ಇದೊಂದು ಅತ್ಯಂತ ಮುಜುಗರದ ಕ್ಷಣ : ಟೀಮ್ ಇಂಡಿಯಾದ ವಿರುದ್ಧ ಆಕ್ರೋಶ

Update: 2024-11-03 16:36 GMT

ಗಂಭೀರ್ , ರೋಹಿತ್ ಶರ್ಮಾ | PC : PTI 

ಹೊಸದಿಲ್ಲಿ : ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 0-3 ಅಂತರದಿಂದ ಹೀನಾಯವಾಗಿ ಸೋತ ಬೆನ್ನಿಗೇ ಟೀಮ್ ಇಂಡಿಯಾದ ವಿರುದ್ಧ ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಸಲಹೆಯನ್ನೂ ನೀಡಿದ್ದಾರೆ.

ಸ್ವದೇಶದಲ್ಲಿ 0-3 ಅಂತರದಿಂದ ಸೋತಿರುವ ನೋವನ್ನು ಸಹಿಸಲು ಕಷ್ಟವಾಗುತ್ತಿದೆ. ಈ ಕುರಿತು ಆತ್ಮಾವಲೋಕನ ಮಾಡಬೇಕು. ಇದಕ್ಕೆ ತಯಾರಿಯ ಕೊರತೆ ಕಾರಣವೇ, ಹೊಡೆತಗಳ ಆಯ್ಕೆಯಲ್ಲಿ ಎಡವಿದ್ದು ಕಾರಣವೇ, ಪಂದ್ಯ ಅಭ್ಯಾಸದ ಕೊರತೆ ಕಾರಣವೇ ಎಂದು ವಿಮರ್ಶಿಸಬೇಕು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಟ್ವೀಟಿಸಿದ್ದಾರೆ.

ತಿರುವು ನೀಡುವ ಪಿಚ್‌ಗಳು ನಮಗೆ ವೈರಿಯಾಗಿವೆ. ಬೇರೆಯವರಿಗೆ ತೋಡಿದ ಗುಂಡಿಗೆ ನಾವೇ ಬಿದ್ದಿದ್ದೇವೆ. ಟೆಸ್ಟ್ ಸರಣಿಯಲ್ಲಿ ನ್ಯೂಝಿಲ್ಯಾಂಡ್ ತಂಡ ನಮ್ಮನ್ನು ಹೀನಾಯವಾಗಿ ಸೋಲಿಸಿದೆ. ಟೀಮ್ ಇಂಡಿಯಾ ಉತ್ತಮ ಪಿಚ್‌ ಗಳಲ್ಲಿ ಆಡುವ ಅಗತ್ಯವಿದೆ ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಲಹೆೆ ನೀಡಿದ್ದಾರೆ.

ಸ್ವದೇಶದಲ್ಲಿ ಇದು ಟೀಮ್ ಇಂಡಿಯಾದ ಮುಜುಗರದ ಪ್ರದರ್ಶನವಾಗಿತ್ತು. ನ್ಯೂಝಿಲ್ಯಾಂಡ್ ಉತ್ತಮ ಪ್ರದರ್ಶನ ನೀಡಿದೆ ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.

ಕೆಲವೇ ತಿಂಗಳ ಹಿಂದೆ ಟಿ-20 ವಿಶ್ವಕಪ್ ಗೆದ್ದಿರುವ ಭಾರತವು ಈಗ ವೈಟ್‌ ವಾಶ್ ಮುಖಭಂಗಕ್ಕೆ ಒಳಗಾಗಿದೆ. ಇದು ಕ್ರಿಕೆಟ್‌ ನ ಸೊಗಸು. ಆಸ್ಟ್ರೇಲಿಯ ತಂಡದ ವಿರುದ್ಧ ಪ್ರಮುಖ ಸರಣಿ ಆಡಲಿಕ್ಕಿದೆ. ಅದಕ್ಕೂ ಮೊದಲು ಇದರಿಂದ ಪಾಠ ಕಲಿಯುವ ವಿಶ್ವಾಸವಿದೆ ಎಂದು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.

1) ಮೊದಲು ಬ್ಯಾಟಿಂಗ್ ಮಾಡಿದರೂ ಸೋಲು. 2ನೇ ಬ್ಯಾಟಿಂಗ್‌ನಲ್ಲೂ ಸೋಲು. 2)ವೇಗದ ಬೌಲಿಂಗ್‌ ನೆದರೂ ಸೋಲು, ಸ್ಪಿನ್ನರ್‌ ಗಳ ಎದುರು ಸೋಲು. 3)ಮೊದಲ ಇನಿಂಗ್ಸ್‌ ನಲ್ಲಿ ಹಿನ್ನಡೆಯಾದರೂ ಸೋಲು, ಮುನ್ನಡೆಯಾದರೂ ಸೋಲು. ಇದೊಂದು ಸಂಪೂರ್ಣ ವೈಫಲ್ಯ. ಅದರಲ್ಲೂ ಭಾರತದ ನೆಲದಲ್ಲಿ ಇಂತಹ ಸೋಲಾಗಿದೆ ಎಂದು ಕ್ರಿಕೆಟ್ ಅಭಿಮಾನಿ ಪ್ರಸನ್ನ ಟ್ವೀಟಿಸಿದ್ದಾರೆ.

ಈ ಸರಣಿಯು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮುಜುಗರದ ಕ್ಷಣಕ್ಷೆ ಸಾಕ್ಷಿಯಾಗಿದೆ. ಉತ್ತಮ ಸಾಧನೆ ಮಾಡಿರುವ ನ್ಯೂಝಿಲ್ಯಾಂಡ್‌ ಗೆ ಅಭಿನಂದನೆಗಳು ಎಂದು ಪ್ರದೀಪ್ ಟ್ವೀಟಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಸೋಲು!!, 30 ವರ್ಷಗಳ ನಂತರ ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ ಟೆಸ್ಟ್ ಪಂದ್ಯದಲ್ಲಿ ಸೋಲು!!, ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿ ಸೋಲು!, ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ಎದುರು ವೈಟ್‌ವಾಶ್!, 'ಗಂಭೀರ್ ಯುಗಕ್ಕೆ ಸ್ವಾಗತ' ಎಂದು ಸುರಭಿ ಎಂಬುವವರು ಟ್ವೀಟಿಸಿದರು.

ಭಾರತ ಮೂಲದ ನ್ಯೂಝಿಲ್ಯಾಂಡ್ ಆಟಗಾರ ಅಜಾಝ್ ಪಟೇಲ್ ಭಾರತೀಯ ಬ್ಯಾಟರ್‌ಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ನೀವು ಪ್ರತಿಭೆಗಳನ್ನು ಅಗೌರವಿಸಿದರೆ ಅವರು ಎಲ್ಲೋ ಬೆಳೆದು, ನಮಗೆ ಮುಳುವಾಗುತ್ತಾರೆ ಎಂದು ಅನುರಾಧಾ ತಿವಾರಿ ಟ್ವೀಟಿಸಿದ್ದಾರೆ.

ನನಗೆ ಗೌತಮ್ ಗಂಭೀರ್ ಇಷ್ಟವಾಗುವುದಿಲ್ಲ. ಅವರು ಭಾರತೀಯ ಕ್ರಿಕೆಟ್‌ ಗೆ ಬೇಕಾಗಿಲ್ಲ. ಅವರಲ್ಲಿ ಅಹಂ ಇದೆ, ಅವರ ಕೋಚಿಂಗ್‌ನಲ್ಲಿ ತಂಡದ ಒಗ್ಗಟ್ಟು ಇಲ್ಲವಾಗಿದೆ. ಡ್ರೆಸ್ಸಿಂಗ್‌ ರೂಮ್‌ ನಲ್ಲಿ ನಂಬಿಕೆ ಶೂನ್ಯವಾಗಿದೆ ಎಂದು ಅನ್ಶು ಟ್ವೀಟಿಸಿದ್ದಾರೆ.

ವೈಟ್‌ವಾಶ್‌ಗೆ ಕಾರಣವಾದ ಕೆಲವು ನಿರ್ಧಾರಗಳು: 1) ಬಿಳಿ ಚೆಂಡಿನ ಬ್ಯಾಟರ್ ಟೆಸ್ಟ್ ನಾಯಕ 2. ಐಪಿಎಲ್ ಮೆಂಟರ್ ಈಗ ಮುಖ್ಯ ಕೋಚ್ 3. ಶ್ರೀಮಂತನ ಮಗ ಬಿಸಿಸಿಐ ಮುಖ್ಯಸ್ಥ 4. ಪೂಜಾರ, ರಹಾನೆಯವರಂಹ ಬ್ಯಾಟರ್‌ಗಳನ್ನು ಹೊರಗಿಟ್ಟಿರುವುದು ಎಂದು ಅಸುರ್ ಎಂಬುವವರು ಟ್ವೀಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News