಕ್ಕೆ ಕಿಶನ್ ಮತ್ತು ಅಯ್ಯರ್ ಬಗ್ಗೆ ಸಂಪೂರ್ಣ ತೃಪ್ತಿಯಿಲ್ಲ. ಹಾಗಾಗಿ, ಅದು ತನ್ನ ನೂತನ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಈ ಇಬ್ಬರು ಆಟಗಾರರನ್ನು ಕೈಬಿಡುವ ಸಾಧ್ಯತೆಯಿದೆ.
2023-24ರ ಋತುವಿನ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯಿಂದ ಅಯ್ಯರ್ ಮತ್ತು ಕಿಶನ್ ಇಬ್ಬರನ್ನೂ ಬಿಸಿಸಿಐ ಕೈಬಿಡುವ ನಿರೀಕ್ಷೆಯಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿಯೊಂದು ತಿಳಿಸಿದೆ. ರಣಜಿ ಕ್ರಿಕೆಟ್ನಲ್ಲಿ ಆಡುವಂತೆ ಬಿಸಿಸಿಐಯು ಈ ಆಟಗಾರರಿಗೆ ಸೂಚಿಸಿದ್ದರೂ, ಅವರು ಆಡದಿರುವುದು ಇದಕ್ಕೆ ಒಂದು ಕಾರಣ ಎನ್ನಲಾಗಿದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆಗಾರರ ಮಂಡಳಿಯು 2023-24ರ ಸಾಲಿನ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದೆ. ಪಟ್ಟಿಯನ್ನು ಬಿಸಿಸಿಐಯು ಶೀಘ್ರವೇ ಪ್ರಕಟಿಸಲಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
2022-23ರ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯಲ್ಲಿ, ಇಶಾನ್ ಕಿಶನ್ 'ಸಿ' ದರ್ಜೆಯಲ್ಲಿದ್ದರೆ, ಶ್ರೇಯಸ್ ಅಯ್ಯರ್ 'ಬಿ' ದರ್ಜೆಯಲ್ಲಿದ್ದಾರೆ. ಕಿಶನ್ ಒಂದು ಕೋಟಿ ರೂಪಾಯಿ ಗಳಿಸಿದರೆ, ಅಯ್ಯರ್ ಮೂರು ಕೋಟಿ ರೂಪಾಯಿ ಸಂಪಾದಿಸಿದ್ದಾರೆ.