ಮುಹಮ್ಮದ್ ಶಮಿ ಕ್ರಿಕೆಟ್ ಪುನರಾಗಮನ ಮತ್ತಷ್ಟು ವಿಳಂಬ
ಹೊಸದಿಲ್ಲಿ : ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮುಹಮ್ಮದ್ ಶಮಿ ಅವರ ಪುನರಾಗಮನ ಮತ್ತಷ್ಟು ವಿಳಂಬವಾಗಲಿದ್ದು, ಹಿರಿಯ ವೇಗಿಯನ್ನು ಕರ್ನಾಟಕ ಹಾಗೂ ಮಧ್ಯಪ್ರದೇಶ ವಿರುದ್ಧದ ಮುಂದಿನ ಎರಡು ಸುತ್ತುಗಳ ರಣಜಿ ಟ್ರೋಫಿ ಪಂದ್ಯಗಳಲ್ಲಿ ಬಂಗಾಳ ಕ್ರಿಕೆಟ್ ತಂಡಕ್ಕೆ ಸೇರ್ಪಡೆಗೊಳಿಸಲಾಗಿಲ್ಲ.
ಬಂಗಾಳ ತಂಡವು ಬುಧವಾರದಿಂದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಕರ್ನಾಟಕ ತಂಡವನ್ನು ಎದುರಿಸಲಿದೆ. ಆ ನಂತರ ನ.13ರಿಂದ ಮಧ್ಯಪ್ರದೇಶ ವಿರುದ್ಧ ರಣಜಿ ಪಂದ್ಯ ಆಡಲು ಇಂದೋರ್ ಗೆ ಪ್ರಯಾಣಿಸಲಿದೆ.
ನ್ಯೂಝಿಲ್ಯಾಂಡ್ ವಿರುದ್ಧ ಬೆಂಗಳೂರು ಟೆಸ್ಟ್ಗಿಂತ ಮೊದಲು ಶಸ್ತ್ರಚಿಕಿತ್ಸೆಗೆ ಒಳಗಾದ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದರೂ ನೆಟ್ ನಲ್ಲಿ ಬೌಲಿಂಗ್ ನಡೆಸಿದ್ದ ಶಮಿ ಅವರು ತನ್ನ ಫಿಟ್ನೆಸ್ ಪರೀಕ್ಷಿಸಲು ಕರ್ನಾಟಕ ವಿರುದ್ಧ ಪಂದ್ಯದಲ್ಲಿ ಆಡುವ ನಿರೀಕ್ಷೆ ಇತ್ತು. ಬೆಂಗಳೂರಿನಲ್ಲಿ ಶಮಿ ಅವರು ಬೌಲಿಂಗ್ ಅಭ್ಯಾಸ ನಡೆಸಿದ ಸಂದರ್ಭ ಭಾರತದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಉಪಸ್ಥಿತರಿದ್ದರು.
ಆ ನಂತರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಮಿ, ನೆಟ್ ನಲ್ಲಿ ಬೌಲಿಂಗ್ ಮಾಡುವಾಗ ಶೇ.100ರಷ್ಟು ಫಿಟ್ ಇರುವಂತೆ ಭಾಸವಾಯಿತು. ನಾನು ನನ್ನ ದೇಹದ ಮೇಲೆ ಹೆಚ್ಚು ಒತ್ತಡ ಹಾಕಲಾರೆ. ನಾನು ಸರಿಯಾಗಿ ಬೌಲಿಂಗ್ ಮಾಡುವ ನಿಟ್ಟಿನಲ್ಲಿ ಶೇ.100ರಷ್ಟು ಪ್ರಯತ್ನಿಸುವೆ. ನಾನು ಆದಷ್ಟು ಬೇಗನೆ ಹಳಿಗೆ ಮರಳುವ ವಿಶ್ವಾಸವಿದೆ ಎಂದು ಹೇಳಿದ್ದರು.
ಸಂಪೂರ್ಣ ಫಿಟ್ನೆಸ್ ಪಡೆಯದ ಶಮಿ ಅವರನ್ನು ಆಸ್ಟ್ರೇಲಿಯ ಪ್ರವಾಸಕ್ಕೆ ಕರೆದೊಯ್ಯಲು ನಾವು ಬಯಸುವುದಿಲ್ಲ. ಈ ನಿಟ್ಟಿನಲ್ಲಿ ನಾವು ಹೆಚ್ಚು ಯೋಚಿಸಬೇಕಾಗಿದೆ ಎಂದು ಬೆಂಗಳೂರಿನಲ್ಲಿ ಇತ್ತೀಚೆಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದರು.
ಬಂಗಾಳ ತಂಡವು ಶಮಿ ಅವರಲ್ಲದೆ ಪ್ರಮುಖ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್, ವಿಕೆಟ್ಕೀಪರ್-ಬ್ಯಾಟರ್ ಅಭಿಷೇಕ್ ಪೊರೆಲ್ ಹಾಗೂ ವೇಗದ ಬೌಲರ್ ಮುಕೇಶ್ ಕುಮಾರ್ ಅವರ ಸೇವೆಯಿಂದಲೂ ವಂಚಿತವಾಗಲಿದೆ. ಇವರೆಲ್ಲರೂ ಭಾರತ ಎ ತಂಡದೊಂದಿಗೆ ಆಸ್ಟ್ರೇಲಿಯದಲ್ಲಿದ್ದಾರೆ.
ರವಿವಾರ ಕೊನೆಗೊಂಡಿರುವ ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಗಾಗಿ ಭಾರತೀಯ ತಂಡದಲ್ಲಿದ್ದ ವೇಗದ ಬೌಲರ್ ಆಕಾಶ್ ದೀಪ್ ಕೂಡ ಬಂಗಾಳ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಈಗ ನಡೆಯುತ್ತಿರುವ ರಣಜಿ ಋತುವಿನ ನಂತರ ಕ್ರಿಕೆಟ್ನಿಂದ ನಿವೃತ್ತಿಯಾಗುವುದಾಗಿ ಪ್ರಕಟಿಸಿರುವ ಹಿರಿಯ ವಿಕೆಟ್ಕೀಪರ್-ಬ್ಯಾಟರ್ ವೃದ್ಧಿಮಾನ್ ಸಹಾ ಮುಂದಿನ 2 ಪಂದ್ಯಗಳಿಗೆ ಬಂಗಾಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
*ಕರ್ನಾಟಕ, ಮಧ್ಯಪ್ರದೇಶದ ವಿರುದ್ಧ ಬಂಗಾಳ ತಂಡ: ಅನುಸ್ತುಪ್ ಮಜೂಂದಾರ್(ನಾಯಕ), ವೃದ್ದಿಮಾನ್ ಸಹಾ(ವಿಕೆಟ್ ಕೀಪರ್), ಸುದೀಪ್ ಚಟರ್ಜಿ, ಸುದೀಪ್ ಘರಾಮಿ, ಶಹಬಾಝ್ ಅಹ್ಮದ್, ವೃತ್ತಿಕ್ ಚಟರ್ಜಿ, ಅವಿಲಿನ್ ಘೋಷ್, ಶಿವಂ ಡೇ, ಶಕೀರ್ ಹಬೀಬ್ ಗಾಂಧಿ, ಪ್ರದೀಪ್ತ ಪ್ರಾಮಾಣಿಕ್, ಆಮಿರ್ ಗನಿ, ಇಶಾನ್ ಪೊರೆಲ್, ಸೂರಜ್ ಸಿಂಧು ಜೈಸ್ವಾಲ್, ಮುಹಮ್ಮದ್ ಕೈಫ್, ರೋಹಿತ್ ಕುಮಾರ್, ರಿಶಾವ್ ವಿವೇಕ್.