ಜಮ್ಮು ಮತ್ತು ಕಾಶ‍್ಮೀರ ಕ್ರಿಕೆಟಿಗನ ಮೇಲೆ ಎರಡು ವರ್ಷ ನಿಷೇಧ ಹೇರಿದ ಬಿಸಿಸಿಐ

Update: 2023-10-29 07:17 GMT

ಜಮ್ಮು: ಹಲವು ಜನನ ಪ್ರಮಾಣ ಪತ್ರ ಸಲ್ಲಿಸಿದ ಆರೋಪದಲ್ಲಿ ಜಮ್ಮು ಮತ್ತು ಕಾಶ‍್ಮೀರದ ಕ್ರಿಕೆಟಿಗನೊಬ್ಬನ ಮೇಲೆ ಶನಿವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಎರಡು ವರ್ಷಗಳ ಕಾಲ ನಿಷೇಧ ಹೇರಿದೆ. ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜಮ್ಮು ಮತ್ತು ಕಾಶ‍್ಮೀರ ಕ್ರಿಕೆಟ್ ಒಕ್ಕೂಟವು, ಜಮ್ಮುವಿನ ಬಿಷ್ಣಾದ ನಿವಾಸಿಯಾದ ವಂಶರಾಜ್ ಶರ್ಮ ಭಿನ್ನ ಜನನ ದಿನಾಂಕಗಳನ್ನೊಳಗೊಂಡಿರುವ ಹಲವು ಜನನ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವುದರಿಂದ ಬಿಸಿಸಿಐ ಅವರ ಮೇಲೆ ನಿಷೇಧ ಹೇರಿದೆ ಎಂದು ತಿಳಿಸಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.

“ಈ ಕೃತ್ಯಕ್ಕಾಗಿ ಅಕ್ಟೋಬರ್ 27ರಿಂದ ಎರಡು ವರ್ಷಗಳ ಕಾಲ ಆತನನ್ನು ಎಲ್ಲ ಬಿಸಿಸಿಐ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ನಿಷೇಧಿಸಲಾಗಿದೆ” ಎಂದು ಜೆಕೆಸಿಎ ಆಡಳಿತ ಮಂಡಳಿಯ ಸದಸ್ಯ ಬೃಗ್ ಅನಿಲ್ ಗುಪ್ತಾರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟಿಸಲಾಗಿದೆ.

ವಂಶರಾಜ್ ಶರ್ಮ ತಮ್ಮ ಮೇಲಿನ ಎರಡು ವರ್ಷಗಳ ನಿಷೇಧವನ್ನು ಪೂರೈಸಿದ ನಂತರ ಬಿಸಿಸಿಐ ಆಯೋಜಿಸುವ ಹಿರಿಯ ಪುರುಷರ ಕ್ರೀಡಾಕೂಟಗಳಲ್ಲಿ ಮಾತ್ರ ಭಾಗವಹಿಸಲು ಅವರಿಗೆ ಅವಕಾಶ ದೊರೆಯಲಿದೆಯೆ ಹೊರತು ಬಿಸಿಸಿಐನ ಯಾವುದೇ ವಯೋಮಾನದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶ ದೊರೆಯುವುದಿಲ್ಲ ಎಂದು ಬೃಗ್ ಗುಪ್ತಾ ಹೇಳಿದ್ದಾರೆ.

“ಈ ದಿಢೀರ್ ಪ್ರಕರಣದಲ್ಲಿ, ವಂಶರಾಜ್ ಶರ್ಮ ಬೇರೆ ರಾಜ್ಯಕ್ಕೆ ವಲಸೆ ಹೋಗಿ, ಅಲ್ಲಿ ಬಿಹಾರದ 23 ವರ್ಷ ವಯಸ್ಸಿನೊಳಗಿನವರ ತಂಡದ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ್ದಾರೆ” ಎಂದೂ ಅವರು ತಿಳಿಸಿದ್ದಾರೆ.

ಆದರೆ, ವಂಶರಾಜ್ ಶರ್ಮ ಮೊದಲಿಗೆ 2021-22ರಲ್ಲಿ ಜೆಕೆಸಿಎಯೊಂದಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು ಹಾಗೂ ಅವರ ದತ್ತಾಂಶ ಬಿಸಿಸಿಐ ಬಳಿ ಲಭ್ಯವಿದೆ. ಹೀಗಿದ್ದೂ, ಕ್ರಿಕೆಟ್ ಒಕ್ಕೂಟವನ್ನು ಬದಲಿಸಿರುವ ಅವರು, ಹಲವು ಜನನ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಮೂಲಕ ಸಿಕ್ಕಿ ಬಿದ್ದಿದ್ದಾರೆ ಎಂದು ಬೃಗ್ ಗುಪ್ತಾ ಹೇಳಿದ್ದಾರೆ.

“ಇದರ ಪರಿಣಾಮವಾಗಿ ಬಿಸಿಸಿಐ ಆಯೋಜಿಸುವ ಕ್ರೀಡಾಕೂಟದಲ್ಲಿ ಎರಡು ವರ್ಷ ಪಾಲ್ಗೊಳ್ಳದಂತೆ ಹಾಗೂ ಜೀವನಪರ್ಯಂತ ವಯೋಮಿತಿ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ ವಂಶರಾಜ್ ಶರ್ಮ ವಿರುದ್ಧ ನಿಷೇಧ ಹೇರಲಾಗಿದೆ” ಎಂದು ಆ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News